ಡಾ.ಉಮಾಮಹೇಶ್ವರಿ ಎನ್.
ಯುರೋಪಿನಲ್ಲಿ ಹದಿನೆಂಟನೆಯ ಶತಮಾನದ ತನಕ ಶಿಕ್ಷೆ ನೀಡುತ್ತಿದ್ದ ಉಪಕರಣಗಳ ಮ್ಯೂಸಿಯಂ ನೋಡಿದ ನಂತರ, ಲೇಖಕಿಗೆ ಹೊಟ್ಟೆ ತೊಳಸಿ, ಎರಡು ದಿನ ನಿದ್ದೆ ಹಾರಿ ಹೋಯಿತು! ಪ್ರವಾಸಿ ತಾಣವೊಂದು ನೋವು ಕೊಡುವ ಪರಿ ಇದು. ಪ್ರವಾಸವೆಂಬ ಉಲ್ಲಾಸದಲ್ಲಿ, ಕುತೂಹಲ ಕೆರಳಿಸುವ ಈ ಮ್ಯೂಸಿಯಂ ಪ್ರಯಾಸವನ್ನೂ ತರಬಲ್ಲದು.
ಪುರಾತನ ಕಾಲದಲ್ಲಿ ಶಿಕ್ಷೆಗೆ ಉಪಯೋಗಿಸುತ್ತಿದ್ದ ಉಪಕರಣಗಳ ಮ್ಯೂಸಿಯಂ ಜರ್ಮನಿ ಯಲ್ಲಿದೆ! ಕೆಲವೊಮ್ಮೆ ಹೊಟ್ಟೆ ಕಿವುಚುವಂತೆ ಮಾಡುವ ಆಯುಧ, ಹತಾರ ಸಂಗ್ರಹಾಲಯ ವೆನಿಸಿರುವ ಈ ಮ್ಯೂಸಿಯಂ ಜರ್ಮನಿಯ, ರುಡೆಸ್ ಹೈಮ್ ನಗರದ ಓಬರ್ ರಸ್ತೆಯಲ್ಲಿದೆ.
ಹಳೆಯ ಕಾಲದ ಕಟ್ಟಡವೊಂದರ (ಪುರಾತನ ಸೆರೆಮನೆ?) ನೆಲಮಾಳಿಗೆಯಲ್ಲಿನ ಮಂದ ಬೆಳಕು ಹಾಗೂ ಶೋಕಭರಿತ ಹಿನ್ನೆಲೆ ಸಂಗೀತವು, ಶಿಕ್ಷೆಗೊಳಗಾಗುತ್ತಿದ್ದ ಮಾನವರ ನೋವನ್ನು ಬಿಂಬಿಸುತ್ತವೆ. ಅದಕ್ಕೇ ಇರಬೇಕು ಇಲ್ಲಿಗೆ ಚಿಕ್ಕ ಮಕ್ಕಳನ್ನು ಕರೆದೊಯ್ಯು ವಂತಿಲ್ಲ!
ಮಹಿಳಾ ಮಾಟಗಾತಿಯರು
14-16ನೇ ಶತಮಾನಗಳಲ್ಲಿ ಅಸಹಾಯಕ ಒಂಟಿ ಹೆಂಗಸರನ್ನು ಮಾಟಗಾತಿಯರೆಂದು ನಿರ್ಧರಿಸಿ, ಚರ್ಚುಗಳ ಆದೇಶದಂತೆ ವಿವಿಧ ಶಿಕ್ಷೆಗಳಿಗೆ ಗುರಿಪಡಿಸುವುದು ಜರ್ಮನಿಯಲ್ಲಿ ಸರ್ವೇ ಸಾಮಾನ್ಯವಾಗಿತ್ತು. ಅಕ್ಕಪಕ್ಕದ ಮನೆಯವರು ಬರಿಯ ಊಹೆಯ ಮೇರೆಗೆ ಚರ್ಚಿಗೆ ಅಥವಾ ಅರಮನೆಗೆ ದೂರು ಇತ್ತರೂ ಸಾಕಾಗುತ್ತಿತ್ತು ಹಿಂಸೆ ನೀಡುವ ಪ್ರಕ್ರಿಯೆಗೆ. ಹಿಂಸೆಯು ಮೂರು ಹಂತ ಗಳಲ್ಲಿ ನಡೆಯುತ್ತಿತ್ತು.
