ಕೆ.ಶ್ರೀನಿವಾಸರಾವ್ ಹರಪನಹಳ್ಳಿ
ಹುಡುಗಿಯ ತಂದೆ ವಿಧಿಸಿದ ನಿಯಮ, ಬೇಡಿಕೆಗಳನ್ನು ಕಂಡು ಮದುವೆ ಮಾಡಿಸುವ ಬ್ರೋಕರ್ ತಬ್ಬಿಬ್ಬಾದರು. ಅಂತಹ ಅದ್ಭುತ ಬೇಡಿಕೆಗಳು ಯಾವುವು?
ಶ್ರೀಪತಿರಾಯರ ಮಗಳು ರತ್ನಮಂಜರಿಗೆ ಮೊನ್ನೆ ನವೆಂಬರ್ 2ಕ್ಕೆ 22 ತುಂಬಿತ್ತು. ಮದುವೆಗೆ ಪ್ರಶಸ್ತ ವಯಸ್ಸು. ಅವಳೋ ದೀಪಿಕಾ ಪಡುಕೋಣೆಯ ಎತ್ತರ.
ಪ್ರಿಯಾಮಣಿಯ ಕಣ್ಣು, ರಶ್ಮಿಕಾಳ ನಾಸಿಕ, ರಚಿತಾಳ ಕಾಯ, ತಮನ್ನಾಳ ಹಾಲಿನ ಮೈಬಣ್ಣ ಎಲ್ಲವೂ ಒಬ್ಬಳಲ್ಲೇ ಮೇಳೈಸಿ ಬೆಳದಿಂಗಳ ಬಾಲೆಯಂತೆ ಹದಿಯರೆಯದ ಯುವಕರ ಎದೆ ಬಡಿತ ದ್ವಿಗುಣಗೊಳಿಸಿದ್ದಳು. ಶ್ರೀಪತಿರಾಯರು ಕುಂದಾಪುರದ ಬ್ರೋಕರ್ ಅಭಿರಾಮ ಅಡಿಗರ ‘ಮದುವೆ ಮಾವಯ್ಯ’ ಕಛೇರಿಗೆ ತಿಂಗಳ ಹಿಂದೆಯೇ ಹೋಗಿ ಮಗಳ ಜಾತಕ, ಫೋಟೋ ಸಹಿತ ಎಲ್ಲ ವಿವರಕೊಟ್ಟು ಬಂದಿದ್ದರು.
ಅಂದು ಭಾನುವಾರ ಅಡಿಗರ ಸವಾರಿ ರಾಯನ ಮನೆಗೆ ಚಿತ್ತೈಸಿತ್ತು. ಜಾತಕಗಳ ಕಂತೆಯನ್ನೇ ಹೊತ್ತು ತಂದಿದ್ದರು. ಒಂದೊಂದಾ ಗಿ ಟೇಬಲ್ ಮೇಲೆ ಬಿಡಿಸಿಟ್ಟು ವರ್ಣಿಸತೊಡಗಿದರು. ‘ರಾಯರೇ, ಈ ಹುಡುಗ ದೊಡ್ಡಾಸ್ಪತ್ರೆಯಲ್ಲಿ ಸರ್ಜನ್, ತುಂಬಾ ಸ್ಥಿತಿ ವಂತ…….’ ಮಧ್ಯದಲ್ಲಿಯೇ ಶ್ರೀಪತಿರಾಯರು ಮಾತು ತುಂಡರಿಸಿ ನುಡಿದರು.
‘ಅಡಿಗರೇ, ನಮ್ಮ ಹುಡುಗಿಗೇ ಸಾಫ್ಟ್ವೇರ್ ಗಂಡನೇ ಬೇಕಂತೆ. ಅಂತಹ ವರವಿದ್ದರೆ ಮಾತ್ರ ತೋರಿಸಿ’ ಮದುವೆ ಮಾವಯ್ಯ
ಅರ್ಧದಷ್ಟು ಜಾತಕಗಳನ್ನು ವಿಭಾಗಿಸಿ ಬದಿಗಿಟ್ಟು ಉಳಿದವುಗಳ ವರ್ಣನೆಗೆ ತೊಡಗಿದರು. ‘ನೋಡಿ ರಾಯರೇ, ಈ ಹುಡುಗ ವಿಪ್ರೋದಲ್ಲಿದ್ದಾನೆ, ಸುಂದರ, ಸಂಬಳ ವರ್ಷಕ್ಕೆೆ 15 ಲಕ್ಷ’. ‘ಅದೆಲ್ಲ ಇರಲಿ, ಅವನಿಗೆ ಬೆಂಗಳೂರಿನಲ್ಲಿ ಸ್ವಂತ ಮನೆ ಇದೆಯೇನ್ರೀ?’
‘ಇಲ್ಲ ರಾಯರೇ, ಹುಡುಗ ಹಳ್ಳಿಯ ರೈತರ ಮಗ, ಇನ್ನೂ ಕೆಲಸಕ್ಕೆ ಸೇರಿ ಎರಡು ವರ್ಷಗಳಾಗಿವೆ ಅಷ್ಟೇ’.
‘ಹೋಗಲಿ, ಅವನಿಗೆ ಬೆಂಗಳೂರಿನಲ್ಲಿ ಒಂದೆರಡು ಸೈಟಾದರೂ ಇದೆಯೇನ್ರೀ?’ ‘ಇಲ್ಲ ಸಾರ್, ಇನ್ನೂ ಕೊಳ್ಳಬೇಕಿದೆ ಅಷ್ಟೇ?’
