Wednesday, 27th November 2024

ಹೆಂಡತಿ ದುಡಿಯುವ ಯಂತ್ರವೇ ?

ವೇದಾವತಿ ಹೆಚ್.ಎಸ್.

ಉದ್ಯೋಗದಲ್ಲಿರುವ ಗಂಡ, ಮನೆಯಲ್ಲೇ ಉಳಿಯುವ ಹೆಂಡತಿ. ದುಡಿದು ಹಣ ಗಳಿಸುವ ಗಂಡ, ಮನೆಕೆಲಸ ಮಾಡಿ ಸಂಸಾರದ ಜವಾಬ್ದಾರಿ ಹೊರುವ ಹೆಂಡತಿ. ಇಂತಹ ಸನ್ನಿವೇಶದಲ್ಲಿ ಹೆಂಡತಿ ಎಂದರೆ ಕೇವಲ ದುಡಿಯುವ ಯಂತ್ರವೆ? ಆಕೆಯನ್ನು ಗಂಡ ಅರ್ಥಮಾಡಿಕೊಳ್ಳಬೇಡವೆ?

ಮೇಘನ ವಿದ್ಯಾವಂತಳು. ಆದರೂ ಹೊರ ಜಗತ್ತಿನಲ್ಲಿ ದುಡಿಯದೇ ಮನೆಯಲ್ಲೇ ಗೃಹಿಣಿಯಾಗಿ ತನ್ನ ಜವಾಬ್ದಾರಿಯನ್ನು ಅಚ್ಚು ಕಟ್ಟಾಗಿ ನಿಭಾಯಿಸುತ್ತಿದ್ದಳು. ಮದುವೆಗೆ ಮೊದಲೇ ಮೇಘನಳ ಗಂಡ ಮಧು, ಅವಳಿಗೆ ಹೊರ ಹೋಗಿ ದುಡಿಯುವ ಅವಶ್ಯತೆ ಯಿಲ್ಲವೆಂದೂ ಹೇಳಿ, ಮನೆಯಲ್ಲಿರುವ ಅವನ ವಯಸ್ಸಾದ ತಂದೆತಾಯಿಯ ಜವಾಬ್ದಾರಿಯನ್ನು ಅವಳಿಗೆ ವಹಿಸಿದ್ದ. ಗಂಡನ ಇಚ್ಛೆೆಯಂತೆ ಅವಳು ಮನೆಯಲ್ಲೇ ಉಳಿದಳು.

ದಿನಗಳು ಉರುಳಿ ವರುಷಗಳಾಗಿ ಹೋದವು. ಮೇಘನಳ ಅತ್ತೆ ಮಾವ ಸಹ ಇಹಲೋಹ ತ್ಯೆೆಜಿಸಿದರು. ಈಗ ಮೇಘನಳಿಗೆ ತನ್ನ
ಗಂಡ, ಮಕ್ಕಳ ಜವಾಬ್ದಾರಿ ಮಾತ್ರವಾಗಿದ್ದ ಕಾರಣದಿಂದ ದಿನದಲ್ಲಿ ಸ್ವಲ್ಪ ಸಮಯವು ಉಳಿಯುತ್ತಿತ್ತು. ಆ ಸಮಯದಲ್ಲಿ ಯಾವಾಗಲೂ ಚಟುವಟಿಕೆಯಿಂದ ಇರುತ್ತಿದ್ದಳು. ಮಧುಗೆ ದೊಡ್ಡ ಕಂಪನಿಯಲ್ಲಿ ಕೆಲಸ. ಅವನಿಗೆ ಕೈತುಂಬಾ ಸಂಬಳವೂ ಬರುತ್ತಿತ್ತು. ಆದರೆ ಹಗಲೂ ರಾತ್ರಿಯೆನ್ನದೆ ದುಡಿಯುವುದು ಅನಿವಾರ್ಯವಾಗಿತ್ತು.

ಕಂಪನಿಯು ಕೊಡುತ್ತಿದ್ದ ತಿಂಗಳ ಟಾರ್ಗೆಟ್ ಬಹುಮುಖ್ಯ ಎನಿಸಿತ್ತು. ಅವನ ಕಷ್ಟವನ್ನು ಅರಿತಿದ್ದ ಮೇಘನ ಮಕ್ಕಳ ಜವಾಬ್ದಾರಿಯ ಜತೆ, ಮನೆಯ ಜವಾಬ್ದಾರಿಯನ್ನು ಅಚ್ಚುಕಟ್ಟಾಗಿ ನಿಭಾಯಿಸಿಕೊಂಡು ಹೋಗುತ್ತಿದ್ದಳು. ಮಧು ಈಗೀಗ ಮನೆಗೆ ಬಂದು ಹೋಗುವ ಅತಿಥಿಯಾಗಿದ್ದ. ಅವನೊಂದಿಗೆ ಮನೆಯವರ ಒಡನಾಟ ವಾರಾಂತ್ಯದಲ್ಲಿ ಮಾತ್ರ. ಉಳಿದ ದಿನಗಳು ಯೋಗಕ್ಷೇಮ ಸಮಾಚಾರ ಕೇಳುವುದಷ್ಟೇ ಎನ್ನಬಹುದಾಗಿತ್ತು.