1) ಮಾತಿನ ಮೂಲಕ ಹಿಂಸೆಗೆ ಗುರಿಪಡಿಸಲಾಗುವುದೆಂದು ಹೆದರಿಸುವುದು.
2) ಹಿಂಸೆ ನೀಡಲು ಉಪಯೋಗಿಸುವ ವಸ್ತುಗಳನ್ನು ತೋರಿಸಿ ಹೆದರಿಸುವುದು.
3) ನಿಜವಾಗಿ ಹಿಂಸೆಗೆ ಗುರಿ ಪಡಿಸುವುದು. ಹೆಬ್ಬೆೆರಳಿಗೆ ಅಥವಾ ಕಾಲ್ಬೆೆರಳುಗಳಿಗೆ ಹಾಕುವ ಸ್ಕ್ರೂಗಳಿಂದ ಹಿಡಿದು ಪೆಂಡುಲಮ್ , ಕಬ್ಬಿಣದ ಮುಳ್ಳುಗಳುಳ್ಳ ಕುರ್ಚಿ, ಕೆಂಪಗೆ ಬಿಸಿ ಮಾಡಿದ ಇಕ್ಕಳಗಳಿಂದ ಚಿವುಟುವುದು ಮತ್ತು ಸುಡುವುದು, ಕುದಿಯುವ ಟಾರ್ ಅಥವಾ ಸಲ್ಫ್ಯೂರಿಕ್ ಆಸಿಡ್ ಎರಚುವುದು, ಮಿತಿ ಮೀರಿ ನೀರು ಕುಡಿಸುವುದು ಎಲ್ಲವೂ ಭೀಕರ.
ತಪ್ಪೊಪ್ಪಿಗೆ ಪಡೆಯಲು ಮೊದಲ ಎರಡು ವಿಧಾನಗಳು ಯಶಸ್ವಿಯಾಗುತ್ತಿದ್ದವು. ತಪ್ಪೊಪ್ಪಿಗೆಯ ನಂತರ ತೀವ್ರವಾದ ಶಿಕ್ಷೆ ಸಾಮಾನ್ಯವಾಗಿತ್ತು. ಶಿಕ್ಷೆ ವಿಧಿಸುವ ನ್ಯಾಯಾಧೀಶ ಹಾಗೂ ಶಿಕ್ಷೆಯನ್ನು ನೀಡುವ ವ್ಯಕ್ತಿಗಳ ಕಲ್ಪನೆಗಳಿಗೆ ಎಣೆ ಇರಲಿಲ್ಲ.
ಛಾವಣಿಯಿಂದ ನೇತಾಡುವ ಮಾಯಾವಿ ಮುದಿ ಹೆಂಗಸೊಬ್ಬಳ ಗೊಂಬೆ ಇದನ್ನು ನೆನಪಿಸುವುದರಲ್ಲಿ ಸಮರ್ಥವಾಗುತ್ತದೆ.
1604ರಲ್ಲಿ ಹಿಂಸೆ ನೀಡಲು ಸಮಯದ ಪರಿಗಣನೆ ಜಾರಿಗೆ ಬಂತು. ಎರಡು ವಿಧದ ಶಿಕ್ಷೆಗಳ ಮಧ್ಯೆ 24 ಗಂಟೆಗಳ ತರವಿರಬೇಕು, ಬೆಳ್ಳಂಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಶಿಕ್ಷಿಸುವುದು ಉತ್ತಮವೆಂಬ ಪರಿಕಲ್ಪನೆ ಮೊದಲಾಯಿತು. ಇದರ ಉದ್ದೇಶ ಕೈದಿಯ ಸಾವನ್ನು ಮುಂದೂಡುವುದು!
