Monday, 25th November 2024

ಐತಿಹಾಸಿಕ ಲಿಯಾನ್‌

ಡಾ.ಉಮಾಮಹೇಶ್ವರಿ ಎನ್‌

ರೋಮನ್ನರ ಕಾಲದಲ್ಲೇ ಪಟ್ಟಣದ ಸ್ವರೂಪ ಪಡೆದಿದ್ದ ಲಿಯಾನ್ ನಗರವು, ಪಾರಂಪರಿಕ ಕಟ್ಟಡ, ಚರ್ಚು ಮತ್ತು ಫ್ಯುನಿಕ್ಯುಲರ್ ರೈಲು ಹೊಂದಿರುವ ಸುಂದರ ತಾಣ.

ಫ್ರಾನ್ಸಿನ ರೋನ್ ಮತ್ತು ಸಯೋನ್ ನದಿಗಳ ಸಂಗಮದಲ್ಲಿರುವ ಪುರಾತನ ನಗರವೇ ಲಿಯಾನ್. ಸುಮಾರು ಎರಡು ಸಾವಿರ
ವರ್ಷಗಳಿಗಿಂತಲೂ ಹೆಚ್ಚಿನ ಇತಿಹಾಸವಿರುವ ಈ ಜಾಗದ ಐತಿಹಾಸಿಕ ಪ್ರದೇಶಗಳು 1998ರಿಂದ ಯುನೆಸ್ಕೋದಿಂದ ವಿಶ್ವ ಪಾರಂಪರಿಕ ಮಾನ್ಯತೆ ಪಡೆದಿದೆ.

ಎರಡು ಸಾವಿರ ವರ್ಷಗಳಿಗಿಂತಲೂ ಹೆಚ್ಚಿನ ಕಾಲದಿಂದ ಸತತವಾಗಿ ನಗರೀಕರಣಗೊಂಡಿರುವ ಸ್ಥಳವೆಂಬ ಹೆಗ್ಗಳಿಕೆಗೆ ಪಾತ್ರ ವಾಗಿದೆ. ಪುರಾತನ ಕಾಲದಿಂದಲೂ ರೇಷ್ಮೆ ವಸ್ತ್ರಗಳನ್ನು ತಯಾರಿಸುವುದರಲ್ಲಿ ಈ ಪಟ್ಟಣ ಮುಂಚೂಣಿಯಲ್ಲಿತ್ತು. ಕಾಲ ಕ್ರಮೇಣ ರಾಸಾಯನಿಕಗಳು, ಎಲೆಕ್ಟ್ರಿಕ್ ಹಾಗೂ ಇಲೆಕ್ಟ್ರಾನಿಕ್ ವಸ್ತುಗಳು, ಪೆಟ್ರೋಲಿಯಂ ಆಧಾರಿತ ವಸ್ತುಗಳನ್ನು ತಯಾರಿ ಸುವುದರಲ್ಲಿ ಮುಂದುವರಿಯಿತು. ಪುರಾತನ ನಗರ ಹಾಗೂ ಇತ್ತೀಚೆಗೆ ಬೆಳವಣಿಗೆ ಹೊಂದಿದ ಭಾಗಗಳಲ್ಲಿರುವ ನವ ನಿರ್ಮಾಣ ಗಳು ಎಲ್ಲವೂ ಕಣ್ಣಿಗೆ ಹಬ್ಬ.

