ವೀಚಿ
ಪ್ರೀತಿ ಎಂದರೆ ಇದೇ ಕಣೋ! ಎತ್ತರೆತ್ತರದ ಬಾನು ಕೆಳಗಿರುವ ಭೂಮಿಯನ್ನು ಬಯಸಬೇಕು. ಅರಳಿ ನಸುನಗುವ ಗಂಭೀರ ಹೂವುಗಳು ಚಂಚಲವಾಗಿ ಅಲೆದಾಡುವ ದುಂಬಿಗಳನ್ನೇ ಪ್ರೀತಿಸಬೇಕು.
ಬೆಚ್ಚನೆಯ ಎದೆಯಪ್ಪುಗೆ ಬಯಸುವಂತೆ ಅರಳಿಕೊಂಡ ಈ ಮುಂಜಾನೆಯ ನಸುಚಳಿಯಲ್ಲಿ ಸುಖಾಸುಮ್ಮನೆ ನಿನ್ನ ನೆನಪಾಗು ತ್ತಿದೆ. ಎಂಥ ಚಳಿಯಲ್ಲೂ ಮೂಡುವ ನಿನ್ನ ಹಣೆಯ ಮೇಲಿನ ಬೆವರ ಬಿಂದುಗಳ ಘಾಟಿಗೋ, ಉಸಿರಿನಲ್ಲಿರುವ ಘಮಕ್ಕೋ, ಚುಕ್ಕು ತಟ್ಟುವ ಕೈಯ ಹಿತವಾದ ಸ್ಪರ್ಶಕ್ಕೋ ಹೇಳುವುದು ಕಷ್ಟ.
ನೀನೀಗ ಜೊತೆಯಲ್ಲಿಲ್ಲ ಎನ್ನುವುದಕ್ಕೇ ಈ ಬೆಳಗಿನ ಚಳಿ ನನ್ನನ್ನು ಹೀಗೆ ಸವಿಯಾದ ಸಂಕಟದ ಭಾವದ ತೀವ್ರತೆಯಲ್ಲಿ ಅದ್ದಿಸು ತ್ತಿದೆಯೋ ಎಂಬ ಅನುಮಾನ ಸಹ ಇದೆ. ನನಗೆ ಗೊತ್ತು, ನಾನು ಬರೆಯುವ ಹೀಗೊಂದು ಪತ್ರ ನಿನ್ನ ಅಹಂಕಾರವನ್ನು ಅದೆಷ್ಟು ತೃಪ್ತಿ ಪಡಿಸುತ್ತದೆ ಎನ್ನುವುದು. ಮತ್ತೆ ಇದಕ್ಕಾಗಿಯೇ ನಾನು ನಿನಗಾಗಿ ಬರೆದ ನೂರಾರು ಪತ್ರಗಳು ಯುಗಗಳಿಂದೆಂಬಂತೆ ತೂಕ ಡಿಸುತ್ತಾ ಅದ್ಯಾವುದೋ ಪುಸ್ತಕದ ಪುಟಗಳಲ್ಲಿ ಸೇರಿಬಿಟ್ಟಿವೆ.
ಹೋಗಲಿ ಬಿಡು ಕೊಡದ ಪತ್ರಗಳಿಗಾಗಿ ಕೋಪಿಸಿಕೊಳ್ಳಬೇಡ. ಓದುವ ಸುಖಕ್ಕಿಂತ, ನಿನ್ನವರೆಗೆ ತಲುಪದೇ ಉಳಿದು ಹೋದ ಪತ್ರಗಳಲ್ಲಿ ಏನಿರಬಹುದೆಂಬ ನಿನ್ನ ಊಹೆಯಿಂದಲೇ ಕಚಗುಳಿಯಾಗುವುದಿಲ್ಲವೇ? ಅದಾಗಲಿ ಎಂದೇ ಕೊಟ್ಟಿಲ್ಲವೋ ಹುಡುಗ.
ಅದ್ಯಾವ ಅಮೃತ ಘಳಿಗೆಯಲ್ಲಿ ನನ್ನ ಕಣ್ಣ ಮುಂದೆ ಸುಳಿದು ಹೋದೆಯೋ ಕಾಣೆ!
ಆ ಘಳಿಗೆಯೇ ನನ್ನ ಬದುಕನ್ನು ಬದಲಾಯಿಸಿ ಪ್ರೀತಿಯ ಕಡಲೊಳಗೆ ಅನಾಮತ್ತಾಗಿ ಎಸೆದು ಬಿಡುತ್ತದೆಂದು, ಈ ಹಿಂದೆ ಎಂದೂ ಪ್ರೀತಿಸದ ನನಗಾದರೂ ಹೇಗೆ ಗೊತ್ತಾಗಬೇಕಿತ್ತು? ಹಾಗೇ ಗೊತ್ತಾಗುತ್ತದೆಂದಾದರೆ ನಾನು ನಿನಗೆ ಎದುರಾಗುತ್ತಿರಲಿಲ್ಲವಾ? ಅಥವಾ ಎದುರಾಗುವುದಕ್ಕೆ ತಪಸ್ವಿಯಂತೆ ಕಾಯುತ್ತಾ ಕೂಡುತ್ತಿದ್ದೆನಾ? ಗೊತ್ತಿಲ್ಲ. ನೀನು ನಂಬದಿರಬಹುದು ಗೆಳೆಯ, ನಿನ್ನ
ನೋಡುವ ಮೊದಲು ಯಾವ ಗಂಡಿನ, ಎಂತಹ ಆರಾಧಕ ನೋಟ ಕೂಡ ನನ್ನ ಮನಸ್ಸಿನ ಕೋಟೆಯ ಬಾಗಿಲನ್ನು ಕಿರುಬೆರಳಿ ನಿಂದಲೂ ಸೋಕಲು ಸಾಧ್ಯವಾಗಲಿಲ್ಲ. ಅದೊಂದು ಇಂಥದ್ದೇ ತುಸು ಚಳಿಯ ನಸು ಮುಂಜಾನೆಯಲ್ಲಿ ನಿನ್ನ ಕಂಡಾಗ ನನ್ನ ಮನಸ್ಸಿನ ಭದ್ರ ಕೋಟೆ ಹಾರೆ ಹೊಡೆದಂತೆ ಚೂರು ಚೂರಾಗಿ ದೊಪ್ಪನೆ ಬಿತ್ತು ನೋಡು? ಆಗ ನನ್ನ ಪ್ರೀತಿ ಎಲ್ಲ ಬಿಗುಮಾನ ವನ್ನು ತೊರೆದು ಬೆತ್ತಲಾಗಿ ನಿಂತುಬಿಟ್ಟಿತು.
