ಅನಿಲ್ ಎಚ್.ಟಿ
ಸ್ವತಂತ್ರ ಭಾರತದ ಸೇನಾಪಡೆಯ ಕೊಡಗಿನ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಮತ್ತು ಜನರಲ್ ತಿಮ್ಮಯ್ಯ ಎಂಬಿಬ್ಬರು ವೀರಸೇನಾನಿಗಳು ಕಂಗೊಳಿಸಿದ್ದಾರೆ. ಈ ಇಬ್ಬರೂ ಮಹಾನ್ ಸೇನಾನಿಗಳ ಜೀವನ ಮತ್ತು ಸೇನಾ ಕರ್ತವ್ಯ ಪ್ರತಿಯೋಬ್ಬ ಭಾರತೀಯರಿಗೂ ಮಾದರಿ ಯಾಗಿದೆ. ಕಾರ್ಯಪ್ಪ ಮತ್ತು ತಿಮ್ಮಯ್ಯ ಎಂದರೆ ಸಾಕು, ಇಂದಿಗೂ ಭಾರತೀಯ ಸೈನಿಕನ ಮೈಮನ ರೋಮಾಂಚನಗೊಳ್ಳುತ್ತದೆ, ಎದೆ ಗರ್ವದಿಂದ ಸೆಟೆದುಕೊಳ್ಳುತ್ತದೆ. ಭಾರತೀಯ ಸೈನ್ಯಕ್ಕೆ ಶಿಸ್ತು, ಪ್ರಾಮಾಣಿಕತೆ ಮತ್ತು ಧೀರತೆ ತಂದು ಕೊಟ್ಟ ಮಹಾನ್ ಸೇನಾಧಿಕಾರಿಗಳು ಇವರಾಗಿದ್ದರು. ಮಡಿಕೇರಿಯಲ್ಲಿ ಜನರಲ್ ತಿಮ್ಮಯ್ಯ 1906 ರಲ್ಲಿ ಜನಿಸಿದ್ದ ಸನ್ನಿಸೈಡ್‌ನಲ್ಲಿ ಇದೇ ಫೆಬ್ರವರಿ 6 ರಂದು ಜನರಲ್ ತಿಮ್ಮಯ್ಯ ಮ್ಯೂಸಿಯಂ ಲೋಕಾರ್ಪಣೆಯಾಗಲಿದೆ. ನಮ್ಮ ರಾಷ್ಟ್ರಪತಿ ಯವರು ಮ್ಯೂಸಿಯಂ ಉದ್ಘಾಟನೆಗೆಂದು ಕೊಡಗಿಗೆ, ಯೋಧರ ನೆಲೆವೀಡಿಗೆ ಬರು ತ್ತಿದ್ದಾರೆ. ಜನರಲ್ ತಿಮ್ಮಯ್ಯ ಮ್ಯೂಸಿಯಂ ಅನೇಕ ವಿಶೇಷತೆಗಳಿಂದ ಕೂಡಿದೆ. ತಿಮ್ಮಯ್ಯ ಸೇನಾ ಬದುಕಿನ ಚಿತ್ರಣ ನೀಡುವ ಈ ಮ್ಯೂಸಿಯಂ, ಭಾರತೀಯ ಸೇನೆ ಸೇರಲು ಯುವಪೀಳಿಗೆಗೆ ಸ್ಫೂರ್ತಿಯೂ ಆಗಲಿದೆ. ಭಾರತೀಯ ಸೇನಾ ಪರಂಪರೆಯನ್ನು ಸಶಕ್ತಿವಾಗಿ ಬಿಂಬಿಸಲಿರುವ ಕರ್ನಾಟಕದ ವಿನೂತನ ಸೇನಾ ಸ್ಮಾರಕ ಭವನದತ್ತ ‘ವಿಶ್ವವಾಣಿ’ ನೋಟ ಇಲ್ಲಿದೆ.
ನಮ್ಮ ದೇಶ ರಕ್ಷಿಸುವ ಸೇನಾಪಡೆಯ ವಿಚಾರಗಳನ್ನು ಗಮನಿಸಿದರೆ ಬಹು ಹೆಮ್ಮೆ ಪಡುವಂತಹ ಒಂದು ಅಂಶವಿದೆ. ಪಂಜಾಬ್ ಹೊರತುಪಡಿಸಿದಂತೆ ಅತ್ಯಧಿಕ ಸಂಖ್ಯೆಯಲ್ಲಿ ಸೈನಿಕರನ್ನು ನೀಡಿದ ಕೀರ್ತಿ ಕೊಡಗು ಜಿಲ್ಲೆಯದ್ದು. ಹೀಗಾಗಿಯೇ ಕೊಡಗು ಸೈನಿಕರ ನಾಡು ಎಂದೇ ಖ್ಯಾತಿ. ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ, ಜನರಲ್ ತಿಮ್ಮಯ್ಯ ಅವರಂಥ ಮಹಾನ್ ಸೇನಾನಿ ಗಳನ್ನು ದೇಶಕ್ಕೆ ನೀಡಿದ ಕೊಡಗು ಜಿಲ್ಲೆಯ ಜನರ ರಕ್ತದಲ್ಲಿ ಸೈನ್ಯದ ತುಡಿತವಿದೆ, ಹೋರಾಡುವ ಕೆಚ್ಚಿದೆ.