ವ್ಯೂ (ಹಳೆಯ) ಲಿಯಾನ್ ಎಂಬ ಭಾಗ ತನ್ನ ಮೂಲರೂಪದಲ್ಲೇ ಕಂಗೊಳಿಸುತ್ತದೆ. ಇಲ್ಲಿರುವ ಪುರಾತನ ಕಟ್ಟಡಗಳು, ಚರ್ಚು ಗಳು, ಪಾದಚಾರಿ ರಸ್ತೆಗಳು ತಮ್ಮ ವಿಶಿಷ್ಟ ಲಕ್ಷಣಗಳಿಂದ ಪ್ರವಾಸಿಗರನ್ನು ಆಕರ್ಷಿಸುತ್ತವೆ. ಸಾಕಷ್ಟು ಹಾನಿಗೊಳಗಾಗಿದ್ದ ಈ ಭಾಗ 1960ರಲ್ಲಿ ಮೂಲರೂಪದಲ್ಲೇ ಮರುನವೀಕರಣಗೊಂಡಿತು. ಇಲ್ಲಿರುವ ರೆಸ್ಟೋರೆಂಟ್ ಸರಣಿ ‘ಬೂಶೋನ್ಸ್‌‌’ಗಳಿಂದಾಗಿ ಫ್ರಾನ್ಸ್‌ ದೇಶದ ‘ಗ್ಯಾಸ್ಟ್ರಾನಮಿಯ ರಾಜಧಾನಿ’ಎಂಬ ಹೆಗ್ಗಳಿಕೆಗೆ ಈ ನಗರ ಪಾತ್ರವಾಗಿದೆ. ಇಲ್ಲಿನ ಸೈಂಟ್ ಜೀನ್ ಚರ್ಚ್ ಪುರಾತನ ಹಾಗೂ ಪ್ರಸಿದ್ಧ.

ಫ್ಯೂನಿಕ್ಯುಲರ್ ರೈಲು ಫೋರ್ವಿಯರ್ ಎಂಬ ಎತ್ತರದ ಜಾಗದಿಂದ ಕಾಣುವ ನಗರದ ದೃಶ್ಯ ಸುಂದರ. ಲಿಯಾನ್ ನಗರ
ರೋಮನ್ನರಿಂದ ನಿರ್ಮಾಣವಾದದ್ದು ಇಲ್ಲಿಂದಲೇ. ಇಲ್ಲಿಗೆ ತಲುಪುವುದೂ ಚಾರಿತ್ರಿಕವಾಗಿ ವಿಶೇಷವಾಗಿರುವ ವಿಧಾನದಿಂದಲೇ. ವ್ಯೂ ಲಿಯಾನ್ ತಲುಪಿ ಫೋರ್ವಿಯರ್‌ಗೆ ಹೋಗಲು ಫ್ಯೂನಿಕ್ಯುಲರ್ ರೈಲು ಹಿಡಿಯಬೇಕು. ಜಗತ್ತಿನ ಮೊತ್ತಮೊದಲ ಫ್ಯೂನಿಕ್ಯುಲರ್ ರೈಲು ಇದು. ತುತ್ತ ತುದಿಯಲ್ಲಿರುವ ನಾಟ್ರೆ ಡೇಮ್ ಫಾರ್ವಿಯರ್ ಚರ್ಚ್ ಪ್ರಸಿದ್ಧ ಹಾಗೂ ಪುರಾತನ. ಇಲ್ಲಿ ಗೈಡೆಡ್ ಟೂರ್ ಸೌಲಭ್ಯವಿದೆ.

ಚರ್ಚಿನ ಹೊರಾಂಗಣದಲ್ಲಿರುವ ವೀಕ್ಷಣಾ ಸ್ಥಳ ದಿಂದ ಸುತ್ತಲಿನ ದೃಶ್ಯ ಮನಮೋಹಕ. ಹರಿಯುವ ನದಿಗಳ ಇಕ್ಕೆಲಗಳಲ್ಲಿಯೂ ಇರುವ ಪುರಾತನ ಕಟ್ಟಡಗಳು, ದೂರದಲ್ಲಿ ಕಾಣಿಸುವ ಗಗನಚುಂಬಿ ನಿರ್ಮಾಣಗಳು ಕಂಡಷ್ಟೂ ಮುಗಿಯದು. ಪ್ರತಿ ವರ್ಷ ಡಿಸೆಂಬರ್ ಎಂಟರಂದು ನಡೆಯುವ ಫೋರ್ವಿಯರ್ ಬೆಳಕಿನ ಹಬ್ಬ ಪ್ರಸಿದ್ಧ. ಇಲ್ಲಿ ಐಫೆಲ್ ಟವರ್ ನಂತೆ ಕಾಣಿಸುವ 84 ಅಡಿ ಎತ್ತರದ ಉಕ್ಕಿನ ಗೋಪುರವೂ ಇದೆ. ವೀಕ್ಷಕರಿಗೆ ಸಮೀಪಿಸಲು ಅವಕಾಶವಿಲ್ಲ.

