Thursday, 12th December 2024

6 ಆಟಗಾರರು ಶೂನ್ಯ: ಬಾಂಗ್ಲಾದೇಶ ಹೀನಾಯ ಆಟ

ಆಂಟಿಗ್ವಾ: ಬಾಂಗ್ಲಾದೇಶ ಟೆಸ್ಟ್ ಇತಿಹಾಸದಲ್ಲಿ ಅತಿಕೆಟ್ಟ ದಾಖಲೆ ನಿರ್ಮಿ ಸಿದೆ.

ವಿವಿಯನ್ ರಿಚರ್ಡ್ಸ್ ಸ್ಟೇಡಿಯಂನಲ್ಲಿ ಆಯೋಜನೆಗೊಂಡಿರುವ ಮೊದಲ ಟೆಸ್ಟ್ ಪಂದ್ಯದಲ್ಲಿ 6 ಆಟಗಾರರು ಶೂನ್ಯಕ್ಕೆ ಔಟ್‌ ಆಗುವ ಮೂಲಕ ಬ್ಯಾಕ್ ಟು ಬ್ಯಾಕ್ ಪಂದ್ಯಗಳಲ್ಲಿ 6 ಆಟಗಾರರು ಶೂನ್ಯ ಸುತ್ತಿದ ವಿಶ್ವದ ಮೊದಲ ತಂಡ ಎಂಬ ಕುಖ್ಯಾತಿಗೆ ಬಾಂಗ್ಲಾದೇಶ ಪಾತ್ರವಾಗಿದೆ.

ಬಾಂಗ್ಲಾದೇಶದ ಆರಂಭಿಕ ಆಟಗಾರ ಮಹಮ್ಮದುಲ್ ಹಸನ್ ಜಾಯ್ ಅವರ ವಿಕೆಟ್‌ ಪತನದೊಂದಿಗೆ ಬಾಂಗ್ಲಾ ಪತನವೂ ಪ್ರಾರಂಭಗೊಂಡಿತು. ತಂಡದ ಮೊತ್ತ 1 ರನ್ ಆಗಿದ್ದಾಗ ಜಾಯ್ ಗೋಲ್ಡನ್ ಡಕ್ ಆದರು. ಎರಡನೇ ಎಸೆತದಲ್ಲಿ ರೋಚ್‌ಗೆ ಬಲಿಯಾದರು.

ಸ್ಕೋರ್ 3 ರನ್ ಆಗಿದ್ದಾಗ ಶಾಂಟೊ ಎರಡನೇ ವಿಕೆಟ್‌ ರೂಪದಲ್ಲಿ ವಿಕೆಟ್‌ ಒಪ್ಪಿಸಿದರು. ಮೂರನೇ ವಿಕೆಟ್ ರೂಪದಲ್ಲಿ ಮೊನಿಮುಲ್ ಕೂಡ 6 ಎಸೆತಗಳನ್ನು ಎದುರಿಸಿ ಖಾತೆ ತೆರೆಯದೆ ಔಟಾದರು. 2 ಎಸೆತಗಳನ್ನು ಆಡಿದ ನೂರುಲ್ ಹಸನ್ ಶೂನ್ಯಕ್ಕೆ ಔಟಾದರು. ಮುಸ್ತಾಫಿಜುರ್ ರೆಹಮಾನ್ ಕೂಡ ಶೂನ್ಯಕ್ಕೆ ವಿಕೆಟ್ ಕಳೆದುಕೊಂಡರು. ಖಲೀಲ್ ಅಹ್ಮದ್ ಸಹ ಶೂನ್ಯಸುತ್ತಿವುದರೊಂದಿಗೆ ಶೂನ್ಯಕ್ಕೆ ಮರಳಿದ ಆರನೇ ಆಟಗಾರರು. ಈ ಮೂಲಕ ಬಾಂಗ್ಲಾ ವಿಶೇಷ ಕುಖ್ಯಾತಿಗೆ ಪಾತ್ರವಾಯಿತು.

ನೆಲಕಚ್ಚಿ ನಿಂತಿದ್ದ ನಾಯಕ ಶಕೀಬ್ ಅಲ್ ಹಸನ್ ಬಾಂಗ್ಲಾ ಮಾನ ಉಳಿಸಿ ದರು. 67 ಎಸೆತಗಳನ್ನು ಎದುರಿಸಿದ ಶಕೀಬ್ 6 ಬೌಂಡರಿ ಹಾಗೂ 1 ಸಿಕ್ಸರ್ ನೆರವಿನಿಂದ 51 ರನ್ ಗಳಿಸಿ ಔಟಾದರು.

ಮೇ ತಿಂಗಳಲ್ಲಿ ಶ್ರೀಲಂಕಾ ಮತ್ತು ಬಾಂಗ್ಲಾದೇಶ ನಡುವೆ ನಡೆದಿದ್ದ ಟೆಸ್ಟ್ ಸರಣಿಯ ಎರಡನೇ ಪಂದ್ಯದಲ್ಲಿಯೂ ಬಾಂಗ್ಲಾ ಇದೇ ಸಾಧನೆ ಮಾಡಿತ್ತು. ಈ ಪಂದ್ಯದಲ್ಲಿ ಸಹ ಬಾಂಗ್ಲಾದೇಶದ 6 ಬ್ಯಾಟ್ಸ್‌ಮನ್‌ಗಳು ಖಾತೆ ತೆರೆಯದೆ ವಿಕೆಟ್ ಕಳೆದುಕೊಂಡಿದ್ದರು. ಬಾಂಗ್ಲಾದೇಶ ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ಸತತ ಎರಡು ಪಂದ್ಯಗಳಲ್ಲಿ ಆರು ಬ್ಯಾಟ್ಸ್‌ಮನ್‌ಗಳನ್ನು ಶೂನ್ಯಕ್ಕೆ ಕಳೆದುಕೊಂಡ ವಿಶ್ವದ ಮೊದಲ ತಂಡವಾಗಿದೆ. ಶ್ರೀಲಂಕಾ ವಿರುದ್ಧದ ಆ ಟೆಸ್ಟ್ ಪಂದ್ಯವನ್ನು ಬಾಂಗ್ಲಾ 10 ವಿಕೆಟ್‌ಗಳಿಂದ ಸೋತಿತ್ತು.

ಆಂಟಿಗುವಾ ಟೆಸ್ಟ್‌ ಟಾಸ್ ಗೆದ್ದ ವೆಸ್ಟ್ ಇಂಡೀಸ್ ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಟಾಸ್ ಸೋತ ಬಾಂಗ್ಲಾದೇಶ ಬ್ಯಾಟಿಂಗ್‌ಗೆ ಇಳಿಯಿತು. ಕಳಪೆ ಆಟದ ನಂತರ ತಂಡ 103 ರನ್‌ಗಳಿಗೆ ಆಲೌಟ್ ಆಯಿತು. ಗುರಿ ಬೆನ್ನಟ್ಟಿದ ವೆಸ್ಟ್ ಇಂಡೀಸ್ ದಿನದ ಅಂತ್ಯದ ವೇಳೆಗೆ ಅವರು 2 ವಿಕೆಟ್ ಕಳೆದುಕೊಂಡು 95 ರನ್ ಗಳಿಸಿದೆ. ಇದೀಗ ಕೆರಿಬಿಯನ್ ತಂಡ ಬಾಂಗ್ಲಾ ತಂಡದ ಸ್ಕೋರ್ ನಿಂದ ಕೇವಲ 8 ರನ್ ಅಂತರದಲ್ಲಿದೆ.