Thursday, 21st November 2024

Anupama Mangalavede: ಸಾಧನಪಾದಕ್ಕೆ ಪ್ರವೇಶ

ಅನುಪಮಾ ಮಂಗಳವೇಢೆ ಶಿಕಾಗೊ

ಕೊಯಮತ್ತೂರಿನ ಈಶ ಸಂಸ್ಥೆಯಲ್ಲಿ ಒಂಬತ್ತು ತಿಂಗಳುಗಳ ಅವಧಿಯ ಸಾಧನಪಾದ ಶಿಬಿರ ವಿಶೇಷ ವಾದುದು. ದೇಶ ವಿದೇಶಗಳಿಂದ ಹಲವರು ಇದರಲ್ಲಿ ಭಾಗವಹಿಸುತ್ತಾರೆ; ಇದರಲ್ಲಿ ಭಾಗವಹಿಸಲು ಪ್ರವೇಶ ದೊರಕುವುದೇ ಕಷ್ಟ! ದೂರದ ಅಮೆರಿಕದಲ್ಲಿ ವಾಸವಾಗಿರುವ ಲೇಖಕಿ, ಸಾಧನಪಾದ ಶಿಬಿರದಲ್ಲಿ ಭಾಗವಹಿಸಿ, ತಮಗಾದ ಅಪರೂಪದ ಅನುಭವವನ್ನು ಈ ಲೇಖನಮಾಲೆಯಲ್ಲಿ ಹಂಚಿಕೊಂಡಿದ್ದಾರೆ.

ಬೇಸಿಗೆ ಕಾಲದ ಅಯನ ಸಂಕ್ರಾಂತಿಯಿಂದ ಹಿಡಿದು ಚಳಿಗಾಲದ ಅಯನ ಸಂಕ್ರಾಂತಿಯವರೆಗೆ ಸಾಧನಪಾದ ವೆಂದೂ, ಚಳಿಗಾಲದ ಅಯನ ಸಂಕ್ರಾಂತಿಯಿಂದ ಬೇಸಿಗೆ ಕಾಲದ ಅಯನ ಸಂಕ್ರಾಂತಿಯವರೆಗೆ ಕೈವಲ್ಯ ಪಾದವೆಂದೂ ಯೋಗ ಸಂಪ್ರದಾಯದಲ್ಲಿ ಹೇಳುತ್ತಾರೆ. ಸಾಧನಪಾದದಲ್ಲಿ ಸಾಧನವನ್ನು ಮಾಡಿ, ಕೈವಲ್ಯಪಾದದಲ್ಲಿ ಸಾಧನದ ಫಲವನ್ನು ಪಡೆಯಬಹುದು ಎನ್ನುತ್ತಾರೆ. ಗುರುಪೂರ್ಣಿಮೆಗೆ ಪ್ರಾರಂಭವಾಗಿ ಜನವರಿಯ ಮೊದಲನೆ ವಾರದ ತನಕದ ಅವಽಯ ಈ ಸಾಧನಪಾದದಲ್ಲಿ ಯೋಗ ಸಾಧನೆ ಮಾಡುವುದು ಮನುಷ್ಯನ ಆಧ್ಯಾತ್ಮಿಕ ಏಳಿಗೆಗೆ ಬಹಳ ಉತ್ತಮವೆನ್ನುತ್ತಾರೆ.

