Monday, 25th November 2024

Ball-Tampering: ಟೀಮ್‌ ಇಂಡಿಯಾ ವಿರುದ್ಧ ಬಾಲ್ ಟ್ಯಾಂಪರಿಂಗ್ ಆರೋಪ

ಮಕಾಯ್‌ (ಆಸ್ಟ್ರೇಲಿಯಾ): 2018ರಲ್ಲಿ ಕ್ರಿಕೆಟ್ ಲೋಕವನ್ನು ತಲ್ಲಣಗೊಳಿಸಿದ್ದ ಬಾಲ್ ಟ್ಯಾಂಪರಿಂಗ್(Ball-Tampering) ವಿವಾದ ಮತ್ತೆ ಕಾಣಿಸಿಕೊಂಡಿದೆ. ಆಸ್ಟ್ರೇಲಿಯಾ ‘ಎ’ ಎದುರಿನ ಅನಧಿಕೃತ ಟೆಸ್ಟ್‌ ಪಂದ್ಯದಲ್ಲಿ ಭಾರತ ʼಎʼ (INDA vs AUSA) ತಂಡದ ಆಟಗಾರರು ಚೆಂಡು ವಿರೂಪಗೊಳಿಸಿರುವುದಾಗಿ ಫೀಲ್ಡ್ ಅಂಪೈರ್ ಶಾನ್ ಕ್ರೇಗ್(Umpire Shawn Craig) ಆರೋಪ ಮಾಡಿದ್ದಾರೆ.

ಮಕಾಯ್‌ನಲ್ಲಿ ನಡೆದ ಈ ಪಂದ್ಯದ ನಾಲ್ಕನೇ ದಿನದಂದು ಭಾರತ ಎ ತಂಡವು ಚೆಂಡನ್ನು ಬದಲಾಯಿಸುವ ಬಗ್ಗೆ ಅಂಪೈರ್ ಜತೆ ಚರ್ಚೆಗೆ ಇಳಿಯಿತು. ಈ ಸಂದರ್ಭ ಅಂಪೈರ್ ಶಾನ್ ಕ್ರೇಗ್ ಹಾಗೂ ಭಾರತ ಎ ತಂಡದ ಆಟಗಾರರ ಮಧ್ಯೆ ಬಹಳ ಸಮಯ ಮಾತುಕತೆ ನಡೆದಿದೆ. ಬಳಿಕ ಅಂಪೈರ್ ಈ ಆರೋಪ ಮಾಡಿದ್ದಾರೆ. ಈ ಚರ್ಚೆಯಿಂದಾಗಿ ನಾಲ್ಕನೇ ದಿನದ ಆಟ ಕೂಡ ತಡವಾಗಿ ಆರಂಭವಾಯಿತು. ಚೆಂಡಿನ ಮೇಲೆ ಸ್ಕ್ರ್ಯಾಚ್ ಮಾರ್ಕ್ಸ್ ಇದ್ದ ಕಾರಣ ಚೆಂಡನ್ನು ಬದಲಾಯಿಸಲು ಅಂಪೈರ್ ನಿರ್ಧರಿಸಿದ್ದರು.

ಚರ್ಚೆಯ ವೇಳೆ, ಅಂಪೈರ್ ಶಾನ್ ಕ್ರೇಗ್ ಮತ್ತು ಇಶಾನ್ ನಡುವೆ ಚರ್ಚೆ ನಡೆಯಿತು. ಇದೇ ವೇಳೆ ಅಂಪೈರ್‌ ನಿರ್ಧಾರವನ್ನು ಮೂರ್ಖತನ ಎಂದಿರುವುದು ಮೈಕ್‌ ಸ್ಟಂಪ್‌ನಲ್ಲಿ ದಾಖಲಾಗಿದೆ. ಇಶಾನ್‌ ಅವರ ಈ ವರ್ತನೆಯ ಬಗ್ಗೆಯೂ ಅಂಪೈರ್‌ ಅಸಭ್ಯ ವರ್ತನೆ ಎಂದು ದೂರು ನೀಡಿದ್ದಾರೆ.

