Vishwavani Editorial: ಇದು ಅವಧಿಪೂರ್ವ ವಿದಾಯವೇ?
ತಮ್ಮ ಆಕರ್ಷಕ ಬ್ಯಾಟಿಂಗ್, ಲವಲವಿಕೆ ಮತ್ತು ಹುಮ್ಮಸ್ಸಿನ ಕಾರಣದಿಂದಾಗಿಯೇ ಕ್ರೀಡಾಭಿಮಾನಿ ಗಳನ್ನು ಸೆಳೆಯುವ ತಾಕತ್ತು, ವರ್ಚಸ್ಸನ್ನು ಹೊಂದಿದ್ದಂಥ ಮಹೋನ್ನತ ಆಟಗಾರ ಅವರು. ಕ್ರೀಡಾ ತಜ್ಞರು ಮತ್ತು ವಿಶ್ಲೇಷಣಕಾರರು ಹೇಳುವಂತೆ, ವಿರಾಟ್ ಕೊಹ್ಲಿಯವರು ಕನಿಷ್ಠಪಕ್ಷ ಇನ್ನೂ ನಾಲ್ಕು ವರ್ಷಗಳವರೆಗೆ ಈ ಪಯಣವನ್ನು ಮುಂದುವರಿಸ ಬಹುದಿತ್ತು. ಆದರೆ, ಕೊಹ್ಲಿ ಹೀಗೆ ನಿರ್ಧರಿಸಿದ್ದಾರೆ ಎಂದರೆ ಪ್ರಾಯಶಃ ಅದರ ಹಿಂದೆ ಗಟ್ಟಿಯಾದ ಕಾರಣ ಇದ್ದಿರಲೇಬೇಕು


ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಹಾಗೂ ಸ್ಪೋಟಕ ಬ್ಯಾಟ್ಮನ್ ವಿರಾಟ್ ಕೊಹ್ಲಿ ಅವರು ಟೆಸ್ಟ್ ಕ್ರಿಕೆಟ್‌ಗೆ ವಿದಾಯ ಹೇಳಿದ್ದಾರೆ. ಇದು ಅವರ ಅಭಿಮಾನಿಗಳ ಪಾಲಿಗೆ ಕೊಂಚ ನೋವಿನ ಸಂಗತಿ ಎಂದೇ ಹೇಳಬೇಕು. ಕಾರಣ, ತಮ್ಮ ಆಕರ್ಷಕ ಬ್ಯಾಟಿಂಗ್, ಲವಲವಿಕೆ ಮತ್ತು ಹುಮ್ಮಸ್ಸಿನ ಕಾರಣದಿಂದಾಗಿಯೇ ಕ್ರೀಡಾಭಿಮಾನಿಗಳನ್ನು ಸೆಳೆಯುವ ತಾಕತ್ತು, ವರ್ಚಸ್ಸನ್ನು ಹೊಂದಿದ್ದಂಥ ಮಹೋನ್ನತ ಆಟಗಾರ ಅವರು. ಕ್ರೀಡಾತಜ್ಞರು ಮತ್ತು ವಿಶ್ಲೇಷಣಕಾರರು ಹೇಳುವಂತೆ, ವಿರಾಟ್ ಕೊಹ್ಲಿಯವರು ಕನಿಷ್ಠಪಕ್ಷ ಇನ್ನೂ ನಾಲ್ಕು ವರ್ಷಗಳವರೆಗೆ ಈ ಪಯಣವನ್ನು ಮುಂದುವರಿಸ ಬಹುದಿತ್ತು. ಆದರೆ, ಕೊಹ್ಲಿ ಹೀಗೆ ನಿರ್ಧರಿಸಿದ್ದಾರೆ ಎಂದರೆ ಪ್ರಾಯಶಃ ಅದರ ಹಿಂದೆ ಗಟ್ಟಿಯಾದ ಕಾರಣ ಇದ್ದಿರಲೇಬೇಕು.
