Monday, 25th November 2024

ಗುಹಾಲಯದ ನೀರಿನಲ್ಲೇ ನಮ್ಮ ದಾರಿ

ಶಶಾಂಕ್ ಮುದೂರಿ

ಗುಹೆಯೊಂದರಲ್ಲಿರುವ ಎರಡು ಅಡಿ ನೀರಿನಲ್ಲಿ ನಡೆಯುವಾಗ, ಅಲ್ಲಿರುವ ಮೀನುಗಳು ಕಾಲಿಗೆ ಕಚಗುಳಿ ಇಟ್ಟರೆ
ಹೇಗಿರುತ್ತದೆ!

ನಮ್ಮ ನಾಡಿನ ಬೆಟ್ಟ ಗುಡ್ಡಗಳ ಸಂದಿಗೊಂದಿಗಳಲ್ಲಿ ಕೆಲವು ಅದ್ಭುತ ತಾಣಗಳಿವೆ. ಪ್ರಾಕೃತಿಕ ಸೌಂದರ್ಯ, ಪುರಾತನ ಸಂಸ್ಕೃತಿ, ಅಪರೂಪದ ಲ್ಯಾಂಡ್‌ಸ್ಕೇಪ್, ಎಲ್ಲೂ ಕಾಣ ಸಿಗದ ಪದ್ಧತಿಗಳು ಇವನ್ನೆಲ್ಲಾ ಲೆಕ್ಕ ಹಾಕಿದರೆ, ಅಂತಹ ತಾಣಗಳು ಕೇವಲ ಅದ್ಭುತವಲ್ಲ, ಅತ್ಯದ್ಭುತ!

ಹೆಚ್ಚು ಪ್ರಚಾರ ಸಿಗದೇ ಉಳಿದುಕೊಂಡಿದ್ದರಿಂದ, ಸಾವಿರಾರು ವರ್ಷಗಳ ಹಿಂದೆ ಯಾವ ರೀತಿ ಇದ್ದವೋ, ಇಂದಿಗೂ ಬಹು ಪಾಲು ಅದೇ ರೀತಿ ಇವೆ. ಅಂತಹ ಅಪರೂಪದ ತಾಣಗಳಿಗೆ ಪ್ರಚಾರ ದೊರಕದಿದ್ದರೇ ಒಳ್ಳೆಯದೇನೋ ಎಂದನಿ ಸುವುದೂ ಉಂಟು. ಅಂತಹ ಒಂದು ಜಾಗವೆಂದರೆ ಮೂಡುಗಲ್ಲಿನ ಗುಹೆ!

ಹಾಗೆ ನೋಡಹೋದರೆ ಮೂಡಗಲ್ಲು ಗುಡ್ಡ ತುದಿಯಲ್ಲಿರುವ ಗುಹೆಯನ್ನು ಎರಡೇ ಮಾತಿನಲ್ಲಿ ಹೇಳಿ ಮುಗಿಸಬಹುದು. ಹತ್ತೈವತ್ತು ಅಡಿ ಉದ್ದದ ಮುರಕಲ್ಲಿನ ಗುಹೆ, ಅದರಲ್ಲಿ ನೀರು, ಗುಹೆಯ ಒಂದು ಮೂಲೆಯಲ್ಲಿ ಈಶ್ವರನ ಲಿಂಗ. ಇಷ್ಟೇ ಹೇಳಿ ಮುಗಿಸಬಹುದು ಎನಿಸಿದರೂ, ಮೂಡಗಲ್ಲಿನ ಈ ಗುಹೆಯ ವಿಚಾರ ಬಹು ಆಯಾಮದ್ದು. ಇಲ್ಲಿ ಈಶ್ವರನ ಲಿಂಗಕ್ಕೆ ಪ್ರಾಮುಖ್ಯತೆ ಇದ್ದರೂ, ಅದಕ್ಕಿಂತ ಹೆಚ್ಚು ಪ್ರಮುಖ ಎನಿಸುವುದು ಸುತ್ತಲಿನ ಪ್ರಕೃತಿ, ಪರಿಸರ, ಕೆರೆ, ಹಳ್ಳ, ಕೊಳ್ಳ, ಕಾಡು, ಗುಡ್ಡ, ಏಕಾಂತ ಮತ್ತು ಇನ್ನೂ ಏನೇನೋ!

