ಕೆ.ಶ್ರೀನಿವಾಸರಾವ್
ನಗರದ ಗದ್ದಲ, ಗೌಜು, ಧೂಳು, ಜಂಜಡಗಳಿಂದ ಜಡ್ಡುಗಟ್ಟಿದ ಮನಕ್ಕೆ ಆಹ್ಲಾದತೆ ಬೇಕೇ? ಬನ್ನಿ ಬೆಂಗಳೂರಿನಿಂದ 64 ಕಿ.ಮೀ ದೂರದಲ್ಲಿನ ಕ್ಯಾತಸಂದ್ರದ ಬಳಿಯ ಕೆಸರುಮಡು ರಸ್ತೆಯಲ್ಲಿ ಆಳೆತ್ತರದ ಮರಗಳ ಸುಂದರ ತೋಟ, ‘ಧಾತ್ರಿ ಹಸಿರು ಮನೆ’ಗೆ. ಇಲ್ಲಿದೆ ದಟ್ಟವಾಗಿ ಹರಡಿದ ಸಸ್ಯ ಶ್ಯಾಮಲೆಯ ಕಾಶ್ಯಪವನ.
ಹಳೆಯ ಕಾಲದ ಹಳ್ಳಿಮನೆ, ಗೋಡೆಗಳಿಗೆ ಚಿತ್ತಾರಗಳು, ಮಧ್ಯೆ ಒಂದು ಲತಾ ಮಂಟಪ, ಒಳಗೆ ಅಗಲವಾದ ಜೋಕಾಲಿ, ಗತ ವೈಭವ ಸಾರುವ ಪೀಪಾಯಿ, ಒನಕೆ, ಬೀಸುವ ಕಲ್ಲು ಮೊದಲಾದ ವಸ್ತುಸಂಗ್ರಹ, ಕಟ್ಟಿಗೆ ಒಲೆ, ಅಜ್ಜಿ ಮನೆ ನೆನಪಿಸುವ ಊಟದ ಮನೆ. ಹೊರಗೆ 16 ಎಕರೆ ಬಾಳೆ ತೋಟ, ತೆಂಗು. ನೀರು ಸೇದುವ ಬಾವಿ. ಮಾಲೀಕ ರವಿಯವರು ತಮ್ಮ ಪೂರ್ವಜ ರಿಂದ 7ನೇ
ತಲೆಮಾರಿನವರು.
ಪತ್ನಿ, ಮಗ, ನಾಲ್ಕು ಜನ ಸಹಾಯಕರು ಅಷ್ಟೇ ಇಲ್ಲಿರುವರು. ನಾವು ಹೋದೊಡನೆ ಅದೇ ತಾನೇ ದೇವರ ಪೂಜೆ ಮುಗಿಸಿದ ರವಿಯವರು ಶ್ಲೋಕಗಳ ಜತೆ ಸಾವಯವ ಬೆಲ್ಲ ನೀಡಿ ಅರಿಷಿಣ, ಕುಂಕುಮ ಎದುರಿಗಿಟ್ಟು ಸ್ವಾಗತಿಸಿದರು. ಎಲ್ಲರನ್ನೂ ಆಧರಿಸಿ, ಕೂರಿಸಿ ಆ ಸ್ಥಳದ ಮಹತ್ವ ತಿಳಿಸುತ್ತಾರೆ. ನಂತರ ತಿಂಡಿ. ದಕ್ಷಿಣ ಕನ್ನಡದ ಹಲಸಿನ ಎಲೆಯಲ್ಲಿ ಸುತ್ತಿದ ಕೊಟ್ಟೆ ಕಡಬು, ಕಷಾಯ, ಅವಲಕ್ಕಿಯ ಹುಗ್ಗಿ, ಹುಣಸೆ ಗೊಜ್ಜು, ಗಂಜಿಯನ್ನು ಧಾರಾಳ ತುಪ್ಪದೊಂದಿಗೆ ಬಡಿಸುತ್ತಾರೆ. ಮಧ್ಯೆ ಆದರದ ಉಪಚಾರ.
