Thursday, 19th September 2024

Ganesh Chaturthi: ಟೀಮ್‌ ಇಂಡಿಯಾ ಜೆರ್ಸಿಯಲ್ಲಿ ಕಂಗೊಳಿಸಿದ ಗಣಪ

Ganesh Chaturthi

ಮುಂಬಯಿ: ಗೌರಿ ಗಣಪತಿ(Ganesh Chaturthi) ಹಬ್ಬಕ್ಕೆ ಅಂತಿಮ ಸಿದ್ಧತೆಗಳು ನಡೆಯುತ್ತಿವೆ. ನಾಳೆ(ಶನಿವಾರ) ದೇಶಾದ್ಯಾಂತ ಗಣೇಶ ಚತುರ್ಥಿ ಆಚರಿಸಲಾಗುತ್ತಿದೆ. ಇನ್ನೊಂದೆಡೆ, ಕಲಾವಿದನ ಕೌಶಲ್ಯದಿಂದ ರೂಪಿಸಿರುವ ಬಗೆಬಗೆಯ ಗಣಪಗಳು ಎಲ್ಲರನ್ನೂ ಆಕರ್ಷಿಸುತ್ತಿವೆ. ಪ್ರತಿ ವರ್ಷ ಒಂದಲ್ಲ ಒಂದು ವಿಶೇಷ ರೂಪದಲ್ಲಿ ವಿಘ್ನ ನಿವಾರಕ ಕಂಗೊಳಿಸುತ್ತಾನೆ. ಈ ಬಾರಿ ಗಣೇಶ ಭಾರತ ಕ್ರಿಕೆಟ್‌ ತಂಡದ ಜೆರ್ಸಿಯ(Team India jersey Ganpati Bappa)ಲ್ಲಿ ಅವತಾರ ತಾಳಿದ್ದಾನೆ. ಮುಂಬಯಿ ಮೀರಾ ಭಾಯಂದರ್ ಪರಿಸರದಲ್ಲಿ ಈ ಗಣಪ ದರ್ಶನ ನೀಡಲಿದ್ದಾನೆ. ಟೀಮ್‌ ಇಂಡಿಯಾ ಜೆರ್ಸಿಯಲ್ಲಿರುವ ಗಣಪನ ವಿಗ್ರಹದ ಫೋಟೊ ಸಾಮಾಜಿಕ ಜಾಲತಾಣದಲ್ಲಿ ವೈರಲ್‌(viral photo) ಆಗಿದೆ.

ಗಣೇಶ ಭಾರತ ಕ್ರಿಕೆಟ್‌ ತಂಡದ ಜೆರ್ಸಿ ತೊಟ್ಟು, ಕೈಯಲ್ಲಿ ತ್ರಿವರ್ಣ ಧ್ಜಜದೊಂದಿಗೆ ಕಂಗೊಳಿಸಿದರೆ, ಗಣೇಶನ ವಾಹನ ಇಲಿ ಟಿ20 ವಿಶ್ವಕಪ್‌ ಹೊತ್ತುಕೊಂಡಿದೆ. ಮುಂಬೈಯ ಹಲವೆಡೆ ಈ ಟೀಮ್‌ ಇಂಡಿಯಾ ಗಣೇಶನ ವಿಗ್ರಹಕ್ಕೆ ಭಾರೀ ಬೇಡಿಕೆ ಕಂಡುಬಂದಿದೆ. ಈ ಹಿಂದೆ ಪ್ರಭಾಸ್‌ ಅಭಿನಯದ ‘ಬಾಹುಬಲಿ’, ಸುದೀಪ್‌ ಮತ್ತು ಶಿವರಾಜ್‌ ಕುಮಾರ್‌ ನಟನೆಯ ‘ದಿ ವಿಲನ್‌’, ಯಶ್‌ ನಟನೆಯ ‘ಕೆಜಿಎಫ್‌ 2’ ಚಿತ್ರಗಳ ಥೀಮ್‌ ಬಳಸಿಕೊಂಡು ಗಣೇಶ ಮೂರ್ತಿ ಯನ್ನು ತಯಾರು ಮಾಡಲಾಗಿತ್ತು.