ಸಣ್ಣ ಪ್ರಮಾಣದ ಹಾಗೂ ಮಧ್ಯಮ ಹಂತದ ಹಿಂಸೆಯ ಕಲ್ಪನೆಗಳೂ ಬರತೊಡಗಿದವು. ಕೈದಿಯ ವಯಸ್ಸು ಮತ್ತು ಆರೋಗ್ಯದ ಸ್ಥಿತಿ ಕಂಡು ರಿಯಾಯಿತಿಗಳನ್ನು ಕೊಡಲಾಗುತ್ತಿತ್ತು. ಹದಿನೆಂಟು ವಯಸ್ಸಿನಿಂದ ಕಿರಿಯರಾದವರಿಗೆ ಹಿಂಸೆ ಮಾಡಬಾರದೆಂಬ ನಿಯಮವೂ ಇತ್ತು. ಒಂದು ಹಂತದ ಹಿಂಸೆಯ ನಂತರ ಕೈದಿಯನ್ನು ಬಂದೀಖಾನೆಗೆ ಕರೆದೊಯ್ದು ಗಾಯಗಳಿಗೆ ಸೂಕ್ತ ಉಪಚಾರ ಮಾಡಲಾಗುತ್ತಿತ್ತು. ತೀವ್ರ ಅನಾರೋಗ್ಯ ಹೊಂದಿದವರು, ಮಾನಸಿಕವಾಗಿ ಅಸ್ವಸ್ಥರಾದವರು, ಆಢ್ಯರು ಅತಿ ತೀವ್ರ ವಾದ ಅಪರಾಧಗಳನ್ನು ಮಾಡಿದರೆ ಮಾತ್ರ ಹಿಂಸೆಗೊಳಗಾಗುತ್ತಿದ್ದರು.
ನ್ಯಾಯಾಧೀಶ ಕೈದಿಯ ವಿಚಾರಣೆ ನಡೆಸಿ ಶಿಕ್ಷೆ ನೀಡುತ್ತಿದ್ದ. ಯುಗದಲ್ಲಿ ಚರ್ಚುಗಳು ಸಂಶಯಿತ ತಪ್ಪಿತಸ್ಥರು ಸತ್ಯವನ್ನು ಒಪ್ಪಿಕೊಳ್ಳುವಂತೆ ಮಾಡುವ ವಿಧಾನವಾಗಿ ಇವುಗಳನ್ನು ಬಳಸಿದರು. ಜನಸಾಮಾನ್ಯರು ನರಳಿ ನರಳಿ ಜೀವ ಬಿಡಬೇಕಾದ ಶಿಕ್ಷೆಯಾದರೆ, ಶ್ರೀಮಂತರ ಶಿಕ್ಷೆಯ ಕಡಿಮೆ ಹಿಂಸೆಯದು. ಶಿರಚ್ಛೇದ ಸಾಮಾನ್ಯ. ಹರಿತವಾದ ಗರಗಸದಿಂದ ಒಮ್ಮೆಲೇ ಸಾವು ಬರುವಂತೆ ಮಾಡಲಾಗುತ್ತಿತ್ತು. ಇಲ್ಲದಿದ್ದರೆ ಮಲಗಿಸಿ ಹರಿತವಾದ ಗಿಲಟಿನ್ ಉಪಯೋಗಿಸಲಾಗುತ್ತಿತ್ತು. ಇದರಲ್ಲೂ ಇದ್ದ
ತಾರತಮ್ಯ ತಿಳಿದು ನಮಗಾದ ಆಶ್ಚರ್ಯಕ್ಕೆ ಎಣೆ ಇರಲಿಲ್ಲ!