ಇಲ್ಲಿಂದ ಕೆಳಗೆ ಇಳಿಯಲು ಮತ್ತೆ ಫ್ಯೂನಿಕ್ಯುಲರ್ ರೈಲು ಹಿಡಿಯಬಹುದು. ಇಲ್ಲದಿದ್ದರೆ ಕೆಳ ಹೋಗುವ ಮೆಟ್ಟಲು, ಕಾಲುದಾರಿ ಗಳುದ್ದಕ್ಕೂ ಇರುವ ಉದ್ಯಾನದ ಸೌಂದರ್ಯವನ್ನು ಆಸ್ವಾದಿಸುತ್ತಾ ವ್ಯೂ ಲಿಯಾನ್ ತಲುಪಬಹುದು. ರೋಮನ್ ಕಾಲದ ಥಿಯೇಟರ್ ಹಾಗೂ ಕೆಲವು ಪುರಾತನ ಶಿಲ್ಪಗಳಿರುವ ಗಾರ್ಡನ್ ,ಪುರಾತನ ವಸ್ತುಗಳ ಮ್ಯೂಸಿಯಂ, ಜಲಕ್ರೀಡೆಗಳ ಅವಕಾಶ ಈ
ಬೆಟ್ಟದ ಮೇಲಿದೆ.

ಕ್ರುವಾ ರೂಸ್ ಎಂಬುದು ಈ ನಗರದ ಎರಡನೆಯ ಬೆಟ್ಟ. ಫೋರ್ವಿಯರ್ ‘ಪ್ರಾರ್ಥನೆ ಮಾಡುವ ಬೆಟ್ಟ’ವಾದರೆ ಇದು ‘ಕೆಲಸ ಮಾಡುವ ಬೆಟ್ಟ’. 19ನೇ ಶತಮಾನದಲ್ಲಿ ರೇಷ್ಮೆ ಉದ್ದಿಮೆ ವ್ಯೂ ಲಿಯಾನ್‌ನಿಂದ ಇಲ್ಲಿಗೆ ಸ್ಥಳಾಂತರವಾಯಿತು. ಇಲ್ಲಿ 30000 ಕೆಲಸಗಾರರು ಇದ್ದರು. ಒಂದು ಕಾಲದಲ್ಲಿ ಸದಾ ರೇಷ್ಮೆೆ ನೇಯುವ ಮಗ್ಗಗಳ ಶಬ್ದದಿಂದ ತುಂಬಿರುತ್ತಿದ್ದ ಜಾಗದಲ್ಲಿ ಇನ್ನೂ ಕೆಲವು ಮೂಲರೂಪದಲ್ಲೇ ಉಳಿದುಕೊಂಡಿವೆ. ಮೆಟ್ಟಲುಗಳನ್ನು ಮತ್ತು ಟ್ರಬೂಲ್ ಗಳನ್ನು ಬಳಸಿ ಇಲ್ಲಿ ಸುತ್ತಾಡಿ ರೇಷ್ಮೆ ಬಟ್ಟೆಯ ತಯಾರಿಯ ಪ್ರಾತ್ಯಕ್ಷಿಕ ಅನುಭವ ಪಡೆಯಬಹುದು.