ದಣಿದ ದೇಹ ಕುಗ್ಗಿದ ಮನ
ಕ್ರಮೇಣ ಮಕ್ಕಳು ದೊಡ್ಡವರಾದರು. ಮಕ್ಕಳ ಜವಾಬ್ದಾರಿಯೂ ಹೆಚ್ಚಿತ್ತು. ಗಂಡನ ಕಡೆ ಮೊದಲಿನಂತೆ ಗಮನಹರಿಸಲು ಮೇಘನಳಿಗೆ ಸಾಧ್ಯವಿಲ್ಲವಾಗಿತ್ತು. ಅವಳು ದೈಹಿಕವಾಗಿ ದಣಿದು ಹೋಗಿದ್ದಳು. ವಯಸ್ಸಿನ ಏರಿಳಿತವೋ ಏನೋ ಆಗಾಗ ಸುಸ್ತಾಗುತ್ತಿತ್ತು. ಮನೋ ಪಾಸ್ ಸಮಯ ಹತ್ತಿರ ಬರುತ್ತಿದ್ದ ಕಾರಣದಿಂದಲೋ ಏನೋ ಮನಸ್ಸಿನಲ್ಲಿ ತಳಮಳ, ಬೇಸರ, ಜಿಗುಪ್ಸೆ.

ಅವಳ ಮನಸ್ಸಿನಲ್ಲಿ ಆಗುತ್ತಿರುವ ಬದಲಾವಣೆಯನ್ನು ಗಂಡನಲ್ಲಿ ಹೇಳಿಕೊಂಡು ತನ್ನ ನೋವನ್ನು ಪರಿಹರಿಸಬೇಕೆಂದು ಕೊಂಡರೂ ಅವನ ಬಿಜಿ ಜೀವನದಲ್ಲಿ ಇವಳ ನೋವು ಅವನಿಗೆ ತಿಳಿಯಾದಾಗಿತ್ತು. ಈಗೀಗ ಮೇಘನ ಗಂಡನ ಮುಂದೆ ಸಿಡುಕಾಡಲು ಪ್ರಾರಂಭ ಮಾಡಿದಳು. ಹಾಗೆ ಮಾಡಿದರೆ, ಗಂಡ ತನ್ನೊಂದಿಗೆ ನಗುನಗುತ್ತಾ ಮಾತನಾಡಬಹುದೆಂದುಕೊಂಡಳು.
ಅವಳ ನಿರೀಕ್ಷೆ ಹುಸಿಯಾಯಿತು. ಮೇಘನಳ ನೋವು ಬರುಬರುತ್ತಾ ಡಯಾಬಿಟಿಸ್, ಬಿಪಿಗೆ ತಿರುಗಿತೇ ವಿನಃ ಅವಳ ಮನಸ್ಸನ್ನು ಮಧು ಅರ್ಥ ಮಾಡಿಕೊಳ್ಳಲಿಲ್ಲ.

ಮಧು ಈಗೀಗ ಮೇಘನಳಿಗೆ ಕೆಟ್ಟ ಪದಗಳಿಂದ ನಿಂದಿಸುವುದು, ‘ದಿನಬೆಳಗಾದರೆ ಊಟ ತಿಂಡಿಯನ್ನು ಮಾಡುತ್ತಿರುವುದು ನನ್ನ ಹಣದಿಂದ’ ಎಂದೆಲ್ಲಾ ಹೀಯಾಳಿಸುವಾಗ ಮೇಘನಳಿಗೆ ಮನೆಯನ್ನು ಬಿಟ್ಟು ಹೋಗಲೇ ಎಂದು ಅನ್ನಿಸುತ್ತಿತ್ತು. ಆದರೆ ಮಕ್ಕಳು ಅವಳ ಕಣ್ಣ ಮುಂದೆ ಬರುತ್ತಿದ್ದ ಕಾರಣ ಗಂಡನ ನಿಂದನೆಯ ಮಾತುಗಳನ್ನು ನುಂಗಿಕೊಂಡು ಸುಮ್ಮನಾಗುತ್ತಿದ್ದಳು.

ಬರಬರುತ್ತಾ ಗಂಡ ಹೆಂಡತಿಯ ಸಂಬಂಧದಲ್ಲಿ ಕಹಿ ಹೆಚ್ಚಾಯಿತು, ಸಿಹಿ ಕಡಿಮೆಯಾಯಿತು. ಒಂದೇ ಮನೆಯಲ್ಲೇ ಇದ್ದರೂ ಅವಳೊಂದು ಕೋಣೆಯಲ್ಲಿ, ಇವನೊಂದು ಕೋಣೆಯಲ್ಲಿ ರಾತ್ರಿಯನ್ನು ಕಳೆಯುತ್ತಾ ಮಾತುಕತೆಯಿಲ್ಲದೇ ಜೀವನ ನಡೆಸುವು ದಾಗಿತ್ತು. ಹತ್ತಿರವಿದ್ದವರು ದೂರವಾಗುತ್ತಾ ಬಂದರು. ಮೇಘನಳ ನೋವುಂಡ ಮನಸ್ಸಿಗೆ ಈಗ ಗಂಡನ ಸುಮಧುರವಾದ ನುಡಿ ಯನ್ನು ಕೇಳುವ ಬಯಕೆಯಿತ್ತೇ ವಿನಃ ಅವನ ತಾತ್ಸರದ ನುಡಿಯಲ್ಲವಾಗಿತ್ತು.

