Tuesday, 5th November 2024

IND vs NZ: ತವರಿನಲ್ಲೇ ಭಾರತಕ್ಕೆ ವೈಟ್ ವಾಶ್ ಮುಖಭಂಗ

ಮುಂಬಯಿ: ಆಪತ್ಬಾಂಧವ ರಿಷಭ್‌ ಪಂತ್‌(64) ಅವರ ಜವಾಬ್ದಾರಿಯುತ ಅರ್ಧಶತಕದ ನೆರವಿನ ಹೊರತಾಗಿಯೂ ಭಾರತ ತಂಡ ಪ್ರವಾಸಿ ನ್ಯೂಜಿಲ್ಯಾಂಡ್‌(IND vs NZ) ವಿರುದ್ಧದ ಅಂತಿಮ ಟೆಸ್ಟ್‌ ಪಂದ್ಯದಲ್ಲಿ 25 ರನ್‌ಗಳ ಸೋಲಿಗೆ ತುತ್ತಾಗಿ ತವರಿನಲ್ಲೇ ವೈಟ್‌ವಾಶ್‌ ಮುಖಭಂಗಕ್ಕೆ ಒಳಗಾಗಿದೆ. ಸೋಲಿನೊಂದಿಗೆ ವಿಶ್ವ ಟೆಸ್ಟ್‌ ಚಾಂಪಿಯನ್‌ಶಿಪ್‌ ಅಂಕಟ್ಟಿಯಲ್ಲಿಯೂ ಭಾರತ ಒಂದು ಸ್ಥಾನ ಕುಸಿತ ಕಂಡು ದ್ವಿತೀಯ ಸ್ಥಾನ ಪಡೆದಿದೆ. ಹಾಲಿ ಚಾಂಪಿಯನ್‌ ಆಸ್ಟ್ರೇಲಿಯಾ ಅಗ್ರಸ್ಥಾನಕ್ಕೇರಿದೆ.

ಭಾರತ ತಂಡ ಇದುವರೆಗೆ ತವರಿನಲ್ಲಿ ಆಡಿದ ಎರಡಕ್ಕಿಂತ ಹೆಚ್ಚು ಪಂದ್ಯಗಳ ಸರಣಿಯಲ್ಲಿ ಒಮ್ಮೆಯೂ ವೈಟ್‌ ವಾಶ್‌ ಎದುರಿಸಿರಲಿಲ್ಲ. ಇದೀಗ ಕಿವೀಸ್‌ ಕಿವೀಸ್‌ ವಿರುದ್ಧ 3-0 ಅಂತರದಿಂದ ಸೋತು ಮೊದಲ ಬಾರಿಗೆ ವೈಟ್‌ ವಾಶ್‌ ಆದ ಕಳಪೆ ದಾಖಲೆಯನ್ನು ತನ್ನ ಹೆಸರಿಗೆ ಸೇರಿಸಿಕೊಂಡಿದೆ. ಒಂದಕ್ಕಿಂತ ಹೆಚ್ಚು ಪಂದ್ಯಗಳ ಟೆಸ್ಟ್‌ ಸರಣಿಯಲ್ಲಿ ಒಮ್ಮೆ ಮಾತ್ರ ಭಾರತ ವೈಟ್‌ ವಾಶ್‌ ಮುಖಭಂಗ ಎದುರಿಸಿತ್ತು. 1999-2000 ದಲ್ಲಿ. ದಕ್ಷಿಣ ಆಫ್ರಿಕಾ ವಿರುದ್ಧ 2-0 ಅಂತರದಿಂದ ಸರಣಿ ಸೋಲು ಅನುಭವಿಸಿತ್ತು. ನ್ಯೂಜಿಲೆಂಡ್ ತವರು ಅಥವಾ ವಿದೇಶದಲ್ಲಿ ಮೂರು ಟೆಸ್ಟ್‌ಗಳನ್ನು ಗೆದ್ದ ಮೊದಲ ನಿದರ್ಶನ ಇದಾಗಿದೆ.

