ಶಶಾಂಕ್ ಮುದೂರಿ
ಅಮೆರಿಕದ ‘ಟೈಮ್’ ಪತ್ರಿಕೆ ಹೊಸದಾಗಿ ಆರಂಭಿಸಿರುವ ‘ಕಿಡ್ ಆಫ್ ದ ಇಯರ್’ ಗೌರವಕ್ಕೆ ಭಾಜನರಾಗಿರುವ ಗೀತಾಂಜಲಿ
ರಾವ್ ಅವರ ಕ್ಷೇತ್ರ ಎಂದರೆ ವಿಜ್ಞಾನ ಮತ್ತು ತಂತ್ರಜ್ಞಾನ.
ಮಂಗಳೂರು ಮೂಲದ, ಈಗ ಅಮೆರಿಕದಲ್ಲಿ ವಾಸವಾಗಿರುವ ರಾಮ ರಾವ್ ಮತ್ತು ಭಾರತಿಯವರ ಮಗಳಾದ ಗೀತಾಂಜಲಿ ರಾವ್ ಅವರಿಗೆ ಬಾಲ್ಯದಿಂದಲೇ ವಿಜ್ಞಾನಿಯಾಗುವ ಕನಸು. ಗೀತಾಂಜಲಿ ರಾವ್ ಹತ್ತು ವರ್ಷ ವಯಸ್ಸಾಗಿದ್ದಾಗ, ತನ್ನ ಪೋಷಕರೊಂದಿಗೆ ಒಂದು ಅಪರೂಪದ ಬೇಡಿಕೆ ಇಟ್ಟರು.
ಕಾರ್ಬನ್ ನ್ಯಾನೋ ಟ್ಯೂಬ್ ಸೆನ್ಸರ್ ತಂತ್ರಜ್ಞಾನ ಬಳಸಿ, ಡೆನ್ವರ್ ನೀರು ಗುಣಮಟ್ಟ ರಿಸರ್ಚ್ ಲ್ಯಾಬ್‌ನಲ್ಲಿ ತಾನು ಪುಟ್ಟ ಸಂಶೋಧನೆ ನಡೆಸಲು ಸಹಕರಿಸಬೇಕು ಎಂಬುದೇ ಆ ಬೇಡಿಕೆ. ಹತ್ತು ವರ್ಷದ ಈ ಪುಟಾಣಿಯ ಆಸೆಯನ್ನು ಕಂಡು ಆ ಪೋಷಕರು ಅಚ್ಚರಿಗೊಂಡರೂ, ತಕ್ಷಣ ಆಕೆಗೆ ಸಂಶೋಧನೆ ನಡೆಸಲು ಅವಕಾಶಮಾಡಿಕೊಟ್ಟರು.
ಸುರಕ್ಷಿತ ನೀರು ಗುರುತಿಸುವ ಆ್ಯಪ್
ಗೀತಾಂಜಲಿ ರಾವ್ ಅವರಿಗೆ ಹೆಚ್ಚು ಪ್ರಸಿದ್ಧಿ ತಂದುಕೊಟ್ಟ, ಅದೇ ಸಮಯದಲ್ಲಿ ಸಮುದಾಯದ ಜನರಿಗೆ ಅನುಕೂಲವನ್ನೂ ಮಾಡಿಕೊಟ್ಟ ಸಂಶೋಧನೆ ಎಂದರೆ, ನೀರಿನ ಗುಣಮಟ್ಟವನ್ನು ಗುರುತಿಸುವ ಆ್ಯಪ್ ಅಭಿವೃದ್ಧಿ ಮಾಡಿದ್ದು. ಮಿಚಿಗನ್‌ನ ಫ್ಲಿಂಟ್ ಪ್ರದೇಶದ ಜನರು ಕುಡಿಯುವ ನೀರಿನಲ್ಲಿ ಸೀಸದ ಪ್ರಮಾಣ ಇತ್ತು.
ಅದನ್ನು ನಿವಾರಿಸಿಕೊಂಡು ಅವರು ಆ ನೀರನ್ನು ಬಳಸುತ್ತಿದ್ದರು.
