Manchester Test: 4ನೇ ಟೆಸ್ಟ್‌ನಿಂದ ಕರುಣ್ ನಾಯರ್ ಕೈಬಿಡುವ ಸಾಧ್ಯತೆ
Karun Nair: ಇಂಗ್ಲೆಂಡ್ ವಿರುದ್ಧ ಆಡಿದ ಆರೂ ಇನ್ನಿಂಗ್ಸ್‌ಗಳಲ್ಲಿ ಕರುಣ್ ನಾಯರ್ ಬ್ಯಾಟಿಂಗ್ ಬರಗಾಲ ಅನುಭವಿಸಿದ್ದಾರೆ. ಅವರ ಗಳಿಕೆ 0, 20, 31, 26, 40, 14. ಲಾರ್ಡ್ಸ್‌ನ ಮೊದಲ ಇನ್ನಿಂಗ್ಸ್‌ನಲ್ಲಿ ಹೊಡೆದ 40 ರನ್ನೇ ಅನಂತರದ ಹೆಚ್ಚಿನ ಗಳಿಕೆ.


ಲಂಡನ್: ಸುಮಾರು 8 ವರ್ಷಗಳ ಬಳಿಕ ಭಾರತದ ಟೆಸ್ಟ್ ತಂಡಕ್ಕೆ ಮರಳಿದ ಕನ್ನಡಿಗ ಕರುಣ್ ನಾಯರ್(Karun Nair) ಅವರು ನಿರೀಕ್ಷಿತ ಪ್ರದರ್ಶನ ತೋರುವವಲ್ಲಿ ವಿಫಲರಾದ ಕಾರಣ ಇಂಗ್ಲೆಂಡ್ ವಿರುದ್ಧದ ನಾಲ್ಕನೇ ಟೆಸ್ಟ್ ಪಂದ್ಯದಿಂದ ಅವರನ್ನು ಕೈಬಿಡಲು ಟೀಮ್ ಇಂಡಿಯಾ ಮ್ಯಾನೇಜ್ಮೆಂಟ್ ನಿರ್ಧರಿಸಿದೆ ಎಂದು ತಿಳಿದುಬಂದಿದೆ. ಕರುಣ್ ಸ್ಥಾನಕ್ಕೆ ಮ್ಯಾಂಚೆಸ್ಟರ್‌ನಲ್ಲಿ ನಡೆಯುವ 4ನೇ ಟೆಸ್ಟ್(Manchester Test) ಪಂದ್ಯಕ್ಕೆ ಸಾಯಿ ಸುದರ್ಶನ್(Sai Sudharsan) ವಾಪಸಾಗುವ ಸಾಧ್ಯತೆಯೊಂದು ಗೋಚರಿಸುತ್ತಿದೆ.
ಇಂಗ್ಲೆಂಡ್ ವಿರುದ್ಧ ಆಡಿದ ಆರೂ ಇನ್ನಿಂಗ್ಸ್‌ಗಳಲ್ಲಿ ಕರುಣ್ ನಾಯರ್ ಬ್ಯಾಟಿಂಗ್ ಬರಗಾಲ ಅನುಭವಿಸಿದ್ದಾರೆ. ಅವರ ಗಳಿಕೆ 0, 20, 31, 26, 40, 14. ಲಾರ್ಡ್ಸ್‌ನ ಮೊದಲ ಇನ್ನಿಂಗ್ಸ್‌ನಲ್ಲಿ ಹೊಡೆದ 40 ರನ್ನೇ ಅನಂತರದ ಹೆಚ್ಚಿನ ಗಳಿಕೆ. ಕರುಣ್‌ಗೆ ಇನ್ನೂ ಒಂದು ಅವಕಾಶ ಕೊಡಿ ಎಂಬುದಾಗಿ ಅನಿಲ್ ಕುಂಬ್ಳೆ ಹೇಳಿದ್ದಾರೆ. ಆದರೆ ಲಾರ್ಡ್ಸ್‌ನಲ್ಲಿ ಭಾರತ ಸೋತ ಕಾರಣ ಕರುಣ್ ನಾಯರ್ ಅವಕಾಶ ಕಷ್ಟ ಸಾಧ್ಯ. ಇವರ ಸ್ಥಾನದಲ್ಲಿ ಸಾಯಿ ಸುದರ್ಶನ್‌ಗೆ ಅವಕಾಶ ಸಿಗುವ ಸಾಧ್ಯತೆ ಅಧಿಕವಾಗಿದೆ. ನಾಯಕ ಶುಭಮನ್ ಗಿಲ್ ಒಲವು ಕೂಡ ಸುದರ್ಶನ್ ಮೇಲಿದೆ. ಏಕೆಂದರೆ ಉಭಯ ಆಟಗಾರರು ಐಪಿಎಲ್‌ನಲ್ಲಿ ಗುಜರಾತ್ ತಂಡದ ಪರ ಆಡಿದ್ದರು.