ಹಳೆ-ಹೊಸತರ ಸಮಾಗಮ ಪುರಾತನ ನಮೂನೆಯಲ್ಲಿ ನೇಯ್ದ ಬಟ್ಟೆಗಳಿಂದ ಆಧುನಿಕ ಬೂಟಿಕ್‌ಗಳಲ್ಲಿ ಸಮಕಾಲೀನ ಉಡುಪುಗಳ ತಯಾರಿಯಲ್ಲಿ ಕಾಣಸಿಗುತ್ತದೆ. ಹಳೆಭಾಗದ ಮನೆಗಳ ಮೂಲಕ ರಸ್ತೆಗಳ ಮಧ್ಯೆ ಸಂಪರ್ಕ ಕಲ್ಪಿಸುವ ಟ್ರಬೂಲ್ ಎಂಬ ಪಾದಚಾರಿ ಮಾರ್ಗಗಳಿವೆ.

ಪ್ರೆಸ್ ಕ್ಯುಲೆ
ಇದು ಕ್ರೂವಾ ರೂಸ್ ನ ಬುಡ ಮತ್ತು ವ್ಯೂಲಿಯಾನ್ ಗಳ ಮಧ್ಯದಲ್ಲಿರುವ ಸ್ಥಳ. ನಗರದ ಹಲವು ಪ್ರಮುಖ ಹಾಗೂ ಪುರಾತನ ಕಟ್ಟಡಗಳನ್ನು ಹೊಂದಿದೆ. ಬೆಲಕೂರ್ ಎಂಬ ಜಾಗದಲ್ಲಿ ಹಬ್ಬ, ಜಾತ್ರೆಗಳು ನಡೆಯುವೆ. ಕುದುರೆ ಏರಿರುವ ಹದಿನಾಲ್ಕನೇ ಲೂಯಿಸ್ ರಾಜನ ಪ್ರತಿಮೆ ಕೇಂದ್ರ ಭಾಗದಲ್ಲಿದೆ. ಸಮೀಪದಲ್ಲೇ ಕಾರಂಜಿಗಳಿರುವ ಉದ್ಯಾನ, ಇಲ್ಲಿಂದ ಫಾರ್ವಿಯರ್ ಬೆಟ್ಟದ
ಇಳಿಜಾರು, ಬೆಟ್ಟದ ಮೇಲಿನ ಚರ್ಚ್‌ನ ದೃಶ್ಯ ಲಭ್ಯ.

ಮುಖ್ಯ ಆಡಳಿತ ಕಛೇರಿ ಇರುವ ಪ್ಯಾಲೆ ಡಿ ವಿಲ್ಲೆ ಸುಂದರ. 1646ರಲ್ಲಿ ನಿರ್ಮಾಣವಾದ ಈ ಸೌಧದ ನಿರ್ಮಾತೃ ಸೈಮನ್ ಮಾಪಿನ್. ಬಾರ್ಥೊಲ್ಡಿ ಫೌಂಟನ್ ತನ್ನದೇ ಗಾಂಭೀರ್ಯದಿಂದ ವೀಕ್ಷಕರನ್ನು ಸೆಳೆಯುತ್ತದೆ.

ಲಿಯಾನ್ ನಗರ ಪ್ರದಕ್ಷಿಣೆಯ ಕಾರ್ಡ್ ಖರೀದಸಿದರೆ ವಾಹನ ಸಂಚಾರದ ಜೊತೆಗೆ 23 ಮ್ಯೂಸಿಯಂಗಳ ಪ್ರವೇಶ ಉಚಿತ, ಉಚಿತ ಜಲಯಾನ. ಗೈಡೆಡ್ ವಾಕಿಂಗ್ ಟೂರ್‌ಗಳಲ್ಲಿ, ಖರೀದಿಗಳಲ್ಲಿ, ಸಾಂಸ್ಕೃತಿಕ ಕಾರ್ಯಕ್ರಮಗಳ ಪ್ರವೇಶದಲ್ಲಿ ಕಾರ್ಡ್ ಹೊಂದಿರು ವವರಿಗೆ ರಿಯಾಯಿತಿ ಇದೆ.