Wednesday, 27th November 2024

ಬದುಕಿನಲ್ಲಿ ಯಾವುದು ಮಹತ್ತರ ?

ಶ್ರೀನಿವಾಸಮೂರ್ತಿ ಎನ್ ಸುಂಡ್ರಹಳ್ಳಿ

ಆತ ಆತುರದಲ್ಲಿ ಮೇಜಿನ ಮೇಲಿದ್ದ ನೋಟ್ ಬುಕ್ ಒಂದನ್ನು ತೆರೆದು ‘ಮುಂದಿನ ಕ್ಷಣ ನಿಮ್ಮದಲ್ಲ. ಈಗ ನಿಮಗೆ ಸಿಕ್ಕಿರುವ ಸಮಯವೇ ನಿಮ್ಮದು. ಅದನ್ನು ಅದ್ಭುತವಾಗಿ ಕಳೆಯಿರಿ. ಪ್ರತಿ ಕ್ಷಣವನ್ನೂ ಜೀವಿಸಿ. ನಿಮ್ಮ ಪರಿವಾರ ಸೇರಿದಂತೆ ಸುತ್ತಮುತ್ತಲಿ ನವರನ್ನು ಸಂತೋಷವಾಗಿಟ್ಟು ನೀವೂ ಸಂತೋಷದಿಂದ ಜೀವಿಸಿ. ಸಂಪತ್ತೊಂದೇ ಸಂತೋಷವಲ್ಲ. ಈ ಬದುಕಿನಲ್ಲಿ ಪ್ರೀತಿಯೊಂದೇ ಜೀವಂತ ಮತ್ತು ಮಹತ್ತರವಾದುದು’ ಎಂದು ಬರೆದ.

ಪ್ರತಿನಿತ್ಯ ಕೆಲಸ ಕೆಲಸ ಎಂದು ಹೆಂಡತಿ ಮಕ್ಕಳಿಗೆ ಸಮಯವನ್ನೇ ಕೊಡದೇ ದುಡಿದ ವ್ಯಕ್ತಿ ಸಾಕಷ್ಟು ಬ್ಯಾಂಕ್ ಬ್ಯಾಲೆನ್ಸ್ ಇಟ್ಟ. ಪ್ರತಿಷ್ಠಿತ ಬಡಾವಣೆಗಳಲ್ಲಿ ಮನೆಗಳನ್ನು ಕಟ್ಟಿಸಿದ. ಮೂರು ಪೀಳಿಗೆಯಾದರೂ ಕೂತು ಉಣ್ಣುವಷ್ಟು ಸಂಪತ್ತನ್ನು ಕೂಡ
ಕ್ರೂಢೀಕರಿಸಿದ. ವಯಸ್ಸೂ ಕೂಡ ಅರವತ್ತು ದಾಟುತ್ತಾ ಬಂತು. ಕೊನೆಗೊಂದು ದಿನ ಯೋಚಿಸಿದ; ಸಾಕು ದುಡಿದಿದ್ದು, ಕೂಡಿಟ್ಟಿದ್ದು. ಇನ್ನು ದುಡಿಯಬಾರದು.

ಹೆಂಡತಿ ಮಕ್ಕಳಿಗೆ ಸಮಯ ಕೊಡಬೇಕು. ಅವರೊಂದಿಗೆ ಖುಶಿಯಾಗಿ ಕಾಲ ಕಳೆಯಬೇಕು ಎಂದುಕೊಂಡು ಹಾಸಿಗೆಯಲ್ಲಿ ಮಲಗಿದ. ಮರುಗಳಿಗೆಗೆ ಯಾರೋ ಬಂದು ಬಾಗಿಲು ತಟ್ಟಿದಂತಾಯಿತು. ಎದ್ದು ಬಾಗಿಲು ತೆರೆಯುತ್ತಿದ್ದಂತೆ ಒಳಕ್ಕೆ ನುಗ್ಗಿಬಂದ ದಢೂತಿ ವ್ಯಕ್ತಿಯನ್ನು, ‘ಯಾರು ನೀನು?’ ಎಂದು ಪ್ರಶ್ನಿಸಿದ. ‘ನಾನು ಯಮರಾಜ. ನಿನ್ನ ಆಯಸ್ಸು ಮುಗಿದಿದೆ.

ನಿನ್ನನ್ನು ಕರೆದೊಯ್ಯಲು ಬಂದಿದ್ದೇನೆ.’ ‘ಅರೇ! ನಾನು ಈಗಷ್ಟೇ ದುಡಿಯುವುದನ್ನು ನಿಲ್ಲಿಸಿದ್ದೇನೆ. ಇನ್ನು ಮುಂದೆ ಕುಟುಂಬದ ಜೊತೆ ಹಾಯಾಗಿ ಕಾಲ ಕಳೆಯಬೇಕು, ಅವರನ್ನು ಸಂತೋಷವಾಗಿಡಬೇಕು ಎಂದು ತೀರ್ಮಾನಿಸಿದ್ದೇನೆ. ಇಲ್ಲ ನಾನು ಈಗಲೇ
ಬರುವುದಿಲ್ಲ.’ ‘ಹಾಗೆಲ್ಲಾ ಬರುವುದಿಲ್ಲ ಎಂದು ಹೇಳಿದರೆ ಆಗುವುದಿಲ್ಲ. ಬರಲೇಬೇಕು’ ಎನ್ನುತ್ತಿದ್ದಂತೆ, ಹಠಕ್ಕೆ ಬಿದ್ದ ಆ ವ್ಯಕ್ತಿ ‘ನನ್ನ ದುಡಿಮೆಯ ಸಂಪತ್ತಿನಲ್ಲಿ ಅರ್ಧವನ್ನು ಬೇಕಾದರೆ ತೆಗೆದುಕೋ. ನನ್ನನ್ನು ಇನ್ನಷ್ಟು ವರ್ಷಗಳ ಕಾಲ ಇಲ್ಲಿಯೇ ಇರಲು ಬಿಟ್ಟು ಬಿಡು. ನಾನು ನನ್ನ ಕುಟುಂಬದವರಿಗೆಂದೆ ಆಸ್ತಿ ಮಾಡಿಟ್ಟಿದ್ದೇನೆಯೇ ಹೊರತು ಅವರಿಗೆ ಸಂತೋಷವನ್ನು ಕೊಟ್ಟಿಲ್ಲ. ಅವರಿಗಾಗಿ ನನ್ನ ಸಮಯವನ್ನೂ ಸಹ ಕೊಟ್ಟಿಲ್ಲ’ ಎಂದು ಗೋಗರೆದ.