2016ರಲ್ಲಿ ಮೊಹಾಲಿಯಲ್ಲಿ ನಡೆದಿದ್ದ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ ಬೆಂಗಳೂರಿನ ಕರುಣ್ ಪದಾರ್ಪಣೆ ಮಾಡಿದ್ದರು. ಆಡಿದ ಮೂರನೇ ಟೆಸ್ಟ್‌ನಲ್ಲಿಯೇ (ಚೆನ್ನೈನಲ್ಲಿ ಇಂಗ್ಲೆಂಡ್ ವಿರುದ್ಧ) ತ್ರಿಶತಕ (ಅಜೇಯ 303) ಹೊಡೆದಿದ್ದರು. ಆದರೆ ಅದರ ನಂತರ ಅವರಿಗೆ ಸಿಕ್ಕಿದ್ದು ಕೇವಲ ಮೂರು ಟೆಸ್ಟ್ ಪಂದ್ಯಗಳು ಮಾತ್ರ. ಅದೇಕೋ ಆಯ್ಕೆಗಾರರು ಅವರಿಗೆ ಇದಕ್ಕಿಂತ ಹೆಚ್ಚು ಅವಕಾಶಗಳನ್ನು ಕೊಡುವ ಔದಾರ್ಯ ತೋರಲಿಲ್ಲ.
ಇದನ್ನೂ ಓದಿ ENG vs IND: ನಾಲ್ಕನೇ ಟೆಸ್ಟ್ ಪಂದ್ಯದಲ್ಲಿ ವಿಶ್ವದಾಖಲೆ ಬರೆಯುವ ಸನಿಹದಲ್ಲಿ ಜೋ ರೂಟ್!
ದೇಶಿ ಕ್ರಿಕೆಟ್‌ನಲ್ಲಿ ಅವರು ಕ್ರಮೇಣಗಿ ವೈಫಲ್ಯಗಳ ಸುಳಿಗೆ ಸಿಲುಕಿದರು. 2022ರ ಸುಮಾರಿಗೆ ತವರಿನ ತಂಡದಲ್ಲಿಯೂ ಸ್ಥಾನ ಕೈತಪ್ಪಿತು. ಆಗ ಅವರು ಹಾಕಿದ್ದ ‘ಪ್ರಿಯ ಕ್ರಿಕೆಟ್ ನನಗೆ ಇನ್ನೊಂದು ಅವಕಾಶ ಕೊಡು’ ಎಂಬ ಎಕ್ಸ್ ಸಂದೇಶ ಕ್ರಿಕೆಟ್ ಅಭಿಮಾನಿಗಳ ಮನಕಲಕಿದ್ದು ಸುಳ್ಳಲ್ಲ.
ಛಲ ಬಿಡದ ನಾಯರ್ ವಿದರ್ಭ ತಂಡಕ್ಕೆ ವಲಸೆ ಹೋಗಿ ತಮ್ಮ ಪ್ರತಿಭೆಯನ್ನು ಪಣಕ್ಕೊಡ್ಡಿದರು. ಕಳೆದ ದೇಶಿ ಋತುವಿನಲ್ಲಿ ರಣಜಿ ಟ್ರೋಫಿ, ವಿಜಯ್ ಹಜಾರೆ ಟ್ರೋಫಿ ಟೂರ್ನಿಗಳಲ್ಲಿ ರನ್‌ಗಳ ಹೊಳೆಯನ್ನೇ ಹರಿಸಿದರು. ಐಪಿಎಲ್‌ನಲ್ಲಿಯೂ ಮಿಂಚಿದರು. ಅವರ ಛಲದ ಆಟದ ಮುಂದೆ ಬಿಸಿಸಿಐ ಆಯ್ಕೆ ಸಮಿತಿ ತಲೆದೂಗಲೇಬೇಕಾಯಿತು. ಇಂಗ್ಲೆಂಡ್ ಪ್ರವಾಸಕ್ಕೆ ತೆರಳುವ ಭಾರತ ಎ ತಂಡಕ್ಕೆ ಈಚೆಗಷ್ಟೇ ಆಯ್ಕೆ ಮಾಡಲಾಯಿತು. ಆದರೆ ತಮ್ಮ ಆಯ್ಕೆಯನ್ನು ಸಮರ್ಥಿಸಿಕೊಳ್ಳುವಲ್ಲಿ ವಿಫಲವಾದದ್ದದು ನಿಜ್ಜೂ ವಿಪರ್ಯಾಸ ಎನ್ನಲಡ್ಡಿಯಿಲ್ಲ.