Thursday, 28th November 2024

IND vs PAK: ಪಾಕ್‌ ತಂಡಕ್ಕೂ ಭಾರತದಲ್ಲಿ ಆಡಲು ಸಾಧ್ಯವಿಲ್ಲ; ಎಚ್ಚರಿಕೆ ನೀಡಿದ ಪಿಸಿಬಿ ಮುಖ್ಯಸ್ಥ

ಲಾಹೋರ್‌: ಭಾರತ ತಂಡ ಪಾಕಿಸ್ತಾನಕ್ಕೆ(IND vs PAK) ಪ್ರಯಾಣಿಸಲು ನಿರಾಕರಿಸಿದ ಹಿನ್ನೆಲೆ ಮುಂದಿನ ವರ್ಷ ಪಾಕಿಸ್ತಾನದಲ್ಲಿ ನಡೆಯಬೇಕಿರುವ ಐಸಿಸಿ ಚಾಂಪಿಯನ್ಸ್‌ ಟ್ರೋಫಿ(Champions Trophy 2025) ಏಕದಿನ ಪಂದ್ಯಾವಳಿಯನ್ನು ಅಂತಾರಾಷ್ಟ್ರೀಯ ಕ್ರಿಕೆಟ್‌ ಸಮಿತಿ (ಐಸಿಸಿ) ಪಾಕಿಸ್ತಾನದಿಂದ ಸ್ಥಳಾಂತರಗೊಳಿಸುವ ಸಾಧ್ಯತೆ ಇದೆ ಹೇಳಲಾಗಿದೆ. ಇದರ ಬೆನ್ನಲ್ಲೇ ಪಾಕಿಸ್ತಾನ ಕ್ರಿಕೆಟ್‌ ಮಂಡಳಿ ಅಧ್ಯಕ್ಷ ಮೊಹ್ಸಿನ್ ನಖ್ವಿ(PCB chief Naqvi), ಭಾರತವು ತನ್ನ ತಂಡವನ್ನು ಪಾಕಿಸ್ತಾನಕ್ಕೆ ಕಳುಹಿಸಲು ನಿರಾಕರಿಸಿದರೆ, ಪಾಕಿಸ್ತಾನ ತಂಡ ಕೂಡ ಮುಂದೆ ಭಾರತಕ್ಕೆ ಪ್ರಯಾಣಿಸುವುದು ಅಸಾಧ್ಯ ಎಂದು ಹೇಳಿದ್ದಾರೆ.

ಪಾಕ್‌ ಮಾಧ್ಯಮದ ಜತೆ ಮಾತನಾಡಿದ ಮೊಹ್ಸಿನ್ ನಖ್ವಿ, ಭದ್ರತೆಯ ಕಾರಣದಿಂದ ಭಾರತ ತಂಡ ಪಾಕಿಸ್ತಾನಕ್ಕೆ ಬಾರದೇ ಇದ್ದರೆ ನಾವು ಕೂಡ ಮುಂದಿನ ದಿನಗಳಲ್ಲಿ ಭಾರತದ ಆತಿಥ್ಯದಲ್ಲಿ ನಡೆಯುವ ಐಸಿಸಿ ಟೂರ್ನಿಯ ಪಂದ್ಯವನ್ನಾಡಲು ಭಾರತಕ್ಕೆ ನಮ್ಮ ತಂಡವನ್ನು ಕಳುಹಿಸುವುದಿಲ್ಲ. ನಮಗೂ ಭದ್ರತೆಯ ಕೊರತೆ ಕಾಡಲಿದೆʼ ಎಂದು ಹೇಳಿದ್ದಾರೆ.

ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ತನ್ನ ತಂಡವನ್ನು ಪಾಕಿಸ್ತಾನಕ್ಕೆ ಕಳುಹಿಸಲು ತನ್ನ ನಿಲುವನ್ನು ಐಸಿಸಿಗೆ ತಿಳಿಸಿದ ನಂತರ ಚಾಂಪಿಯನ್ಸ್ ಟ್ರೋಫಿಯ ಭವಿಷ್ಯವು ಅನಿಶ್ಚಿತವಾಗಿದೆ. ಅಂತಿಮ ನಿರ್ಧಾರವನ್ನು ತೆಗೆದುಕೊಳ್ಳಲು ಜಾಗತಿಕ ಕ್ರಿಕೆಟ್ ಸಂಸ್ಥೆ ತನ್ನ ಕಾರ್ಯಕಾರಿ ಮಂಡಳಿಯ ಸದಸ್ಯರ ವರ್ಚುವಲ್ ಸಭೆಯನ್ನು ಶುಕ್ರವಾರ ನಿಗದಿಪಡಿಸಿದೆ. ಈ ಸಭೆಗೂ ಮುನ್ನವೇ ಮೊಹ್ಸಿನ್ ನಖ್ವಿ ಈ ಹೇಳಿಕೆ ನೀಡಿದ್ದಾರೆ.

ʼಭಾರತೀಯ ಅಧಿಕಾರಿಗಳು ತಮ್ಮ ತಂಡವನ್ನು ಪಾಕಿಸ್ತಾನದಲ್ಲಿ ಆಡಲು ಕಳುಹಿಸಲು ಇಷ್ಟಪಡದಿರುವಾಗ ಪಾಕಿಸ್ತಾನವು ಎಲ್ಲಾ ಕಾರ್ಯಕ್ರಮಗಳಿಗೆ ಭಾರತದಲ್ಲಿ ಆಡುವುದನ್ನು ಮುಂದುವರಿಸಲು ಸಾಧ್ಯವಿಲ್ಲ. ಅಂತಹ ಅಸಮಾನ ಪರಿಸ್ಥಿತಿಯನ್ನು ನಾವು ಒಪ್ಪಿಕೊಳ್ಳಲು ಸಾಧ್ಯವಿಲ್ಲʼ ಎಂದು ನಖ್ವಿ ಗಡಾಫಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ನಿರ್ಮಾಣ ಕಾಮಗಾರಿಯನ್ನು ಪರಿಶೀಲಿಸಲು ಭೇಟಿ ನೀಡಿದ ಸಂದರ್ಭದಲ್ಲಿ ಸುದ್ದಿಗಾರರಿಗೆ ತಿಳಿಸಿದರು.

ಇದನ್ನೂ ಓದಿ Champions Trophy: ಹೈಬ್ರಿಡ್ ಮಾದರಿಯಲ್ಲೇ ಚಾಂಪಿಯನ್ಸ್ ಟ್ರೋಫಿ; ಪಾಕ್‌ಗೆ ಹಿನ್ನಡೆ

ಶುಕ್ರವಾರ ನಡೆಯುವ ಸಭೆಯ ಬಗ್ಗೆ ಮಾತನಾಡಿದ ನಖ್ವಿ, ʼಸಭೆಯಲ್ಲಿ ಏನೇ ನಡೆದರೂ ನಾವು ನಮ್ಮ ಜನರಿಗೆ ಸ್ವೀಕಾರಾರ್ಹವಾದ ಒಳ್ಳೆಯ ಸುದ್ದಿ ಮತ್ತು ನಿರ್ಧಾರಗಳನ್ನು ತರುತ್ತೇವೆ ಎಂದು ನಾನು ಭರವಸೆ ನೀಡಬಲ್ಲೆʼ ಎಂದು ಅವರು ಹೇಳಿದರು. ಹೈಬ್ರಿಡ್ ಮಾದರಿಯನ್ನು ಸ್ವೀಕರಿಸಲು ಪಾಕಿಸ್ತಾನಕ್ಕೆ ಹೆಚ್ಚುವರಿ ಆರ್ಥಿಕ ಪ್ರೋತ್ಸಾಹವನ್ನು ನೀಡಲಾಗಿದೆ ಎಂದು ವರದಿಗಳಿವೆ. ಆದರೆ ಈ ವರದಿಯನ್ನು ನಖ್ವಿ ತಳ್ಳಿ ಹಾಕಿದ್ದಾರೆ. 2025ರ ಫೆಬ್ರವರಿ-ಮಾರ್ಚ್‌ನಲ್ಲಿ ನಡೆಯಲಿರುವ ಚಾಂಪಿಯನ್ಸ್‌ ಟ್ರೋಫಿಯ ವೇಳಾಪಟ್ಟಿ ಇನ್ನೂ ಘೋಷಣೆಯಾಗಿಲ್ಲ.