Vishwavani Editorial: ಬೆಂಕಿಗೆ ಬೀಳುವ ಪತಂಗಗಳಿವು !
ಹತರಾದವರ ಪೈಕಿ ಒಬ್ಬನಾದ ಆಮೀರ್ ನಜೀರ್ ವಾನಿ ಪಾಕಿಸ್ತಾನದಿಂದಲೇ ತರಬೇತಿ ಪಡೆದಿದ್ದ ಎಂಬುದು. ಹತನಾಗುವುದಕ್ಕೂ ಸ್ವಲ್ಪ ಮುಂಚೆ ಈತ ತಾಯಿಗೆ ವಿಡಿಯೋ ಕರೆ ಮಾಡಿ ಮಾತನಾಡಿ ದಾಗ, ಉಗ್ರವಾದ ಬಿಟ್ಟು ಶರಣಾ ಗುವಂತೆ ಆಕೆ ಬುದ್ಧಿವಾದ ಹೇಳಿದ್ದು, ಅದಕ್ಕೆ ಕಿವಿಗೊಡದ ಆತ ‘ಒಂದೊಮ್ಮೆ ಸೇನೆ ಬಂದರೆ ಅವರನ್ನು ಕೊಲ್ಲುವೆ’ ಎಂಬ ದುರಹಂಕಾರದ ಮಾತಾಡಿದ್ದು ಬಯಲಾಗಿದೆ.


ಭಾರತದ ಜಂಟಿ ಭದ್ರತಾ ಪಡೆಯು ಜಮ್ಮು-ಕಾಶ್ಮೀರದ ಪುಲ್ವಾಮಾ ಜಿಲ್ಲೆಯಲ್ಲಿ ತೀವ್ರಸ್ವರೂಪದ ಕಾರ್ಯಾಚರಣೆ ನಡೆಸಿ, ಜೈಷ್ -ಎ-ಮೊಹಮ್ಮದ್ ಉಗ್ರಸಂಘಟನೆಯ ಮೂವರನ್ನು ಹೊಡೆದು ರುಳಿಸಿದ ಸಂಗತಿ ಈಗಾಗಲೇ ನಿಮಗೆ ಗೊತ್ತಾಗಿದೆ. ಮನೆಯೊಂದರಲ್ಲಿ ಉಗ್ರರು ಅಡಗಿ ಕೂತಿರುವ ಖಚಿತ ಮಾಹಿತಿ ಲಭ್ಯವಾಗುತ್ತಿದ್ದಂತೆ ಕ್ಷಿಪ್ರವಾಗಿ ಸ್ಥಳಕ್ಕೆ ಧಾವಿಸಿದ ಭದ್ರತಾ ಪಡೆಯವರು ಕಾರ್ಯಾಚರಣೆಗೆ ಇಳಿದಾಗ, ಉಗ್ರರು ಮನೆಯೊಳಗಿದ್ದುಕೊಂಡೇ ಅವರ ಮೇಲೆ ಗುಂಡಿನ ಮಳೆಗೆ ಶುರುವಿಟ್ಟುಕೊಂಡರು ಎನ್ನಲಾಗಿದೆ.
ಆಗ ಆ ಮನೆಯನ್ನು ನಾಲ್ಕೂ ಕಡೆಗಳಿಂದ ಸುತ್ತುವರಿದು ಕಾರ್ಯಾಚರಣೆಯನ್ನು ತೀವ್ರಗೊಳಿಸಿ ಉಗ್ರರನ್ನು ಹೊಡೆದುರುಳಿಸಲಾಯಿತು ಎಂಬುದು ಲಭ್ಯ ಮಾಹಿತಿ. ಇಲ್ಲಿ ಗಮನಿಸಬೇಕಿರುವ ಸಂಗತಿಯೆಂದರೆ, ಹೀಗೆ ಹತರಾದವರ ಪೈಕಿ ಒಬ್ಬನಾದ ಆಮೀರ್ ನಜೀರ್ ವಾನಿ ಪಾಕಿಸ್ತಾನ ದಿಂದಲೇ ತರಬೇತಿ ಪಡೆದಿದ್ದ ಎಂಬುದು. ಹತನಾಗುವುದಕ್ಕೂ ಸ್ವಲ್ಪ ಮುಂಚೆ ಈತ ತಾಯಿಗೆ ವಿಡಿಯೋ ಕರೆ ಮಾಡಿ ಮಾತನಾಡಿದಾಗ, ಉಗ್ರವಾದ ಬಿಟ್ಟು ಶರಣಾ ಗುವಂತೆ ಆಕೆ ಬುದ್ಧಿವಾದ ಹೇಳಿದ್ದು, ಅದಕ್ಕೆ ಕಿವಿಗೊಡದ ಆತ ‘ಒಂದೊಮ್ಮೆ ಸೇನೆ ಬಂದರೆ ಅವರನ್ನು ಕೊಲ್ಲುವೆ’ ಎಂಬ ದುರಹಂಕಾರದ ಮಾತಾಡಿದ್ದು ಬಯಲಾಗಿದೆ.
ತಾಯಿ ಕಣ್ಣೀರುಗರೆದು ಗೋಗರೆದರೂ ಸೊಪ್ಪುಹಾಕದ ಆತ, ಅದಾದ ಕೆಲವೇ ಗಂಟೆಗಳಲ್ಲಿ ಭದ್ರತಾ ಪಡೆಯವರ ಗುಂಡಿಗೆ ಬಲಿಯಾದನಂತೆ. ‘ತಾಯಿ ಎಂಬುವವಳು ಸತ್ಯದ ಸಾಕ್ಷಾತ್ಕಾರ ವಿದ್ದಂತೆ’ ಎನ್ನುತ್ತಾರೆ ಬಲ್ಲವರು; ಆಕೆಯ ಬುದ್ಧಿಮಾತನ್ನೂ ಮಗ ಕೇಳಲಿಲ್ಲ ಎಂದರೆ ಆತನ ತಲೆಯಲ್ಲಿ ಅದ್ಯಾವ ಮಟ್ಟಿಗೆ ಮತಾಂಧತೆ ತುಂಬಿಕೊಂಡಿತ್ತು ಎಂಬುದನ್ನು ಕಲ್ಪಿಸಿಕೊಳ್ಳಿ.
ಇದು ಆತನೊಬ್ಬನ ಸಮಸ್ಯೆಯಲ್ಲ, ಪಾಕಿಸ್ತಾನದ ಚಿತಾವಣೆಗೆ ಸಿಲುಕಿ ಅದರ ವಶವಾಗುವ ಬಹುತೇಕರಿಗೆ ಒದಗುವ ದುಸ್ಥಿತಿ. ಇದನ್ನು ಈಗಲೂ ಅರಿಯದೆ, ಬೇಡ ಬೇಡ ಎಂದರೂ ಉಗ್ರವಾದ ಎಂಬ ಬೆಂಕಿಯ ಸಂಗ ಮಾಡುವ ಪತಂಗಗಳಿಗೆ ಏನನ್ನುವುದು?!