‘ಅರ್ಧ ಅಲ್ಲ, ಪೂರ್ತಿ ಕೊಡುತ್ತೇನೆಂದರೂ ಬಿಡುವುದಿಲ್ಲ. ನೀನು ಬರಲೇಬೇಕು, ನಾನು ಕರೆದೊಯ್ಯಲೇಬೇಕು’ ಎಂದ ಯಮರಾಜ. ಹತಾಶನಾದ ಆ ವ್ಯಕ್ತಿ ಕೊನೆಗೆ ‘ಮೂರು ದಿನಗಳಾದರೂ ನನಗೆ ಕೊಡು. ನನ್ನ ಪರಿವಾರದವರನ್ನು ನಾನು ಖುಶಿಯಾಗಿಡಬೇಕಿದೆ’ ಎಂದು ಮತೊಮ್ಮೆೆ ಬೇಡಿಕೊಂಡ. ‘ಇಲ್ಲ ಸಾಧ್ಯವೇ ಇಲ್ಲ’ ಎನ್ನುವಷ್ಟರಲ್ಲಿ, ‘ಹೋಗಲಿ ಒಂದು ನಿಮಿಷವಾದರೂ ಕೊಡು’ ಎಂದವನೇ ಯಮನ ಉತ್ತರಕ್ಕೂ ಕಾಯದೇ ತುಂಬಾ ಆತುರದಲ್ಲಿ ಮೇಜಿನ ಮೇಲಿದ್ದ ನೋಟ್ ಬುಕ್ ಒಂದನ್ನು ತೆರೆದು ‘ಮುಂದಿನ ಕ್ಷಣ ನಿಮ್ಮದಲ್ಲ.

ಈಗ ನಿಮಗೆ ಸಿಕ್ಕಿರುವ ಸಮಯವೇ ನಿಮ್ಮದು. ಅದನ್ನು ಅದ್ಭುತವಾಗಿ ಕಳೆಯಿರಿ. ಪ್ರತಿ ಕ್ಷಣವನ್ನೂ ಜೀವಿಸಿ. ನಿಮ್ಮ ಪರಿವಾರ ಸೇರಿದಂತೆ ಸುತ್ತ ಮುತ್ತಲಿನವರನ್ನು ಸಂತೋಷವಾಗಿಟ್ಟು ನೀವೂ ಸಂತೋಷದಿಂದ ಜೀವಿಸಿ. ಸಂಪತ್ತೊಂದೇ ಸಂತೋಷವಲ್ಲ. ಈ ಬದುಕಿನಲ್ಲಿ ಪ್ರೀತಿಯೊಂದೇ ಜೀವಂತ ಮತ್ತು ಮಹತ್ತರವಾದುದು’ ಎಂದು ಒಂದೇ ಗುಕ್ಕಿಗೆ ಬರೆದವನೇ ಕಾಲನ ಕರೆಗೆ ಶರಣಾದ.

ಪ್ರಪಂಚದ ಅತಿ ಪ್ರಸಿದ್ದ ಫ್ಯಾಶನ್ ಡಿಸೈನರ್, ಬರಹಗಾರ್ತಿ ಕಿಜಿರ್ಡಾ ರೋಡ್ರಿಗಜ್, ತಾನು ಸಾಯುವ ಮುನ್ನ ‘ಬದುಕಿನಲ್ಲಿ ಬಹಳ ಮಹತ್ತರವಾದುದು ಪ್ರೀತಿ ಮಾತ್ರ’ ಎಂದ ವಾಕ್ಯವನ್ನು ಕೇಳುವಾಗ ಎಂದೋ ಓದಿದ್ದ ಈ ಮೇಲಿನ ಕತೆ ನೆನಪಾಯಿತು.
ಕರೋನಾ ಕಾಡುತ್ತಾ ಪಾಠ ಕಲಿಸುತ್ತಿರುವ ಈ ಸಮಯದಲ್ಲಿ ಮನುಷ್ಯ ರೋಡ್ರಿಗಜ್‌ಳ ಮಾತುಗಳಿಂದಲೂ ಕೂಡ ಪಾಠ ಕಲಿಯುವುದಿದೆ. ಯಾವುದೂ ಶಾಶ್ವತವಲ್ಲ, ದಿವ್ಯ ಗಳಿಗೆಗಳ ಹೊರತಾಗಿ.