Monday, 25th November 2024

ಥ್ಯಾಂಕ್ಸ್‌ ಗಿವಿಂಗ್ ಕ್ಷಮೆಯೇ ಪರಮಧರ್ಮ

ಪಾಶ್ಚಾತ್ಯ ದೇಶಗಳಲ್ಲಿ ಕ್ಷಮಿಸುವ ಪ್ರಕ್ರಿಯೆಯನ್ನು ಒಂದು ಹಬ್ಬವನ್ನಾಗಿ ಆಚರಿಸುತ್ತಾರೆ. ಅದುವೇ ಥ್ಯಾಂಕ್ಸ್ ಗಿವಿಂಗ್ ಹಬ್ಬ. ನವೆಂಬರ್ ಕೊನೆಯ ವಾರದಲ್ಲಿ ನಡೆಯುವ ಈ ಹಬ್ಬದ ಆಚರಣೆಯ ಮೂಲ ಸಾರವೆಂದರೆ ‘ಕ್ಷಮಿಸು, ಕ್ಷಮೆ ಯನ್ನುಪಡೆದುಕೋ’.

ಟಿ.ಎಸ್.ಶ್ರವಣ ಕುಮಾರಿ

ಮೊನ್ನೆ ಅಮೇರಿಕಾದಿಂದ ಮಗಳು ಫೋನಾಯಿಸಿ ‘ಥ್ಯಾಂಕ್ಸ್‌ ಗಿವಿಂಗ್ ಸೇಲ್ ನಡೀತಿದೆ, ಏನಾದ್ರೂ ಬೇಕಾ?’ ಎಂದಾಗ ಕಳೆದ ವರ್ಷ ಈ ಸಮಯದಲ್ಲಿ ಅಲ್ಲಿದ್ದ ನೆನಪಾಯಿತು. ಅಕ್ಟೋಬರ್ ಕೊನೆಯಲ್ಲಿ ಬರುವ ಹಾಲೋವಿನ್ ನಿಂದ ಆರಂಭವಾಗುವ ಅಲಂಕರಣ, ವ್ಯಾಪಾರ ವಹಿವಾಟುಗಳ ಓಟ ಅಕ್ಟೋಬರ್ ಕೊನೆಯ ವಾರದಿಂದ ಆರಂಭವಾಗಿ ನವೆಂಬರ್ ತಿಂಗಳ ಕೊನೆಯ ಗುರುವಾರ ಬರುವ ಥ್ಯಾಂಕ್ಸ್‌ ಗಿವಿಂಗ್ ಸಮಯದಲ್ಲಿ ಉತ್ತುಂಗದಲ್ಲಿದ್ದು ಇಡೀ ಅಮೇರಿಕಾವೇ ಸೇಲಿನಲ್ಲಿ ಮುಳುಗಿ ಹೋಗಿರು ತ್ತದೆ. ಈ ಸಂಭ್ರಮವು ಕ್ರಿಸ್ಮಸ್, ನ್ಯೂ ಇಯರ್ ತನಕವೂ ಮುಂದುವರಿಯುತ್ತದೆ.

ಏನೀ ಥ್ಯಾಂಕ್ಸ್‌ ಗಿವಿಂಗ್? 1621ರಲ್ಲಿ ಇಂಗ್ಲಿಷಿನವರು ಈ ಆಚರಣೆಯನ್ನು ತಮ್ಮ ಜತೆ ಅಮೆರಿಕಕ್ಕೆ ತಂದರು. 1863ರಲ್ಲಿ ಅಮೇರಿ ಕಾದ ನಿರ್ಮಾರ್ತೃಗಳು ಇದಕ್ಕೊಂದು ಆಚರಣೆಯ ಸ್ವರೂಪವನ್ನು ಕೊಟ್ಟರು. ನಂತರ 1941ರಲ್ಲಿ ಸಾರ್ವತ್ರಿಕ  ರಜೆ ಯನ್ನು ನೀಡಿ ಇದಕ್ಕೊಂದು ಅಧಿಕೃತ ಹಬ್ಬದ ರೂಪವನ್ನು ನೀಡಿದರು. ಅಂದಿನಿಂದ ನವೆಂಬರ್ ಕಡೆಯ ಗುರುವಾರವನ್ನು ಥ್ಯಾಂಕ್ಸ‌ ಗಿವಿಂಗ್ ಡೇ ಯಾಗಿ ಆಚರಿಸುತ್ತಾರೆ. ನಮ್ಮಲ್ಲಿ ಸಂಕ್ರಾಂತಿ ಹಬ್ಬವನ್ನು ಸುಗ್ಗಿಯ ಹಬ್ಬವಾಗಿ ಆಚರಿಸುವಂತೆ, ಆ ವರ್ಷದಲ್ಲಾದ ಎಲ್ಲಾ ಒಳಿತಿಗೆ ಕೃತಜ್ಞತೆಯನ್ನು ಸಲ್ಲಿಸುತ್ತಾ, ಸುಗ್ಗಿಯ ಸಂಭ್ರಮವನ್ನು ಹಂಚಿಕೊಳ್ಳಲು ಮನೆಯನ್ನೂ, ಹೊರಾಂಗಣವನ್ನು ಕುಂಬಳ ಕಾಯಿ, ಟರ್ಕಿಕೋಳಿ ಇಂತವುಗಳ ಪ್ರತಿಕೃತಿಗೆ ದೀಪಾಲಂಕಾರ ಮಾಡಿ ಸಂಭ್ರಮಿಸುತ್ತಾರೆ.