ಸಾಧನ ಎಂದರೆ ಉಪಕರಣ. ವೈಯುಕ್ತಿಕ ರೂಪಾಂತರಕ್ಕೆ, ಪ್ರeಯ ಅಂತಿಮ ಅಭಿವ್ಯಕ್ತಿಯನ್ನು ಪಡೆಯುವುದಕ್ಕೆ ಸಹಕರಿಸುವ ಉಪಕರಣಗಳೇ ಸಾಧನ. ದಿನನಿತ್ಯದ ಯೋಗಾಭ್ಯಾಸ, ಧ್ಯಾನ, ಜಪಗಳಂತಹ ಸಾಧನಗಳು ಅಂತಿಮ
ಧ್ಯೇಯವನ್ನು ಮುಟ್ಟುವುದಕ್ಕೆ ಸಹಾಯ ಮಾಡುತ್ತವೆ. ಆದರೆ ಇವುಗಳನ್ನು ಮಾಡುವ ಸರಿಯಾದ ರೀತಿ ರಿವಾಜುಗಳ ಅರಿವಿರುವುದಿಲ್ಲ ನಮಗೆ. ಸಾಂಪ್ರದಾಯಿಕ ರೀತಿಯಲ್ಲಿ ಮಾಡಬೇಕೆಂದರೆ ಅದಕ್ಕೆ ಗುರುಗಳ ಮಾರ್ಗ ದರ್ಶನವಿರ ಬೇಕು. ಜೀವನದ ಆಳವಾದ ಆಯಾಮಗಳನ್ನು ಗ್ರಹಿಸಲು, ಅನ್ವೇಷಿಸಲು, ಅನುಭವಿಸಲು ಸರಿಯಾದ ವಾತಾವರಣ ವೂ ಇರಬೇಕು. ಈ ಎಲ್ಲವನ್ನೂ ಒಳಗೊಂಡಂತಹ, ಈಗಿನ ಸಮಯಕ್ಕೆ ಬಹಳ ಪ್ರಸ್ತುತವಾಗಿರುವ, ಕಾಲಾತೀತ ವಾದ ಯೋಗವಿಜ್ಞಾನದಲ್ಲಿ ಬೇರೂರಿರುವಂತಹ ಸದ್ಗುರು ಗುರುಕುಲ ಎಂಬ ಉಪಕ್ರಮವೊಂದನ್ನು ಈಶ ಸಂಸ್ಥೆಯ ಸದ್ಗುರು ಜಗ್ಗಿ ವಾಸುದೇವ್ ಅವರು ವಿನ್ಯಾಸಗೊಳಿಸಿದ್ದಾರೆ. ಸದ್ಗುರುಗಳು ಸ್ಥಾಪಿಸಿರುವ ವೆಳ್ಳಿಯಂಗಿರಿ ತಪ್ಪಲಿನಲ್ಲಿರುವ ಯೋಗ ಕೇಂದ್ರದಲ್ಲಿ ನಡೆಯುವಂತಹ ಏಳೆಂಟು ತಿಂಗಳುಗಳ ಈ ಉಪಕ್ರಮದ
ಕಾರ್ಯಕ್ರಮವೊಂದಕ್ಕೆ ಸಾಧನಪಾದ ಎಂದೇ ಹೆಸರಿಟ್ಟಿದ್ದಾರೆ.

2018ರಲ್ಲಿ ಆರಂಭ
2018ರಲ್ಲಿ ಮೊತ್ತಮೊದಲು ಸದ್ಗುರುಗಳು ಪ್ರಾರಂಭಿಸಿದ ಈ ‘ಸಾಧನಪಾದ’ ಕಾರ್ಯಕ್ರಮದಲ್ಲಿ 21 ದೇಶ ವಿದೇಶ ಗಳಿಂದ ಆಯ್ದ ಸುಮಾರು ಇನ್ನೂರು ಜನ ಭಾಗವಹಿಸಿದ್ದರು. ಪ್ರತಿವರ್ಷವೂ ಇದರಲ್ಲಿ ಭಾಗವಹಿಸುವವರ ಸಂಖ್ಯೆ ಏರುತ್ತಲೇ ಇದೆ. ಜೀವನದಲ್ಲಿ ಸ್ಪಷ್ಟತೆ, ತೀವ್ರತೆ ಹಾಗು ಸಮತೋಲನ ನೀಡುವುದರ ಮೂಲಕ ಮನುಷ್ಯ ನನ್ನು ರೂಪಾಂತರಿಸುವ ಏಳು ತಿಂಗಳಿನ ಈ ಕಾರ್ಯಕ್ರಮ, ಪ್ರತಿ ಗುರುಪೂರ್ಣಿಮೆಗೆ ಪ್ರಾರಂಭವಾಗಿ ಮಹಾಶಿವರಾತ್ರಿ ಯಲ್ಲಿ ಕೊನೆಗೊಳ್ಳುವಂತಹದಾದ್ದರಿಂದ, ಕಳೆದ ವರುಷ ಜುಲೈ ತಿಂಗಳಲ್ಲಿ ಶುರುವಾಗಿ ಮಾರ್ಚ್ ತಿಂಗಳಲ್ಲಿ ಕೊನೆಗೊಂಡು, ಒಟ್ಟು ಒಂಬತ್ತು ತಿಂಗಳಿನ ಕಾರ್ಯಕ್ರಮವಾಯಿತು. ಇದರಲ್ಲಿ ಭಾಗವಹಿಸಿದ ಸಂತೋಷ, ಹೆಮ್ಮೆ, ಸಾರ್ಥಕತೆಯ ಭಾವ ನನ್ನ ಪಾಲಿಗೂ ದೇವರು ಅನುಗ್ರಹಿಸಿದ ಎಂದು ತಿಳಿಸುವುದಕ್ಕೆ ಸಂತೋಷವಾಗುತ್ತಿದೆ.