ಕೊಡಗು ಜಿಲ್ಲೆಯ ಪ್ರತೀ ಕುಟುಂಬದಲ್ಲಿಯೂ ಸೈನಿಕರಿದ್ದಾರೆ. ಇಲ್ಲಿನವರ ರಕ್ತದ ಕಣಕಣದಲ್ಲಿಯೂ ದೇಶಪ್ರೇಮ ಇದೆ. ಶೂರ ವೀರ ಗುಣಗಳನ್ನು ಹುಟ್ಟಿನಿಂದಲೇ ಹೊಂದಿರುವ ಕೊಡವರ ಪಾಲಿಗಂತೂ ಕಾರ್ಯಪ್ಪ, ತಿಮ್ಮಯ್ಯ ನಿತ್ಯ ಪೂಜನೀಯರು. ನಿಮ್ಮ ಮಕ್ಕಳು ದೊಡ್ಡವರಾದ ಮೇಲೆ ಏನಾಗುತ್ತಾರೆ ಎಂದು ಕೊಡಗಿನ ಹಳ್ಳಿ ಜನತೆಯನ್ನು, ಮಕ್ಕಳನ್ನು ಪ್ರಶ್ನಿಸಿದರೆ ಡಾಕ್ಟರ್, ಇಂಜಿನಿಯರ್ ಎಂಬ ಉತ್ತರ ಬಹಳ ಅಪರೂಪ. ಬದಲಿಗೆ ಮಕ್ಕಳು ಸೈನ್ಯ ಸೇರಬೇಕು. ಪೌಜಿ ಸೇರ್ಪಡೆಯಾಗಬೇಕು, ಸಿಪಾಯಿ, ಆಫೀಸರ್ ಆಗಬೇಕು, ಸೇನೆಯ ಉನ್ನತ ಅಧಿಕಾರಿ ಆಗಬೇಕೆಂಬ ಉತ್ತರ ಶತಸಿದ್ಧ.
ಹೆಮ್ಮೆಯ ನಾಡು ಕೊಡಗಿನಲ್ಲಿ ಇದೀಗ ಸೇನಾ ಪರಂಪರೆಯ ಕಿರೀಟಕ್ಕೆ ಮತ್ತೊಂದು ಮುಕುಟ ಮಣಿ ಯಂತೆ ಸೈನಿಕರ ಸಾಹಸ ಬಿಂಬಿಸುವ ಮ್ಯೂಸಿಯಂ ಲೋಕಾರ್ಪಣೆಯಾಗುತ್ತಿದೆ. ಸೇನಾ ಪಡೆಯ ಮುಖ್ಯಸ್ಥರಾಗಿದ್ದ, ಭಾರತೀಯ ಸೇನೆಯಲ್ಲಿ ಅನೇಕ ದಾಖಲೆಗಳಿಗೆ ಕಾರಣರಾಗಿದ್ದ ಜನರಲ್ ತಿಮ್ಮಯ್ಯ ಸ್ಮಾರಕ ಭವನ ಫೆಬ್ರವರಿ 6 ರಂದು ದ್ಘಾಟನೆಯಾಗುತ್ತಿದೆ. ಭಾರತದ ರಾಷ್ಟ್ರಪತಿ ರಾಮನಾಥ ಕೋವಿಂದ್ ಈ ಮ್ಯೂಸಿಯಂ ಲೋಕಾರ್ಪಣೆಗೆ ಯೋಧರ ನೆಲೆವೀಡಿಗೆ ಕಾಲಿಡುತ್ತಿದ್ದಾರೆ.
ಜನರಲ್ ತಿಮ್ಮಯ್ಯ ಕೊಡಗಿನವರ ಮನದಲ್ಲಿ ಮೂಡಿಸಿದ ವೀರತೆಯ ಭಾವನೆಗೆ ಕೊನೆಗೂ ಸಾರ್ಥಕತೆ ಈ ಸ್ಮಾರಕ ಭವನದ ಮೂಲಕ ದೊರಕಿದಂತಾಗುತ್ತದೆ.
ಸೇನಾ ಸಮವಸ್ತ್ರಕ್ಕೆ ಗೌರವ
ಮಡಿಕೇರಿ ಮುಖ್ಯರಸ್ತೆ ಬದಿಯಲ್ಲಿ ರೂಪಿತಗೊಂಡಿರುವ ತಿಮ್ಮಯ್ಯ ಮ್ಯೂಸಿಯಂ, ಜನರಲ್ ತಿಮ್ಮಯ್ಯ ಹುಟ್ಟಿದ ಮನೆಯಾದ ಸನ್ನಿಸೈಡ್‌ನಲ್ಲಿಯೇ ಅನಾವರಣಗೊಂಡಿದೆ. ಈ ಮ್ಯೂಸಿಯಂನಲ್ಲಿ ತಿಮ್ಮಯ್ಯ ಅವರ ಪ್ರತಿಮೆ ಇಲ್ಲ! ತಿಮ್ಮಯ್ಯ ಅವರಿಗೆ ಸೇನಾ ಸಮವಸ್ತ್ರವೇ ಆತ್ಮದಂತಿತ್ತು. ಸೇನಾ ಸಮವಸ್ತ್ರಕ್ಕೆ ತಿಮ್ಮಯ್ಯ ಸದಾ ಗೌರವ ನೀಡುತ್ತಿದ್ದರು.
