ಟೆಕ್ ಫ್ಯೂಚರ್
ವಸಂತ ಗ ಭಟ್
ಭೂಮ್ಯಂತರಿಕ್ಷವನ್ನು, ಸಾಗರ ತಳವನ್ನು, ವೈದ್ಯಕೀಯ ಕ್ಷೇತ್ರವನ್ನು, ಮನುಷ್ಯನ ದೇಹದ ಒಳ ಭಾಗವನ್ನೂ ಬಿಡದೆ ವ್ಯಾಪಿಸಿರುವ ಪ್ಲಾಸ್ಟಿಕ್ ಎಂಬ ಪೆಡಂಭೂತವನ್ನು ಮಣಿಸುವುದು ಹೇಗೆ? ಇದು ಮನುಕುಲದ ಪ್ರಮುಖ ಸಮಸ್ಯೆಗಳಲ್ಲಿ
ಒಂದು.
ಪೆಟ್ರೋಲಿಯಂನಿಂದ ಉತ್ಪಾದನೆಯಾಗುವ ಹಲವಾರು ಸಾಮಗ್ರಿಗಳಲ್ಲಿ ಪ್ಲಾಸ್ಟಿಕ್ ಸಹ ಒಂದು. ಪ್ಲಾಸ್ಟಿಕ್ ಅನ್ವೇಷಿಸಿದ ಆರಂಭದ ದಿನಗಳಲ್ಲಿ ಅದೊಂದು ಮಾಯಾವಿ ವಸ್ತು ಎನಿಸಿತ್ತು. ಕಡಿಮೆ ದರ, ಸದೃಢ ಸಾಮರ್ಥ್ಯ, ಹಲವಾರು ಕ್ಷೇತ್ರಗಳಲ್ಲಿ ಬಳಕೆ ಮಾಡುವ ನಮ್ಯತೆ ಇವೆಲ್ಲವೂ ಪ್ಲಾಸ್ಟಿಕ್ ವೇಗವಾಗಿ ಎಲ್ಲ ಕ್ಷೇತ್ರಗಳಲ್ಲೂ ಮುಖ್ಯವಾಗಿ ಪ್ಯಾಕೇಜಿಂಗ್ ಕ್ಷೇತ್ರದಲ್ಲಿ ಅತ್ಯವಶ್ಯಕ ವಸ್ತುವಾಗುವಂತೆ ಮಾಡಿತು.
ವೈದ್ಯಕೀಯ, ಬಾಹ್ಯಾಕಾಶ ಯಾನ, ಪೀಠೋಪಕರಣ, ತಂತ್ರ ಜ್ಞಾನ ಕ್ಷೇತ್ರ ಗಳಲ್ಲೂ ಇಂದು ಪ್ಲಾಸ್ಟಿಕ್ ಬಳಕೆ ಅನಿವಾರ್ಯ ಎನಿಸಿದೆ. ಆದರೆ ಪ್ಲಾಸ್ಟಿಕ್ನ ಸಮಸ್ಯೆ ನಿಧಾನವಾಗಿ ಎಲ್ಲರಿಗೂ ಅರಿವಾಗ ತೊಡಗಿತು. ಪ್ರಯೋಜನಕ್ಕೆ ಬಾರದ ಪ್ಲಾಸ್ಟಿಕ್ ಅನ್ನು ಸಂಸ್ಕರಿ ಸುವುದು ಅತ್ಯಂತ ಕಷ್ಟದ ಕೆಲಸ. ಪ್ಲಾಸ್ಟಿಕ್ ಅನ್ನು ಸುಡುವುದು ಮತ್ತು ಭೂಮಿಯ ಮೇಲೆ ಶೇಖರಿಸಿ ಇಡುವುದು ಎರಡೂ ಸಹ ಪರಿಸರಕ್ಕೆ ಮಾರಕ.
ಈ ಸಮಸ್ಯೆಯ ಪರಿಹಾರ ಕಂಡು ಹಿಡಿಯಲು 1960 ರಲ್ಲಿ ವಿಶ್ವ ವಾಣಿಜ್ಯ ಸಂಸ್ಥೆ ಹಲವಾರು ಕ್ರಮಗಳನ್ನು ತೆಗೆದುಕೊಳ್ಳುವ ಪ್ರಸ್ತಾವನೆಯನ್ನು ಇಟ್ಟಿತ್ತು. ಅದರಲ್ಲಿ ಪ್ರಮುಖವಾದುದು ಪ್ಲಾಸ್ಟಿಕ್ ಉತ್ಪಾದನೆಯನ್ನು ಸಂಪೂರ್ಣವಾಗಿ ನಿಲ್ಲಿಸುವುದು ಮತ್ತು ಅದೇ ಜಾಗದಲ್ಲಿ ಕಾಗದ ಮತ್ತಿತರ ಉತ್ಪನ್ನಗಳನ್ನು ಬಳಸುವುದು. ಆದರೆ ಪ್ಯಾಕೇಜಿಂಗ್ ಕ್ಷೇತ್ರ ಅತ್ಯಂತ ಕಡಿಮೆ ಬೆಲೆಗೆ ಸಿಗುವ ಪ್ಲಾಸ್ಟಿಕ್ ಬಳಕೆಯನ್ನು ನಿಲ್ಲಿಸಲು ಸಿದ್ಧವಿರಲಿಲ್ಲ.