ಅದರಲ್ಲಾದ ಅನುಭವಗಳನ್ನು ನಿಮ್ಮೊಂದಿಗೆ ಹಂಚಿಕೊಳ್ಳುವುದಿಕ್ಕೆ ಕಾತರಳಾಗಿದ್ದೇನೆ. ಅದಕ್ಕೂ ಮುನ್ನ ನನ್ನ ಮತ್ತು ಈಶ ಸಂಸ್ಥೆ, ನನ್ನ ಮತ್ತು ಸದ್ಗುರುಗಳ ನಡುವಿನ ಬಾಂಧವ್ಯದ ಬಗ್ಗೆ ಚಿಕ್ಕದಾಗಿ ಹೇಳಿಬಿಡುತ್ತೇನೆ. ಯಾವ
ಗುರುವಿನಲ್ಲಾಗಲಿ, ಧ್ಯಾನದಲ್ಲಾಗಲಿ ಅಥವಾ ಯೋಗದಲ್ಲಾಗಲಿ ಅಷ್ಟೇನೂ ಆಸಕ್ತಿ ಇಲ್ಲದಿದ್ದ ನನಗೆ, ಆಕಸ್ಮಿಕವಾಗಿ ಸದ್ಗುರು ನನ್ನ ಜೀವನದಲ್ಲಿ ಬಂದದ್ದು ಒಂದು ರೋಚಕ ಕಥೆಯೇ ಸರಿ!

2005ನೇ ಇಸವಿಯ ಏಪ್ರಿಲ್ ತಿಂಗಳಿನಲ್ಲಿ ಯೋಗ ಕಾರ್ಯಕ್ರಮವೊಂದನ್ನು ಹೇಳಿಕೊಡಲು ಸದ್ಗುರುಗಳು ಶಿಕಾಗೋಗೆ ಬಂದಿದ್ದಾಗ ದೂರದಿಂದಲೇ ಅವರನ್ನು ನೋಡಿ ಇದೆಂಥ ಗುರುಗಳಪ್ಪ ಎಂದು ಮೂಲೆಯಲ್ಲಿ ಕೈಕಟ್ಟಿ ನಿಂತಿದ್ದೆ. ಆ ಕಾರ್ಯಕ್ರಮದಲ್ಲಿ ನಾನು ಆಗ ಭಾಗವಹಿಸಿರಲಿಲ್ಲ. ನನಗೂ ಇವಕ್ಕೂ ಸಂಬಂಧವಿಲ್ಲ ಎಂದೆಣಿಸಿದ್ದೆ. ಆದರೆ ಗುರುಗಳ ದೃಷ್ಟಿಯನ್ನು ತಪ್ಪಿಸಲು ಸಾಧ್ಯವೆ ? ನನ್ನ ಮತ್ತು ಅವರ ನೋಟ ಸಂಧಿಸಿದ ಆ ಒಂದು ಕ್ಷಣ ನನ್ನ ಜೀವನವನ್ನೇ ಬದಲಾಯಿಸಿತ್ತು! ಕರುಣೆ ತುಂಬಿದ ಆ ತೀಕ್ಷ್ಣವಾದ ನೋಟದಿಂದ ನನ್ನ ಇಡೀ ದೇಹದಲ್ಲೇ ವಿದ್ಯುತ್ ಸಂಚಲನವಾದಂತೆ ಭಾಸವಾಗಿತ್ತು.