ಹೀಗಾಗಿ ತಿಮ್ಮಯ್ಯ ಅವರ ಮೆಚ್ಚಿನ ಸೇನಾ ಸಮವಸ್ತ್ರವನ್ನೇ ಮ್ಯೂಸಿಯಂನಲ್ಲಿ ಪ್ರದರ್ಶನಕ್ಕಿಟ್ಟು ಅವರ ಆತ್ಮ ಸೇನಾ ಸಮವಸ್ತ್ರ ಎಂಬುದನ್ನು ಬಿಂಬಿಸ ಲಾಗಿದೆ. ಕೋದಂಡೇರ ತಿಮ್ಮಯ್ಯ ಅಂಬೆಗಾಲಿಟ್ಟು ಸಾಗಿದ ನೆಲವನ್ನು ಹಿಂದಿನ ಕಾಲದಲ್ಲಿ ಸನ್ನಿಸೈಡ್ ಇದ್ದಂತೆ ಮರದಲ್ಲಿ ನಿರ್ಮಿಸಲಾಗಿದೆ. ಇದೇ ಕೋಣೆಯಲ್ಲಿ ಸೇನಾ ಸಮವಸ್ತ್ರ ಧರಿಸಿ ಸ್ಕೂಟರ್‌ನಲ್ಲಿ ಸಾಗುತ್ತಿರುವ ತಿಮ್ಮಯ್ಯ ಅವರ ಕಪ್ಪುಬಿಳಿಪಿನ ಅಪರೂಪದ ಭಾವಚಿತ್ರವಿದೆ. ತಿಮ್ಮಯ್ಯ ತೈಲವರ್ಣ ಚಿತ್ರವನ್ನೂ ಇರಿಸಲಾಗಿದೆ.
ಕೊಡಗಿನ ಪರಂಪರೆ
ಎರಡನೇ ಕೋಣೆಯಲ್ಲಿ ತಿಮ್ಮಯ್ಯ ಅವರ ಕೊಡವ ಸಂಪ್ರದಾಯ ಬಿಂಬಿಸುವ ಅನೇಕ ಚಿತ್ರಗಳಿದೆ. ಕೊಡವ ಸಾಂಪ್ರದಾಯಿಕ
ಉಡುಗೆ ಧರಿಸಿ ತಿಮ್ಮಯ್ಯ ತನ್ನ ಮದುವೆಗೆ ತೆರಳುತ್ತಿರುವ ಅಪರೂಪದ ಚಿತ್ರವೂ ಇಲ್ಲಿದೆ. ಕೊಡವರ ಮದುವೆಯಲ್ಲಿ ಬಾಳೆ
ಕಡಿಯುವಿಕೆ, ದೇವಾಲಯದಲ್ಲಿ ಜಿಂಕೆ ಕೊಂಬಿನೊಂದಿಗಿನ ಕೊಂಬಾಟ್ ನೃತ್ಯ, ದೈವತೆರೆ, ಕೊಡವರ ವಿಶೇಷ ಆಭರಣಗಳನ್ನೂ ಮ್ಯೂಸಿಯಂನಲ್ಲಿ ಪ್ರದರ್ಶಿಸುವ ಮೂಲಕ ಕೊಡವರ ಸಂಸ್ಕೃತಿಯನ್ನು ಜನರಿಗೆ ಪರಿಚಯಿಸಲಾಗುತ್ತಿದೆ.
ತಿಮ್ಮಯ್ಯ ತನ್ನ ಪ್ರೀತಿಯ ತಾತ ಚೆಪ್ಪುಡೀರ ಸೋಮಯ್ಯ ಅವರೊಂದಿಗೆ ಬಾಲ್ಯದಲ್ಲಿ ತುಂಟಾಟ ಆಡುತ್ತಿದ್ದ ಹಾಸಿಗೆ ಮತ್ತು ಮಂಚವನ್ನು ಮ್ಯೂಸಿಯಂ ನ ಮೂರನೇ ಕೋಣೆಯಲ್ಲಿಇರಿಸಲಾಗಿದೆ. ಹಳೇ ಕಾಲದಲ್ಲಿ ತಿಮ್ಮಯ್ಯ ಬಳಸುತ್ತಿದ್ದ ಮಂಚ ಸೇರಿದಂತೆ ವಿವಿಧ ಪೀಠೋಪಕರಣಗಳನ್ನು ಹಲವೆಡೆ ಗಳಿಂದ ಸಂಗ್ರಹಿಸಿ ಮತ್ತೆ ಸನ್ನಿಸೈಡ್‌ಗೆ ತರಲಾಯಿತು.
