ಡಾ.ಉಮಾಮಹೇಶ್ವರಿ ಎನ್.
ಸುತ್ತಲೂ ಹಸಿರು ತುಂಬಿದ ಬೆಟ್ಟ, ಗುಡ್ಡಗಳು, ಚಹಾ ತೋಟಗಳು. ಅಲ್ಲಿಂದ ಬೀಸಿ ಬರುವ ತಂಗಾಳಿ ಮನಕ್ಕೆ ನೀಡುತ್ತದೆ ಆಹ್ಲಾದಕರ ಅನುಭವ.
ಹಸಿರು ಚಹಾ ತೋಟಗಳನ್ನು ಹೊದ್ದುಕೊಂಡು ಭೂಲೋಕದ ಸ್ವರ್ಗಕ್ಕೆ ಸಮನಾಗಿರುವ ಕೂನೂರು, ಪ್ರವಾಸಿಗರ ಮನ ಸೆಳೆಯುವ ತಾಣ. ಇಲ್ಲಿನ ಪ್ರಾಕೃತಿಕ ದೃಶ್ಯಗಳು ಅತ್ಯದ್ಭುತ. ಊಟಿಯಿಂದ ಇಲ್ಲಿಗೆ ಸುಮಾರು ಅರ್ಧಗಂಟೆಯ ದಾರಿ. ಬೆಟ್ಟ ಕಣಿವೆಗಳನ್ನು ಬಳುಕುತ್ತಾ ಹಾದು ಹೊಗುವ ದಾರಿಯುದ್ದಕ್ಕೂ ಕಾಣುವ ಹಸಿರಿನ ಸಿರಿ ಅತ್ಯದ್ಭುತ.
ಊಟಿಯಿಂದ ಮೆಟ್ಟುಪಾಳ್ಯಂಗೆ ಸಂಚರಿಸುವ ರೈಲು ಕೂನೂರನ್ನು ಹಾದು ಹೋಗುತ್ತದೆ. ವಿಶ್ವ ಪರಂಪರೆ ತಾಣಗಳ ಪಟ್ಟಿಯಲ್ಲಿ ಮಾನ್ಯತೆ ಪಡೆದಿರುವ ಈ ಐತಿಹಾಸಿಕ ರೈಲಿನಲ್ಲಿ ಊಟಿಯಿಂದ ಕೂನೂರಿಗೆ ಪ್ರಯಾಣಿಸುವುದೂ ವಿಶಿಷ್ಟ ಅನುಭವ. ಈ ಪ್ರಯಾಣದಲ್ಲಿ ಗೋಚರಿಸುವ ಚಹಾ ತೋಟಗಳ ಸೌಂದರ್ಯದ ಪೂರ್ತಿ ಅನುಭವ ರಸ್ತೆಯಲ್ಲಿ ಸಾಗುವಾಗ ಆಗದು. ಬೆಟ್ಟಗುಡ್ಡ, ಕಣಿವೆಗಳ, ಚಹಾತೋಟಗಳ, ಕ್ಯಾರೆಟ್- ಕೋಸುಗಳ ಗದ್ದೆಗಳನ್ನು, ದಟ್ಟ ಕಾಡುಗಳನ್ನು ಹಾದು ಹೋಗುವಾಗ ಮೋಡಗಳ ನಡುವೆಯೂ ಈ ರೈಲು ಸಂಚರಿಸುತ್ತದೆ.