ಇದರೊಂದಿಗೇ ಕ್ರೈಸ್ತ ಧರ್ಮದ ಪ್ರಕಾರ ‘ತಪ್ಪು ಮಾಡಿದವರೆಲ್ಲರೂ, ಮಾಡಿದವರಿಗೆ ಅದರ ಬಗ್ಗೆೆ ಪಶ್ಚಾತ್ತಾಪವಿರದಿದ್ದರೂ ಸಹಾ
ಕ್ಷಮೆಗೆ ಅರ್ಹರು’ ಸ್ವತಃ ಏಸುಕ್ರಿಸ್ತನೇ ತನ್ನನ್ನು ಶಿಲುಬೆಗೇರಿಸಿದವರನ್ನೂ ಕ್ಷಮಿಸೆಂದು ದೇವರಲ್ಲಿ ಬೇಡಿಕೊಳ್ಳಲಿಲ್ಲವೇ! ಮತ್ತೊಬ್ಬರನ್ನು ಕ್ಷಮಿಸಿದರೆ ನಮ್ಮನ್ನೂ ಇನ್ನೊಬ್ಬರು ಹಾಗೆಯೇ ಕ್ಷಮಿಸುವುದಕ್ಕೆ ನಾವು ಅರ್ಹರು ಎನ್ನುವುದು ಪ್ರೊಟೆಸ್ಟೆಂಟರ ನಂಬಿಕೆ. ರೋಮನ್ ಕ್ಯಾಥೋಲಿಕ್‌ನವರಾದರೆ ಕ್ಷಮಿಸುವುದಕ್ಕೆ ಒಂದಿಷ್ಟು ವಿಧಿವಿಧಾನಗಳನ್ನೂ ಆಚರಿಸು ತ್ತಾರೆ. ಒಟ್ಟಿನಲ್ಲಿ ‘ಕ್ಷಮಿಸು, ಕ್ಷಮೆಯನ್ನು ಪಡೆದುಕೋ’ ಇದು ಕೂಡಾ ಈ ಹಬ್ಬದ ಆಚರಣೆಯ ಮೂಲ ಸಾರ.