ತಿಮ್ಮಯ್ಯ ತಮ್ಮ ಬಾಲ್ಯದ ಶಿಕ್ಷಣಕ್ಕಾಗಿ ಹೋಗಿದ್ದು ದೂರದ ಕೂನೂರಿನ ಕಾನ್ವೆಂಟ್‌ಗೆ. ಅಲ್ಲಿ ವಿದ್ಯಾರ್ಥಿಗಳಿಗೆ ದಂಡನೆ ಕಾದಿರುತ್ತಿತ್ತು. ತಿಮ್ಮಯ್ಯನಂಥ ತುಂಟ ಹುಡುಗ ಇಂಥ ಅದೆಷ್ಟೋ ಕಠಿಣ ಶಿಕ್ಷೆಗೆ ಗುರಿಯಾಗುತ್ತಿದ್ದ. ಗಾಜಿನ ಚೂರುಗಳ ಮೇಲೆ ಮಂಡಿಯೂರಿ ಕೂರಬೇಕಾದ ಶಿಕ್ಷೆಯೂ ಇಂಥವುಗಳ ಪೈಕಿ ಒಂದಾಗಿತ್ತು. ಹೀಗಾಗಿ ತಿಮ್ಮಯ್ಯ ಮಂಡಿ ಸದಾ
ಗಾಯ ದಿಂದಲೇ ಕೂಡಿರುತ್ತಿತ್ತಂತೆ.
ಮಗನಿಗೆ ಇಂಥ ಶಿಕ್ಷೆ ನೀಡುವ ಶಾಲೆಯೇ ಬೇಡವೆಂದು ಪೋಷಕರು ಕೂನೂರಿನಿಂದ ತಿಮ್ಮಯ್ಯ ಮತ್ತು ಅವರ ಅಣ್ಣ ಪೊನ್ನಪ್ಪ ನನ್ನು ಬೆಂಗಳೂರಿನ ಶಾಲೆಗೆ ಸೇರಿಸಿದ್ದರು. ತಿಮ್ಮಯ್ಯ ಪ್ರಾಥಮಿಕ ಶಿಕ್ಷಣದ ಹಂತದಲ್ಲಿ ಎದುರಿಸಿದ ಶಿಕ್ಷೆಯನ್ನು ವಿವರಿಸುವ ಚಿತ್ರಗಳು ಮ್ಯೂಸಿಯಂನ ನಾಲ್ಕನೇ ಕೋಣೆಯಲ್ಲಿದೆ. ತಿಮ್ಮಯ್ಯ ಸೈನಿಕ ಶಿಕ್ಷಣದ ಮಾಹಿತಿ ನೀಡುವ ಹಲವಾರು ಚಿತ್ರಗಳನ್ನು ಕೂಡ ಈ ಕೋಣೆಯಲ್ಲಿ ಪ್ರದರ್ಶಿಸಲಾಗಿದೆ.
ಇದೇ ಕೋಣೆಯಲ್ಲಿ ರಾಕೆಟ್ ಲಾಂಚರ್, ಬಂದೂಕುಗಳಂಥ ಮಕ್ಕಳಿಗೆ ಆಸಕ್ತಿ ಹುಟ್ಟಿಸುವ ಶಸ್ತ್ರಾಸ್ತ್ರಗಳನ್ನು ಜೋಡಿಸಿಟ್ಟಿದ್ದೇವೆ ಎಂದು ಮ್ಯೂಸಿಯಂ ಜೋಡಣೆಯಲ್ಲಿ ಪ್ರಮುಖ ಪಾತ್ರ ವಹಿಸಿದ ಬಿದ್ದಂಡ ನಂಜಪ್ಪ ಹೇಳಿದರು.
ಕುಮಾಂವ್ ರೆಜಿಮೆಂಟ್
ತಿಮ್ಮಯ್ಯ ಸೇನಾಧಿಕಾರಿಯಾಗಿ ಕಾರ್ಯನಿರ್ವಹಿಸಿದ್ದ ಭಾರತದ ಹೆಮ್ಮೆಯ ರೆಜಿಮೆಂಟ್ ಆಗಿತ್ತು ಕುಮಾಂವ್ ರೆಜಿಮೆಂಟ್. ಈ ರೆಜಿಮೆಂಟ್‌ನ ಹಿರಿಮೆ ಸಾರಲೆಂದೇ ಮ್ಯೂಸಿಯಂನಲ್ಲಿ ಪ್ರತ್ಯೇಕ ಕೋಣೆಯನ್ನು ರೂಪಿಸಲಾಗಿದೆ. ತಿಮ್ಮಯ್ಯ ಸೇರಿದಂತೆ ಕುಂಮಾವ್ ರೆಜಿಮೆಂಟ್‌ನಲ್ಲಿ ಹಿರಿಯ ಅಧಿಕಾರಿಗಳಾಗಿದ್ದ ಮೂವರೂ ಭಾರತೀಯ ಸೇನಾ ಪಡೆಯ ಮುಖ್ಯಸ್ಥರಾಗಿದ್ದರು.
ಇದು ದಾಖಲೆಯೇ ಹೌದು. ಅಂತೆಯೇ ಈ ರೆಜಿಮೆಂಟ್‌ನ ಇಬ್ಬರಿಗೆ ಸೇನಾ ಸಾಧನೆಗಾಗಿ ಪ್ರತಿಷ್ಠಿತ ಪ್ರಶಸ್ತಿ ಕೂಡ ಲಭಿಸಿದೆ.
