Monday, 25th November 2024

ಇಲ್ಲಿದೆ ಒಂದು ಕಲ್ಲಿನ ಹಡಗು !

ಮಂಜುನಾಥ್‌ ಡಿ.ಎಸ್‌

ಮಧ್ಯಪ್ರದೇಶದ ಇಂದೋರ್‌ನಿಂದ 100 ಕಿಮೀ ಮತ್ತು ಧಾರ್ ನಿಂದ 35 ಕಿಮೀ ದೂರದಲ್ಲಿರುವ ಮಾಂಡುವಿಗೆ ಉತ್ತಮ ರಸ್ತೆ ಸಂಪರ್ಕವಿದೆ.

ಬೃಹತ್ ನಾವೆಯನ್ನು ಹೋಲುವ ಶಿಲಾ ಭವನವು ತನ್ನ ರೂಪದಿಂದಾಗಿ ಜಹಜ್ ಮಹಲ್ ಎಂಬ ಹೆಸರನ್ನು ಹೊತ್ತಿರು ವುದು ಅರ್ಥಪೂರ್ಣ.

ಮಧ್ಯ ಪ್ರದೇಶದ ಮಾಂಡುವಿನ ಅನೇಕ ಹೆಗ್ಗುರುತುಗಳಲ್ಲಿ ವಿಶಿಷ್ಟ ವಾಸ್ತು ವಿನ್ಯಾಸದ ಜಹಜ್ ಮಹಲ್ ಅಗ್ರ ಸ್ಥಾನದಲ್ಲಿದೆ. ಈ ಊರಿನಲ್ಲಿ ನಾನಾ ರೀತಿಯ ಐತಿಹಾಸಿಕ ಕಟ್ಟಡಗಳು, ಕೋಟೆಗಳಿದ್ದರೂ, ಹಡಗನ್ನು ಹೋಲುವ ಜಹಜ್ ಮಹಲ್ಗೆ ವಿಶೇಷ ಸ್ಥಾನ.  ಕೋಟೆಯ ರಾಯಲ್ ಎನ್ಕ್ಲೇವ್ ನಲ್ಲಿರುವ ಆಯತಾಕಾರದ ರಚನೆ ಹಡಗನ್ನು ಹೋಲುವುದರಿಂದ ಇದಕ್ಕೆ ‘ಜಹಜ್ ಮಹಲ್’ ಎಂಬ ಹೆಸರು ಬಂದಿದೆ.

ಕಟ್ಟಡದ ಅಗಲದ ಸುಮಾರು ಏಳು ಪಟ್ಟು ಉದ್ದ ಹೊಂದಿರುವ ಈ ಸೌಧದ ಬದಿಗಳಲ್ಲಿ ಮುಂಜ್ ತಲಾವ್ ಮತ್ತು ಕಪೂರ್ ತಲಾವ ಎಂಬ ಎರಡು ಕೃತಕ ಕೊಳಗಳಿವೆ. ಈ ಸರೋವರಗಳ ನೀರಿನ ಹಿನ್ನೆಲೆಯಲ್ಲಿ, ಸುಮಾರು ಹತ್ತು ಮೀಟರ್ ಎತ್ತರದ ಎರಡಂತಸ್ತಿನ ಈ ಭವನವು ನೀರಿನಲ್ಲಿ ತೇಲುತ್ತಿರುವಂತೆ ಭಾಸವಾಗುತ್ತದೆ.

ಮಹಲಿನ ಕಡಿದಾದ ಪಾವಟಿಕೆಗಳು ನಾವೆಯ ಮೆಟ್ಟಿಲುಗಳನ್ನು ನೆನಪಿಸುತ್ತವೆ. ನೆಲ ಅಂತಸ್ತಿನಲ್ಲಿ ಚಾವಡಿ ಹಾದಿಗಳಿಂದ ಸಂಪರ್ಕ ಪಡೆದ ಮೂರು ದೊಡ್ಡ ಕೋಣೆಗಳಿವೆ. ಮೂರೂ ಕೋಣೆಗಳಿಂದ ಮುಂಜ್ ತಲಾವ್ ಕಡೆಗೆ ಮುಖಮಾಡಿದಂತೆ ಬಾಲ್ಕನಿಗಳಿವೆ. ಮುಖ್ಯ ಪ್ರವೇಶ ದ್ವಾರದ ಮೇಲೆ ಹೊರಚಾಚಿದ ದೊಡ್ಡ ಬಾಲ್ಕನಿಯಿದೆ. ಇದು ಅಲಂಕೃತ ಶಿಲಾ ಕಮಾನುಗಳ ಆಸರೆ ಪಡೆದಿದೆ.