ಕೆಲವು ಉಪಕರಣಗಳು
ಬ್ಯಾರೆಲ್ ಪಿಲ್ಲೊರಿ: ಕುಡುಕರನ್ನು ಸಾರ್ವಜನಿಕವಾಗಿ ಅವಮಾನಿಸಲು ಇದ್ದ ವಿಧಾನ. ಈ ಬ್ಯಾರೆಲ್ಗಳು ಎರಡು ತರಹದಲ್ಲಿರುತ್ತಿದ್ದವು. ಒಂದರಲ್ಲಿ ತಳಭಾಗ ಮುಚ್ಚಿರುತ್ತಿತ್ತು. ಅದರೊಳಗೆ ನಿಂತ ವ್ಯಕ್ತಿಯು ತನ್ನ ಮಲಮೂತ್ರಗಳ ಜೊತೆಗೆ ದಿನಗಟ್ಟಲೆ ಇರಬೇಕಾಗುತ್ತಿತ್ತು. ಇನ್ನೊಂದು ವಿಧದ ಗುಡಾಣದಲ್ಲಿ ತಳಭಾಗ ತೆರೆದಿರುತ್ತಿತ್ತು. ಓಡಾಡುವಾಗ ಹೆಗಲ ಮೇಲಿರುವ ಗುಡಾಣವನ್ನು ಹೊತ್ತುಕೊಂಡೇ ತಿರುಗಾಡಬೇಕಾಗುತ್ತಿತ್ತು.
ನೆಕ್ ವಯೊಲಿನ್: ಮುಖ್ಯವಾಗಿ ದ್ರಾಕ್ಷಿತೋಟಗಳಲ್ಲಿ ದ್ರಾಕ್ಷಿ ಕದಿಯುವವರನ್ನು ಅವಮಾನಿಸಲು ಬಳಸುತ್ತಿದ್ದರು. ಇದನ್ನು ಧರಿಸಿದವರು ಓಡಾಡುವಾಗ ಉಂಟಾಗುವ ದನಿ ಊರಿಡೀ ಈತನ ಘನಕಾರ್ಯವನ್ನು ಪ್ರಚಾರ ಮಾಡುತ್ತಿತ್ತು.
ಚಾಸ್ಟಿಟಿ ಬೆಲ್ಟ್: ಹೆಂಡಂದಿರ ಶೀಲ ಶಂಕಿಸುತ್ತಿದ್ದ ಗಂಡಸರು ಇದನ್ನು ತೊಡಿಸಿ ಬೀಗ ಹಾಕಿ ಕೀಲಿ ಕೈಯನ್ನೂ ತಮ್ಮೊಂದಿಗೆ
ಒಯ್ಯುತ್ತಿದ್ದರು. ಅವರು ತಮ್ಮ ಬಹಿರ್ದೆಸೆಗೂ ಹೋಗುವ ಹಾಗಿರಲಿಲ್ಲ.
ಪೆಂಡುಲಮ್: ಇದು ಮೊದಲ ಹಂತದಲ್ಲಿ ಉಪಯೋಗವಾಗುತ್ತಿದ್ದ ಭೀಕರ ಹಿಂಸೆಯಾಗಿತ್ತು. ಕೈದಿಯ ಕೈಗಳನ್ನು ಹಿಂದಕ್ಕೆ ಕಟ್ಟಿ ಅದನ್ನು ನೇತಾಡಿಸಲಾಗುತ್ತಿತ್ತು. ಭುಜದ ಸಂದಿಗಳು ಕಳಚಿಕೊಂಡು ಕೈಗಳು ಉಪಯೋಗಹೀನವಾಗುತ್ತಿದ್ದವು. ಕೆಲವೊಮ್ಮೆ ಕಾಲಿಗೆ ಭಾರದ ಬಟ್ಟುಗಳನ್ನೂ ಕಟ್ಟಲಾಗುತ್ತಿತ್ತು.
ಮುಳ್ಳಿನ ಕುರ್ಚಿ: ಕಬ್ಬಿಣದ ಮುಳ್ಳುಗಳು ಎಲ್ಲಾ ಕಡೆ ಇರುವ ಕುರ್ಚಿಯ ಮೇಲೆ ಕೈದಿಯನ್ನು ಕುಳ್ಳಿರಿಸಲಾಗುತ್ತಿತ್ತು. ಎಲ್ಲೆಡೆಯೂ ಇರುವ ಮುಳ್ಳುಗಳು ಚುಚ್ಚುವುದನ್ನು ಮತ್ತಷ್ಟು ಹೆಚ್ಚುಸಲು ಕೈದಿಯ ಅಂಗಾಂಗಳ ಮೇಲೆ ಒತ್ತಡ ಹೇರಲಾಗುತ್ತಿತ್ತು.