ಮಧ್ಯದಲ್ಲಿ ಇರುವ ಸಣ್ಣ ನಿಲ್ದಾಣಗಳಲ್ಲಿ ಒಂದೆರಡು ನಿಮಿಷಗಳು ನಿಂತಾಗ ಜಿಟಿ ಜಿಟಿ ಮಳೆ. ಕೂನೂರು ತಲುಪಿದಾಗ ಮುಂದೆ ಗುಡ್ಡಜರಿತದಿಂದಾಗಿ ಮೆಟ್ಟುಪಾಳ್ಯಂಗೆ ಹೋಗುವುದಿಲ್ಲ. ವಾಪಾಸು ಊಟಿಗೇ ಹೋಗುತ್ತದೆಂಬ ವಿಷಯ ತಿಳಿಯಿತು. ನಮ್ಮ ಜಾಗದಿಂದ ಏಳದೆ ಮತ್ತೊಮ್ಮೆ ಬಂದ ದಾರಿಯಲ್ಲೆ ಸಂಚರಿಸುವ ಅವಕಾಶ ಸುಲಭವಾಗಿ ದೊರೆಯಿತು. ನಮ್ಮಂತೆ ಇನ್ನೊಂದು ಕುಟುಂಬವೂ ಖಾಲಿ ಇರುವ ಬೋಗಿಯಲ್ಲಿ ಕುಳಿತು ಊಟಿಗೆ ವಾಪಸಾಗುವ ನಿರ್ಧಾರ ಮಾಡಿತ್ತು. ಟಿಕೆಟ್ ಕಲೆಕ್ಟರ್ನ ಬಳಿಯೇ ಟಿಕೆಟ್ ಖರೀದಿಸಿ ಮರುಪ್ರಯಾಣ ಮುಗಿಸಿದೆವು.
ಡಾಲಿನ್ ನೋಸ್: ಇಲ್ಲಿಗೆ ತಲುಪುವ ದಾರಿಯುದ್ದಕ್ಕೂ ಅತಿ ಸುಂದರ ಚಹಾ ತೋಟಗಳು. ಎತ್ತರದ ಬೆಟ್ಟದ ಮೇಲಿರುವ
ವೀಕ್ಷಣಾಗೋಪುರದಿಂದ ೩೬೦ ಡಿಗ್ರಿ ನೋಟ ಲಭ್ಯ. ಬೆಟ್ಟದ ಒಂದು ಭಾಗ ದೂರದಿಂದ ನೋಡಿದಾಗ ಡಾಲಿನ್ನ ಮೂತಿಯಂತೆ
ಕಾಣುವುದರಿಂದ ಈ ಹೆಸರು. ಇಲ್ಲಿ ನಿಂತಿದ್ದಂತೆಯೇ ಗಾಳಿಯೊಡನೆ ಬಂದು ನಮ್ಮನ್ನು ಹಾದುಹೋಗುವ ಮೋಡಗಳ ಮಧ್ಯ ದಲ್ಲಿ ಯಾವುದೋ ಲೋಕಕ್ಕೆ ಹಾರಿದ ಅನುಭವ. ಧರಿಸಿರುವ ಉಣ್ಣೆಯ ಬಟ್ಟೆಗಳ ಒಳಗೆಯೇ ಚಳಿಯಿಂದ ನಡುಗುವಾಗ ಅಲ್ಲಿ ದೊರೆಯುವ ವಿವಿಧ ರೀತಿಯ ಬಿಸಿ ಚಹಾಗಳಲ್ಲಿ ಒಂದನ್ನು ಖರೀದಿಸಿ ಗುಟು ಕರಿಸಿದಾಗ ಮತ್ತಷ್ಟು ಹೊತ್ತು ಅಲ್ಲೇ ನಿಂತು ಸುತ್ತಲೂ ನೋಡುವ ಆಸೆ ಚಿಗುರುತ್ತದೆ. ದೂರದ ಬೆಟ್ಟದಿಂದ ಕೆಳಗೆ ಧುಮುಕುತ್ತಿರುವ ಕ್ಯಾಥರಿನ್ ಜಲಪಾತ ನೋಡಿದಷ್ಟೂ ಸಾಲದೆನಿಸುತ್ತದೆ. ಮೋಡ ಜಾಸ್ತಿ ಇದ್ದರೆ, ಏನೂ ಕಾಣಿಸದು.