ಹಳಿ ತಪ್ಪಿದ್ದು ಎಲ್ಲಿ?
ಹಾಗಾದರೆ ಇವರಿಬ್ಬರ ಮಧ್ಯೆ ಹಳಿ ತಪ್ಪಿದ್ದು ಹೇಗೆ? ಮೇಘನ ಇಡೀ ಮನೆಯ ಜವಾಬ್ದಾರಿಯನ್ನು ವಹಿಸಿಕೊಂಡು ಮನೆಯನ್ನು ಅಚ್ಚುಕಟ್ಟಾಗಿ ನಿಭಾಯಿಸಿಕೊಂಡು ಹೋಗುತ್ತಿದ್ದರೂ ಮಧುವಿಗೆ ಅವಳ ಚಿಕ್ಕಪುಟ್ಟ ಸಮಸ್ಯೆಗಳನ್ನೂ ಅರ್ಥಮಾಡಿಕೊಳ್ಳಲು
ಸಾಧ್ಯವಾಗಲಿಲ್ಲ. ಮನೆಯ ಎಲ್ಲಾ ಕೆಲಸಕಾರ್ಯಗಳನ್ನು ಮೇಘನಳ ತಲೆಯ ಮೇಲೆ ಹಾಕಿ ತಾನು ಮಾತ್ರ ಆಫೀಸ್, ಕೆಲಸ, ಪಾರ್ಟಿಯೆಂದು ಜೀವನ ನಡೆಸುತ್ತಿದ್ದ.

ಹೆಂಡತಿಯ ಆರೋಗ್ಯದ ಕಡೆಗೂ ಗಮನ ಕೊಡದೇ, ತನ್ನ ಆದಾಯ ಹೆಚ್ಚಿಸುವುದೇ ಮುಖ್ಯಯ ಎಂದು ವರ್ತಿಸುತ್ತಿದ್ದ. ತನ್ನ ಹೆಂಡತಿಯ ಸಹಕಾರದಿಂದ ತಾನಿಂದು ಉನ್ನತ ಮಟ್ಟವನ್ನು ತಲುಪಿದ್ದೇನೆಂದು ಅವನೆಂದೂ ತಿಳಿದೇ ಇರಲಿಲ್ಲ. ಹೆಂಡತಿ ಯೆಂದರೆ ಕೇವಲ ತನ್ನ ಆಸೆಯನ್ನು ಈಡೇರಿಸುವ ಯಂತ್ರವೆಂದು ಭಾವಿಸಿದ್ದ. ದಾಂಪತ್ಯವೆಂಬುದು ಮಧುರ ಸಂಗೀತವಿದ್ದಂತೆ.
ಅದನ್ನು ಸುಮಧುರವಾಗಿ ನುಡಿಸಲು ಕಲಿಯಬೇಕಷ್ಟೇೇ.

ಸಾವಿರಾರು ಜನರ ಸಮ್ಮುಖದಲ್ಲಿ ಸಪ್ತಪದಿ ತುಳಿದು, ತಾವಿಬ್ಬರೂ ಸತಿಪತಿಯಾಗಿ ಜೀವನಪಯರ್ಂತ ನಗುನಗುತ್ತಾ ಇರುತ್ತೇ ವೆಂದು ಅಗ್ನಿಸಾಕ್ಷಿಯಾಗಿ ವಚನವನ್ನು ಮಾಡಿರುತ್ತೇವೆ.ಆದರೆ ವರುಷಗಳು ಕಳೆಯುತ್ತಾ ಬಂದಾಗ ಮದುವೆಯೆಂಬುದು ಬೇಸರದ ಗೂಡಗಿ ವಿಚ್ಚೇದನದ ದಾರಿಯನ್ನು ಹಿಡಿಯುವುದು ಖೇದಕರ. ಹಾಗಾಗದಂತೆ ಮದುವೆಯ ಬಾಂಧವ್ಯವನ್ನು ಸತಿಪತಿ
ಯಿಬ್ಬರೂ ಜೋಪಾನವಾಗಿ ಕಾಪಾಡಿಕೊಳ್ಳಬೇಕಾಗಿದೆ. ಹಣವನ್ನು ಯಾವಾಗ ಬೇಕಾದರೂ ಸಂಪಾದಿಸಬಹುದು. ಮುರಿದು ಬಿದ್ದ ಸಂಬಂಧಗಳನ್ನು ಪುನಃ ಜೋಡಿಸುವುದು ತುಂಬಾ ಕಷ್ಟ.