Tuesday, 3rd December 2024

IND vs AUS: ಮೂರನೇ ಕ್ರಮಾಂಕಕ್ಕೆ ಪಡಿಕ್ಕಲ್ ಫಿಕ್ಸ್‌

ಪರ್ತ್‌: ಶುಭಮನ್‌ ಗಿಲ್‌(Shubman Gill) ಗಾಯಾಳಾಗಿರುವ ಕಾರಣ ಭಾರತದ(IND vs AUS) ಟೆಸ್ಟ್‌ ತಂಡಕ್ಕೆ ಸೇರ್ಪಡೆಗೊಂಡಿರುವ ಕರ್ನಾಟಕದ ಬ್ಯಾಟರ್‌ ದೇವದತ್ತ ಪಡಿಕ್ಕಲ್‌(Devdutt Padikkal) ನಾಳೆ(ಶುಕ್ರವಾರ) ಪರ್ತ್‌ನಲ್ಲಿ ಆರಂಭಗೊಳ್ಳಲಿರುವ ಮೊದಲ ಟೆಸ್ಟ್‌ ಪಂದ್ಯದಲ್ಲಿ ಕಣಕ್ಕಿಳಿಯುವುದು ಖಚಿತವಾಗಿದೆ. ಬಿಸಿಸಿಐ ಪಂದ್ಯಕ್ಕೂ ಮುನ್ನ ದಿನವಾದ ಗುರುವಾರ ಪಡಿಕ್ಕಲ್‌ ಅವರ ವಿಶೇಷ ವಿಡಿಯೊವೊಂದನ್ನು ತನ್ನ ಅಧಿಕೃತ ಟ್ವಿಟರ್‌ ಎಕ್ಸ್‌ ಖಾತೆಯಲ್ಲಿ ಹಂಚಿಕೊಂಡಿದೆ. ಹೀಗಾಗಿ ಅವರಿಗೆ ಆಡುವ ಬಳಗದಲ್ಲಿ ಸ್ಥಾನ ಸಿಗುವುದು ನಿಶ್ಚಿತ. ಮೂರನೇ ಕ್ರಮಾಂಕದಲ್ಲಿ ಬ್ಯಾಟಿಂಗ್‌ ನಡೆಸುವ ಸಾಧ್ಯತೆ ಇದೆ.

ಆಸ್ಟ್ರೆಲಿಯಾ ಎ ವಿರುದ್ಧದ 2 ಚತುರ್ದಿನ ಪಂದ್ಯಗಳ 4 ಇನಿಂಗ್ಸ್​ಗಳಲ್ಲಿ ಪಡಿಕ್ಕಲ್​ 36, 88, 26 ಮತ್ತು 1 ರನ್​ ಗಳಿಸಿದ್ದರು. ಭಾರತ ಪರ ಏಕೈಕ ಟೆಸ್ಟ್​ ಆಡಿರುವ 24 ವರ್ಷದ ಪಡಿಕ್ಕಲ್​, ತಮ್ಮ ಚೊಚ್ಚಲ ಪಂದ್ಯದಲ್ಲೇ ಅರ್ಧಶತಕ ಬಾರಿಸಿ ಮಿಂಚಿದ್ದರು. ಇದೀಗ ಮತ್ತೊಂದು ಸುವರ್ಣಾವಕಾಶ ಅವರಿಗೆ ಒದಗಿ ಬಂದಿಗೆ. ಸಿಕ್ಕ ಅವಕಾಶವನ್ನು ಸರಿಯಾಗಿ ಸದುಪಯೋಗ ಪಡಿಸಿಕೊಂಡರೆ ಭಾರತ ಟೆಸ್ಟ್‌ ತಂಡದ ಖಾಯಂ ಸದ್ಯಸ್ಯನಾಗಿ ಮುಂದುವರಿಯಬಹುದು.  ಇದೇ ವರ್ಷ ಮಾರ್ಚ್‌ನಲ್ಲಿ ಇಂಗ್ಲೆಂಡ್‌ ವಿರುದ್ಧದ ಸರಣಿಯಲ್ಲಿ ಆಡುವ ಮೂಲಕ ಪಡಿಕ್ಕಲ್‌ ಟೆಸ್ಟ್‌ ಪಂದ್ಯಕ್ಕೆ ಪದಾರ್ಪಣೆ ಮಾಡಿದ್ದರು. ಆರ್‌.ಅಶ್ವಿನ್‌ ಕ್ಯಾಪ್‌ ನೀಡಿ ತಂಡಕ್ಕೆ ಬರ ಮಾಡಿಕೊಂಡಿದ್ದರು.

