Monday, 25th November 2024

ಸಿಳ್ಳೆ ಸಂಗೀತದ ಹಳ್ಳಿ

ಮಣ್ಣೆ ಮೋಹನ್‌

ಮೇಘಾಲಯದ ಸಿಳ್ಳೆ ಹಳ್ಳಿ ಬಹು ವಿಶಿಷ್ಟ. ಈ ಊರಿನ ಜನರ ಹೆಸರುಗಳಲ್ಲಿ ಸಿಳ್ಳೆಯಂತಹ ನಾದ ಸಂಗೀತ ಅಡಗಿದೆ!

ಬೆಟ್ಟ, ಗುಡ್ಡ, ಕಾಡುಗಳಿಂದ ತುಂಬಿದ ಮೇಘಾಲಯಕ್ಕೆ ಭೇಟಿ ಕೊಡುವ ಸೂಕ್ತ ಸಮಯ ಮಾರ್ಚ್ ನಿಂದ ಜುಲೈ. ನೀವೇನಾ ದರೂ ಮೇಘಾಲಯಕ್ಕೆ  ಪ್ರವಾಸ ಕೈಗೊಂಡು, ಅಲ್ಲಿನ ಕೊಂಗ್ ತಾಂಗ್ ಎಂಬ ಹಳ್ಳಿಗೆ ಭೇಟಿಕೊಟ್ಟು, ನಮ್ಮಲ್ಲಿಯಂತೆ ಸಿಳ್ಳೆಯಲ್ಲಿ ಹಾಡು ಹಾಡುವ ‘ಸಿಳ್ಳೆ ಸಂಗೀತ’ವನ್ನು ಬಾಯಿಂದ ಹೊರಡಿಸುತ್ತಾ, ನಿಸರ್ಗ ಸೌಂದರ್ಯ ಸವಿಯಲು ಹೊರಟರೆ, ನಿಮ್ಮ ಹಿಂದೆ ಇಡೀ ಊರಿನ ಜನರೇ ಬೆನ್ನತ್ತಿ ಬರುವ ಸಾಧ್ಯತೆ ಇದೆ.

ಏಕೆಂದರೆ ನಿಮ್ಮ ‘ಸಿಳ್ಳೆ ಸಂಗೀತ’ ಆ ಊರಿನ ಬಹುಜನರ ನಾಮಧೇಯವಾಗಿರ ಬಹುದು. ಅಚ್ಚರಿಯೆ? ಈ ಊರಿನ ಎಲ್ಲಾ ಜನರ ನಾಮಧೇಯ ಸಿಳ್ಳೆಯಂತ ನಾದ ಸಂಗೀತವೇ ಆಗಿದೆ. ಆದ್ದರಿಂದಲೇ ಈ ಊರಿಗೆ ‘ವಿಸ್ಲಿಂಗ್ ವಿಲೇಜ್’ ಎಂಬ ಅನ್ವರ್ಥನಾಮವೂ ಉಂಟು. ಖಾಸಿ ಭಾಷೆಯಲ್ಲಿ ಇದನ್ನು ‘ಜಿಂಗೃವಾಯ್ ಲಾವುಬಿ’ ಎನ್ನುತ್ತಾರೆ.

ಮೇಘಾಲಯದ ರಾಜಧಾನಿ ಶಿಲ್ಲಾಂಗ್ ನಿಂದ 56 ಕಿ.ಮೀ. ದೂರದ ಈ ಗ್ರಾಮದಲ್ಲಿರುವ ಸುಮಾರು 125 ಕುಟುಂಬಗಳಲ್ಲಿರುವ ಒಟ್ಟು ಜನಸಂಖ್ಯೆ 700. ಇವರೆಲ್ಲರೂ ನಿಸರ್ಗ ದೇವಿಯ ಮಕ್ಕಳು. ಹಾಗಾಗಿ ಪರಿಸರದಲ್ಲಿರುವ ನದಿ- ಝರಿ, ಪ್ರಾಣಿ-ಪಕ್ಷಿ, ಜೇನ್ನೊಣ- ಜೀರುಂಡೆ ಧನಿಯ ಅನುಕರಿಸಿ, ಸಿಳ್ಳೆ ಸಂಗೀತದ ರೂಪದಲ್ಲಿ ವ್ಯಕ್ತಿಗಳ ಹೆಸರುಗಳು ಸೃಷ್ಟಿಯಾಗುತ್ತವೆ.