ಇವುಗಳ ಲಾಭಿಗೆ ಮಣಿದ ವಿಶ್ವ ವಾಣಿಜ್ಯ ಸಂಸ್ಥೆಯು, ಪ್ಲಾಸ್ಟಿಕ್ನ್ನು ನೂರು ಪ್ರತಿಶತ ಸಂಸ್ಕರಿಸಿ ಮರುಬಳಕೆ ಮಾಡಬೇಕೆಂದು ಸೂಚಿಸಿತು. ಚೀನಾ 2017 ರಲ್ಲಿ ಎಲ್ಲ ದೇಶಗಳಿಂದಲೂ ಪ್ಲಾಸ್ಟಿಕ್ ಅನ್ನು ಮರುಬಳಕೆಗೆ ತೆಗೆದುಕೊಳ್ಳುವುದನ್ನು ನಿಲ್ಲಿಸಿತು. ಚೀನಾ ಹೇಗಿದ್ದರೂ ಪ್ಲಾಸ್ಟಿಕ್ ತ್ಯಾಜ್ಯವನ್ನು ಖರೀದಿಸುತ್ತದೆ ಎಂದು ಜಗತ್ತಿನ ಹತ್ತಾರು ದೇಶಗಳು ಪ್ಲಾಸ್ಟಿಕ್ ಬಳಕೆಯನ್ನು ಕಡಿಮೆಗೊಳಿಸುವ ಯಾವುದೇ ಯೋಜನೆಯನ್ನು ಜಾರಿಗೆ ತಂದಿರಲಿಲ್ಲ. ಅಷ್ಟಕ್ಕೂ ಏಕೆ ಎಲ್ಲ ದೇಶಗಳು ಚೀನಾಕ್ಕೆ ತಮ್ಮ ಪ್ಲಾಸ್ಟಿಕ್ ತ್ಯಾಜ್ಯವನ್ನು ಮರುಬಳಕೆಗಾಗಿ ಕಳುಹಿಸುತ್ತಿದ್ದವು? ಪ್ಲಾಸ್ಟಿಕ್ ಮರುಬಳಕೆಯ ಸಮಸ್ಯೆ ಬಳಕೆ ಮಾಡುವ ಪ್ಲಾಸ್ಟಿಕ್ ಅನ್ನು ಮೂರು ಭಾಗಗಳಾಗಿ ವಿಂಗಡಿಸಬಹುದು.
ಮೊದಲನೆಯದು ಮರುವಿಂಗಡನೆ ಲಾಭದಾಯಕವಾಗುವ ಟಪ್ಪರ್ ವೇರ್ ನ ಡಬ್ಬಿ, ಮೊಬೈಲ್ ಅಥವಾ ಲ್ಯಾಪ್ಟಾಪ್
ಗಳಲ್ಲಿ ಬಳಕೆಯಾಗುವ ಉತ್ತಮ ದರ್ಜೆಯ ಪ್ಲಾಸ್ಟಿಕ್. ಹೆಚ್ಚಿನ ದೇಶಗಳಲ್ಲಿ ಈ ಪ್ಲಾಸ್ಟಿಕ್ ಅನ್ನು ಆಂತರಿಕವಾಗಿಯೇ ಸಂಸ್ಕರಿಸಿ ಮತ್ತೆ ಪ್ಲಾಸ್ಟಿಕ್ ಉತ್ಪಾದನೆಗೆ ಬೇಕಾದಂತಹ ಪೇಲೆಟ್ ಗಳಾಗಿ ಪರಿವರ್ತಿಸುತ್ತಾರೆ. ಎರಡನೆಯ ವಿಧದ್ದು ಯಾವುದೇ ಲಾಭ ಗಳಿಸದ ಪ್ಲಾಸ್ಟಿಕ್. ಮಾರ್ಕೆಟ್ನಲ್ಲಿ ತರಕಾರಿ, ಹಣ್ಣು ಖರೀದಿಸಿದಾಗ ಕೊಡುವ ಕಪ್ಪು ವರ್ಣದ ತೆಳುವಾದ ಕವರ್, ತೆಳ್ಳಗಿರುವ ನೀರಿನ ಬಾಟಲ್ ಇತ್ಯಾದಿ.ಇದನ್ನು ವಿಂಗಡಿಸಿ ಸಂಸ್ಕರಿಸುವುದು ಯಾವುದೇ ಸಂಸ್ಥೆಗೂ ಲಾಭದಾಯವಲ್ಲ. ಹಾಗಾಗಿ, ಇವು ಗಳನ್ನು ಹೆಚ್ಚಾಗಿ ಸುಡುತ್ತಾರೆ ಇಲ್ಲವೇ ಖಾಲಿ ಜಾಗದಲ್ಲಿ ಗುಡ್ಡೆ ಹಾಕಿ ಇಡುತ್ತಾರೆ.