ಈಜುಕೊಳ

ನೆಲ ಅಂತಸ್ತಿನಿಂದ ಕೆಲವು ಮೆಟ್ಟಿಲುಗಳನ್ನಿಳಿದು ಸಾಗಿದರೆ ಅರಳಿದ ಪುಷ್ಪದಂತಿರುವ ಈಜುಕೊಳ ಕಾಣಸಿಗುತ್ತದೆ. ಇದರ ಮೂರು ಪಾರ್ಶ್ವಗಳಲ್ಲಿ ಅಂದದ ಸಾಲುಗಂಬಗಳಿವೆ. ತಾರಸಿಯಲ್ಲಿಯೂ ಕಮಲದ ಹೂವಿನ ವಿನ್ಯಾಸದ ಚಿಕ್ಕದೊಂದು ಈಜು ಕೊಳವಿದೆ. ಇದಕ್ಕೆ ಸುರುಳಿಯಾಕಾರದ ಚಿಕ್ಕ ಚಿಕ್ಕ ನಾಲೆಗಳಿಂದ ನೀರು ಸರಬರಾಜು ಮಾಡುವ ವ್ಯವಸ್ಥೆ ಇದೆ.

ಪ್ರಾಯಶಃ ಈ ವಿನ್ಯಾಸವು ನೀರಿನ ವೇಗವನ್ನು ನಿಯಂತ್ರಿಸಿ ಜಲಕ್ರೀಡೆ ಮಾಡುವವರಿಗೆ ಹಿತ ಅನುಭವ ನೀಡುತ್ತಿತ್ತು ಎನಿಸುತ್ತದೆ.  ಈ ಜಾಗದಿಂದ ಕೆಳಭಾಗದಲ್ಲಿರುವ ಈಜುಕೊಳದ ವಿಹಂಗಮ ನೋಟ ಕಾಣಿಸುತ್ತದೆ. ಭವನದ ತಾರಸಿಯಲ್ಲಿ ವಿವಿಧ ವಿನ್ಯಾಸಗಳ ಅನೇಕ ಗುಮ್ಮಟಗಳು ಹಾಗು ಕಿರು ಗೋಪುರಗಳಿವೆ. ಮಹಲಿನ ಉತ್ತರ ಹಾಗು ದಕ್ಷಿಣ ದಿಕ್ಕುಗಳಲ್ಲಿ ದೊಡ್ಡ ಪೆವಿಲಿಯನ್‌ಗಳಿವೆ. ಇವುಗಳಲ್ಲಿ ಮೂರು ಭಾಗಗಳಿದ್ದು ಪ್ರತಿ ಭಾಗಕ್ಕೂ ಪ್ರತ್ಯೇಕ ಕಮಾನು ದ್ವಾರಗಳಿವೆ.

ಮಧ್ಯ ಭಾಗದ ಮೇಲಿನ ದೊಡ್ಡ ಗುಮ್ಮಟಗಳು ಗಮನ ಸೆಳೆಯುತ್ತವೆ. ಇವುಗಳ ಇಕ್ಕೆಲಗಳಲ್ಲಿ ಪಿರಮಿಡ್ ಆಕಾರದ ರಚನೆಗಳಿವೆ.
ತಾರಸಿಯಿಂದ ಕೊಳಗಳು, ತವೇಲಿ ಮಹಲ್, ರಾಯಲ್ ಪ್ಯಾಲೆಸ್, ಜಲ್ ಮಹಲ್, ಇತ್ಯಾದಿಗಳಿಂದ ಕೂಡಿದ ಕೋಟೆಯ ಸಂಕೀರ್ಣದ ದೃಶ್ಯಗಳನ್ನು ಕಣ್ತುಂಬಿಸಿಕೊಳ್ಳಬಹುದು. ಜಹಜ್ ಮಹಲ್‌ನ ಒಳಾಂಗಣವನ್ನು ವೀಕ್ಷಿಸಲು ಕಟ್ಟಡದ ಪೂರ್ವ ದಿಕ್ಕಿನಲ್ಲಿರುವ ಅಮೃತಶಿಲೆಯ ಕಮಾನು ದ್ವಾರದ ಮೂಲಕ ಪ್ರವೇಶಿಸಬೇಕು.