ಹಾ! ಇದು ಕೂಡ ಅಮ್ಮನದೇ ಆಯ್ಕೆ. ನಮ್ಮಲ್ಲಿ ಹೆಸರಿನ ಮುಂದೆ ಅಪ್ಪನ ಹೆಸರು ಅಥವಾ ವಂಶದ ಹೆಸರು ಸೇರಿಕೊಳ್ಳುವಂತೆ, ಅಲ್ಲಿ ವ್ಯಕ್ತಿಯ ಹೆಸರುಗಳ ಮುಂದೆ ಅಮ್ಮನ ಹೆಸರು ಸಿಳ್ಳೆ ಸಂಗೀತದ ರೂಪದಲ್ಲಿ ಸೇರಿಕೊಂಡಿರುತ್ತದೆ. ಆದರೆ ಒಬ್ಬರ ಹೆಸರಿನಂತೆ ಮತ್ತೊಬ್ಬರ ಹೆಸರು ಇರುವುದಿಲ್ಲ. ಎಲ್ಲವೂ ಭಿನ್ನ ಭಿನ್ನ. ಕಾಡಿನ ಮಕ್ಕಳ ಹಾಡು -ಪಾಡು ಈ ಜನರ ಮುಖ್ಯ ಕಸುಬು ವ್ಯವಸಾಯ ಹಾಗೂ ಕಾಡಿನ ಉತ್ಪನ್ನಗಳ ಸಂಗ್ರಹ. ಇತ್ತೀಚೆಗೆ ಸಾಕ್ಷರತೆಯ ಪ್ರಮಾಣ ಹೆಚ್ಚಾಗಿ, ಪಟ್ಟಣಗಳಲ್ಲಿ ರುವ ಸರ್ಕಾರಿ ಹಾಗೂ ಖಾಸಗಿ ಸಂಸ್ಥೆೆಗಳಲ್ಲಿ ಕೆಲಸಕ್ಕೆ ಸೇರುವವರ ಸಂಖ್ಯೆ ಹೆಚ್ಚುತ್ತಿದೆ.

ಗಂಡಸರು ರಸ್ತೆ ನಿರ್ಮಿಸುವ ಕೆಲಸ, ಹತ್ತಿರದ ಪಟ್ಟಣಗಳಿಗೆ ತೆರಳಿ ಬೇರೆ ಬೇರೆ ಕೆಲಸಗಳಲ್ಲಿ ತೊಡಗಿಸಿಕೊಂಡರೆ, ವ್ಯವಸಾಯದ ಸಂಪೂರ್ಣ ಜವಾಬ್ದಾರಿ ಮಹಿಳೆಯರೇ ನಿಭಾಯಿಸುತ್ತಾರೆ. ಇವರ ಮನೆಗಳು ಬಿದಿರು, ಮರ, ಗರಿ ಹಾಗೂ ಗರಿಗಳಿಂದ ಹೆಣೆದ ಚಾಪೆಗಳಿಂದ ನಿರ್ಮಿತವಾಗಿರುತ್ತವೆ. ಭೂಮಿಯಿಂದ ಎರಡು ಅಥವಾ ಮೂರು ಅಡಿ ಎತ್ತರದಲ್ಲಿ ಭದ್ರವಾದ ಮರದ ಕಂಬಗಳ ಆಸರೆಯಲ್ಲಿ ಮನೆಗಳು ನಿರ್ಮಿಸಲ್ಪಟ್ಟಿವೆ.

ಮಳೆಯ ನೀರು ಸರಾಗವಾಗಿ ಹರಿದು ಹೋಗುವ ಉಪಾಯ ಕೂಡ ಇದರ ಹಿಂದಿದೆ. ವಿಷಜಂತುಗಳಿಂದ ಪಾರಾಗುವ ಬಗೆ ಕೂಡ ಆಗಿದೆ. ಮಳೆ ಹೆಚ್ಚು ಬೀಳುವ ಪ್ರದೇಶವಾದ್ದರಿಂದ ಅಡುಗೆಗೆ ಬೇಕಾದ ಉರುವಲುಗಳನ್ನು ಮನೆ ಯೊಳಗಿನ ಅಟ್ಟದ ಮೇಲೆ ಶೇಖರಿಸಿಟ್ಟುಕೊಳ್ಳುತ್ತಾ. ಕಾಡಿನಲ್ಲಿ ಹೇರಳವಾಗಿ ಸಿಗುವ ಪೊರಕೆ ಕಡ್ಡಿಗಳನ್ನು ಕೊಯ್ದು ತಂದು ಪೊರಕೆ ತಯಾರಿಸಿ ಪಟ್ಟಣ ದಲ್ಲಿ ಮಾರುವುದು ಇಲ್ಲಿನ ಎಲ್ಲ ಮನೆಯವರ ಕೆಲಸ. ಬುಟ್ಟಿ ಹೆಣೆಯುವುದು, ಕಾಡಿನಲ್ಲಿ ಸಿಗುವ ಗಡ್ಡೆಗೆಣಸು, ಹಣ್ಣು ಹಂಪಲು, ಜೇನುಗಳು ಕೂಡ ಇವರ ವರಮಾನದ ಮೂಲವಾಗಿವೆ.

