Tuesday, 12th November 2024

Narayana Yaaji: ರಾಮ ಸಾಂಗತ್ಯ

ನಾರಾಯಣ ಯಾಜಿ

ಇಂದಿರಾ ಜಾನಕಿಯವರು ತನ್ನ ತಂದೆ ದೇರಾಜೆ ಸೀತಾರಾಮಯ್ಯವನರ ಪ್ರಭಾವದಿಂದ ‘ರಾಮ ಸಾಂಗತ್ಯ’
ಎನ್ನುವ ಕೃತಿಯ ಮೂಲಕ ಸಾಹಿತ್ಯ ಲೋಕದಲ್ಲಿ ತನ್ನ ಇರವನ್ನು ತೋರಿಸಿದ್ದಾರೆ.

ರಾಮಾಯಣ ಮಹಾಕಾವ್ಯಕ್ಕೂ ದೇರಾಜೆಯವರಿಗೂ ಅವಿನಾಭಾವ ಸಂಬಂಧ. ವಾಲ್ಮೀಕಿ ಹೇಳದೇ ಬಿಟ್ಟ ಅನೇಕ ಸಂಗತಿಗಳಿಗೆ ಅವರು ವ್ಯಾಖ್ಯಾನವನ್ನು ನೀಡಿದ್ದಾರೆ. ಅವರ ‘ರಾಮರಾಜ್ಯದ ರುವಾರಿ’ ಯಂತೂ ರಾಮನ ಬದುಕಿ ನಲ್ಲಿ ಕರ್ತವ್ಯಪರಾಯಣತೆ ಎನ್ನುವುದನ್ನು ವಿಶ್ವಾಮಿತ್ರರು ಹೇಗೆ ಕಟ್ಟಿಕೊಟ್ಟರು ಎನ್ನುವುದನ್ನು ತಿಳಿಸುವ ಅಪೂರ್ವ ಸಂಗ್ರಹ. ರಾಮಾಯಣದ ಬಾಲಕಾಂಡಕ್ಕೆ ಅಪೂರ್ವವಾದ ವ್ಯಾಖ್ಯಾನ ಅದರಲ್ಲಿದೆ.

ಇನ್ನು ‘ಶ್ರೀರಾಮಚರಿತಾಮೃತಮ್’ ಕೃತಿಯಲ್ಲಿಯಂತೂ ವಾಲಿವಧೆ ಎನ್ನುವದು ರಾಮನ ವ್ಯಕ್ತಿತ್ವಕ್ಕೆ ಒಂದು ಕಪ್ಪುಚುಕ್ಕೆ ಎನ್ನುವುದನ್ನು ಸಮರ್ಥವಾಗಿ ಅಲ್ಲಗೆಳೆಯುವ ದೇರಾಜೆಯವರು ಅದನ್ನು ತಿಳಿಸಲು ತರ್ಕದ ಹಾದಿಗಿಂತ ವಾಸ್ತವದ ನೆಲೆಯನ್ನು ವರ್ತಮಾನಕ್ಕೆ ಅನ್ವಯಿಸಿದ್ದಾರೆ. ಮಹಾಭಾರತದ ಕುರಿತು ವ್ಯಾಖ್ಯಾನಿಸುವಾಗ
ತರ್ಕಸಹಿತವಾಗಿ ಕಂಡನೆ ಮತ್ತು ಮಂಡನೆಯಲ್ಲಿ ತೊಡಗುವ ದೇರಾಜೆಯವರು ರಾಮಾಯಣಕ್ಕೆ ಬರುವಾಗ
ಬದುಕಿನ ರೂಕ್ಷ ಅನುಭವವನ್ನು ಎದುರಿಸಿ ಗೆಲ್ಲಬೇಕಾದ ವಿಷಯಗಳನ್ನು ತಿಳಿಸುತ್ತಾರೆ. ಹಾಗಾಗಿ ಅವರ
ರಾಮಾಯಣ ಅವಲೋಕನ ಸಾಹಿತ್ಯಲೋಕದ ಉತ್ಕೃಷ್ಟ ಕೃತಿಗಳಲ್ಲೊಂದಾಗಿದೆ.