ಕೋಳಿಗೆ ಸಾಂಕೇತಿಕ ಕ್ಷಮೆ

ಈ ಕ್ಷಮಾದಾನವನ್ನು ಅಧಿಕೃತವಾಗಿ ನಡೆಸುವುದು ಅಮೆರಿಕದ ಅಧ್ಯಕ್ಷರು. ಅಂದು ಅವರು ಒಂದು ಟರ್ಕಿ ಕೋಳಿಗೆ ಕ್ಷಮಾದಾನ ನೀಡುವ ಮೂಲಕ ಸಾಂಕೇತಿಕವಾಗಿ ಆಚರಣೆ ಮಾಡುತ್ತಾರೆ. 1989ರಲ್ಲಿ ಅಧ್ಯಕ್ಷ ಜಾರ್ಜ್ ಬುಷ್ ಈ ಸಂಪ್ರದಾಯಕ್ಕೆ ನಾಂದಿ ಹಾಡಿದಂದಿನಿಂದ ಇದು ಅವ್ಯಾಹತವಾಗಿ ನಡೆದುಕೊಂಡು ಬರುತ್ತಿದೆ. ಥ್ಯಾಂಕ್ಸ್ ಗಿವಿಂಗ್ ದಿನದ ಊಟದ ಮುಖ್ಯ ಖಾದ್ಯವೇ
ಟರ್ಕಿ ಕೋಳಿ ಅದರ ಜೊತೆಗೆ ವಿವಿಧ ರೀತಿಯ ಬ್ರೆಡ್, ಆಲೂಗಡ್ಡೆ, ಕ್ರಾನ್ಬೆರಿ, ಸೀಗುಂಬಳದ ಖಾದ್ಯ ಮುಂತಾದವು. ಅಂದು ಊಟಕ್ಕೆ ಆಹುತಿಯಾಗಬೇಕಾದ ಒಂದು ಟರ್ಕಿ ಕೋಳಿಗೆ ಕ್ಷಮಾದಾನ ನೀಡಿ, ಅವರ ನಂಬಿಕೆಯ ಪ್ರಕಾರ ‘ಆ ಟರ್ಕಿ ಕೋಳಿ ತಾನಾಗಿ ಕ್ಷಮೆಯನ್ನೂ ಕೇಳದಿದ್ದರೂ ನಾವಾಗೇ ಕ್ಷಮಿಸಿ ಅದಕ್ಕೆ ಸ್ವಾತಂತ್ರ್ಯ ನೀಡಿ ಜೀವದಾನ ಮಾಡಿದ್ದೇವೆ’ ಎಂದು ಸಾಂಕೇತಿ
ಕವಾಗಿ ಹೇಳುವ ರೀತಿಯಂತೆ ಇದು! ‘ಒಂದು ದಿನಕ್ಕೆೆ ಮಾತ್ರ ಜೀವದಾನವೇ? ಮತ್ತೆಂದೂ ಇದನ್ನು ಕೊಲ್ಲುವುದೇ ಇಲ್ಲವೇ?’ ಎಂದು ಇದರ ಔಚಿತ್ಯವನ್ನು ಪ್ರಶ್ನಿಸದೆ ‘ಒಂದು ದಿನದ ಜೀವದಾನ ಕೂಡಾ ಕಡಿಮೆಯದೇನದಲ್ಲ’ ಎಂದುಕೊಂಡು ಬಿಡೋಣ!

ಹಲವು ಮಾಲ್‌ಗಳು ಥ್ಯಾಂಕ್ಸ್‌ ಗಿವಿಂಗ್ ವಿಶೇಷ ಪೆರೇಡ್ ಕೂಡಾ ನಡೆಸುತ್ತವೆ. ಮೇಸಿ ಮಾಲ್‌ನ ಪೆರೇಡನ್ನು ನಾವು ಟೀವಿಯಲ್ಲಿ ವೀಕ್ಷಿಸಿದೆವು. ದೊಡ್ಡ ದೊಡ್ಡ ಹೀಲಿಯಂ ಬಲೂನುಗಳನ್ನು ಹಲವು ಕಾಮಿಕ್ ಪಾತ್ರದಾರಿಗಳಂತೆ ನಿರ್ಮಿಸಿ ಅದನ್ನು ಗಂಟೆಗಳ ಕಾಲ ಮೈಲುಗಟ್ಟಲೆ ಮೆರವಣಿಗೆ ನಡೆಸುತ್ತಾರೆ. ಬೀದಿಯ ಇಕ್ಕೆಲಗಳಲ್ಲೂ ಜನರು ನಿಂತು ಅವುಗಳೆಡೆಗೆ ಕೈಬೀಸುತ್ತಾ, ಹರ್ಷ ಧ್ವನಿಗಳನ್ನು ಹೊರಡಿಸುತ್ತಾ ಸಂತೋಷ ವ್ಯಕ್ತ ಪಡಿಸುತ್ತಿರುವಾಗ ನಮ್ಮೂರಿನಲ್ಲೂ ಗಣಪತಿ ವಿಸರ್ಜನೆಯಂದು ರಾತ್ರಿ  ಹನ್ನೆರೆಡಾದರೂ ಕಾದಿದ್ದು ಲಾರಿಗಳಲ್ಲಿ ಬರುತ್ತಿದ್ದ ವಿವಿಧ ವೇಷಧಾರಿಗಳತ್ತ ಕೈಬೀಸುತ್ತಾ ಕೂಗುತ್ತಿದ್ದುದು ನೆನಪಿಗೆ ಬರುತ್ತದೆ.