ಜೊತೆಗೆ ಭತ್ತ, ತರಕಾರಿಗಳನ್ನು ಬೇಸಾಯ ಮಾಡುತ್ತಾರೆ. ಯಾವುದಾದರೂ ಕಾರಣಕ್ಕೆ ಯಾರದ್ದಾದರೂ ಮನೆ ಬಿದ್ದರೆ ಅಥವಾ ಹಾಳಾದರೆ, ಊರಿನ ಜನರೆಲ್ಲರೂ ಕಾಡಿಗೆ ತೆರಳಿ ಬಿದಿರು ಹಾಗೂ ಮರಗಳನ್ನೂ ಕಡಿದು ತಂದು ಒಂದೇ ದಿನಕ್ಕೆ ಮನೆ ನಿರ್ಮಿಸಿ, ಅಂದೇ ಗೃಹ ಪ್ರವೇಶವನ್ನು ಮುಗಿಸಿಬಿಡುತ್ತಾರೆ. ಊರಿನವರೆಲ್ಲ ಒಂದೊಂದು ಪಾತ್ರೆ ನೀಡಿ ಅವರ ಜೀವನಕ್ಕೆ ಅಗತ್ಯ ವಿರುವಷ್ಟನ್ನು ಅಂದೇ ಒದಗಿಸಿಕೊಡುತ್ತಾರೆ.

ಗುಡ್ಡಗಾಡು ಜನರಲ್ಲೇ ಅತ್ಯಂತ ಸ್ವಚ್ಛ ಜನಗಳಿವರು ಎಂಬ ಖ್ಯಾತಿ ಕೂಡ ಇದೆ. ಬೇರುಕ್ಕಿನ ಜೀವಂತ ಸೇತುವೆ ಇಲ್ಲಿನ ಇನ್ನೊಂದು ವಿಶೇಷವೆಂದರೆ ಜೀವಂತ ಸೇತುವೆಗಳು. ಇಲ್ಲಿನ ಜನ ನದಿ ಅಥವಾ ಕಣಿವೆಗಳ ಎರಡು ದಂಡೆಗಳ ನಡುವೆ
ಈ ರೀತಿಯ ಸೇತುವೆಗಳನ್ನು ನಿರ್ಮಿಸುತ್ತಾರೆ. ಎರಡು ದಂಡೆಯಲ್ಲಿರುವ ಮರಗಳ ಎಳೆಯ ಬೇರುಗಳನ್ನು ಬಳ್ಳಿಗಳ ಸಹಾಯ ದಿಂದ ಜೋಡಿಸಿ ಕೂಡಿಸುತ್ತಾರೆ. ಮರ ಬೆಳೆದಂತೆ, ಬೇರುಗಳ ಬಾಹುಗಳು ಚಾಚಿದಂತೆ, ಕ್ರಮೇಣ ಎರಡು ದಂಡೆಯ ಮರದ ಬೇರುಗಳು ಪರಸ್ಪರ ಸಂಪರ್ಕಕ್ಕೆ ಬಂದು ಹೆಣೆದುಕೊಳ್ಳತೊಡಗುತ್ತವೆ.

ಈ ರೀತಿ ಹೆಣೆದುಕೊಳ್ಳುತ್ತಾ 30 ರಿಂದ 50 ವರ್ಷದವರೆಗಿನ ಅವಧಿಯಲ್ಲಿ ಮರದ ಬೇರುಗಳಿಂದಲೇ ಆದ ‘ಜೀವಂತ ಸೇತುವೆ’ ನಿರ್ಮಾಣಗೊಳ್ಳುತ್ತದೆ. ಅದು ಅಂತಿಂಥ ಸೇತುವೆಯಲ್ಲ,ಅದರ ಮೇಲೆ ಮಣಭಾರದ ಟ್ರಕ್ ಗಳು ಕೂಡ ಸಾಗಬಹುದಾದಂತಹ ‘ಬೇರುಕ್ಕಿನ ಸೇತುವೆ’. ಮುನ್ನೂರು, ನಾನೂರು ವರ್ಷಗಳಿಂದ ಉಪಯೋಗಿಸುತ್ತಿರುವ ಅಂತಹ ಅನೇಕ ಸೇತುವೆಗಳನ್ನು ನಾವು ಕಾಣಬಹುದು. ಈ ಜೀವಂತ ಸೇತುವೆಗಳು ಜಗತ್ತಿನ ಗಮನ ಕೂಡ ಸೆಳೆದಿದ್ದು, ವಿಶ್ವಪಾರಂಪರಿಕ ಪಟ್ಟಿಯಲ್ಲಿ ಸ್ಥಾನ ಪಡೆದಿದೆ.