ಅತ್ಯಂತ ರೋಚಕ ಮತ್ತು ಕುತೂಹಲ ಮೂಡಿಸಿದ್ದ ಈ ಟೆಸ್ಟ್‌ ಪಂದ್ಯದ ಮೂರನೇ ದಿನದಾಟದಲ್ಲಿ ಭಾರತ ನಾಟಕೀಯ ಪ್ರದರ್ಶನ ತೋರುವ ಸೋಲು ಕಂಡಿತು. ಎರಡನೇ ದಿನದಾಟದ ಅಂತ್ಯಕ್ಕೆ 43.3 ಓವರ್‌ಗಳಲ್ಲಿ 9 ವಿಕೆಟ್‌ಗಳನ್ನು ಕಳೆದುಕೊಂಡು 171 ರನ್‌ ಗಳಿಸಿದ್ದ ನ್ಯೂಜಿಲ್ಯಾಂಡ್‌ ಇಂದು ಕೇವಲ 14 ಎಸೆತ ಎದುರಿಸಿ ಮೂರು ರನ್‌ ಕಲೆಹಾಕಲಷ್ಟೇ ಶಕ್ತವಾಗಿ 174 ರನ್‌ಗೆ ಆಲ್‌ಔಟ್‌ ಆಯಿತು. ಭಾರತ 121 ರನ್‌ಗೆ ಸರ್ಪಪತನ ಕಂಡು ಹೀನಾಯ ಸೋಲು ಕಂಡಿತು.

ಗೆಲುವಿಗೆ 147 ರನ್‌ ಬೆನ್ನಟ್ಟಿದ ಭಾರತ ಈ ಮೊತ್ತವನ್ನು ಭೋಜನ ವಿರಾಮಕ್ಕೂ ಮುನ್ನವೇ ಬಾರಿಸಿ ಗೆಲುವಿನ ಬಾವುಟ ಹಾರಿಸಬಹುದೆಂದು ಭಾವಿಸಲಾಗಿತ್ತು. ಆದರೆ ನಡೆದಿದ್ದೇ ಬೇರೆ. ಇನಿಂಗ್ಸ್‌ ಆರಂಭಿಸಿದ ಭಾರತ ಬಡಬಡನೆ ವಿಕೆಟ್‌ ಕಳೆದುಕೊಂಡು ಸೋಲಿನ ಭೀತಿಗೆ ಸಿಲುಕಿತ್ತು. ರೋಹಿತ್‌ ಶರ್ಮ(11), ಯಶಸ್ವಿ ಜೈಸ್ವಾಲ್‌(5), ವಿರಾಟ್‌ ಕೊಹ್ಲಿ(1), ಶುಭಮನ್‌ ಗಿಲ್‌(1), ವಿರಾಟ್‌ ಕೊಹ್ಲಿ(1) ಒಬ್ಬರ ಹಿಂದೆ ಒಬ್ಬರಂತೆ ವಿಕೆಟ್‌ ಒಪ್ಪಿಸಿ ಪೆವಿಲಿಯನ್‌ ಪರೇಡ್‌ ನಡೆಸಿದರು. 29 ರನ್‌ಗೆ 5 ವಿಕೆಟ್‌ ಕಳೆದುಕೊಂಡು ತೀವ್ರ ಸಂಕಷ್ಟಕ್ಕೆ ಸಿಲುಕಿತು. ಅಗ್ರ ಕ್ರಮಾಂಕದ ಬ್ಯಾಟರ್‌ಗಳಾದ ರೋಹಿತ್‌ ಶರ್ಮ ಮತ್ತು ವಿರಾಟ್‌ ಕೊಹ್ಲಿ ಅಗ್ಗಕ್ಕೆ ಔಟ್‌ ಆಗುವ ಮೂಲಕ ಸಂಪೂರ್ಣ ಸರಣಿಯಲ್ಲಿ ವೈಫಲ್ಯ ಎದುರಿಸಿದರು.