ಇದೂ ದಾಖಲೆಯೇ ಆಗಿದೆ. ಕುಂಮಾವ್ ರೆಜಿಮೆಂಟ್‌ನ ಇಂಥ ಅನೇಕ ಮಹತ್ವದ ವಿಚಾರಗಳನ್ನು ಕುಂಮಾವ್ ರೂಮ್‌ನಲ್ಲಿ
ಸಂದರ್ಶಕರಿಗೆ ತಿಳಿಸುವ ಪ್ರಯತ್ನ ಮಾಡಲಾಗಿದೆ. ತಿಮ್ಮಯ್ಯ ಸೇನಾ ಜೀವನದ ಮಹತ್ವದ ಘಟ್ಟವಾದ ಜೋಜಿಲಾ ಪಾಸ್
ವಿಜಯ (ಅತಿಕ್ರಮಿತ ಕಾರ್ಗಿಲ್‌ನ್ನು ಪಾಕಿಸ್ತಾನ ಸೈನ್ಯದಿಂದ ಕೆಚ್ಚೆದೆಯಿಂದ ಹೋರಾಡಿ ಬಿಡಿಸಿದ ಸ್ಥಳ) ಹಾಗೂ ತಿಮ್ಮಯ್ಯ
ಭಾರತೀಯ ಸೇನಾ ಇತಿಹಾಸದಲ್ಲಿಯೇ ಮೊಟ್ಟ ಮೊದಲ ಬಾರಿಗೆ ಗಿರಿಶ್ರೇಣಿಗಳ ಮೇಲೆ ಯುದ್ಧ ಟ್ಯಾಂಕರ್‌ಗಳನ್ನು
ಕೊಂಡೊಯ್ದು ಪಾಕಿಸ್ತಾನಿ ಸೈನಿಕರನ್ನು ಅಟ್ಟಾಡಿಸಿ ಪಲಾಯನ ಮಾಡು ವಂತೆ ಮಾಡಿದ ಹಿರಿಮೆಯ ಘಟನೆಯ ಚಿತ್ರಾವಳಿ ಗಳನ್ನೂ ಮ್ಯೂಸಿಯಂನ ಕೋಣೆಯಲ್ಲಿ ನೋಡಬಹುದು.
ತಿಮ್ಮಯ್ಯ ಸೇನಾಧಿಕಾರಿಗಳೊಂದಿಗೆ ವ್ಯವಹರಿಸುತ್ತಿದ್ದ ರೀತಿ, ತಿಮ್ಮಯ್ಯ ಬರಹ ಹೀಗೆ ತಿಮ್ಮಯ್ಯ ಜೀವನದ ಪ್ರಮುಖ ಘಟ್ಟಗಳ ದಾಖಲೆಯನ್ನು ದೆಹಲಿಯಲ್ಲಿನ ಭಾರತೀಯ ಸೇನಾ ಕೇಂದ್ರ ಕಛೇರಿಯ ಸಂಗ್ರಹಾಲಯದಿಂದ ಮಡಿಕೇರಿ ಯಲ್ಲಿನ ಮ್ಯೂಸಿಯಂಗೆ ತರಲಾಯಿತು ಎಂದು ಫೀಲ್ಡ್ ಮಾರ್ಷಲ್ ಕಾರ್ಯಪ್ಪ, ಜನರಲ್ ತಿಮ್ಮಯ್ಯ ಫೋರಂನ ಅಧ್ಯಕ್ಷ ನಿವೃತ್ತ
ಕರ್ನಲ್ ಕಂಡ್ರತಂಡ ಸುಬ್ಬಯ್ಯ ವಿವರಿಸಿದರು.
ಪ್ರತೀಯೋರ್ವ ಯಶಸ್ವಿ ಪುರುಷನ ಹಿಂದೆ ಮಹಿಳೆಯೋರ್ವಳಿರುತ್ತಾಳೆ ಎಂಬ ಮಾತಿಗೆ ತಕ್ಕಂತೆ ತಿಮ್ಮಯ್ಯ ಸೇನಾ ಸಾಧನೆ ಹಿಂದೆ ಅವರ ಪತ್ನಿ ನೀನಾ ಇದ್ದರು. ಹೀಗಾಗಿಯೇ ನೀನಾ ಮತ್ತು ತಿಮ್ಮಯ್ಯ ಅವರ ಜೀವನದ ಬಗೆಗಿನ ಮಾಹಿತಿಗೆ ಈ ಮ್ಯೂಸಿಯಂನಲ್ಲಿ ಪ್ರತ್ಯೇಕ ಕೋಣೆ ಮೀಸಲಿಡಲಾಗಿದ್ದು ಈ ಕೋಣೆಗೆ ‘ನೀನಾ’ ಎಂದೇ ಹೆಸರಿಡಲಾಗಿದೆ. ಇಲ್ಲಿ ನೀನಾ ಅವರ
ನೃತ್ಯದ ವಿವಿಧ ಭಂಗಿಯೊಂದಿಗೆ ನೀನಾ ಆಗಿನ ಕಾಲದಲ್ಲಿಯೇ ನೃತ್ಯಗಾರ್ತಿಯಾಗಿದ್ದರು ಎಂಬ ಮಾಹಿತಿ ನೀಡಲಾಗಿದೆ.