ಮೇಸಿಯಂತೆಯೇ, ಡಂಕಿನ್ ಡೋನಟ್ಸ್‌, ಮೆಕ್ ಡೊನಾಲ್ಡ್‌ ಇಂತಹ ಹಲವು ದೊಡ್ಡ ದೊಡ್ಡ ಸಂಸ್ಥೆಗಳೂ ಇಂತಹ ಪೆರೇಡ್
ಗಳನ್ನು ನಡೆಸುತ್ತವೆ. ಇದೊಂದು ರೀತಿ ಮರುದಿನದ ‘ಕರಿ ಶುಕ್ರವಾರದ ಸಂತೆ’ಗೆ (ಬ್ಲಾಕ್ ಫ್ರೈಡೇ ಸೇಲ್) ಆಮಂತ್ರಣ. ಹಬ್ಬದ ಹೆಸರಿನಲ್ಲಿ ಮಾಲ್‌ನಲ್ಲಿ ಸೇಲ್ ಥ್ಯಾಂಕ್ಸ್‌ ಗಿವಿಂಗ್ ಆಚರಣೆಯ ಪ್ರಮುಖ ಆಕರ್ಷಣೆಯೇ ಆ ಕಾಲದಲ್ಲಿ ನಡೆಯುವ ರಿಯಾಯಿತಿ ಮಾರಾಟಗಳ ಗಲಾಟೆ. ಇಡೀ ಅಮೆರಿಕವೇ ರಿಯಾಯಿತಿ ಮಾರಾಟದಲ್ಲಿ, ಕೊಳ್ಳುವಿಕೆಯಲ್ಲಿ ಮುಳುಗಿಹೋಗಿರುತ್ತದೆ.

ಗೃಹೋಪಯೋಗಿ ವಸ್ತುಗಳಿಂದ ಹಿಡಿದು ಇಂದಿನ ತಂತ್ರಜ್ಞಾನದ ಅವಶ್ಯಕತೆಗಳ ಜೊತೆಗೆ ಬೆಲೆಬಾಳುವ ಒಡವೆ, ವಾಹನ ಸಕಲವೂ ಇರುವೆಯಿಂದ ಆನೆಯವರೆಗೆ ಎಂದು ಹೇಳುವಂತೆ ಮಾರಲ್ಪಡುತ್ತದೆ, ಕೊಳ್ಳಲ್ಪಡುತ್ತದೆ. ನವೆಂಬರ್ ನಡುವಿನಿಂದಲೇ ಆರಂಭವಾಗುವ ಸೇಲ್‌ನ ಭರಾಟೆ ಉತ್ತುಂಗಕ್ಕೇರುವುದು ಥ್ಯಾಂಕ್ಸ್‌ ಗಿವಿಂಗ್ ಮರುದಿನದ ಬ್ಲಾಕ್ ಫ್ರೈಡೇಯಂದು. ಅಂದು ಇಪ್ಪನ್ನಾಲ್ಕು ಗಂಟೆಯೂ ಹೆಚ್ಚಿನ ಎಲ್ಲ ಮಳಿಗೆಗಳೂ, ಮಾಲ್‌ಗಳೂ, ಮಾರುಕಟ್ಟೆ ಸಂಕೀರ್ಣಗಳೂ ವಸಂತಕಾಲದ ಹೂಮರ ಗಳಂತೆ ಸಿಂಗರಿಸಿಕೊಂಡು ವಹಿವಾಟು ನಡೆಸುತ್ತವೆ. ನಾವು ತಂಗಿದ್ದ ಮನೆಯ ಹತ್ತಿರವೇ ಇದ್ದ ಗ್ರೇಟ್ ಮಾಲಿನಲ್ಲಿ ಈ ಸಂಭ್ರಮ ವನ್ನು ನೋಡಿಬರಲು ನಡುರಾತ್ರಿಯಲ್ಲಿ ಹೋದೆವು.