ಸಾಮಾನ್ಯವಾಗಿ, ಸುತ್ತಲಿನ ಹಳ್ಳಿಯವರು ಈ ಗುಡ್ಡದ ತುದಿಯ ಗುಹಾಲಯಕ್ಕೆ ಬರುವುದು ಎಳ್ಳಮಾವಾಸ್ಯೆಯ ದಿನ. ಡಿಸೆಂಬರ್‌ ನ ಚುಮು ಚುಮು ಚಳಿಯಲ್ಲಿ, ಈ ಗುಡ್ಡ ಹತ್ತಿ ಬಂದು, ಎದುರಿನ ಕೊಳದಲ್ಲಿ ಸ್ನಾನ ಮಾಡಿ, ಗುಹೆಯಲ್ಲಿರುವ ನೀರಿನಲ್ಲೇ ನಡೆದು, ಕೇಶವನಾಥ ಲಿಂಗದ ದರ್ಶನ ಪಡೆದು, ಪೂಜಿಸುತ್ತಾರೆ. ಮತ್ತೂ ವಿಶೇಷ ಎಂದರೆ, ಅಲ್ಲಿನ ನೀರಿನಲ್ಲಿರುವ ಇನ್ನೊಂದು ಉದ್ಭವ ಲಿಂಗವನ್ನು ಕೈಯಿಂದ ಮುಟ್ಟಿ ಪೂಜಿಸಿ, ಅದೇ ನೀರಿನಲ್ಲಿ ಹೆಜ್ಜೆ ಹಾಕಿ, ಪ್ರತಿಷ್ಠಾಪಿತ ಲಿಂಗದ ಸನಿಹ ಸಾರಿ, ಅಲ್ಲೂ ಪೂಜೆ ಮಾಡುತ್ತಾರೆ. ಇದು ಎಳ್ಳಮಾವಾಸ್ಯೆ ದಿನ, ಸ್ಥಳೀಯರ ಚಾರಣ.

ಮಳೆಗಾಲದಲ್ಲಿ ಅಪೂರ್ವ ಅನುಭೂತಿ
ಮೂಡುಗಲ್ಲಿನ ಕೇಶವನಾಥೇಶ್ವರ ಗುಹೆಯ ನೋಟದಲ್ಲಿ ಇನ್ನೆಲ್ಲೂ ದೊರಕದ ಅನುಭವ ಪಡೆಯಬೇಕಾದರೆ, ಆಗಸ್ಟ್‌- ಸೆಪ್ಟೆಂಬರ್‌ನಲ್ಲಿ ಬರಬೇಕು. ಮಳೆ ಬಿದ್ದ ನಂತರದ ಆ ದಿನಗಳಲ್ಲಿ ನಿಮಗೆ ದೊರೆಯುವುದು ಅಪೂರ್ವ ಅನುಭೂತಿ. ಬಹುಷಃ, ಕರ್ನಾಟಕದ ಬೇರೆಲ್ಲೂ ದೊರೆಯದ ಬಹು ವಿಶೇಷ ಅನುಭವಕ್ಕೆ ನಿಮ್ಮ ಮನಸ್ಸು, ದೇಹ ಒಳಗಾಗಬಹುದು!

ಕೆರಾಡಿ ಎಂಬ ಹಳ್ಳಿಯಿಂದ ಕಚ್ಚಾ ರಸ್ತೆಯಲ್ಲಿ ಸಾಗಿದಾಗ, ಹಸಿರಿನ ಸೇಂಚನ. ಮಳೆಗಾಲದ ಹಸಿರಿನ ಸಿರಿಯನ್ನೇ ಉಕ್ಕಿಸುವ ಆ ಪ್ರದೇಶವು, ಮನಸ್ಸನ್ನು ಸಹ ಹಸಿರಿನಿಂದ ತುಂಬಿಸಿಬಿಡುತ್ತದೆ. ಮೂಡುಗಲ್ಲು ಬೆಟ್ಟದ ತುದಿಯಲ್ಲಿವೆ ನಾಲ್ಕಾರು ಸ್ಥಳೀಯರ  ಮನೆಗಳು.

ಕಕ್ಕಾಬಿಕ್ಕಿಯಾಗುವ ಪ್ರವಾಸಿಗ
ಪ್ರವಾಸಿಯಾಗಿ ಕೇಶವನಾಥೇಶ್ವರ ದೇಗುಲದ ಹತ್ತಿರ ಹೋದ ಹೊಸಬರು ಮೊದಲಿಗೆ ಕಕ್ಕಾಬಿಕ್ಕಿಯಾದರೂ ಅಚ್ಚರಿಯಿಲ್ಲ! ಏಕೆಂದರೆ, ದೇಗುಲದ ಮುಖಮಂಟಪ ಕಟ್ಟಡವು ನೀರಿನಲ್ಲಿ, ಕೆರೆಯ ಮೇಲ್ಮೈಯಲ್ಲಿ ತೇಲುತ್ತಾ ನಿಂತಂತೆ ಅನಿಸುತ್ತದೆ. ಈ ಮುಖಮಂಟಪದ ಹತ್ತಿರ ಹೋಗುವುದಾದರೂ ಹೇಗೆ ಎಂದು ಪ್ರಶ್ನೆ ಮೂಡಿದರೆ, ಅದು ನಿಮ್ಮ ತಪ್ಪಲ್ಲ, ನಿಸರ್ಗದ ವಿಸ್ಮಯ!