ಆ ಸಮಯದಲ್ಲಿ ಯಾವ ಸಾಮಾಜಿಕ ಮಾಧ್ಯಮಗಳಾಗಲಿ, ಯೂಟ್ಯೂಬ್ ಆಗಲಿ ಇರಲಿಲ್ಲ. ಹಾಗಾಗಿ ಅವರಾರೆಂದು ನನಗೆ ತಿಳಿದಿರಲಿಲ್ಲ. ಆದರೆ ಗುರುಗಳ ಗುರುತ್ವಾಕರ್ಷಣೆ ಎಷ್ಟು ಗಹನವಾಗಿತ್ತೆಂದರೆ, ಆ ವರುಷವೇ ಜುಲೈನಲ್ಲಿ ಏಳು ದಿನಗಳ ಶೂನ್ಯ ಕಾರ್ಯಕ್ರಮವನ್ನೂ ತದನಂತರ ಆಗಸ್ಟ್ ತಿಂಗಳಲ್ಲೇ ಮೂರು ದಿನಗಳ ರೆಸಿಡೆನ್ಶಿಯಲ್ ಭಾವಸ್ಪಂದನ ಕಾರ್ಯಕ್ರಮವನ್ನೂ ಸದ್ಗುರುಗಳಿಂದ ನೇರವಾಗಿ ಸ್ವೀಕರಿಸಿದೆ. ಕ್ಲಾಸಿನಲ್ಲಿ ಇದ್ದದ್ದು ಕೇವಲ 70-80 ಜನರಾದ್ದರಿಂದ ಅನೇಕ ಸಲ ಸದ್ಗುರುಗಳೊಡನೆ ವೈಯುಕ್ತಿಕವಾಗಿ, ನೇರವಾಗಿ ಮಾತನಾಡುವ ಸದವಕಾಶ
ಸಿಕ್ಕಿದ್ದು ನನ್ನ ಪೂರ್ವಜನ್ಮದ ಪುಣ್ಯವೇ ಎಂದು ಈಗನಿಸುತ್ತದೆ.

ನೃತ್ಯ ಕಲಿಯಲು ಸ್ಪೂರ್ತಿ
ಭಾವಸ್ಪಂದನ ಕಾರ್ಯಕ್ರಮದಲ್ಲಿ ಅವರು ನನಗೆ ಹೇಳಿದ ಮಾತುಗಳೇ ನನ್ನನ್ನು ಭರತನಾಟ್ಯ ನೃತ್ಯಗಾರ್ತಿ ಯನ್ನಾಗಿ ಮಾಡಿತು. ತದನಂತರ ಅವರ ಜೊತೆ 2009 ರಲ್ಲಿ ಮಾನಸ ಸರೋವರ, ಕೈಲಾಸ ಯಾತ್ರೆಯನ್ನು ಮಾಡಿದ್ದು, 2011ರಲ್ಲಿ ಬೆಂಗಳೂರಿನಲ್ಲಿ ನಡೆದ ಅವರ ಮೊದಲ ಕನ್ನಡ ಪುಸ್ತಕ ಲೋಕಾರ್ಪಣೆಯ
ಸಂದರ್ಭದಲ್ಲಿ ಕಾರ್ಯಕ್ರಮದ ನಿರೂಪಕಿಯಾಗಿದ್ದು ನನ್ನ ಅದೃಷ್ಟವೇ ಸರಿ. ಈ ಮಧ್ಯದಲ್ಲಿ, ನನಗೆ ಅಲ್ಪಸ್ವಲ್ಪ ಬರೆಯುವ ಹವ್ಯಾಸವಿದೆಯೆಂದು ತಿಳಿದಿದ್ದ ಈಶ ಸಂಸ್ಥೆಯ ಸ್ವಾಮಿ ನಿಸರ್ಗ ಅವರು ಸದ್ಗುರುಗಳ ಲೇಖನಗಳನ್ನು ಕನ್ನಡಕ್ಕೆ ಅನುವಾದ ಮಾಡಲು ನನಗೆ ಅವಕಾಶಕೊಟ್ಟಿದ್ದರು. ಅಮೆರಿಕದ ಟೆನಸಿಯಲ್ಲಿ ಮಹಿಮಾ ಎನ್ನುವ ಧ್ಯಾನ ಆಲಯದ ಪ್ರತಿಷ್ಠಾಪನೆ, ಆದಿಯೋಗಿ ಆಲಯದ ಪ್ರಾಣಪ್ರತಿಷ್ಠಾಪನೆಗಳಲ್ಲಿ ಕೂಡ ಭಾಗವಹಿಸಿದ್ದೆ. ಶಿಕಾಗೋ ಅಥವಾ ಟೆನೆಸಿಯ ಆಶ್ರಮದ ಕಾರ್ಯಕ್ರಮಗಳಲ್ಲಿ ಸ್ವಯಂಸೇವಕಳಾಗಿ ಸಮಯವಾದಾಗಲೆಲ್ಲಾ
ಭಾಗವಹಿಸುತ್ತಿದ್ದೆ.