ತಿಮ್ಮಯ್ಯ ಜತೆ ನೀನಾ ಕ್ವೆಟ್ಟಾ ಎಂಬ ಪ್ರದೇಶಕ್ಕೆ ತೆರಳಿದ ದಿನವೇ ಅಲ್ಲಿ ಭಾರೀ ಭೂಕಂಪವಾಗಿ ಸಾವಿರಾರು ಜನ ಭೂಸಮಾಧಿಯಾಗಿದ್ದರು. ಇಂಥ ಸಂದರ್ಭದಲ್ಲಿ ನೀನಾ ಜೀಪನ್ನು ತಾನೇ ಚಲಾಯಿಸಿ ಕೊಂಡು ಅಸಂಖ್ಯ ಜನರನ್ನು ಸ್ಥಳಾಂತರಿಸಿ ನೆರವಾಗಿ ದ್ದರು. ಇಂಥ ಅಪರೂಪದ ವಿವರವೂ ನೀನಾ ಕೋಣೆಯಲ್ಲಿ ಕಾಣಸಿಗುತ್ತದೆ.
ಅಂತಾರಾಷ್ಟ್ರೀಯ ಖ್ಯಾತಿ
ಯುದ್ಧದಲ್ಲಿ ಬಳಸಲಾಗುತ್ತಿದ್ದ ಶಸ್ತ್ರಾಸ್ತ್ರಗಳನ್ನು ಕೂಡ ತಿಮ್ಮಯ್ಯ ಸ್ಮಾರಕ ಭವನದಲ್ಲಿ ಪ್ರತ್ಯೇಕ ಕೋಣೆಯಲ್ಲಿ ಇರಿಸಲಾಗಿದೆ. ತಿಮ್ಮಯ್ಯ ಭಾರತದಲ್ಲಿ ಮಾತ್ರವಲ್ಲ, ವಿದೇಶಗಳಲ್ಲಿಯೂ ಪ್ರಭಾವಿ ಯಾಗಿದ್ದರು. ತಿಮ್ಮಯ್ಯ ನಾಯಕತ್ವ ಹಲವು ದೇಶಗಳ ಗಮನ ಸೆಳೆದಿತ್ತು. ಹೀಗಾಗಿಯೇ ತಿಮ್ಮಯ್ಯ ಹಲವಾರು ದೇಶಗಳಲ್ಲಿ ನಿವೃತ್ತಿ ನಂತರವೂ ಕರ್ತವ್ಯ ಸಲ್ಲಿಸಿದರು.
ತಿಮ್ಮಯ್ಯ ಅವರ ಜಾಗತಿಕ ಸೇವೆ, ಯಾವ ರೀತಿಯಲ್ಲಿ ತಿಮ್ಮಯ್ಯ ವಿದೇಶಗಳಲ್ಲಿ ಕಾರ್ಯನಿರ್ವಹಿಸಿದ್ದರು ಎಂಬ ಮಾಹಿತಿಗಳಿಗೆ ಅಂತರರಾಷ್ಟ್ರೀಯ ಸೇವೆಯಲ್ಲಿ ತಿಮ್ಮಯ್ಯ ಎಂಬ ಕೋಣೆಯನ್ನು ಮೀಸಲಿಡ ಲಾಗಿದೆ. ತಿಮ್ಮಯ್ಯ ಸೇನಾ ಜೀವನ ಬಿಂಬಿಸುವ 15 ನಿಮಿಷದ ವಿಶೇಷ ವಿಡಿಯೋಗಳುಳ್ಳ ಸಾಕ್ಷ್ಯಚಿತ್ರ ವನ್ನು ವೀಕ್ಷಣೆಗೆ ವ್ಯವಸ್ಥೆಗೊಳಿಸಲಾಗಿದೆ. ಮ್ಯೂಸಿಯಂನ ಕೊನೇ ಕೋಣೆಯಲ್ಲಿ ಮ್ಯೂಸಿಯಂಗಾಗಿ ಕಾರ್ಯನಿರ್ವಹಿಸಿದವರ ಮಾಹಿತಿ ಲಭ್ಯವಿದೆ.
ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಅವರ ಪುತ್ರ ನಿವೃತ್ತ ಏರ್ ಮಾರ್ಷಲ್ ಕೆ.ಸಿ.ಕಾರ್ಯಪ್ಪ, ಲೆಫ್ಟಿನೆಂಟ್ ಜನರಲ್ ದಿ.ಬಿದ್ದಂಡ
ನಂದ, ಫೋರಂನ ಪದಾಧಿಕಾರಿಗಳು ಯಾವ ರೀತಿ ಶ್ರಮ ಪಟ್ಟು ಮ್ಯೂಸಿಯಂನ್ನು 16 ವರ್ಷಗಳ ಅವಧಿಯಲ್ಲಿ ರೂಪಿಸಿದರು
ಎಂಬ ಮಾಹಿತಿ ಇಲ್ಲಿದೆ. ತಿಮ್ಮಯ್ಯ ಅವರ ಚಿತ್ರಕಲೆಗೂ ಕೋಣೆಯಲ್ಲಿ ಸ್ಥಾನ ದೊರಕಿದೆ.