ದೇಗುಲದ ಸುತ್ತಲೂ ಮೂರು ನಾಲ್ಕು ಅಡಿ ನೀರು ನಿಂತಿದ್ದು, ಅದರಲ್ಲಿ ಬೆಳೆದ ಜಲಸಸ್ಯ, ಪಾಚಿಗಳ ನಡುವೆ ಕಾಲಿಟ್ಟು, ನಿಧಾನವಾಗಿ ದೇಗುಲದತ್ತ ಸಾಗಬೇಕು! ಬಹುಷಃ ಇದನ್ನೇ ಕರ್ನಾಟಕದಲ್ಲೆಲ್ಲೂ ಕಾಣಸಿಗದ ಅನುಭವ ಎಂದೆನ್ನ ಬಹುದೆ! ದೇಗುಲದ ಮುಂದೆ ಒಂದು ಪುಟ್ಟ ಪಾಚಿಗಟ್ಟಿದ ಕೊಳವೂ ಇದ್ದು, ಅಲ್ಲಿನ ಮೀನುಗಳ ನೋಟವೇ ಅಪೂರ್ವ.

ಮೀನು, ನೀ ಎಲ್ಲಿಂದ ಬಂದೆ?
ಮುಖಮಂಟಪ ದಾಟಿ, ಗುಹೆಯತ್ತ ಸಾಗಿದರೆ ಇನ್ನಷ್ಟು ಅಚ್ಚರಿ. ಗುಹೆಯಲ್ಲಿ ನೀರು, ಅದರಲ್ಲಿ ಓಡಾಡುವ ಉದ್ದನೆಯ
ಮೀನುಗಳು! ಆ ಮೀನುಗಳು ಹುಟ್ಟಿದ್ದಾದರೂ ಎಲ್ಲಿ, ಅವು ಆ ಬೆಟ್ಟದ ತುದಿಯ ಗುಹೆಗೆ ಬಂದದ್ದಾದರೂ ಹೇಗೆ, ಪ್ರವಾಸಿಗರು
ನಡೆಯುತ್ತಿರುವಾಗ ಸ್ನೇಹಿತರಂತೆ ಅವರ ಸುತ್ತಲೇ ಅವು ಸುತ್ತುವುದಾದರೂ ಏಕೆ… ಹೀಗೆ ಹಲವು ಕೌತುಕದ, ವಿಸ್ಮಯದ
ಪ್ರಶ್ನೆಗಳು!

ಇಲ್ಲಿನ ಮೀನುಗಳಿಗೆ ಪ್ರವಾಸಿಗರು ತಾವೇ ಕೈಯಾರೆ ಅನ್ನ ತಿನ್ನಿಸಬಹುದು! ಪ್ರತಿದಿನ ಸ್ಥಳೀಯ ಅರ್ಚಕರು ಈ ಮೀನುಗಳಿಗೆ ಅನ್ನ ನೀಡುತ್ತಾರೆ. ಗುಹೆಯಲ್ಲಿ ಹತ್ತಿಪ್ಪತ್ತು ಅಡಿ ನಡೆದರೆ, ಈಶ್ವರ ಲಿಂಗ ಕಾಣಬಹುದು. ಜತೆಗೆ, ನೀರಿನಲ್ಲೂ ಒಂದು ಉದ್ಭವ ಲಿಂಗವಿದೆ. ಇವನ್ನೆಲ್ಲಾ ಯಾರು ಎಂದು ಪ್ರತಿಷ್ಠಾಪಿಸಿದರು ಎಂಬುದಕ್ಕೆ ಉತ್ತರವಿಲ್ಲ. ಪುರಾತನ ಮಾನವನು ಇಲ್ಲಿನ ಪ್ರಾಕೃತಿಕ ಸೌಂದರ್ಯವನ್ನು, ವಿಸ್ಮಯವನ್ನು ಕಂಡು, ಭಯ ಭಕ್ತಿಯಿಂದ ಕೈ ಮುಗಿದ ಜಾಗವೇ ಮುಂದೇ ಗುಹಾಲಯವಾಗಿರಬೇಕು.