ಈಶ ಸಂಸ್ಥೆ ಕಲಿಸುವ ಧ್ಯಾನ, ಯೋಗಾಸನಗಳು, ಕ್ರಿಯೆಗಳೆಲ್ಲವನ್ನೂ ಕಲಿತಿದ್ದರೂ, ಮಕ್ಕಳಿಬ್ಬರೂ ಚಿಕ್ಕವರಾಗಿದ್ದರಿಂದ, ನನ್ನ ಅಫೀಸಿನ ಕೆಲಸ, ಮನೆಗೆಲಸ, ನೃತ್ಯ ಮತ್ತು ಆಗಾಗಿನ ಬರವಣಿಗೆಯ ಮಧ್ಯೆ ನನ್ನ ಸಾಧನ ಕುಂಠಿತಗೊಂಡಿತ್ತು. ಪ್ರತಿನಿತ್ಯ ಬಿಡದಂತೆ ಸಾಧನ ಮಾಡಬೇಕೆನಿಸುವ ಮನಸ್ಸೇನೋ ಇತ್ತು. 2022 ರ ಹೊತ್ತಿಗೆ ನನ್ನ ಮಕ್ಕಳಿಬ್ಬರೂ ಪದವಿ ವಿದ್ಯಾಭಾಸದ ಸಲುವಾಗಿ ಪರ ಊರಿಗೆ ಹೋದದ್ದರಿಂದ ನಾನು ಮತ್ತು ನನ್ನ ಗಂಡ ಮಾತ್ರ ಮನೆಯಲ್ಲಿ. ಇದೇ ಸದವಕಾಶವೆನಿಸಿತು ನನಗೆ ಇಷ್ಟವಾದದ್ದನ್ನು ಕಾರ್ಯಗತಗೊಳಿಸಲು. ಸಾಧನಪಾದಕ್ಕೆ ಅರ್ಜಿ ಸಲ್ಲಿಸಿಯೇ ಬಿಟ್ಟೆ.