ನಿನ್ನ ಪ್ರೀತಿಸದೇ ಇರಲಾರೆ ಎಂಬ ನನ್ನೊಳಿಗಿನ ಕೂಗನ್ನು ಮತ್ತದರ ತಪನೆಯನ್ನು ಕಂಡು ನನಗೇ ಅಚ್ಚರಿಯಾಗುತ್ತಿತ್ತು. ನಾನು ಶುದ್ಧ ಸ್ವಾರ್ಥಿ ಕಣೋ. ನನ್ನ ನಾನಲ್ಲದೇ ಬೇರಾರನ್ನು ಪ್ರೀತಿಸಿ ಸಹ ನನಗೆ ಗೊತ್ತಿರಲಿಲ್ಲ. ನಿನ್ನನ್ನು ಹೀಗೆ ಯಾರೂ ಪ್ರೀತಿಸದಷ್ಟು ದಿವ್ಯವಾಗಿ ಪ್ರೀತಿಸುವಷ್ಟು ನನ್ನ ಹೃದಯ ಹಸಿಯಾಗಿತ್ತು ಎನ್ನುವುದೇ ನನಗೀಗ ಸೋಜಿಗದ ಸಂಗತಿ. ಪ್ರೀತಿ ಎಂದರೆ ಹಾಗೇ ಅಲ್ಲವಾ!
ಕಾಲೇಜಿನ ಹುಡುಗಿಯರು ನಿನ್ನ ನೋಡಿ ಕುಡಿ ಹುಬ್ಬು ಕುಣಿಸಿ ಆಹ್ವಾನ ಕೊಡುವಾಗ, ಕಣ್ಣಲ್ಲಿ ಕನಸುಗಳನ್ನು ತುಂಬಿಕೊಂಡು ಸಣ್ಣ ಇಶಾರೆಗಾಗಿ ಕಾಯುವಾಗ, ಪ್ರತಿ ತಿರುವಿನಲ್ಲೂ ಹೊಸ ಒಲವು ಸಿಗುವಂತಿರುವಾಗ…. ಎಲ್ಲವನ್ನೂ ಬಿಟ್ಟು ಅಹಂಕಾರಕ್ಕೇ ಮತ್ತೊಂದಿಷ್ಟು ಅಹಂಕಾರವನ್ನು ಕಡ ಕೊಡುವ ನನ್ನಂಥವಳನ್ನು ಯಾಕಾದರೂ ಪ್ರೀತಿಸಬೇಕಿತ್ತು ಹೇಳು? ಪ್ರೀತಿ ಎಂದರೆ ಇದೇ ಕಣೋ!! ಎತ್ತರೆತ್ತರದ ಬಾನು ಕೆಳಗಿರುವ ಭೂಮಿಯನ್ನು ಬಯಸಬೇಕು. ಅರಳಿ ನಸುನಗುವ ಗಂಭೀರ ಹೂವುಗಳು ಚಂಚಲ ವಾಗಿ ಅಲೆದಾಡುವ ದುಂಬಿಗಳನ್ನೇ ಪ್ರೀತಿಸಬೇಕು. ಎಂದೂ ಹಿಡಿದಿಟ್ಟುಕೊಳ್ಳಲಾರೆ ಎನ್ನುವುದು ಗೊತ್ತಿದ್ದರೂ ಅಲೆಗಳು ದಡ ವನ್ನು ಮತ್ತೆ ಮತ್ತೆ ಮುಟ್ಟಿ ಮನವೊಲಿಸಬೇಕು.
ದಿಗಂತದಂಚಲ್ಲಿ ಸಣ್ಣಗೆ ಸರಿದಾಡಿ ಮೇಲೇಳುವ ಚಂದ್ರ ಅದ್ಯಾರೋ ಕನಸುಗಣ್ಣಿನ ಹುಡುಗಿಯ ಕೆನ್ನೆ ರಂಗೇರಿಸಬೇಕು. ದೂರ
ಇರುವುದಕ್ಕೆ ಹಾತೊರೆದು ವಿಷಾದವನ್ನು ಸುಖಿಸುವುದೇ ನಿಜವಾದ ಪ್ರೀತಿಯ ಪರಿ. ಇದಕ್ಕೆ ನಾವು ಹೊರತಾಗಲು ಹೇಗೆ ಸಾಧ್ಯ?
ನಿನ್ನ ನೆನಪುಗಳು ಕಾಡುತ್ತಿವೆ. ನಾನು ಕಾಯುತ್ತಿರುವೆ.. ಬರುವೆಯಲ್ಲಾ?