ಈ ಎರಡು ವರ್ಗಗಳ ನಡುವೆ ಒಂದು ವರ್ಗವಿದೆ. ನಿತ್ಯ ಬಳಕೆಮಾಡುವ ನೀರಿನ ಬೋಟಲ್ ಗಳು, ಪಾರ್ಸಲ್ ಕೊಡಲು ಬಳಸುವ ಪ್ಲಾಸ್ಟಿಕ್ ಡಬ್ಬಗಳು ಈ ವರ್ಗಕ್ಕೆ ಸೇರುತ್ತವೆ. ಮುಂದುವರಿದ ದೇಶಗಳಲ್ಲಿರುವ ಇದನ್ನು ಸಂಸ್ಕರಿಸುವುದು ದುಬಾರಿ. ಅಗ್ಗದ ಮಾನವ ಸಂಪನ್ಮೂಲ ಹೊಂದಿರುವ ಚೀನಾ ದೇಶವು ಈ ರೀತಿಯ ಪ್ಲಾಸ್ಟಿಕ್ ಅನ್ನು ಸಂಸ್ಕರಿಸಿ ಲಾಭಗಳಿಸಲು ಪೂರಕವಾಗಿತ್ತು.
ಜತೆಗೆ, 1960 ರಿಂದ ವೇಗವಾಗಿ ಬೆಳೆಯುತ್ತಿರುವ ಚೀನಾಕ್ಕೆ ಪ್ಲಾಸ್ಟಿಕ್ ಕಚ್ಚಾ ವಸ್ತುಗಳ ಅವಶ್ಯಕತೆ ಹೇರಳವಾಗಿತ್ತು. ಹಾಗಾಗಿ ಪ್ಲಾಸ್ಟಿಕ್ ತ್ಯಾಜ್ಯವನ್ನು ಬೇರೆ ದೇಶಗಳಿಂದ ಆಮದು ಮಾಡಿಕೊಂಡು ಸಂಸ್ಕರಿಸಿ ಬಳಸುತ್ತಿತ್ತು. 2017 ರಲ್ಲಿ ಚೀನಾ ತಾನು ಯಾವುದೇ ದೇಶದಿಂದ ಯಾವುದೇ ಮಾದರಿಯ ಪ್ಲಾಸ್ಟಿಕ್ ಅನ್ನು ಆಮದು ಮಾಡಿಕೊಳ್ಳುವುದಿಲ್ಲ ಎಂದು ಸೂನೆ ನೀಡಿತು. ಚೀನಾ ಇದಕ್ಕೆ ಕೊಟ್ಟ ಕಾರಣ ಪ್ಲಾಸ್ಟಿಕ್ ಸಂಸ್ಕರಣೆಯಿಂದ ಅದನ್ನು ಸಂಸ್ಕರಿಸುವ ದೇಶಗಳಿಗೆ ಲಾಭವಾದರೂ ಅವುಗಳು ವಿಸರ್ಜಿಸುತ್ತಿದ್ದ ತ್ಯಾಜ್ಯದಿಂದ ಸುತ್ತಲಿನ ಪರಿಸರಕ್ಕೆ ತೊಂದರೆಯಾಗುತ್ತಿತ್ತು. ಜೊತೆಗೆ ಅಷ್ಟರಲ್ಲಾಗಲೇ ಪ್ಲಾಸ್ಟಿಕ್ ಅವಶ್ಯಕತೆ ಯನ್ನು ದೇಶಿಯವಾಗಿಯೇ ಮರುಬಳಕೆ ಮಾಡಿ ನೀಗಿಸಿಕೊಳ್ಳುವದರಲ್ಲಿ ಚೀನಾ ಯಶಸ್ವಿಯಾಗಿತ್ತು.