ಲ್ಯಾಂಬ್ಸ್ ರಾಕ್: ಇಲ್ಲಿಂದ ಕಾಣುವ ದೃಶ್ಯಗಳೂ ಸುಂದರ. ಕೊಯಮುತ್ತೂರು ನಗರ ಇಲ್ಲಿ ಕಾಣುವ ದೃಶ್ಯಗಳಲ್ಲಿ ಒಂದು.
ಸಿಮ್ಸ್ ಪಾರ್ಕ್: 1874ರಲ್ಲಿ ಜೆ. ಡಿ. ಸಿಮ್ಸ್ ಮತ್ತು ಮೇಜರ್ ಮುರ್ತೆ ಅವರ ನೇತೃತ್ವದಲ್ಲಿ ಆರಂಭವಾದ ಈ ಪಾರ್ಕ್, ಊಟಿಯ ಬೊಟಾನಿಕಲ್ ಗಾರ್ಡನ್ ತರಹವೇ ಇರುವ ಉದ್ಯಾನ. ವಿಸ್ತೀರ್ಣ ಅದಕ್ಕಿಂತ ಕಡಿಮೆ ಇದ್ದರೂ ಹಲವಾರು ದೈತ್ಯ ಗಾತ್ರದ ವಿವಿಧ ಜಾತಿಗಳ ಮರಗಳ ಮಧ್ಯದಲ್ಲಿ ಇರುವ ಹೂಗಿಡಗಳ ತೋಟಗಳೂ ಅತ್ಯಾ ಕರ್ಷಕ.
ಮಧ್ಯದಲ್ಲಿರುವ ಕೊಳದಲ್ಲಿ ಕೆಲವು ಜಲಕ್ರೀಡೆಗಳನ್ನು ಕೈಗೊಳ್ಳಬಹುದು. ಚೈತ್ರಮಾಸದಲ್ಲಿ ಹೋದರಂತೂ ಬಹುವರ್ಣಗಳ
ಹೂಗಳು ಮನಸೂರೆಗೊಳ್ಳುತ್ತವೆ. ಇಲ್ಲಿರುವ ಚಹಾ ಪುಡಿ ಕಾರ್ಖಾನೆಗಳಲ್ಲಿ ಚಹಾ ತಯಾರಿಸುವುದನ್ನು ನೋಡಬಹುದು. ಚಹಾಪುಡಿಗಳ ಖರೀದಿಯೂ ಮಾಡಬಹುದು. ಕೆಲವು ಚಹಾ ಫ್ಯಾಕ್ಟರಿಗಳಲ್ಲಿ ಊಟಿ ಚಾಕಲೇಟುಗಳು, ಯಾಲಕ್ಕಿ, ಲವಂಗ, ದಾಲ್ಚಿನ್ನಿ ಇತ್ಯಾದಿಗಳೂ ಲಭ್ಯ.
ಊಟಿ – ಕೂನೂರಿನ ಮಧ್ಯೆ ರಸ್ತೆಯಲ್ಲಿ ಪ್ರಯಾಣಿಸುವಾಗ ಹಲವೆಡೆ ಚಹಾ ಎಲೆಗಳನ್ನು ಕೊಯ್ಯುವ ಹೆಂಗಸರಂತೆ ವೇಷ
ಧರಿಸಿ, ಬೆನ್ನಿಗೆ ಬುಟ್ಟಿ ತಗಲಿಸಿಕೊಂಡು ಫೋಟೊ ತೆಗೆಸಿಕೊಳ್ಳಬಹುದು. ಈ ಎರಡು ಜಾಗಗಳ ಮಧ್ಯೆ ಇರುವ ಅರುವನಕಾಡು ಎಂಬಲ್ಲಿ ಮದ್ದುಗುಂಡುಗಳ ಕಾರ್ಖಾನೆ ಇದೆ. ಸೈನ್ಯದ ಮುಖ್ಯ ತರಬೇತಿ ಕೇಂದ್ರವೂ ಕೂನೂರಿನಲ್ಲಿದೆ.