ಗುಹಾಲಯದುದ್ದಕ್ಕೂ ಸದಾ ಕಾಲ ಎರಡರಿಂದ ನಾಲ್ಕು ಅಡಿಯಷ್ಟು ನೀರಿರುತ್ತದೆ. ಬೇಸಗೆಯಲ್ಲೂ ಗುಹಾಲಯದಲ್ಲಿ ನೀರು ಇರುವುದರಿಂದ, ನೀರಿನಲ್ಲಿ ನಾಲ್ಕು ಮಾರು ನಡೆದೇ ಗುಹೆಯನ್ನು ಪ್ರವೇಶಿಸಬೇಕು. ಮುರಕಲ್ಲಿನ ಆ ಗುಹೆಯ ಹಿಂಭಾಗದಲ್ಲಿ ಬೆಟ್ಟವಿದ್ದು, ಅಲ್ಲಿಂದ ಬಸಿದ ನೀರೇ ಈ ಗುಹೆಯಲ್ಲಿ ಸದಾ ಕಾಲ ತುಂಬಿರುತ್ತದೆ ಎಂದು, ಇಂದಿನ ವೈಜ್ಞಾನಿಕ  ಮನೋಭಾವ ದವರು ಹೇಳಿಯಾರು. ಆದರೆ, ಆ ಗುಹೆಯ ಸುತ್ತ ತುಂಬಿರುವ ಸ್ನಿಗ್ಧ ಪ್ರಶಾಂತ ವಾತಾವರಣ ರೂಪುಗೊಂಡದ್ದಾದರೂ ಹೇಗೆಂಬ ಪ್ರಶ್ನೆಗೆ ಉತ್ತರ ಸರಳವಲ್ಲ.

ದೇಗುಲದ ಮುಂಭಾಗದಲ್ಲಿ ನಿಂತಾಗ ಕಾಣುವುದು, ಕೊಡಚಾದ್ರಿ ಶಿಖರದ ನೋಟ, ಸಹ್ಯಾದ್ರಿಯ ಏರಿಳಿತದ ಬೆಟ್ಟ ಸಾಲು,
ಎಲ್ಲೆಲ್ಲೂ ಹಸಿರು, ಹಸಿರಿನ ಉಸಿರು. ಮೂಡುಗಲ್ಲಿನ ಕೇಶವನಾಥೇಶ್ವರ ಗುಹೆಗೆ ಹೆಚ್ಚಿನ ಪ್ರಚಾರ ಇನ್ನೂ ದೊರೆತಿಲ್ಲ. ಇಂದಿಗೂ ಇದು ತುಸು ದೂರದ ದಾರಿಯಾದ್ದರಿಂದ, ಆಧುನಿಕ ಪ್ರಚಾರ ಮಾಧ್ಯಮಗಳಿಂದ ಸಾಕಷ್ಟು ದೂರವೇ ಇದೆ. ಆದರೆ, ಸದಾ ನೀರಿನಿಂದ ಆವೃತವಾಗಿರುವ ಈ ಅಪರೂಪದ ಗುಹಾಲಯ ಮತ್ತು ಇಲ್ಲಿನ ಸುಂದರ ಪರಿಸರವು ಹೆಚ್ಚು ಹೆಚ್ಚು ಜನರಿಗೆ ತಲುಪುವ ದಿನಗಳು ದೂರವಿಲ್ಲ.

ಇಂತಹ ಸುಂದರ ಸ್ಥಳದ ಮಾಹಿತಿ ಎಲ್ಲರಿಗೂ ತಲುಪಲಿ, ಪರವಾಗಿಲ್ಲ, ಆದರೆ, ಆ ರೀತಿ ದೊರೆತ ಪ್ರಚಾರವು ಈ ಸ್ಥಳದ ಸೌಂದರ್ಯಕ್ಕೆ ಹಾನಿ ಮಾಡದೇ ಇರಲಿ ಎಂಬುದೇ ವಿನಮ್ರ ಆಶಯ.

ಉಡುಪಿ ಜಿಲ್ಲೆಯ ಬೈಂದೂರು ತಾಲೂಕಿನ ಕೆರಾಡಿಯಿಂದ ಆರು ಕಿ.ಮೀ. ದೂರದಲ್ಲಿದೆ. ಕೊನೆಯ ಮೂರು ಕಿಮೀ ಕಚ್ಚಾ ಕಾಡು ರಸ್ತೆ. 

(ಚಿತ್ರಕೃಪೆ: ಅಂತರ್ಜಾಲ)