ಇದನ್ನೂ ಓದಿ Diamond League final: ಡೈಮಂಡ್ ಲೀಗ್ ಫೈನಲ್‌ಗೆ ಅರ್ಹತೆ ಪಡೆದ ನೀರಜ್ ಚೋಪ್ರಾ

ಭಾರತ ತಂಡ ಇತ್ತೀಚೆಗೆ ಅಮೆರಿಕ ಮತ್ತು ವೆಸ್ಟ್‌ ಇಂಡೀಸ್‌ ಜಂಟಿ ಆತಿಥ್ಯದಲ್ಲಿ ನಡೆದಿದ್ದ ವಿಶ್ವಕಪ್‌ ಟೂರ್ನಿಯಲ್ಲಿ ಚಾಂಪಿಯನ್‌ ಪಟ್ಟ ಅಲಂಕರಿಸಿತ್ತು. ಈ ಮೂಲಕ 17 ವರ್ಷಗಳ ಬಳಿಕ 2ನೇ ಟ್ರೋಫಿ ಗೆದ್ದ ಸಾಧನೆ ಮಾಡಿತ್ತು. ಟಿ20 (T20WorldCup2024) ವಿಶ್ವಕಪ್ ಗೆದ್ದು ತವರಿಗೆ ಮರಳಿದ ಟೀಮ್ ಇಂಡಿಯಾಕ್ಕೆ ಮುಂಬೈನಲ್ಲಿ ಅಭೂತ ಪೂರ್ವ ಸ್ವಾಗತ ನೀಡಲಾಗಿತ್ತು. ಲಕ್ಷಾಂತರ ಜನರು ಮರೀನ್ ಡ್ರೈವ್ ನಿಂದ ವಾಂಖಡೆ ಕ್ರೀಡಾಂಗಣದ ವರೆಗೆ ಅದ್ದೂರಿ ಮೆರವಣಿಗೆ ನಡೆಸಿ ಸಂಭ್ರಮಾಚರಣೆ ನಡೆಸಿದ್ದರು.

ಗಣೇಶ ಮೂರ್ತಿ ದರ ದುಬಾರಿ

ಬೆಂಗಳೂರು, ಮುಂಬಯಿ ಮೊದಲಾದೆಡೆ ಪಿಒಪಿ ಗಣಪತಿ ಮಾಡದ ಕಾರಣ ಮಣ್ಣಿನ ಬೆಲೆಯೂ ಏರಿಕೆಯಾಗಿದೆ. ಕ್ವಿಂಟಾಲ್‌ಗೆ 110 ರೂ.ಗೆ ದೊರೆಯುತ್ತಿದ್ದ ಮಣ್ಣು ದರ 160 ರೂ.ಗೆ ಏರಿದೆ. ಜತೆಗೆ ಬಣ್ಣ, ಸಿಬ್ಬಂದಿ ವೇತನ ಇತ್ಯಾದಿ ಗಳೂ ಹೆಚ್ಚಾಗಿದೆ. ಹಾಗಾಗಿ ಈ ಬಾರಿ ಗಣಪತಿ ವಿಗ್ರಹ ರಚನೆಯ ಕಾರ್ಯವೂ ತುಸು ದುಬಾರಿ ಎನಿಸುತ್ತಿದೆ.

ನ್ಯೂಸ್‌ ಪೇಪರ್‌ನಲ್ಲಿ ಮಾಡಿದ ಗಣೇಶ ಕೂಡ ಈ ಬಾರಿ ಎಲ್ಲರನ್ನೂ ಆಕರ್ಷಿಸುತ್ತಿದೆ. ಕಡಿಮೆ ಬೆಲೆಗೆ ಇದು ಸಿಗುವುದರಿಂದ ಮಕ್ಕಳು ಕೂಡ ಖರೀದಿಗೆ ಮುಗಿ ಬಿದ್ದಿದ್ದಾರೆ. ಈಗಾಗಲೇ ಶಾಲಾ ಕಾಲೇಜುಗಳಲ್ಲಿ ವರ್ಕ್ಶಾಪ್‌ ಆರಂಭಿಸಿ ಕಾಗದದಲ್ಲಿ ಗಣೇಶನ ಮೂರ್ತಿಯನ್ನು ತಯಾರಿಸಲು ತರಬೇತಿ ನೀಡಲಾಗುತ್ತಿದೆ. ವಿದ್ಯಾರ್ಥಿಗಳು ಆಸಕ್ತಿಯಿಂದ ಪಾಲ್ಗೊಂಡಿದ್ದಾರೆ. ಕಡಿಮೆ ಬೆಲೆಗೆ ಇದು ಸಿಗುವುದರಿಂದ ಮಾರುಕಟ್ಟೆಯಲ್ಲಿ ಕಾಗದದ ಮಾದರಿಯ ಗಣೇಶನಿಗೆ ಭರ್ಜರಿ ಬೇಡಿಕೆ ಉಂಟಾಗಿದೆ.

Leave a Reply

Your email address will not be published. Required fields are marked *