ಬಣ್ಣಬಣ್ಣದ ದೀಪಾಲಂಕಾರಗಳಿಂದ ಮದುವೆ ಮನೆಯಂತೆ ಸಿಂಗರಿಸಿಕೊಂಡಿತ್ತು ಇಡೀ ಸಂಕೀರ್ಣ. ಹಲವರು ವಾರದ ಆರಂಭ ದಲ್ಲೇ ಮಳಿಗೆಗಳಿಗೆ ಭೇಟಿಕೊಟ್ಟು ಸರಕಿನ ಗುಣವನ್ನೂ, ದರವನ್ನೂ ನೋಡಿಕೊಂಡು ಮನದಲ್ಲೇ ಆಯ್ಕೆ ಮಾಡಿ ಕೊಂಡು ಬಂದಿರುತ್ತಾರೆ. ಕರಿ ಶುಕ್ರವಾರದಂದು ಗಂಟೆಗಟ್ಟಲೆ ಸರದಿಯಲ್ಲಿ ಕಾದಿದ್ದು ಆರಿಸಿಟ್ಟ ಸರಕುಗಳನ್ನು ದೊಡ್ಡ-ದೊಡ್ಡ ಬ್ಯಾಗು ಗಳಲ್ಲಿ ತುಂಬಿಕೊಂಡು. ಧನ್ಯತಾ ಭಾವವನ್ನು ಮುಖದಲ್ಲಿ ಸೂಸುತ್ತಾ ಹೊರಬರುವುದನ್ನು ನೋಡಿಯೇ ಆನಂದಿಸ ಬೇಕು. ವರ್ಷದುದ್ದಕ್ಕೂ ಬೇಕಾಗುವಷ್ಟು ಬಟ್ಟೆ- ಬರೆಗಳನ್ನು ಅಂದು ಖರೀದಿಸುತ್ತಾರಂತೆ!

ವ್ಯಾಪಾರ ಮುಗಿಸಿ ಮಾಲ್‌ಗಳ ಕಾರಿಡಾರಿನಲ್ಲಿ ಹಾಯಾಗಿ ಕುಕ್ಕರಗಾಲಿನಲ್ಲಿ ಕೂತು, ಕೊಂಡ ಸರಕನ್ನೆಲ್ಲಾ ಸುತ್ತಾ ಹರವಿ ಕೊಂಡು. ಸಿಗರೇಟನ್ನೋ, ಪಾನೀಯದ ಗ್ಲಾಸನ್ನೋ ಕೈಯಲ್ಲಿಟ್ಟುಕೊಂಡು ಜತೆಯವರೊಂದಿಗೆ ವಿವರಗಳನ್ನು ಹಂಚಿಕೊಳ್ಳುತ್ತಾ ಆನಂದಿಸುತ್ತಿದ್ದವರನ್ನು ನೋಡಿದಾಗ ನಮ್ಮ ಹಳ್ಳಿಗಳ ಸಂತೆಗಳಲ್ಲಿ ಹೀಗೇ ಬೀಡಿಸೇದುತ್ತಾ ಕುಂತು ‘ಏನ್ ಸಿದ್ದಣ್ಣ ಎಂಗೈತೆ ನಿಮ್ಮೂರ್ ಕಡೆ ಮಳೆಬೆಳೆ’ ಎನ್ನುತ್ತಾ ಕಷ್ಟ ಸುಖ ಹಂಚಿಕೊಳ್ಳುವವರು ಕಣ್ಮುಂದೆ ಬಂದರು. ಪ್ರಪಂಚದ ಯಾವ ಮೂಲೆಯಲ್ಲಿ ರುವ, ಯಾವ ನಾಗರೀಕತೆಯ ಜನರಾದರೆ ತಾನೇ ಏನು? ಮಾತು ಹಂಚಿಕೊಳ್ಳಲು ಒಬ್ಬರಿಗೊಬ್ಬರು ಬೇಕೇ ಬೇಕಲ್ಲವೇ!

ಕ್ಷಮಾದಾನ ನೀಡುವ ಧಾರ್ಮಿಕ ಆಚರಣೆಯ ಹಬ್ಬವನ್ನು, ಮಾರ್ಕೆಟಿಂಗ್ ಗೂ ಉಪಯೋಗಿಸಿಕೊಳ್ಳುವ ಅಮೆರಿಕದ ಜನರ ಚಾಕಚಕ್ಯತೆಯೂ ಗಮನ ಸೆಳೆಯಿತು.