ಅವರ ಮಗಳು ಇಂದಿರಾ ಜಾನಕಿ ಇದೀಗ ತನ್ನ ತಂದೆ ಸೀತಾರಾಮಯ್ಯವನರ ಪ್ರಭಾವದಿಂದ ‘ರಾಮ ಸಾಂಗತ್ಯ’
ಎನ್ನುವ ಕೃತಿಯ ಮೂಲಕ ಸಾಹಿತ್ಯ ಲೋಕದಲ್ಲಿ ತನ್ನ ಇರವನ್ನು ತೋರಿಸಿದ್ದಾರೆ. ‘ರಾಮ ಸಾಂಗತ್ಯ’ ಓದುಗರ
ಗಮನ ಸೆಳೆಯುವುದು ಅವರು ರಾಮಾಯಣವನ್ನು ಹೇಳಲು ಬಳಸಿದ ‘ಸಾಂಗತ್ಯ’ ವೆನ್ನುವ ಛಂದಸ್ಸಿನ
ಮೂಲಕ. ಸಾಂಗತ್ಯವೆನ್ನುವುದು ಗೇಯಗುಣಗಳುಳ್ಳ ಅಂಶಗಣಯುಕ್ತವಾದ ಅಚ್ಚಗನ್ನದ ಛಂದಸ್ಸು. ರಾಗವಾಗಿ
ಹಾಡಲಷ್ಟೇ ಅಲ್ಲ, ಕಾವ್ಯದ ಸೊಗಸಿಗೆ ಬೇಕಾದ ವರ್ಣನೆಗೂ ಈ ಛಂದಸ್ಸನ್ನು ಬಳಸಬಹುದು.

ಸಾಂಗತ್ಯವೆಂದರೆ ಸಾಮೀಪ್ಯವೂ ಹೌದು. ತನ್ನ ಅಪ್ಪಯ್ಯನ ಸಾಂಗತ್ಯದಲ್ಲಿ ರಾಮ ಸಾಂಗತ್ಯದ ರಸವನ್ನು
ಸವಿದವರು ಅವರು. ರಾಮಾಯಣವನ್ನು ಹಾಡುಗಬ್ಬವಾಗಿ ಪರಿವರ್ತಿಸಲು ಇಂದಿರಾ ಜಾನಕಿಯವರು ಅಚ್ಚ ಗನ್ನಡದ ಛಂದಸ್ಸಿನಲ್ಲಿ ‘ರಾಮ ಸಾಂಗತ್ಯ’ ರಚಿಸಿದ್ದಾರೆ. ಇಲ್ಲಿ ಕವಿಯತ್ರಿಯೊಳಗೆ ರಾಮಸಾಂಗತ್ಯದ ಕಾರಂಜಿ ಯನ್ನು ಉಕ್ಕಿಸಿದ ದೇರಾಜೆಯವರು ಇದ್ದಾರೆ. ಹಾಗಾಗಿ ಪ್ರಾರಂಭದಲ್ಲಿಯೇ ನೀವಂದು ನಡೆದಿದ್ದ ಮಾರ್ಗದಿ ಪದವಿಟ್ಟೆ ದೀವಿಗೆಯಾಗುತ್ತ ಹರಸಿ ಕೋವಿದಳಲ್ಲದ ಈ ಶಿಲಾಖಂಡಕ್ಕೆ ರೂವಾರಿಯಾಗುತ್ತ ಸೃಜಿಸಿ ಎಂದು ಈ ಕೃತಿಯನ್ನು ದೇರಾಜೆಯವರಿಗೆ ಅರ್ಪಿಸಿದ್ದಾರೆ.