ತಿಂಡಿಯ ನಂತರ ಹಳ್ಳಿಯ ಆಟಗಳನ್ನು ಆಡಿಸುತ್ತಾರೆ. ಚೌಕಾಬಾರ, ಪಗಡೆ, ರಾಗಿ ಬೀಸುವುದು, ಅಳಗುಳಿಮನೆ, ರಂಗೋಲಿ,
ಕಸದಿಂದ ರಸ, ಬಾವಿಯಿಂದ ನೀರು ಸೇದಿ ಗಿಡಗಳಿಗೆ ಹಾಕುವುದು, ಒಂದರಿಂದ 300 ಅಂಕಿ ಬರೆಯುವುದು, ಅ, ಆ, ಇ, ಈ ಬರೆಯುವುದು, 100 ರಿಂದ 1ರ ವರೆಗೆ ಬರೆಯುವುದು ಹೀಗೆ. ಎಲ್ಲರಲ್ಲಿಯೂ ಗೆದ್ದವರಿಗೆ ಬಹುಮಾನಗಳು. ಮಧ್ಯದಲ್ಲಿ ಅವಲಕ್ಕಿ ಶೇಂಗಾ, ಮುರುಗನ ಹುಳಿ ಶರಬತ್ತು ಸೇವನೆ. 2-30 ಕ್ಕೆ ಊಟಕ್ಕೆ ಬುಲಾವ್. ಊಟ ಅಪ್ಪಟ ಸಾತ್ವಿಕ ಹಾಗೂ ನಮ್ಮ ಮುತ್ತಜ್ಜಿಯ ಕೈ ರುಚಿಯನ್ನು ನೆನಪಿಸುವಂತಹದು.
ಎಲ್ಲವೂ ಅವರ ತೋಟದಲ್ಲಿ ಬೆಳೆದ ವಸ್ತುಗಳಿಂದ ತಯಾರಿಸಿದ್ದು. ಅಡಿಕೆ ಹಾಳೆಯ ಎಲೆ, ಸೊಪ್ಪುಗಳಿಂದ ತಯಾರಿಸಿದ ತಂಬುಳಿ, ಅನ್ನ, ಅನ್ನದ ಗಂಜಿ, ಜೋಳದ ರೊಟ್ಟಿ, ಸಿರಿಧಾನ್ಯಗಳ ರೊಟ್ಟಿ, ತರಕಾರಿ ಚಟ್ನಿ, ಹಲವು ಕಾಳುಗಳ ಪಲ್ಯ, ಗಸಗಸೆ ಪಾಯಸ, ತುಪ್ಪ, ಹುಣಸೆ ಚಿತ್ರಾನ್ನ, ಹಪ್ಪಳ, ಕೆಂಪಕ್ಕಿ ಅನ್ನ, ಮೊಸರು ಹಾಗೂ ಮಸಾಲಾ ಮಜ್ಜಿಗೆ. ಪುಷ್ಕಳ ಭೋಜನ ಜೊತೆಗೆ ರವಿ ದಂಪತಿಗಳ ನಲ್ಮೆಯ ಉಪಚಾರ, ಧಾರಾಳ ಬಡಿಸುವಿಕೆ ಎಲ್ಲವೂ ಒಗ್ಗೂಡಿ ಒಂದು ತಿನ್ನುವಲ್ಲಿ ಎಂಟು ತಿಂದಿರುತ್ತೇವೆ.
ತರಕಾರಿಯೇ ಉಡುಗೊರೆ
ವೀಳ್ಯ ಮೆದ್ದು ಹೊರ ಬಂದಾಗ, ಮೈಭಾರ, ಕಣ್ಣು ಜೋಂಪು! ಲಘು ವಿಶ್ರಾಂತಿಯ ಅವಕಾಶವೂ ಇದೆ! ಒಂದು ಗಂಟೆ ಅವಧಿಯ ನಂತರ ಗೆದ್ದವರಿಗೆ ಬಹುಮಾನ ವಿತರಣೆ. ಅವರ ತೋಟದಲ್ಲಿ ಬೆಳೆದ ತಾಜಾ ಹಸಿರು ತರಕಾರಿಗಳೇ ಉಡುಗೊರೆಗಳು. ಚೊಕ್ಕವಾಗಿ
ಊಟ ಮಾಡಿದವರು, ತಪ್ಪಿಲ್ಲದೇ ಅಂಕಿ ಬರೆದವರು, ಉತ್ತಮ ಸಂದೇಶ, ಹವ್ಯಾಸ ಬರೆದವರಿಗೂ ಬಹುಮಾನ ಉಂಟು. ಕೊನೆಯದಾಗಿ, ಎಲ್ಲರಿಗೂ ನಮಸ್ಕರಿಸಿ ವಿದಾಯ ಹೇಳುತ್ತಾರೆ. ಆತಿಥ್ಯ ಸವಿದ ಅತಿಥಿಗಳು ಸಂತೋಷದಿಂದ ನಿಗದಿಪಡಿಸಿದ ಅಲ್ಪ ಶುಲ್ಕವನ್ನು ಸಂದಾಯಿಸಿ ಹೊರಡಲಣಿಯಾಗುತ್ತಾರೆ.