ಇದನ್ನೂ ಓದಿ IND vs NZ: ವಿಕೆಟ್‌ ಪತನದಲ್ಲೂ ದಾಖಲೆ ಬರೆದ ವಾಂಖೆಡೆ

7ನೇ ಕ್ರಮಾಂಕದಲ್ಲಿ ಆಡಲಿಳಿದ ರವೀಂದ್ರ ಜಡೇಜಾ 22 ಎಸೆತ ಎದುರಿಸಿ ನಿಂತರೂ, ಗಳಿಸಿದ್ದು ಕೇವಲ 6 ರನ್‌. ಒಂದೆಡೆ ತರಗೆಲೆಯಂತೆ ವಿಕೆಟ್‌ ಬೀಳುತ್ತಿದ್ದರೂ ಕೂಡ ತಂಡದ ಗೆಲುವಿಗಾಗಿ ಮತ್ತೊಂದು ತುದಿಯಲ್ಲಿ ಟೊಂಕ ಕಟ್ಟಿ ನಿಂತ ರಿಷಭ್‌ ಪಂತ್‌ ನಿರ್ಭೀತಿಯಿಂದ ಬ್ಯಾಟ್‌ ಬೀಸಿದರು. ತಮ್ಮ ಎಂದಿನ ಆಕ್ರಮಕಾರಿ ಬ್ಯಾಟಿಂಗ್‌ ಮೂಲಕ ಕಿವೀಸ್‌ ಬೌಲರ್‌ಗಳ ದಾಳಿಯನ್ನು ಸಮರ್ಥವಾಗಿ ಎದುರಿಸಿ ನಿಂತು ಅರ್ಧಶತಕ ಬಾರಿಸಿ ಮಿಂಚಿದರು. ನೆರೆದಿದ್ದ ಅಭಿಮಾನಿಗಳು ಕೂಡ ಪಂತ್‌ ಕ್ರೀಸ್‌ನಲ್ಲಿರುವಷ್ಟು ಹೊತ್ತು ಎದುರಾಳಿಗಳಿಗೆ ಗೆಲುವಿನ ಭರವಸೆ ಇರುವುದಿಲ್ಲ ಎಂದು ನಂಬಿದ್ದರು.

ಗೆಲುವಿಗೆ 41 ರನ್‌ ಬೇಕಿದ್ದ ವೇಳೆ ಪಂತ್‌ ವಿಕೆಟ್‌ ಪತನಗೊಂಡಿತು. ಈ ವೇಳೆ ಮತ್ತೆ ಅಭಿಮಾನಿಗಳು ಆತಂಕಕ್ಕೆ ಒಳಗಾದರು. ಪಂತ್‌ ವಿಕೆಟ್‌ ಪತನಗೊಂಡದ್ದೇ ತಡ ಭಾರತ ಕುಸಿದು ಆಲೌಟ್‌ ಆಗಿ ಸೋಲು ಕಂಡಿತು.57 ಎಸೆತ ಎದುರಿಸಿ ಪಂತ್‌ ಆಕರ್ಷಕ 9 ಬೌಂಡರಿ ಮತ್ತು ಒಂದು ಸಿಕ್ಸರ್‌ ನೆರವಿನಿಂದ 64 ರನ್‌ ಬಾರಿಸಿದರು. ಕಿವೀಸ್‌ ಪರ ಅಜಾಜ್‌ ಪಟೇಲ್‌ ದ್ವಿತೀಯ ಇನಿಂಗ್ಸ್‌ನಲ್ಲಿ ತಮ್ಮ ಕೈಚಳಕ ತೋರುವಲ್ಲಿ ಯಶಸ್ವಿಯಾದರು. 6 ವಿಕೆಟ್‌ ಕಿತ್ತು ಮಿಂಚಿದರು. ಮೊದಲ ಇನಿಂಗ್ಸ್‌ನಲ್ಲಿಯೂ 5 ವಿಕೆಟ್‌ ಉರುಳಿಸಿದ್ದರು. ಗ್ಲೆನ್‌ ಪಿಲಿಪ್ಸ್‌ 3 ವಿಕೆಟ್‌ ಕಡೆವಿದರು.