ಇದನ್ನೂ ಓದಿ IND vs NZ: ವಿಕೆಟ್‌ ಪತನದಲ್ಲೂ ದಾಖಲೆ ಬರೆದ ವಾಂಖೆಡೆ

ಅಂಪೈರ್ ಶಾನ್ ಕ್ರೇಗ್ ಭಾರತದ ಆಟಗಾರಋ ಜತೆ ನೀವು ಚೆಂಡನ್ನು ಸ್ಕ್ರ್ಯಾಚ್ ಮಾಡಿದ್ದೀರಿ, ಅದಕ್ಕಾಗಿ ನಾನು ಚೆಂಡನ್ನು ಬದಲಾಯಿಸಿದ್ದೇವೆ ಎಂದು ಹೇಳಿದ್ದು ಕೂಡ ಮೈಕ್‌ ಸ್ಟಂಪ್‌ನಲ್ಲಿ ಕೇಳಿಸಿದೆ. ಒಂದೊಮ್ಮೆ ಈ ಪ್ರಕರಣ ಮುಂದುವರಿದರೆ ಭಾರತೀಯ ಆಟಗಾರರ ವಿರುದ್ಧ ಕ್ರಮ ಕೈಗೊಳ್ಳಬಹುದು. ಕ್ರಿಕೆಟ್ ಆಸ್ಟ್ರೇಲಿಯಾದ ನೀತಿ ಸಂಹಿತೆಯ ಪ್ರಕಾರ, ಭಾರತ ಎ ಆಟಗಾರರು ಉದ್ದೇಶಪೂರ್ವಕವಾಗಿ ಬಾಲ್ ಟ್ಯಾಂಪರಿಂಗ್ ಮಾಡುತ್ತಿರುವುದು ಕಂಡುಬಂದರೆ, ಅದರಲ್ಲಿ ಭಾಗಿಯಾಗಿರುವ ಆಟಗಾರರನ್ನು ನಿಷೇಧಿಸಬಹುದು. ಈ ಪಂದ್ಯದಲ್ಲಿ ಆಸ್ಟ್ರೇಲಿಯಾ 7 ವಿಕೆಟ್‌ ಅಂತರದ ಗೆಲುವು ಸಾಧಿಸಿತು.

ಕ್ರಿಕೆಟ್‌ ಅನ್ನು ದೊಡ್ಡ ಸಂಖ್ಯೆಯಲ್ಲಿ ಅಭಿಮಾನಿಗಳು ವೀಕ್ಷಿಸುತ್ತಾರೆ. ತನ್ನ ರಾಷ್ಟ್ರದ ವಿರುದ್ಧ ಆಡುವ ತಂಡದ ಆಟಗಾರ ಯಾವ ರೀತಿ ವರ್ತಿಸುತ್ತಾನೆ ಅನ್ನುವುದನ್ನು ಹೆಚ್ಚಿನ ಪ್ರೇಕ್ಷಕರು ಗಮನಿಸುತ್ತಾರೆ. ಎದುರಾಳಿ ತಂಡದವರು ಸಭ್ಯವಾಗಿ ವರ್ತಿಸಿದರೆ, ನೋಡುಗನಿಗೆ ಆ ರಾಷ್ಟ್ರದ ಮೇಲೆ ಅಭಿಮಾನ ಚಿಗುರುತ್ತದೆ. ಆದೇ ಆಟಗಾರನೊಬ್ಬ ಅಸಭ್ಯವಾಗಿ ವರ್ತಿಸಿದರೆ ಅಭಿಮಾನಿಗಳು ಆ ರಾಷ್ಟ್ರವನ್ನೇ ದೂರಲು ಆರಂಭಿಸುತ್ತಾರೆ. ಯಾರೋ ಒಬ್ಬಿಬ್ಬರು ಮಾಡುವ ಕಳ್ಳಾಟಕ್ಕೆ ವಿಶ್ವದ ಮುಂದೆ ಇಡೀ ರಾಷ್ಟ್ರವೇ ತಲೆಬಾಗಿಸಬೇಕಾಗುತ್ತದೆ. ಇಂಥ ಸಂದರ್ಭದಲ್ಲಿ ಆ ರಾಷ್ಟ್ರದ ಜನರೆಲ್ಲರೂ ಕಳ್ಳರು ಎಂದು ಬೆಟ್ಟುಮಾಡಿ ತೋರಿಸುವಂತಾಗಿಬಿಡುತ್ತದೆ.