ಆದರೆ, ಶುದ್ಧೀಕರಿಸಿದ ನೀರಿನಲ್ಲಿ ಸೀಸದ ಪ್ರಮಾಣ ಉಳಿದುಕೊಂಡಿದೆಯೆ, ಉಳಿದಿದ್ದರೆ, ಎಷ್ಟು ಮಟ್ಟದಲ್ಲಿ ಉಳಿದುಕೊಂಡಿದೆ, ಅದರಿಂದ ಅಪಾಯ ಉಂಟೆ – ಈ ರೀತಿಯ ಗೊಂದಲಗಳು ನಿವಾಸಿಗಳನ್ನು ಕಾಡುತ್ತಿದ್ದವು. ಗೀತಾಂಜಲಿ ರಾವ್ ಅವರು ಮೊಬೈಲ್ ಆ್ಯಪ್ ಮೂಲಕ ಅದಕ್ಕೊಂದು ಪರಿಹಾರ ಒದಗಿಸಿದ್ದು, ಬಹಳಷ್ಟು ಜನರಿಗೆ ಅನುಕೂಲ ಆಯಿತು.
ಗೀತಾಂಜಲಿ ರಾವ್ ಅವರು ತಯಾರಿಸಿದ ಟೆಥಿಸ್ ಎಂಬ ಉಪಕರಣವು ನೀರಿನಲ್ಲಿರುವ ಸೀಸದ ಮಟ್ಟವನ್ನು ಪರಿಶೀಲಿಸಿ,
‘ಸುರಕ್ಷಿತ’, ‘ಸ್ವಲ್ಪ ಮಾಲಿನ್ಯ’ ‘ಅಪಾಯಕಾರಿ’ ಎಂದು ನೀರನ್ನು ವರ್ಗೀಕರಿಸಬಲ್ಲದು. ಜತೆಗೆ, ಪರೀಕ್ಷಿಸಿದ ನೀರಿನ ಗುಣಮಟ್ಟದ ವಿವರವು ಬಳಕೆದಾರರ ಮೊಬೈಲ್ ಗೆ ಸಂದೇಶದ ಮೂಲಕ ರವಾನೆಯಾಗುವಂತೆ ಗೀತಾಂಜಲಿ ರಾವ್ ಅಭಿವೃದ್ಧಿಪಡಿಸಿದ್ದರು. ಈ ಸಂಶೋಧನೆಯಿಂದಾಗಿ, ಗೀತಾಂಜಲಿಯವರು 2017ರಲ್ಲಿ ‘ಡಿಸ್ಕವರಿಗೆ 3 ಎಂ ಯಂಗ್ ಸೈಂಟಿಸ್‌ಟ್ ಚಾಲೆಂಜ್’ ಗೌರವಕ್ಕೆ ಭಾಜನರಾದರು.
ಸಮುದಾಯದ ಹಿತಚಿಂತನೆ
ಯುವಜನರು ಬಳಸುವ ಭಾಷೆಯನ್ನು ಸುಧಾರಿಸುವತ್ತ ಗಮನ ಹರಿಸಿದ ಗೀತಾಂಜಲಿಯವರು, ಕೈಂಡ್ಲಿ ಎಂಬ ಆ್ಯಪ್ ಅಭಿವೃದ್ಧಿ ಪಡಿಸಿದ್ದಾರೆ. ವಿಶೇಷವೆಂದರೆ, ಇದು ಕೃತಕ ಬುದ್ಧಿಮತ್ತೆಯನ್ನು ಬಳಸಿ, ಭಾಷೆಯ ಉಪಯೋಗದಲ್ಲಿನ ಕೊರತೆಯನ್ನು ಕಂಡುಹಿಡಿಯಬಲ್ಲದು!
ಮುಖ್ಯವಾಗಿ, ಇತರರನ್ನು ಛೇಡಿಸುವ, ವ್ಯಂಗ್ಯ ಮಾಡುವ, ಬೇರೆಯವರಿಗೆ ಇರುಸು ಮುರುಸು ಮಾಡುವ ಭಾಷೆಯನ್ನು, ಶಬ್ದ ಗಳನ್ನು ಯುವಜನರು ತಮಗೆ ಅರಿವಿಲ್ಲದೇ ಬಳಸುವುದುಂಟು. ಬಳಸಿದ ಭಾಷೆಯು ಬೇರೆಯವರಿಗೆ ಮುಜುಗರ ಮಾಡುತ್ತದೋ
ಇಲ್ಲವೋ ಎಂದು ಗೊತ್ತಿಲ್ಲದೇ ಕೆಲವರು ಮಾತನಾಡುವುದುಂಟು. ಅಂತಹವರಿಗೆ ಅನುಕೂಲವಾಗಲೆಂದು, ಅವರು ಬಳಸುವ ಭಾಷೆಯ ಗುಣಮಟ್ಟವನ್ನು ಗುರುತಿಸುವ ಈ ಆ್ಯಪ್‌ನ ಮುಖ್ಯ ಉದ್ದೇಶ ಮಾರ್ಗದರ್ಶನ.