ಇದನ್ನೂ ಓದಿ IND vs AUS: ಪರ್ತ್‌ ಟೆಸ್ಟ್‌ಗೆ ಮಳೆ ಭೀತಿ

ಯುವ ವೇಗದ ಬೌಲಿಂಗ್‌ ಆಲ್‌ರೌಂಡರ್‌ ​ ನಿತೀಶ್ ಕುಮಾರ್‌ ರೆಡ್ಡಿ ಮೊದಲ ಟೆಸ್ಟ್​ ಪಂದ್ಯದಲ್ಲಿ ಭಾರತ ಪರ ಪದಾರ್ಪಣೆ ಮಾಡುವ ಸಾಧ್ಯತೆಗಳಿವೆ. ಈ ಮೂಲಕ 4ನೇ ವೇಗದ ಬೌಲರ್​ ಆಗಿ ಅವರನ್ನು ಬಳಸಿಕೊಳ್ಳಲು ಭಾರತ ಯೋಜಿಸಿದೆ. 21 ವರ್ಷದ ನಿತೀಶ್ ಆಂಧ್ರ ಪರ 23 ಪ್ರಥಮ ದರ್ಜೆ ಪಂದ್ಯಗಳನ್ನಾಡಿ 1 ಶತಕ, 2 ಅರ್ಧಶತಕ ಬಾರಿಸಿದ್ದಾರೆ. ಜತೆಗೆ 56 ವಿಕೆಟ್​ ಕಬಳಿಸಿದ್ದಾರೆ. 

ಸಂಭಾವ್ಯ ಆಡುವ ಬಳಗ

ಭಾರತ: ಯಶಸ್ವಿ ಜೈಸ್ವಾಲ್, ಕೆಎಲ್ ರಾಹುಲ್, ದೇವದತ್ ಪಡಿಕ್ಕಲ್, ವಿರಾಟ್ ಕೊಹ್ಲಿ, ರಿಷಭ್‌ ಪಂತ್ (ವಿ.ಕೀ), ಧ್ರುವ್‌ ಜುರೆಲ್, ನಿತೀಶ್ ಕುಮಾರ್ ರೆಡ್ಡಿ, ರವಿಚಂದ್ರನ್ ಅಶ್ವಿನ್, ಜಸ್‌ಪ್ರೀತ್‌ ಬುಮ್ರಾ (ನಾಯಕ), ಮೊಹಮ್ಮದ್ ಸಿರಾಜ್, ಆಕಾಶ್ ದೀಪ್.

ಆಸ್ಟ್ರೇಲಿಯಾ: ನಾಥನ್ ಮೆಕ್‌ಸ್ವೀನಿ, ಉಸ್ಮಾನ್ ಖ್ವಾಜಾ, ಮಾರ್ನಸ್ ಲಬುಶೇನ್, ಸ್ಟೀವ್ ಸ್ಮಿತ್, ಟ್ರಾವಿಸ್ ಹೆಡ್, ಅಲೆಕ್ಸ್ ಕ್ಯಾರಿ, ಮಿಚೆಲ್ ಮಾರ್ಶ್/ಸ್ಕಾಟ್ ಬೋಲ್ಯಾಂಡ್, ಪ್ಯಾಟ್ ಕಮಿನ್ಸ್ (ನಾಯಕ), ಮಿಚೆಲ್ ಸ್ಟಾರ್ಕ್,ಜೋಶ್ ಹೇಜಲ್‌ವುಡ್, ನಾಥನ್ ಲಿಯಾನ್.