ಚಿಕ್ಕವಳಿದ್ದಾಗ ಅಮರಚಿತ್ರಕಥೆ ಓದುತ್ತಿದ್ದೆ. ಅದರಲ್ಲಿನ ಕಥೆಗಳಲ್ಲಿ ತೋರಿಸುತ್ತಿದ್ದ ಆಶ್ರಮದ ಚಿತ್ರಣ ನನ್ನ ಮನಸ್ಸಿನಲ್ಲಿ ಅಗಾಧ ಪರಿಣಾಮ ಬೀರಿದ್ದವು. ಅಂತಹ ವಾತಾವರಣದಲ್ಲಿ ಇರುವುದೇ ಸ್ವರ್ಗ ಎಂದು ಅನಿಸುತ್ತಿತ್ತು. ಇಂತಹ ಒಂದು ಚಿತ್ರಣ ಅಮರಚಿತ್ರಕಥೆಗಳಂತಹ ಪುಸ್ತಕಗಳಲ್ಲಿ ಮಾತ್ರ ಸಾಧ್ಯ ಆದರೆ ನೈಜವಾಗಿ ಭೂಮಿಯ ಮೇಲೆ ಇಲ್ಲವೇನೋ ಎಂದು ಎಣಿಸಿದ್ದೆ. ಆದರೆ 2006 ರಲ್ಲಿ ಮೊತ್ತಮೊದಲು ಕೊಯಂಬತ್ತೂರಿನ ಈಶ ಯೋಗ ಕೇಂದ್ರಕ್ಕೆ ಭೇಟಿ ನೀಡಿದಾಗ ನನ್ನ ಎಣಿಕೆ ತಪ್ಪು ಎಂದು ಅನಿಸಿತ್ತು. ಭಾರತದ ಪ್ರತಿ ಪ್ರವಾಸದಲ್ಲೂ, ಈಶ ಯೋಗ
ಕೇಂದ್ರಕ್ಕೆ ನನ್ನದು ಖಾಯಂ ಭೇಟಿ ಇರುತ್ತದೆ. ಪ್ರತಿ ಭೇಟಿಯಲ್ಲೂ ಸ್ವರ್ಗಕ್ಕೇ ಹೋಗಿ ಬಂದಂತಹ ಅನುಭವ ವಾಗುತ್ತದೆ. ಆದರೆ ಅಲ್ಲಿ ಇರುತ್ತಿದ್ದದ್ದು ಗರಿಷ್ಠ ಒಂದು ವಾರ. ತೃಪ್ತಿಯಾಗುತ್ತಿರಲಿಲ್ಲ. ಈಗಿನ್ನು ಸಾಧನಪಾದಕ್ಕೆ ಪ್ರವೇಶ ಅನುಮತಿ ಸಿಕ್ಕಿ ಒಂಬತ್ತು ತಿಂಗಳು ಆಶ್ರಮದಲ್ಲೇ ವಾಸವೆಂದರೆ ಇನ್ನೇನು ಬೇಕು?

ಸ್ವರ್ಗಕ್ಕೆ ಮೂರೇ ಗೇಣು!

ಧನಪಾದಕ್ಕೆ ಪ್ರವೇಶ ಸಿಗುವುದು ಸುಲಭವಲ್ಲ ಎಂಬ ವಿಷಯ ಅರ್ಜಿ ಸಲ್ಲಿಸಿದಾಗ ನನಗೆ ತಿಳಿದಿರಲಿಲ್ಲ. ನಾನು ಈ ಕಾರ್ಯಕ್ರಮದ ಬಗ್ಗೆ ಯಾವ ಸಂಶೋಧನೆಯನ್ನೂ ಮಾಡಿರಲಿಲ್ಲ. ಪ್ರವೇಶ ಸಿಕ್ಕೇ ಸಿಗುತ್ತದೆ ಎಂಬ
ಭರವಸೆ ಯಲ್ಲಿದ್ದವಳಿಗೆ ಕೆಲವರಿಗೆ ಪ್ರವೇಶ ತಿರಸ್ಕರಿಸಿದ್ದಾರೆ ಎಂದು ತಿಳಿದಾಗ ತಳಮಳ ಶುರುವಾಗಿತ್ತು. ನಿಮಗೆ ಆಶ್ಚರ್ಯವಾಗಬಹುದು, ಈ ಕಾರ್ಯಕ್ರಮ ಸಂಪೂರ್ಣವಾಗಿ ಉಚಿತ! ಊಟ ಹಾಗು ವಸತಿ ಅಷ್ಟು ತಿಂಗಳುಗಳೂ
ಉಚಿತವಾಗಿಯೇ ಕೊಡುತ್ತಾರೆ. ಅಲ್ಲಿಗೆ ಬರುವವರು ಜೀವನದ ಬೇಗೆಯಿಂದ ತಪ್ಪಿಸಿಕೊಳ್ಳಲು ಬರುತ್ತಿದ್ದಾರೋ ಅಥವಾ ನಿಜವಾಗಿಯೂ ಸಾಧನೆ ಮಾಡಬೇಕೆನ್ನುವ ಮನಸ್ಸಿನಿಂದ ಬರುತ್ತಿದ್ದಾರೋ ಎಂದು ಅವರಿಗೂ
ಗೊತ್ತಾಗಬೇಕಲ್ಲವೆ? ಅದಕ್ಕಿರಬಹುದು – ನಮಗೆ ಎರಡೆರಡು ಸುತ್ತಿನ ವಿಡಿಯೋ ಸಂದರ್ಶನ ಇತ್ತು. ಹಲವಾರು ರೀತಿಯ ಪ್ರಶ್ನೆಗಳನ್ನು ಕೇಳಿದ್ದರು.