ವಾಕ್ಯಗಳನ್ನು ಈ ಆ್ಯಪ್‌ಗೆ ಫೀಡ್ ಮಾಡಿದರೆ, ಅದು ವ್ಯಂಗ್ಯದ ಅಂಶವನ್ನು ಗುರುತಿಸಿ, ಆ ಪದಗಳಿಗೆ ಪರ್ಯಾಯ ಪದಗಳನ್ನು ಸೂಚಿಸುತ್ತದೆ. ಸಮು ದಾಯದ ಒಟ್ಟೂ ಹಿತದೃಷ್ಟಿಯನ್ನು ಗಮನದಲ್ಲಿಟ್ಟುಕೊಂಡು ಅಭಿವೃದ್ಧಿಪಡಿಸಲಾದ ಈ ಆ್ಯಪ್‌ನ
ಸದುದ್ದೇಶವನ್ನು ಬಹುವಾಗಿ ಕೊಂಡಾಡಲಾಗಿದೆ. ‘ಕಿಡ್ ಆಫ್ ದ ಇಯರ್’ ಗೌರವಕ್ಕೆ ಭಾಜನರಾದ ಗೀತಾಂಜಲಿ ರಾವ್, ತನ್ನ ವಯಸ್ಸಿಗೂ ಮೀರಿದ ಪ್ರೌಢಿಮೆ ತೋರಿರುವುದನ್ನು ಸಹ ಅಮೆರಿಕದ ಸಮಾಜ ಗುರುತಿಸಿದೆ.
ಔಷಧವಾಗಿ ಬಳಸುವ ಅಪೀಮು ಮೊದಲಾದ ಪದಾರ್ಥಗಳು ಕ್ರಮೇಣ ಕೆಲವು ರೋಗಿಗಳಿಗೆ ವ್ಯಸನದ ಸ್ವರೂಪ ಪಡೆಯುವು ದನ್ನು ಗಮನಿಸಿದ ಗೀತಾಂಜಲಿ ರಾವ್ ಅವರು, ಅದನ್ನು ತಡೆಯಲು ಅನುವು ಮಾಡಿಕೊಡುವ ಕುರಿತು ಸಂಶೋಧನೆ ನಡೆಸು ತ್ತಿದ್ದಾರೆ. ನೋವು ನಿವಾರಕವಾಗಿಯೂ ವೈದ್ಯರು ನಿಗದಿಪಡಿಸುವ ಕೆಲವು ಪದಾರ್ಥಗಳು, ರೋಗಿಗೆ ಗೊತ್ತಿಲ್ಲದೆಯೇ ಡ್ರಗ್
ವ್ಯಸನವಾಗಿ ಮಾರ್ಪಡುವುದನ್ನು ಮುಂಚಿತವಾಗಿಯೇ ಗುರುತಿಸಲು ಈ ಸಂಶೋಧನೆ ಸಹಕಾರಿ.
ಕೋಟ್
ವಿಜ್ಞಾನಿಗಳು ಎಲ್ಲೇ ಇರಲಿ, ಅವರು ಜನರಿಗೆ ಸಹಾಯ ಮಾಡಲು ಧಾವಿಸುತ್ತಾರೆ. ನನಗೆವಿಜ್ಞಾನ ಎಂದರೆ ಇಷ್ಟ. ಈ ಜಗತ್ತಿನ ಸಮಸ್ಯೆಗಳನ್ನು ಪರಿಹರಿಸಿ, ಜೀವಗಳನ್ನು ಉಳಿಸುವ ಸಂಶೋಧನೆಗಳನ್ನುಕೈಗೊಳ್ಳುವ ವಿಜ್ಞಾನಿಯಾಗುವುದು ನನ್ನ ಬಯಕೆ.
– ಗೀತಾಂಜಲಿ ರಾವ್