ಆದರೆ ಚೀನಾಕ್ಕೆ ಪ್ಲಾಸ್ಟಿಕ್ ತ್ಯಾಜ್ಯ ಕಳಿಸುತ್ತಿದ್ದ ದೇಶಗಳಿಗೆ ಬಹಳಷ್ಟು ಹಿನ್ನಡೆಯಾಯಿತು. ನಂತರ ಮಲೇಶಿಯಾ ಮತ್ತಿತರ ಅಭಿವೃದ್ಧಿ ಹೊಂದುತ್ತಿರುವ ದೇಶಗಳು ಪ್ಲಾಸ್ಟಿಕ್ ಆಮದು ಮಾಡಿಕೊಳ್ಳಲಾರಂಭಿಸಿದರೂ, ಅದರ ದುಷ್ಪರಿಣಾಮವನ್ನು ಅರಿತು ಅವು ಸಹ ಆಮದನ್ನು ನಿಲ್ಲಿಸಿವೆ.
ಸದ್ಯ ಅಮೇರಿಕ ಮೊದಲಾದ ದೇಶಗಳು ತ್ಯಾಜ್ಯ ಪ್ಲಾಸ್ಟಿಕ್ ನ್ನು ಮೂರನೆಯ ದರ್ಜೆಯ ಪ್ಲಾಸ್ಟಿಕ್ನೊಡನೆ ಸೇರಿಸಿ ಖಾಲಿ ಜಾಗ ದಲ್ಲಿ ಗುಡ್ಡ ಹಾಕುತ್ತಿವೆ. ಆದರೆ ಇದನ್ನು ಹೆಚ್ಚು ದಿನ ಇದನ್ನೇ ಮಾಡಲು ಸಾಧ್ಯವಿಲ್ಲ, ಇದಕ್ಕೆ ಬೇರೆ ಪರಿಹಾರವನ್ನು ಕಂಡು
ಹಿಡಿಯಲೇಬೇಕು.
ಮರುಬಳಕೆಯ ಮಾರ್ಗ
ಯಾವುದೇ ತ್ಯಾಜ್ಯ ಸಮಸ್ಯೆಗೂ ಸಂಸ್ಕರಣೆ ಮತ್ತು ಮರುಬಳಕೆ ಸಮರ್ಪಕ ಪರಿಹಾರವಲ್ಲ. ಪ್ಲಾಸ್ಟಿಕ್ ಸಮಸ್ಯೆಗೆ ಪರಿಹಾರ ವಿರುವುದು ಪ್ಲಾಸ್ಟಿಕ್ ಬಳಕೆಯನ್ನು ಕಡಿಮೆ ಮಾಡುವುದರಲ್ಲಿ. ಮಾರುಕಟ್ಟೆಯಿಂದ ತರಕಾರಿ, ಹಣ್ಣು ಇನ್ನಿತರ ಪದಾರ್ಥ ಗಳನ್ನು ತರಲು ಪ್ಲಾಸ್ಟಿಕ್ ಕವರ್ ಬಳಸುವ ಬದಲು ಮನೆಯಿಂದಲೇ ಚೀಲವನ್ನು ತೆಗೆದುಕೊಂಡು ಹೋಗುವುದು. ನೀರಿನ ಬೋಟಲ್ ನ ಹಣದಲ್ಲಿ ಬೋಟಲ್ ಹಣವನ್ನು ಸೇರಿಸಿ ಜನರಿಂದ ಪಡೆದುಕೊಳ್ಳುವುದು ಮತ್ತು ಬೋಟಲ್ ಅನ್ನು ವಾಪಸ್
ಮಾಡಿದಾಗ ಆ ಹಣವನ್ನು ವಾಪಸ್ಸು ನೀಡುವುದು, ಎಲ್ಲೆಲ್ಲಿ ಸಾಧ್ಯವೋ ಅಲ್ಲೆಲ್ಲ ಪ್ಲಾಸ್ಟಿಕ್ ಬದಲು ಇತರ ಉತ್ಪನ್ನಗಳನ್ನು ಬಳಸುವುದು ಇತ್ಯಾದಿ.
ಇವುಗಳ ಜೊತೆಗೆ ಸಂಸ್ಕರಿಸಿದ ಪ್ಲಾಸ್ಟಿಕ್ ನ ದರ ಹೊಸ ಪ್ಲಾಸ್ಟಿಕ್ ಅನ್ನು ಬಳಸುವ ಉತ್ಪನ್ನಗಳಿಗಿಂತ ಕಡಿಮೆ ಇಡುವುದರಿಂದ ಹೆಚ್ಚಿನ ಜನ ಅವುಗಳನ್ನು ಖರೀದಿಸಿ ಸಂಸ್ಕರಿಸುವುದು ಲಾಭದಾಯಕ ಉದ್ಯಮವಾಗಬಹುದು.