ಮೊದಲ ಇನಿಂಗ್ಸ್‌ನಲ್ಲಿ 65 ರನ್‌ ನೀಡಿ ಐದು ವಿಕೆಟ್‌ ಕಬಳಿಸಿದ್ದ ಜಡೇಜ, ಎರಡನೇ ಇನಿಂಗ್ಸ್‌ನಲ್ಲೂ ಅದೇ ಸಾಧನೆಯನ್ನು ಪುನರಾವರ್ತಿಸಿದರು. 55 ರನ್‌ ನೀಡಿ ಐದು ವಿಕೆಟ್‌ ಗೊಂಚಲು ಪಡೆದು ಕಿವೀಸ್‌ ಬ್ಯಾಟರ್‌ಗಳ ಕಿವಿ ಹಿಂಡಿದರು. ಇದು(120 ರನ್‌ಗೆ 10 ವಿಕೆಟ್‌) ಟೆಸ್ಟ್‌ ಕ್ರಿಕೆಟ್‌ನಲ್ಲಿ ಜಡೇಜಾ ಅವರ ಎರಡನೇ ಅತ್ಯುತ್ತಮ ಬೌಲಿಂಗ್‌ ಸಾಧನೆಯಾಗಿದೆ. ಕಳೆದ ವರ್ಷ ಆಸ್ಟ್ರೇಲಿಯಾ ವಿರುದ್ಧ 110 ರನ್‌ ನೀಡಿ 10 ವಿಕೆಟ್‌ ಪಡೆದಿದ್ದರು.

ಸಂಕ್ಷಿಪ್ತ ಸ್ಕೋರ್‌

ನ್ಯೂಜಿಲ್ಯಾಂಡ್‌; ಮೊದಲ ಇನಿಂಗ್ಸ್‌-235 (ವಿಲ್‌ ಯಂಗ್‌ 71, ಡೇರಿಯಲ್‌ ಮಿಚೆಲ್‌ 80, ಟಾಮ್‌ ಲ್ಯಾಥಮ್‌ 28, ರವೀಂದ್ರ ಜಡೇಜಾ 65 ಕ್ಕೆ5, ವಾಷಿಂಗ್ಟನ್‌ ಸುಂದರ್‌ 81 ಕ್ಕೆ 4), ದ್ವಿತೀಯ ಇನಿಂಗ್ಸ್‌-174 (ವಿಲ್‌ ಯಂಗ್‌ 51, ಡೆವೋನ್‌ ಕಾನ್ವೆ 22, ಜಡೇಜಾ 55 ಕ್ಕೆ 5, ಆರ್‌. ಅಶ್ವಿನ್‌ 63 ಕ್ಕೆ 3).

ಭಾರತ; ಮೊದಲ ಇನಿಂಗ್ಸ್‌-263 (ಶುಭಮನ್‌ ಗಿಲ್‌ 90, ರಿಷಭ್‌ ಪಂತ್‌ 60, ವಾಷಿಂಗ್ಟನ್‌ ಸುಂದರ್‌ 38*, ಅಜಾಜ್‌ ಪಟೇಲ್‌ 103 ಕ್ಕೆ 5), ದ್ವಿತೀಯ ಇನಿಂಗ್ಸ್‌-121(ರಿಷಭ್‌ ಪಂತ್‌-64, ಅಜಾಜ್‌ ಪಟೇಲ್‌ 57 ಕ್ಕೆ 6, ಗ್ಲೆನ್‌ ಪಿಲಿಪ್ಸ್‌ 42 ಕ್ಕೆ 3). ಪಂದ್ಯಶ್ರೇಷ್ಠ: ಅಜಾಜ್‌ ಪಟೇಲ್‌. ಸರಣಿ ಶ್ರೇಷ್ಠ: ವಿಲ್‌ ಯಂಗ್