MI vs PBKS Qualifier 2: ಮುಂಬೈಗೆ ಸೋಲುಣಿಸಿ ನೂತನ ದಾಖಲೆ ಬರೆದ ಶ್ರೇಯಸ್ ಅಯ್ಯರ್
ಬೃಹತ್ ಮೊತ್ತದ ಚೇಸಿಂಗ್ ವೇಳೆ ಸಿಡಿಲಬ್ಬರದ ಬ್ಯಾಟಿಂಗ್ ಪ್ರದರ್ಶಿಸಿದ ಶ್ರೇಯಸ್ ಅಯ್ಯರ್ 41 ಎಸೆತಗಳಲ್ಲಿ ಅಜೇಯ 87 ರನ್ ಬಾರಿಸಿ ತಂಡಕ್ಕೆ ಅಮೋಘ ಗೆಲುವು ತಂದುಕೊಟ್ಟರು. ಅವರ ಈ ಬ್ಯಾಟಿಂಗ್ ಅಬ್ಬರದ ವೇಳೆ 8 ಸಿಕ್ಸರ್ ಮತ್ತು 5 ಬೌಂಡರಿ ಸಿಡಿಯಿತು.


ಅಹಮದಾಬಾದ್: ಭಾನುವಾರ ತಡರಾತ್ರಿ ನಡೆದಿದ್ದ ಐಪಿಎಲ್ ಕ್ವಾರ್ಟರ್‌ಫೈನಲ್-2(MI vs PBKS Qualifier 2) ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ 5 ವಿಕೆಟ್ ಅಂತರದಿಂದ ಗೆದ್ದು ಬೀಗಿದ ಪಂಜಾಬ್ ಕಿಂಗ್ಸ್ ತಂಡದ ಫೈನಲ್ ಪ್ರವೇಶಿಸಿತು. ಇದೇ ವೇಳೆ ತಂಡದ ನಾಯಕ ಶ್ರೇಯಸ್ ಅಯ್ಯರ್(Shreyas Iyer) ಅವರು ಐಪಿಎಲ್(IPL 2025) ಇತಿಹಾಸದಲ್ಲಿ ನೂತನ ದಾಖಲೆಯೊಂದನ್ನು ನಿರ್ಮಿಸಿದರು.
ಶ್ರೇಯಸ್ ಅಯ್ಯರ್ ಐಪಿಎಲ್ ಇತಿಹಾಸದಲ್ಲಿ 3 ತಂಡಗಳನ್ನು ಮುನ್ನಡೆಸಿ ಫೈನಲ್‌ಗೆ ಮುನ್ನಡೆಸಿದ ಏಕೈಕ ನಾಯಕ ಎಂಬ ಮೈಲುಗಲ್ಲು ನೆಟ್ಟರು. 2018 ರಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಜತೆ ಐಪಿಎಲ್ ವೃತ್ತಿಜೀವನ ಆರಂಭಿಸಿದ ಶ್ರೇಯಸ್, ತಂಡವನ್ನು 2020 ರ ಋತುವಿನಲ್ಲಿ ಫೈನಲ್ ತಲುಪಿಸಿದ್ದರು. ಇದಾದ ಬಳಿಕ 2024 ರಲ್ಲಿ ಕೆಕೆಆರ್ ತಂಡವನ್ನು ಮುನ್ನಡೆಸಿ ತಂಡವನ್ನು ಚಾಂಪಿಯನ್ ಮಾಡಿದ್ದರು. ಇದೀಗ ಪಂಜಾಬ್ ತಂಡವನ್ನು ಫೈನಲ್ ತಲುಪಿಸಿದ್ದು ತಂಡಕ್ಕೆ ಚೊಚ್ಚಲ ಪ್ರಶಸ್ತಿ ಗೆಲ್ಲಿಸಿಕೊಡುವ ವಿಶ್ವಾಸದಲ್ಲಿದ್ದಾರೆ.
ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದಿದ್ದ ಈ ಪಂದ್ಯದಲ್ಲಿ ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಮುಂಬೈ ಇಂಡಿಯನ್ಸ್ ನಿಗದಿತ 20 ಓವರ್‌ಗಳಲ್ಲಿ 6 ವಿಕೆಟ್‌ಗೆ 203 ರನ್ ಕಲೆಹಾಕಿತು. ಬೃಹತ್ ಮೊತ್ತದ ಚೇಸಿಂಗ್ ವೇಳೆ ಸಿಡಿಲಬ್ಬರದ ಬ್ಯಾಟಿಂಗ್ ಪ್ರದರ್ಶಿಸಿದ ಅಯ್ಯರ್ 41 ಎಸೆತಗಳಲ್ಲಿ ಅಜೇಯ 87 ರನ್ ಬಾರಿಸಿ ತಂಡಕ್ಕೆ ಅಮೋಘ ಗೆಲುವು ತಂದುಕೊಟ್ಟರು. ಅವರ ಈ ಬ್ಯಾಟಿಂಗ್ ಅಬ್ಬರದ ವೇಳೆ 8 ಸಿಕ್ಸರ್ ಮತ್ತು 5 ಬೌಂಡರಿ ಸಿಡಿಯಿತು. ನೇಹಾಲ್ ವಧೇರಾ ಮುಂಬೈ ಬೌಲರ್‌ಗಳ ವಧೆ ಮಾಡಿ 29 ಎಸೆತಗಳಿಂದ 48 ರನ್ ಚಚ್ಚಿ ಪಂದ್ಯಕ್ಕೆ ಮಹತ್ವದ ತಿರುವು ತಂದುಕೊಟ್ಟರು. ಜೋಶ್ ಇಂಗ್ಲಿಸ್, ಪ್ರಧಾನ ವೇಗಿ ಜಸ್‌ಪ್ರೀತ್ ಬುಮ್ರಾ ಅವರ ಒಂದೇ ಓವರ್‌ನಲ್ಲಿ ತಲಾ 2 ಸಿಕ್ಸರ್ ಮತ್ತು ಬೌಂಡರಿ ಸಹಿತ 20 ರನ್ ಬಾರಿಸಿ ಚಳಿ ಬಿಡಿಸಿದರು. ಅಂತಿಮವಾಗಿ ಪಂಜಾಬ್ ಇನ್ನೊಂದು ಓವರ್ ಬಾಕಿ ಇರುವಂತೆಯೇ 5 ವಿಕೆಟ್‌ಗೆ 207 ರನ್ ಬಾರಿಸಿ ಗೆಲುವು ತನ್ನದಾಗಿಸಿಕೊಂಡಿತು.
ಇದನ್ನೂ ಓದಿ IPL 2025 final: ಐಪಿಎಲ್ ಫೈನಲ್ ಪಂದ್ಯದ ಆಹ್ವಾನ ತಿರಸ್ಕರಿಸಿದ ಮೂರು ಸೇನಾ ಮುಖ್ಯಸ್ಥರು!
ಜೂ.3ರಂದು ನಡೆಯುವ ಫೈನಲ್ ಪಂದ್ಯದಲ್ಲಿ ಆರ್‌ಸಿಬಿ ಮತ್ತು ಪಂಜಾಬ್ ಪ್ರಶಸ್ತಿಗಾಗಿ ಸೆಣಸಾಡಲಿದೆ. ಯಾರೇ ಗೆದ್ದರು ಐಪಿಎಲ್‌ನಲ್ಲಿ ಚೊಚ್ಚಲ ಟ್ರೋಫಿಯೊಂದನ್ನು ಗೆದ್ದ ಸಾಧನೆ ಮಾಡಲಿದ್ದಾರೆ. ಕ್ವಾಲಿಫೈಯರ್-1 ರಲ್ಲಿ ಆರ್‌ಸಿಬಿ, ಪಂಜಾಬ್‌ಗೆ ಸೋಲುಣಿಸಿ ಫೈನಲ್ ಪ್ರವೇಶಿಸಿತ್ತು. ಇದೀಗ ಮತ್ತೆ ಉಭಯ ತಂಡಗಳು ಪ್ರಶಸ್ತಿ ಸುತ್ತಿನಲ್ಲಿ ಮುಖಾಮುಖಿಯಾಗಲಿವೆ.