ಸ್ಟೋರ್ಕ್: ಸಾಧಾರಣ ಸಾಮಗ್ರಿಯಂತೆ ಕಾಣುವ ಇದು ನಿಜವಾಗಿಯೂ ಭೀಕರವಾದ ಹಿಂಸೆಯ ವಿಧಾನವಾಗಿತ್ತು. ಕಾಲು, ಕೈ, ಕತ್ತುಗಳನ್ನು ಇದರೊಳಗೆ ಹೊಗಿಸಿ ಭದ್ರ ಪಡಿಸಿದ ನಂತರ ಸ್ವಲ್ಪವೇ ಸಮಯದಲ್ಲಿ ಹೊಟ್ಟೆೆ ಮತ್ತು ಗುದದಲ್ಲಿ ಅಸಾಧ್ಯ ನೋವು ಕಾಣಿಸಿಕೊಳ್ಳುತ್ತಿತ್ತು. ಮೊದಲಿಗೆ ಆಗಾಗ ಬರುವ ನೋವು, ಕೊನೆಗೆ ತೀವ್ರತೆ ಅಧಿಕವಾಗಿ ಸತತವಾಗುತ್ತಿತ್ತು. ಹಿಂಸೆ ನೀಡುವವನ ಮನಸ್ಥಿತಿಗೆ ಅನುಗುಣವಾಗಿ ಹೊಡೆತ, ತುಳಿತ, ಸುಡುವಿಕೆ, ಬೆರಳುಗಳ ಕತ್ತರಿಸುವಿಕೆಗಳೂ ಜೊತೆಯಾಗುತ್ತಿದ್ದವಂತೆ.
ಸಾವಿನ ಪಂಜರಗಳು: ಮರದ ಅಥವಾ ಕಬ್ಬಿಣದ ಪಂಜರದೊಳಗೆ ಮೊದಲೇ ಸಾಕಷ್ಟು ಹಿಂಸೆಗೊಳಗಾದ ಕೈದಿಯನ್ನು ವಿವಸ್ತ್ರಗೊಳಿಸಿ ದಬ್ಬುತ್ತಿದ್ದರು. ನಗರದ ಪ್ರಮುಖ ಭಾಗದಲ್ಲಿ ಈ ಪಂಜರಗಳನ್ನು ನೇತಾಡಿಸುತ್ತಿದ್ದರು. ಜನರೆದುರು ಅವಮಾನ ಮೊದಲಿಗಾದರೆ ನಂತರ ಹಸಿವೆ, ನೀರಡಿಕೆ, ಚಳಿ ಅಥವಾ ಸೆಕೆಯಿಂದ ಕೈದಿ ಸಾವನ್ನಪ್ಪುತ್ತಿದ್ದ. 18 ನೇ ಶತಮಾನದ ಕೊನೆ ಭಾಗದ ವರೆಗೆ ಯುರೋಪಿನ ಪ್ರಮುಖ ಸ್ಥಳಗಳಲ್ಲಿ ಇವು ಇದ್ದವು.
ಪೇರ್ ಹಣ್ಣು: ಇದು ಇನ್ನೂ ಅಸ್ತಿತ್ವದಲ್ಲಿದೆ. ಕೈದಿಯ ಬಾಯಿಯೊಳಗೆ ಇದನ್ನು ಹಾಕಿ ಸ್ಕ್ರೂವಿನ ಸಹಾಯದಿಂದ ಎಷ್ಟಾಗು ತ್ತದೋ ಅಷ್ಟು ಬಿಡಿಸಲಾಗುತ್ತದೆ.