ಇದನ್ನೂ ಓದಿ: Vishwavani Editorial: ಸರಣಿ ಸಂಕಷ್ಟದಲ್ಲಿ ಪಾಕಿಸ್ತಾನ
ಅದನ್ನು ಗೌರವಿಸೋಣ. ಆದರೆ, ವಿರಾಟ್ ಕೊಹ್ಲಿಯವರ ನಿರ್ಗಮನದಿಂದಾಗಿ ‘ಚುಂಬಕ ಸದೃಶ’ ಆಟಗಾರನೊಬ್ಬನ ಅನುಪಸ್ಥಿತಿ ಭಾರತದ ಟೆಸ್ಟ್ ಕ್ರಿಕೆಟ್ ತಂಡವನ್ನು ಕಾಡಲಿರುವುದಂತೂ ಖರೆ. ಸುನಿಲ್ ಗಾವಸ್ಕರ್, ಗುಂಡಪ್ಪ ವಿಶ್ವನಾಥ್, ಎರ್ರಪಲ್ಲಿ ಪ್ರಸನ್ನ, ಬಿ.ಎಸ್.ಚಂದ್ರಶೇಖರ್, ಸೈಯದ್ ಕಿರ್ಮಾನಿ, ರೋಜರ್ ಬಿನ್ನಿ, ಕೃಷ್ಣಮಾಚಾರಿ ಶ್ರೀಕಾಂತ್, ಕಪಿಲ್ ದೇವ್, ಸಚಿನ್ ತೆಂಡೂಲ್ಕರ್, ಜಾವಗಲ್ ಶ್ರೀನಾಥ್, ಅನಿಲ್ ಕುಂಬ್ಳೆ ಹೀಗೆ ಪಂದ್ಯವೊಂದರಲ್ಲಿನ ತಮ್ಮ ಉಪಸ್ಥಿತಿಯಿಂದಾಗಿಯೇ ಕ್ರೀಡಾಭಿಮಾನಿಗಳನ್ನು ಸ್ಟೇಡಿಯಂಗೆ ಅಥವಾ ಟಿವಿ ಸೆಟ್ಟುಗಳೆಡೆಗೆ ಸೆಳೆಯುತ್ತಿದ್ದವರ ಸಾಲಿಗೆ ಸೇರಿದ್ದವರು ವಿರಾಟ್ ಕೊಹ್ಲಿ.
ಆದರೀಗ ಅವರು ಟೆಸ್ಟ್ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿರುವುದರಿಂದ, ಮತ್ತೊಬ್ಬ ಮನಮೋಹಕ ಆಟಗಾರ ಬರುವವರೆಗೂ ಆ ಜಾಗ ಖಾಲಿಯಾಗೇ ಇರುತ್ತದೆ ಎಂದರೆ ಅತಿಶಯೋಕ್ತಿ ಆಗಲಾರದು. ಇನ್ನೂ ಚೆನ್ನಾಗಿ ಆಡುತ್ತಿರುವಾಗಲೇ, ಕ್ರೀಡಾಭಿಮಾನಿಗಳು ‘ಇನ್ನೂ ಬೇಕು ಬೇಕು’ ಎನ್ನುತ್ತಿರು ವಾಗಲೇ ನಿವೃತ್ತಿಯಾಗಿಬಿಡುವುದು ಒಳಿತು ಎಂಬುದೊಂದು ಗ್ರಹಿಕೆ ಕ್ರೀಡಾಪಟುಗಳಲ್ಲಿರುವುದು ಸಹಜ. ವಿರಾಟ್ ಕೊಹ್ಲಿಯವರು ಈ ಗ್ರಹಿಕೆಗೇ ಓಗೊಟ್ಟುಬಿಟ್ಟರು ಎನಿಸುತ್ತದೆ. ಒಟ್ಟಿನಲ್ಲಿ, ಅವರಿಗೆ ಶುಭವಾಗಲಿ ಎಂದು ಹಾರೈಸುವುದಷ್ಟೇ ನಮ್ಮ ಕೆಲಸ.