ಆಶ್ರಮ ವಾಸಕ್ಕೆ ಅನುಮತಿ
ಸಾಧನಪಾದದಲ್ಲಿ ಭಾಗವಹಿಸುತ್ತಿರುವಾಗ, ಆಫೀಸಿನ ಕೆಲಸ ಮಾಡಲು ಸಾಧ್ಯವಿರುವುದಿಲ್ಲ, ದೀರ್ಘ ರಜೆ ತೆಗೆದುಕೊಳ್ಳಬೇಕು, ಇಲ್ಲವಾದರೆ ರಾಜಿನಾಮೆ ಕೊಡಲು ಸಿದ್ಧರಿರಬೇಕು ಎಂದು ತಿಳಿಸಿದ್ದರು. ಐಟಿ ಸಾಫ್ಟ್‌ ವೇರ್ ವಲಯದಲ್ಲಿ ಕೆಲಸ ನನ್ನದು. ಕೆಲಸ ಹೋದರೂ ಚಿಂತೆಯಿಲ್ಲ ಎನ್ನುವ ಮನಸ್ಥಿತಿಗೆ ಬಂದೆ. ನವೆಂಬರ್ ತಿಂಗಳಲ್ಲಿ ಅರ್ಜಿ ಸಲ್ಲಿಸಿದ್ದಕ್ಕೆ ಮಾರ್ಚ್ ತಿಂಗಳಲ್ಲಿ ಫಲಿತಾಂಶ ಬಂದಿತ್ತು. 2023-24 ಸಾಧನಪಾದಕ್ಕೆ ಪ್ರವೇಶ ಅನುಮತಿ ಸಿಕ್ಕಿತ್ತು! ಸುಮಾರು 31000 ಸಾವಿರ ಅರ್ಜಿಗಳು ಬಂದಿದ್ದರಲ್ಲಿ ಸುಮಾರು 1500 ಜನರನ್ನು ಆಯ್ಕೆದ್ದರಂತೆ.
ಜುಲೈ ತಿಂಗಳಲ್ಲಿ ಕಾರ್ಯಕ್ರಮ ಪ್ರಾರಂಭವಾಗುತ್ತಿದ್ದರೂ, ಒಂದು ವಾರದ ಓರಿಯಂಟೇಶನ್ ಇರುತ್ತದೆ, ಹಾಗಾಗಿ ಜೂನ್ ಮೊದಲ ವಾರದಲ್ಲೇ ಆಶ್ರಮಕ್ಕೆ ಬರಬೇಕೆಂಬ ಸೂಚನೆ ಇತ್ತು. ದೇವರ ದಯೆಯಿಂದ ಮನೆಯಲ್ಲಿ ಗಂಡನ
ಒಪ್ಪಿಗೆಯೂ ಸಿಕ್ಕಿ, ಆಫೀಸಿನಲ್ಲಿ ಸಬಾಟಿಕಲ್ ರಜೆಗೂ ಒಪ್ಪಿಕೊಂಡರು. ಬರುವಾಗ ಏನೇನು ತರಬೇಕು, ಏನೇನು ತರಬಾರದು ಎಂಬ ಪಟ್ಟಿಯನ್ನೇ ಆಶ್ರಮದವರು ಕಳುಹಿಸಿದ್ದರು. ಅದರಂತೆ ಅನುಸರಿಸಿದೆ. ಅವೇರಿಕ ಜೀವನಕ್ಕೆ ಒಂದು ತಾತ್ಕಾಲಿಕ ವಿರಾಮ ಕೊಟ್ಟು ಆಶ್ರಮ ಜೀವನಕ್ಕೆ ಸಿದ್ಧಳಾದೆ.

(ಮುಂದುವರಿಯುವುದು)

ಇದನ್ನೂ ಓದಿ: ಆತ್ಮಘಾತಕ ಚಿಂತಕಪಡೆಯ ನಿಗೂಢ ಮೌನ