Tuesday, 26th November 2024

ಅಮೆರಕದ ಮಾಹಿತಿ ಹ್ಯಾಕ್!

ಅಜಯ್ ಅಂಚೆಪಾಳ್ಯ

ಅಮೆರಿಕದ ಚುನಾವಣೆಯ ಫಲಿತಾಂಶಗಳು ಹೊರಬೀಳುವ ಸಮಯದಲ್ಲಿ ಅಧ್ಯಕ್ಷ ಟ್ರಂಪ್ ಪದೇ ಪದೇ ಹೇಳುತ್ತಿದ್ದರು – ‘ಈ ಚುನಾವಣೆಯಲ್ಲಿ ಮೋಸ ನಡೆದಿದೆ!’ ಎಂದು. ಆದರೆ ಮತದಾನ ಪ್ರಕ್ರಿಯೆಯಲ್ಲಿ ಅಂತಹ ಗೋಲ್‌ಮಾಲ್ ಏನೂ ಆಗಿಲ್ಲ ಎಂದು ಅಲ್ಲಿನ ಎಲೆಕ್ಷನ್ ಸೈಬರ್ ಸೆಕ್ಯುರಿಟಿ ಡೈರೆಕ್ಟರ್ ಕ್ರಿಸ್ ಕ್ರೆಬ್ಸ್‌ ಸ್ಪಷ್ಟಪಡಿಸಿದ್ದರು.

ಇದರಿಂದ ಕೋಪಗೊಂಡ ಟ್ರಂಪ್, ಆ ರಕ್ಷಣಾ ತಜ್ಞನನ್ನೇ ಕೆಲಸದಿಂದ ಕಿತ್ತು ಹಾಕಿದರು! ಅವರನ್ನು ಮಾತ್ರವಲ್ಲ, ತನ್ನ ವಿರುದ್ಧ ಅಭಿಪ್ರಾಯ ವ್ಯಕ್ತಪಡಿಸಿದ ಹಲವರನ್ನು ಹೊರಕಳಿಸಿ ದರು, ಅಧ್ಯಕ್ಷ ಟ್ರಂಪ್. ಸೈಬರ್ ಸೆಕ್ಯುರಿಟಿ ಮುಖ್ಯಸ್ಥನನ್ನೇ ಬರಖಾಸ್ತು ಮಾಡಲಾಗುತ್ತಿದ್ದ ಇದೇ ಸಂದರ್ಭದಲ್ಲಿ, ಅಮೆರಿಕದ ಮಹತ್ವದ ಮಾಹಿತಿಯನ್ನು ವಿದೇಶಿ ಹ್ಯಾಕರ್‌ಗಳು ಕದಿಯುವುದರಲ್ಲಿ ಮಗ್ನರಾಗಿದ್ದರು!

ವಿದೇಶಿ ಸರಕಾರದ ಬೆಂಬಲ ಹೊಂದಿದ್ದ ಕೆಲವು ಹ್ಯಾಕರ್ ಗಳು ಅಮೆರಿಕದ ಟ್ರೆಷರಿ ಡಿಪಾರ್ಟ್‌ಮೆಂಟ್ ಮತ್ತು ಇತರ
ಪ್ರಮುಖ ಸರಕಾರಿ ಇಲಾಖೆಗಳ ಮಾಹಿತಿಯನ್ನು ಹ್ಯಾಕ್ ಮಾಡಿ, ಬೇರೆ ಕಡೆಗೆ ರವಾನಿಸಿದ್ದಾರೆ ಎಂದು ಅಮೆರಿಕದ ರಕ್ಷಣಾ ವಕ್ತಾರರು ಹೇಳಿದ್ದಾರೆ. ಕಳೆದ ಕೆಲವು ವಾರಗಳಲ್ಲಿ ಈ ರೀತಿ ಕಳುವಾದ ಮಾಹಿತಿಯು ರಕ್ಷಣಾ ಇಲಾಖೆಗೆ ಸಂಬಂಧಪಟ್ಟಿಲ್ಲ ವಾದರೂ, ಸರಕಾರದ ವಿವಿಧ ಇಲಾಖೆಗಳ ಸೂಕ್ಷ್ಮ ಮಾಹಿತಿಯನ್ನು ಹ್ಯಾಕರ್‌ಗಳು ಕದಿಯುವುದರಲ್ಲಿ ಯಶಸ್ವಿಯಾಗಿದ್ದಾರೆ ಎಂದು ಅಮೆರಿಕ ಸರಕಾರ ಪರೋಕ್ಷವಾಗಿ ಒಪ್ಪಿಕೊಂಡಿದೆ. ಇಂತಹ ಘಟನೆಗಳು ಮರುಕಳಿಸದಂತೆ ಕ್ರಮಗಳನ್ನು ಕೈಗೊಳ್ಳ ಲಾಗಿದೆ ಎಂದು ಅಲ್ಲಿನ ನ್ಯಾಷನಲ್ ಸೆಕ್ಯುರಿಟಿ ಕೌನ್ಸಿಲ್ ವಕ್ತಾರ ಹೇಳಿಕೆ ನೀಡಿದ್ದಾರೆ.

ಅಂದ ಹಾಗೆ, ಅಮೆರಿಕದ ಸುಭದ್ರ ಫೈರ್‌ವಾಲ್ ಮತ್ತು ಇತರ ರಕ್ಷಣಾ ವ್ಯವಸ್ಥೆಗಳನ್ನು ಭೇದಿಸಿ, ಮಾಹಿತಿಯನ್ನು ಕದಿಯುವಲ್ಲಿ ಯಶಸ್ವಿಯಾದ ಆ ಚಾಣಾಕ್ಷ ಹ್ಯಾಕರ್‌ಗಳಿಗೆ ಯಾವ ದೇಶ ಬೆಂಬಲ ನೀಡುತ್ತಿತ್ತು? ಇದರ ಕುರಿತು ಅಮೆರಿಕವು ಅಧಿಕೃತವಾಗಿ ಯಾವುದೇ ಮಾಹಿತಿ ನೀಡಿಲ್ಲ. ಆದರೆ ವಾಷಿಂಗ್ಟನ್ ಪೋಸ್ಟ್‌ ಪತ್ರಿಕೆಯು, ರಷ್ಯಾದ ಎಪಿಟಿ29 ಅಥವಾ ಕೋಜಿ ಬೇರ್ ಎಂಬ ಹ್ಯಾಕರ್ ಗುಂಪು ಈ ಕೆಲಸ ಮಾಡಿದೆ ಎಂದು ವರದಿ ಮಾಡಿದೆ. ಹಿಂದೆ, ಒಬಾಮಾ ಕಾಲದಲ್ಲೂ ವೈಟ್ ಹೌಸ್‌ನ ಮಾಹಿತಿಯನ್ನು ಕದಿಯಲು ಈ ಗುಂಪು ಪ್ರಯತಿಸಿತ್ತು.

ಈಗ ಕೋವಿಡ್-19 ವ್ಯಾಕ್ಸೀನ್ ಸಂಶೋಧನೆಯ ವಿವರಗಳನ್ನು ಸಹ ಕಳೆದ ಕೆಲವು ತಿಂಗಳುಗಳಿಂದ ಹ್ಯಾಕ್ ಮಾಡಲು ಯತ್ನ ನಡೆದಿದೆ ಎನ್ನಲಾಗಿದೆ.