ಓಜಸ್ಸು ಎಂದರೆ ಕಾವ್ಯದ ಸ್ವರೂಪವನ್ನು ಮಾಧುರ್ಯ ಕೆಡದ ರೀತಿಯಲ್ಲಿ ಹೇಳುವುದು. ಪ್ರಸಾದವೆಂದರೆ
ಕಾವ್ಯತ್ವವನ್ನು ಅವಚ್ಛೇದಿಸಿ ಹೇಳುವ ವಿಶಿಷ್ಟಗುಣ. ಈ ಗುಣಗಳನ್ನು ದೇರಾಜೆಯವರು ತಮ್ಮ ಗದ್ಯ ಮತ್ತು
ಅರ್ಥಗಾರಿಕೆಯಲ್ಲಿ ಚೆನ್ನಾಗಿ ವಿವರಿಸಿದ್ದಾರೆ. ‘ರಾಮ ಸಾಂಗತ್ಯ’ ಒಂದು ಕಥನ ಕವನ. ಇಂತಹ ಕವನಗಳಲ್ಲಿ
ಮುಖ್ಯವಾಗಿ ಅನುಸರಿಸಬೇಕಾಗಿರುವುದು ಘಟನಾಪ್ರಧಾನ, ಪಾತ್ರಪ್ರಧಾನ, ಮನೋರಸದ ಅಭಿವ್ಯಕ್ತಿ, ವಿಚಾರ ಚೋದಕ, ಸನ್ನಿವೇಶದ ರೋಚಕತೆ ಮತ್ತು ಕಾವ್ಯದ ಮನೋಧರ್ಮವನ್ನು ಕೊನೆಯವರೆಗೂ ಕಾಪಿಡಬೇಕಾದ ಅಗತ್ಯತೆ, ಇವೆಲ್ಲವೂ ಸಮವಾಗಿ ಇರಬೇಕಾಗುತ್ತದೆ. ಹಾಗಾಗಿ ಅವರು ಪ್ರಾಸ ಮತ್ತು ಶಬ್ಧಗಳನ್ನು ಜೋಡಿಸುವತ್ತ ಗಮನ ನಿಡಿದ್ದಾರೆ. ಅದರಿಂದ ಕೆಲವು ಕಡೆ, ಉದಾಹರಣೆಗೆ ವಾಲಿ ವಧೆ, ಸೀತೆಯ ಅಗ್ನಿಪ್ರವೇಶ ಮೊದಲಾದ ಭಾಗಗಳಲ್ಲಿ ಸ್ವಲ್ಪ ಸಂಕೋಚವೂ ಅವರಿಗೆದುರಾಗಿದೆ.

ವರ್ತಮಾನದ ಸುಳಿಯಲ್ಲಿ ತಮ್ಮ ಪಾತ್ರವನ್ನು ಮಡಿವಂತಿಕೆಯಲ್ಲಿ ಇರಿಸಲೇ ಬೇಕು ಎನ್ನುವ ಹಟತೊಟ್ಟು ಕಾವ್ಯ ವನ್ನು ರಚಿಸಿದ್ದಾರೆ. ಬಾಲ ಕಾಂಡದಿಂದ ತೊಡಗಿ ಶ್ರೀರಾಮನ ನಿಜಪಟ್ಟಾಭಿಷೇಕದತನಕ ಸಾಗಿದ ಕಾವ್ಯದ ಹರಿವು ಇತ್ತೀಚಿನ ದಿನಗಳಲ್ಲಿ ಅಪರೂಪವಾಗಿರುವ ಛಂದೋ ಪ್ರಧಾನವನ್ನು ಅನುಸರಿಸಿರುವುದು ಇಲ್ಲಿನ ವಿಶೇಷ.
ರಸಾಸ್ವಾದವೆನ್ನುವುದು ಸೌಂದರ್ಯದ ಸಾಕ್ಷಾತ್ಕಾರ ಎಂದು ವಿಮರ್ಶಕರಾದ ಬಿ. ಎಚ್. ಶ್ರೀಧರರು ನುಡಿಯುತ್ತಾರೆ.

ಆ ಪ್ರಯತ್ನದಲ್ಲಿ ಇಲ್ಲಿ ಇಂದಿರಾ ಜಾನಕಿ ಶರ್ಮ ಅವರು ಗಟ್ಟಿಯಾದ ಹೆಜ್ಜೆಯನ್ನಿಟ್ಟು ಸಾಂಗತ್ಯದಲ್ಲಿ ರಾಮಚರಿತ್ರೆ
ಯನ್ನು ಬರೆದಿದ್ದಾರೆ; ಅವರ ಈ ಪ್ರಯತ್ನ ನಿರಂತರವಾಗಿ ಸಾಗಿದರೆ ಅವರಿಂದ ಇನ್ನೂ ಮಹತ್ವದ ಕೊಡುಗೆ
ಸಾಹಿತ್ಯಲೋಕಕ್ಕೆ ಆಗುತ್ತದೆ.

ಇದನ್ನೂ ಓದಿ: Narayana Yaji Column: ಹೆಜ್ಜೆ ತಪ್ಪಿದರೆ ಅನಾಹುತ ತಪ್ಪಿದ್ದಲ್ಲ