‘ಬದಿಗೆ ಹಾಕಿ ಅವನ್ನ, ಸ್ವಂತ ಮನೆ ಇರೋ, ಸಾಫ್ಟ್ಫ್ಟ್ವೇರಿಯನ್ನು ನೋಡಿ…..’ ಅಡಿಗರು ಕಕ್ಕಾಬಿಕ್ಕಿಯಾಗಿದ್ದರು, ಆದರೂ ಅರ್ಧಘಂಟೆ ಜಾಲಾಡಿ, ‘ಅವನ್ ಬಿಟ್ಟು ಇವನ್ ಬಿಟ್ಟು ಇವನ್ಯಾರು?’ ಎಂಬಂತೆ ಕಣ್ಣಾಮುಚ್ಚೇ ಕಾಡೇಗೂಡೇ ಆಡಿ ಎರಡು ಜಾತಕ ಹೊರತೆಗೆದು ಶಬ್ದಗಳಿಗೆ ತಡಕಾಡುತ್ತ ವರ್ಣಿಸಲುದ್ಯುಕ್ತರಾದರು. ಅಷ್ಟರಲ್ಲಿ ಶ್ರೀಪತಿರಾಯರು ‘ಅಡಿಗರೇ, ಮರೆತಿದ್ದೆ ಇವರ ಮನೆಗಳಲ್ಲಿ ರಾಹು, ಕೇತುಗಳು ಇಲ್ಲ ತಾನೇ?’
‘ಇಲ್ಲ ರಾಯರೇ ಇವರೆಲ್ಲರ ಎರಡೂ ಮನೆಗಳಲ್ಲಿ ರಾಹುಕೇತು ಪ್ರಶಸ್ತ ಸ್ಥಳಗಳಲ್ಲಿವೆ ಸ್ವಾಮಿ’ ‘ಅಡಿಗರೇ, ನಾನು ಹೇಳಿದ್ದು ನಿಮ್ಮ ಜಾತಕದ ರಾಹು, ಕೇತುಗಳಲ್ಲ. ಮನೆಯಲ್ಲಿ ವಯಸ್ಸಾದ ಮಾವ (ರಾಹು) ಹಾಗೂ ಅತ್ತೆ (ಕೇತು) ಇದ್ದಾರೋ ಹೇಗೆ ಅಂತ!’
ಬ್ರೋಕರ್ ಅಡಿಗರ ಜಂಘಾಬಲವೇ ಉಡುಗಿತ್ತು. ಇನ್ನು ತನ್ನ ಕಮಿಷನ್ ಬಂದಂತೆಯೇ? ‘ಈ ಜಾತಕದ ಎಲ್ಲಾ ವರಗಳಿಗೂ ತಂದೆ-ತಾಯಿ ಬದುಕಿದ್ದಾರೆ.
ಸ್ವಾಮಿ…’
‘ಹಾಗಾದರೆ ಎಲ್ಲವನ್ನೂ ಒಳಗಿಡಿ. ನಾವು ನಮ್ಮ ಮಗಳು ಪತಿಯೊಂದಿಗೆ ಸುಖವಾಗಿರಲಿ ಅಂತ ಮದುವೆ ಮಾಡೋದು, ನಾದಿನಿ ಯರ ಕಾಟದ ಜೊತೆಗೆ ಮುದಿ ಅತ್ತೆ, ಮಾವಂದಿರ ಸೇವೆ ಮಾಡಿಕೊಂಡು ಊಳಿಗ ಮಾಡೋದಕ್ಕಲ್ಲ. ನೋಡಿ, ಕೊನೆಯದಾಗಿ ಹೇಳ್ತಿನಿ, ರಾಹು-ಕೇತು ಇದ್ದರೂ ಮದುವೆಯಾದ ಮರುದಿನವೇ ಬೇರೆ ಮನೆ ಮಾಡುವ ಸುಗುಣಶೀಲ ಗಂಡಿದ್ದರೆ ಜಾತಕ ತನ್ನಿ, ತಾವಿನ್ನು ಹೋಗಬಹುದು!’
ಮದುವೆ ಮಾವಯ್ಯ ಅಡಿಗರು, ಮಂಡೆಬಿಸಿ ಮಾಡಿಕೊಂಡು, ಆ ಡಿಸೆಂಬರ್ ಚಳಿಯಲ್ಲೂ ಬೆವರಿದ್ದ ಮುಖವನ್ನು ಒರೆಸಿ ಕೊಂಡು ತಮ್ಮ ಕಡತವನ್ನೆತ್ತಿಕೊಂಡು ಹೊರ ನಡೆದರು. ಪಿಯುಸಿ ಮುಗಿಸಿ ಮನೆಯಲ್ಲಿಯೇ ಕುಳಿತು ಕಡಲೆ ಕಾಯಿ ತಿನ್ನುತ್ತಾ, ಮೊಬೈಲ್ನಲ್ಲಿ ಆಟ ಆಡುತ್ತಿದ್ದ ರತ್ನ ಮಂಜರಿ ಕಿಟಕಿಯ ಮರೆಯಿಂದ ಕದ್ದು ನೋಡುತ್ತಿದ್ದಳು.