ಶಸ್ತ್ರಾಸ್ತ್ರ ಪ್ರದರ್ಶನ
ಸನ್ನಿಸೈಡ್‌ನಲ್ಲಿರುವ ಮ್ಯೂಸಿಯಂ ವೀಕ್ಷಿಸಿ ಹೊರಬಂದರೆ ಮ್ಯೂಸಿಯಂ ಮೇಲ್ಬದಿಯಲ್ಲಿಯೇ ಭೂಸೇನೆ, ನೌಕಾ ಮತ್ತು
ವಾಯುಸೇನೆಯ ಪರಾಕ್ರಮ ಬಿಂಬಿಸುವ ಯುದ್ಧ ಟ್ಯಾಂಕ್, ಲಂಗರು ಮತ್ತು ಯುದ್ಧ ವಿಮಾನವನ್ನು ಪ್ರದರ್ಶನಕ್ಕಿಡಲಾಗಿದೆ.
ಮ್ಯೂಸಿಯಂ ಹಿಂಬದಿಯಲ್ಲಿ ಯುದ್ಧ ಸ್ಮಾರಕ ‘ಅಮರ್ ಜವಾನ್’ ಸ್ಥಾಪಿತವಾಗಿದೆ.
1947 ರ ಆಗಸ್ಟ್ ನಂತರ ದೇಶಕ್ಕಾಗಿ ಹುತಾತ್ಮರಾದ ಭಾರತೀಯ ಸೈನಿಕರಿಗಾಗಿ ಈ ಯುದ್ಧ ಸ್ಮಾರಕವಿದೆ. ಸನ್ನಿಸೈಡ್‌ನ ಮುಂಬದಿ ಯಲ್ಲಿಯೇ ಬೃಹತ್ ಗಾತ್ರದ ಸೈನಿಕನ ಶೂಸ್ ಕಂಗೊಳಿಸುತ್ತದೆ. ಭಾರತೀಯ ಸೈನಿಕನ ಸಮವಸ್ತ್ರದ ಪ್ರಮುಖ ಅಂಗದಲ್ಲಿ ಶೂಸ್ ಕೂಡ ಒಂದು. ಈ ಶೂ ಧರಿಸಿ ಸೈನಿಕನಾದವನು ಮಳೆ, ಛಳಿ, ಹಿಮ, ಗಾಳಿ ಲೆಕ್ಕಿಸದೇ ಶತ್ರುಗಳಿಂದ ದೇಶ ಕಾಪಾಡಲು ಸದಾ ಮುನ್ನುಗ್ಗುತ್ತಲೇ ಇರುತ್ತಾನೆ. ಇನ್ನು ಮುಂದೆ ಕೊಡಗಿಗೆ ಭೇಟಿ ನೀಡಿದಾಗ ಜನರಲ್ ತಿಮ್ಮಯ್ಯ ಮ್ಯೂಸಿಯಂ ನೋಡದೇ ವಾಪಾಸ್ ತೆರಳಬೇಡಿ.
ತಿಮ್ಮಯ್ಯನಾದ ಸುಬ್ಬಯ್ಯ
ನಮ್ಮ ಸೇನೆಯ ಹೆಮ್ಮೆ ಎನಿಸಿರುವ ತಿಮ್ಮಯ್ಯ ಅವರು ಆ ಹೆಸರಿನಿಂದ ಖ್ಯಾತರಾಗಿದ್ದರೂ, ಅವರ ಮೂಲ ಹೆಸರು ತಿಮ್ಮಯ್ಯ ಅಲ್ಲವೇ ಅಲ್ಲ. ಅವರು ಸುಬ್ಬಯ್ಯ ಎಂದೇ ನಾಮಕರಣಗೊಂಡವರು. ಕೋದಂಡೇರ ಸುಬ್ಬಯ್ಯ ತಿಮ್ಮಯ್ಯ ಎಂಬುದು ಅವರ ಹೆಸರಾಗಿತ್ತು. ಆದರೆ ಬ್ರಿಟಿಷ್ ದಿನಗಳಲ್ಲಿ ಹೆಸರು ದಾಖಲೀಕರಣ ಮಾಡುವಾಗ ಬ್ರಿಟಿಷನೋರ್ವ ಕೆ.ಎಸ್. ತಿಮ್ಮಯ್ಯ ಎಂದು ಹೆಸರು ದಾಖಲಿಸಿಬಿಟ್ಟ. ಇದರಿಂದಾಗಿ ತನ್ನ ತಂದೆ ತಿಮ್ಮಯ್ಯ ಹೆಸರಿನಲ್ಲಿಯೇ ಸುಬ್ಬಯ್ಯ ವಿಶ್ವವಿಖ್ಯಾತರಾದರು! ಈ
ಮಾಹಿತಿಯೂ ಮ್ಯೂಸಿಯಂನಲ್ಲಿದೆ.