ಸಾಕಷ್ಟು ಪರಿಶ್ರಮದಿಂದ ನಿರ್ಮಿಸಿದ ಈ ಭವ್ಯ ಭವನ ಮಾಂಡುವಿನ ಸುಲ್ತಾನ ಯಾಸ್-ಉದ್- ದಿನ್ ಖಿಲ್ಜಿಯ ಆಡಳಿತಾವಧಿ ಯಲ್ಲಿ ಹದಿನೈದ ನೆಯ ಶತಮಾನದಲ್ಲಿ ನಿರ್ಮಾಣಗೊಂಡಿತು. ಜಲ ನಿರ್ವಹಣೆಯ ವ್ಯವಸ್ಥೆಯೂ ಸೇರಿದಂತೆ ಸೂಕ್ಷ್ಮ ವಿವರಗಳಿಗೂ ಲಕ್ಷ್ಯ ನೀಡಿ ಈ ಸೌಧವನ್ನು ನಿರ್ಮಿಸಲಾಗಿದೆ. ಈ ಮಹಲಿನ ಬಾಲ್ಕನಿಗಳ ವಿನ್ಯಾಸ ವಿಶಿಷ್ಟವಾಗಿದ್ದು ಒಂದೆಡೆಯ ಶಬ್ದ ಇಡೀ ಕಟ್ಟಡದಲ್ಲಿ ಪ್ರತಿಧ್ವನಿಸುತ್ತದೆ. ಪ್ರವಾಸಿಗರನ್ನು ಐದು ಶತಮಾನಗಳ ಹಿಂದಕ್ಕೆ ಕರೆದೊಯ್ಯುವ ಜಹಜ್ ಮಹಲ್,  ತನ್ನ ಭವ್ಯ ನಿಲುವನ್ನು ನೋಡುಗರ ಮನದಲ್ಲಿ ಅಚ್ಚೊತ್ತುವುದಂತೂ ಸುಳ್ಳಲ್ಲ.

ಕರ್ನಾಟಕಕ್ಕೆ ಹೋಲಿಕೆ

ಮಧ್ಯಪ್ರದೇಶದ ಮಾಂಡು ಪಟ್ಟಣಕ್ಕೂ ಕರ್ನಾಟಕದ ಹಂಪೆಗೂ ಸಾಮ್ಯತೆ ಇದೆ. ಶತಮಾನಗಳ ಹಿಂದೆ ವೈಭವದ ಉತ್ತುಂಗ ದಲ್ಲಿದ್ದ ಈ ಎರಡೂ ನಗರಗಳು ಕಾಲಾನುಕ್ರಮದಲ್ಲಿ ಅವನತಿಗೊಂಡು ‘ಹಾಳು’ ಎಂಬ  ವಿಶೇಷಣವನ್ನು ಜೊತೆಗೂಡಿಸಿ ಕೊಂಡಿವೆ. ಈ ಎರಡೂ ಸ್ಥಳಗಳು ಚಾರಿತ್ರಿಕ ಮಹತ್ವ ಪಡೆದಿವೆ.

ಇಲ್ಲಿರುವ ಹತ್ತಾರು ಪುರಾತನ ನಿರ್ಮಿತಿಗಳು ಪ್ರಸಿದ್ಧ. ‘ಕಲ್ಲು ಕಥೆ ಹೇಳುವುದಿಲ್ಲಿ’ ಎನ್ನುವ ನುಡಿ ಮಾಂಡು ಮತ್ತು ಹಂಪೆ ಎರಡಕ್ಕೂ ಅನ್ವಯಿಸುತ್ತದೆ. ಮಾಂಡುವಿನ ಮುಂಚಿನ ಹೆಸರು ಮಾಂಡವಗಡ್.