ನೀರಿನ ಶಿಕ್ಷೆ: ವ್ಯಕ್ತಿಯು ಕಾಲುಗಳನ್ನು ಇಳಿಬಿಟ್ಟು ಕೂತಿರುತ್ತಾನೆ. ಮೂಗನ್ನು ಮುಚ್ಚಿ ಲಾಳಿಯ ಸಹಾಯದಿಂದ ಅಗಾಧ
ಪ್ರಮಾಣದ ನೀರನ್ನು ಬಾಯಿಯೊಳಗೆ ಸುರಿಯಲಾಗುತ್ತದೆ. ಜೀವ ಉಳಿಯಬೇಕಾದರೆ, ಉಸಿರಾಡಬೇಕಾದರೆ ಇದನ್ನು ನುಂಗಲೇ ಬೇಕು. ಹೊಟ್ಟೆ ಉಬ್ಬಿ ಒಡೆಯುವಷ್ಟು ನೀರನ್ನು ಕುಡಿಸಲಾಗುತ್ತದೆ. ಜೊತೆಗೆ ತಲೆಯನ್ನು ಕೆಳಕ್ಕೆ ಒತ್ತಿದಾಗ, ಹೊಟ್ಟೆಯ ಮೇಲೆ ಏಟು ಹಾಕಿದಾಗ ನೋವು ಉಲ್ಬಣಿಸುತ್ತದೆ.
ನೇಣುಗಂಬ, ಗರಗಸ, ಗಿಲಟಿನ್, ಬೆಕ್ಕಿನ ಉಗುರು, ತಲೆಗೆ ಸುತ್ತಿ ಸ್ಕ್ರೂ ಬಿಗಿಗೊಳಿಸಿ ತಲೆಬುರುಡೆ ಒಡೆಯುವಂತೆ ಮಾಡುವ
ಸಾಧನ ಇನ್ನೂ ಹಲವಾರು ವಸ್ತುಗಳು ಯುರೋಪಿನ ಆ ಹಿಂಸಾ ಜಗತ್ತಿನ ಪರಿಚಯ ಮಾಡಿಕೊಡುತ್ತವೆ.
ಈ ಶಿಕ್ಷೆಯ ವಿವರ ಕಂಡಾಗ ಆರಂಭವಾದ ಹೊಟ್ಟೆತೊಳಸುವಿಕೆ, ಮ್ಯೂಸಿಯಂನಿಂದ ಹೊರ ಬಂದು ಸಮೀಪದಲ್ಲಿದ್ದ ಕೆಫೆ ಯಲ್ಲಿ ಐಸ್ ಕ್ರೀಮ್ ತಿಂದ ಮೇಲೂ ಶಮನವಾಗಲಿಲ್ಲ. ನನ್ನ ಎರಡು ದಿನಗಳ ನಿದ್ದೆಯೂ ನಷ್ಟವಾಯಿತು! ಪ್ರವಾಸದಲ್ಲಿ
ಪ್ರಯಾಸ ಎಂದರೆ ಇದೇ ಅಲ್ಲವೆ!
ಸುಧಾರಣೆ
ಹದಿನಾರನೆಯ ಶತಮಾನದಲ್ಲಿ ಮಾರ್ಟಿನ್ ಲೂರ್ಥರ್ ಇಂತಹ ಕ್ರೂರ ಶಿಕ್ಷಾ ವಿಧಾನವನ್ನು ವಿರೋಧಿಸಿದ. ಹದಿನೆಂಟನೆಯ ಶತಮಾನದ ಕೊನೆಯಲ್ಲಿ ಯುರೋಪಿನೆಲ್ಲೆಡೆ ಇವುಗಳ ಬಳಕೆ ಕ್ರಮೇಣ ಕಡಿಮೆಯಾಯಿತು. ಆದರೂ ಕೆಲವು ದೇಶಗಳಲ್ಲಿ ಈ ಅಮಾನವೀಯ ಪದ್ಧತಿಗಳ ಪಳೆಯುಳಿಕೆಗಳು ಇನ್ನೂ ಮುಂದುವರಿಯುತ್ತಿವೆ! ಇವುಗಳನ್ನು ಕೈಬಿಡಲು ಪ್ರಯತ್ನ ನಡೆದಿದೆ.
ಎಲ್ಲಿದೆ?
ಜರ್ಮನಿಯ ರುಡೆಸ್ ಹೈಮ್ ಪಟ್ಟಣದಲ್ಲಿದೆ. 8 ಯೂರೋಗಳ ಪ್ರವೇಶದರ. ವಿದ್ಯಾರ್ಥಿಗಳಿಗೆ ರಿಯಾಯಿತಿ ಇದೆ.