ಸೈನಿಕರ ಹೆಮ್ಮೆಯ ಜಿಲ್ಲೆ
ನಮ್ಮ ದೇಶದ ಸೈನ್ಯಕ್ಕೆ ಸೇರಲು ಕೊಡಗಿನ ವೀರ ಜನರು ಸದಾ ಮುಂದು. ಕೊಡಗು ಜಿಲ್ಲೆಯ ಕೂಡಿಗೆಯಲ್ಲಿ ಕರ್ನಾಟಕದ ಎರಡನೇ ಸೈನಿಕ ಶಾಲೆಯಿದೆ. (ಮೊದಲನೆಯದ್ದು ವಿಜಾಪುರದಲ್ಲಿದೆ) ಈ ಸೈನಿಕಶಾಲೆಯಲ್ಲಿಯೂ ಭಾರತೀಯ ಸೈನ್ಯದ
ಬಗ್ಗೆ ಕೆಲವು ಮಾಹಿತಿಗಳು ಶಾಲೆಯಲ್ಲಿ ಶಿಕ್ಷಣ ಪಡೆಯುತ್ತಿರುವ ಕೆಡೆಟ್‌ಗಳಿಗೆ ಲಭ್ಯವಿದೆ. ಕೊಡಗಿಗೆ ಭೇಟಿ ನೀಡುವ ಪ್ರವಾಸಿಗರಿಗೆ ಮತ್ತು ಜನಸಾಮಾನ್ಯರಿಗೆ ಹೆಚ್ಚಿನ ಮಾಹಿತಿ ನೀಡುವಲ್ಲಿಹೊಸ ಮ್ಯೂಸಿಯಂ ಮುಂದಿನ ದಿನಗಳಲ್ಲಿ ಜನಪ್ರಿಯವಾಗಲಿದೆ.
ಜನನ : 31.3.1906, ಮಡಿಕೇರಿಯಲ್ಲಿ
4.2.1926: ಬ್ರಿಟಿಷ್ ಭಾರತೀಯ ಸೇನೆಗೆ ಸೇರ್ಪಡೆ
20.3.1936: ನೀನಾ ಜತೆ ವಿವಾಹ
ಗ್ರೇಡ್ 2 ಸ್ಟಾಫ್ ಆಫೀಸರ್ ಆಗಿ ಬಡ್ತಿ ಪಡೆದ ಮೊದಲ ಭಾರತೀಯ (ಅದುವರೆಗೆ ಆ ಹುದ್ದೆ ಯುರೋಪಿಯನ್ ಅಧಿಕಾರಿಗಳಿಗೆ ಮೀಸಲಾಗಿತ್ತು).
ಎರಡನೆಯ ಮಹಾಯುದ್ಧದಲ್ಲಿ ಭಾಗಿ; ಸಿಂಗಪುರದಲ್ಲಿ ಜಪಾನ್ ಸೇನೆ ಶರಣಾದಾಗ ಭಾರತವನ್ನು ಪ್ರತಿನಿಧಿಸಿದ ಗೌರವ
ಸೆಪ್ಟೆಂಬರ್ 1947: ಭಾರತೀಯ ಸೇನೆಯಲ್ಲಿ ಮೇಜರ್ ಜನರಲ್ ಆಗಿ ಬಡ್ತಿ
1948: ಕಾಶ್ಮೀರದಲ್ಲಿ ಸೇನಾ ಕಾರ್ಯಾಚರಣೆ, ಪಾಕಿಸ್ತಾನ ಸೇನೆಯನ್ನು ಮಣಿಸಿದ ಹಿರಿಮೆ
ಕೊರಿಯಾ ಯುದ್ಧ ಪರಿವೀಕ್ಷಣೆಗೆ ವಿಶ್ವಸಂಸ್ಥೆಯಿಂದ ಆಯ್ಕೆ
1953: ಲೆಫ್ಟಿನೆಂಟ್ ಜನರಲ್ ಹುದ್ದೆ
1954: ಪದ್ಮಭೂಷಣ ಗೌರವ
8.5.1957: ಭಾರತೀಯ ಸೇನೆಯ ಜನರಲ್ ಹುದ್ದೆ
ಜುಲೈ 1964 : ನಿವೃತ್ತಿಯ ನಂತರ ವಿಶ್ವಸಂಸ್ಥೆಯ ಸೇನೆಯ ಕಮಾಂಡರ್ ಆಗಿ ಸೈಪ್ರಸ್‌ಗೆ ಪ್ರತಿನಿಯುಕ್ತಿ
*17.12.1965 : ಸೈಪ್ರಸ್‌ನಲ್ಲೇ ನಿಧನ
ಕೋಟ್
2.40 ಎಕರೆ ವಿಸ್ತೀರ್ಣದ ಪ್ರದೇಶದಲ್ಲಿ ಸ್ಥಾಪನೆಗೊಂಡಿರುವ ಜನರಲ್ ತಿಮ್ಮಯ್ಯ ಮ್ಯೂಸಿಯಂನ್ನು ಕೊಡಗು ಜಿಲ್ಲಾ ಕೇಂದ್ರ ಮಡಿಕೇರಿಯಲ್ಲಿ ಸ್ಥಾಪಿಸಲು 5.50 ಕೋಟಿ ರುಪಾಯಿ ಅನುದಾನವನ್ನು ಕರ್ನಾಟಕ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನೀಡಿದೆ.
ಸಂದರ್ಶಕರಿಗೆ ತಿಮ್ಮಯ್ಯ ಅವರೊಂದಿಗೆ ಭಾರತೀಯ ಸೇನೆ, ಸೈನಿಕರ ಬಗ್ಗೆೆ ಅಭಿಮಾನ ಮೂಡಿಸುವ ನಿಟ್ಟಿನಲ್ಲಿ ಈ
ಮ್ಯೂಸಿಯಂ ಮಹತ್ವದ್ದಾಗಿದೆ.
-ಕೆ.ಟಿ.ದರ್ಶನ್ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕೊಡಗು ಜಿಲ್ಲೆೆ