Thursday, 31st October 2024

IND vs SA T20I: ಭಾರತ ವಿರುದ್ಧದ ಟಿ20 ಸರಣಿಗೆ ದಕ್ಷಿಣ ಆಫ್ರಿಕಾ ತಂಡ ಪ್ರಕಟ

ಜೊಹಾನ್ಸ್‌ಬರ್ಗ್‌: ಮುಂದಿನ ತಿಂಗಳು ನಡೆಯುವ ಬಹುನಿರೀಕ್ಷಿತ ಪ್ರವಾಸಿ ಭಾರತ ಎದುರಿನ ನಾಲ್ಕು ಪಂದ್ಯಗಳ ಟಿ20 ಸರಣಿಗೆ(IND vs SA T20I) ಆತಿಥೇಯ ದಕ್ಷಿಣ ಆಫ್ರಿಕಾ(South Africa squad) 16 ಸದಸ್ಯರ ತಂಡವನ್ನು ಪ್ರಕಟಿಸಿದೆ. ಐಡೆನ್‌ ಮಾರ್ಕ್ರಮ್‌ ತಂಡವನ್ನು ಮುನ್ನಡೆಸಲಿದ್ದಾರೆ. ಆದರೆ, ಟೆಸ್ಟ್ ಕ್ರಿಕೆಟ್‌ನ ನಂ.1 ಬೌಲರ್‌ ಪಟ್ಟಕ್ಕೇರಿದ ವೇಗಿ ಕಗಿಸೊ ರಬಾಡ ಅವರಿಗೆ ಕೆಲಸದೊತ್ತಡ ಕಡಿಮೆ ಮಾಡುವ ಸಲುವಾಗಿ ವಿಶ್ರಾಂತಿ ನೀಡಲಾಗಿದೆ. ಸರಣಿಯ ಮೊದಲ ಪಂದ್ಯ ನ.8 ರಿಂದ ಆರಂಭವಾಗಲಿದೆ.

ಕೇಶವ್ ಮಹಾರಾಜ್ ಸ್ಪಿನ್ ಜವಾಬ್ದಾರಿಯನ್ನು ನಿಭಾಯಿಸಿದರೆ, ಮಾರ್ಕೊ ಜಾನ್ಸೆನ್ ಮತ್ತು ಜೆರಾಲ್ಡ್ ಕೋಟ್ಜಿ ವೇಗದ ಬೌಲಿಂಗ್‌ ದಾಳಿಯನ್ನು ಮುನ್ನಡೆಸಲಿದ್ದಾರೆ. ಸೌತ್‌ ಆಫ್ರಿಕಾ ಕ್ರಿಕೆಟ್‌ ಲೀಗ್‌ನಲ್ಲಿ ಅಮೋಘ ಬೌಲಿಂಗ್‌ ಪ್ರದರ್ಶನದ ಮೂಲಕ ಕೂಟದಲ್ಲಿ 12 ವಿಕೆಟ್‌ಗಳನ್ನು ಪಡೆದಿದ್ದ ಆಲ್‌ರೌಂಡರ್ ಮಿಹ್ಲಾಲಿ ಎಂಪೊಂಗ್ವಾನಾ ರಾಷ್ಟ್ರೀಯ ತಂಡದ ಪರ ಚೊಚ್ಚಲ ಕರೆ ಪಡೆದಿದ್ದಾರೆ. ಜತೆಗೆ, ಅನ್‌ಕ್ಯಾಪ್ಡ್ ಆಲ್-ರೌಂಡರ್ ಆಂಡಿಲ್ ಸಿಮೆಲೆನ್ ಕೂಡ ತಂಡದಲ್ಲಿ ಸ್ಥಾನ ಪಡೆದಿದ್ದಾರೆ.

ಇದನ್ನೂ ಓದಿ IND vs NZ 3rd Test: ಮುಂಬೈ ಟೆಸ್ಟ್‌ಗೆ ಸ್ಪರ್ಧಾತ್ಮಕ ಪಿಚ್‌

ʼ2026 ರಲ್ಲಿ ನಡೆಯುವ ಟಿ20 ವಿಶ್ವಕಪ್‌ಗೆ ತಂಡವನ್ನು ಕಟ್ಟಲು ಈ ಸರಣಿ ಪ್ರಮುಖವಾಗಿದೆ. ತಂಡವು ಯುವ ಮತ್ತು ಅನುಭವಿಗಳ ಉತ್ತಮ ಸಂಮಿಶ್ರಣವನ್ನು ಹೊಂದಿದೆ, ಮತ್ತು ಅತ್ಯಂತ ಆಕ್ರಮಣಕಾರಿ ಭಾರತ ತಂಡದ ವಿರುದ್ಧ ನಾವು ಕೆಲವು ಗುಣಮಟ್ಟದ ಪ್ರದರ್ಶನಗಳನ್ನು ನೀಡಲು ಎದುರು ನೋಡುತ್ತಿದ್ದೇನೆ” ಎಂದು ದಕ್ಷಿಣ ಆಫ್ರಿಕಾ ಕ್ರಿಕೆಟ್‌ ಮಂಡಳಿ ತನ್ನ ಪ್ರಕಟನೆಯಲ್ಲಿ ತಿಳಿಸಿದೆ.

ದಕ್ಷಿಣ ಆಫ್ರಿಕಾ ತಂಡ

ಐಡೆನ್ ಮಾರ್ಕ್ರಾಮ್ (ನಾಯಕ), ಒಟ್ನೀಲ್ ಬಾರ್ಟ್‌ಮ್ಯಾನ್, ಜೆರಾಲ್ಡ್ ಕೊಯೆಟ್ಜಿ, ಡೊನೊವನ್ ಫೆರೀರಾ, ರೀಜಾ ಹೆಂಡ್ರಿಕ್ಸ್, ಮಾರ್ಕೊ ಜಾನ್ಸೆನ್, ಹೆನ್ರಿಚ್ ಕ್ಲಾಸೆನ್, ಪ್ಯಾಟ್ರಿಕ್ ಕ್ರುಗರ್, ಕೇಶವ್ ಮಹಾರಾಜ್, ಡೇವಿಡ್ ಮಿಲ್ಲರ್, ಮಿಹ್ಲಾಲಿ ಎಂಪೊಂಗ್ವಾನಾ, ನ್ಕಾಬಾ ಪೀಟರ್, ರಿಯಾನ್ ಸಿಮೆಲಾನೆಟನ್, ಆಂಡಿಲೆ ಸಿಮೆಲೆನ್, ಲುಥೋ ಸಿಪಾಮ್ಲಾ(3ನೇ ಮತ್ತು 4ನೇ ಪಂದ್ಯಕ್ಕೆ), ಟ್ರಿಸ್ಟಾನ್ ಸ್ಟಬ್ಸ್.

ಭಾರತ ತಂಡ

ಸೂರ್ಯಕುಮಾರ್ ಯಾದವ್ (ನಾಯಕ), ಅಭಿಷೇಕ್ ಶರ್ಮ, ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್), ರಿಂಕು ಸಿಂಗ್, ತಿಲಕ್ ವರ್ಮ, ಜಿತೇಶ್ ಶರ್ಮ (ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ, ಅಕ್ಷರ್ ಪಟೇಲ್, ರಮಣದೀಪ್ ಸಿಂಗ್, ವರುಣ್ ಚಕ್ರವರ್ತಿ, ರವಿ ಬಿಷ್ಣೋಯ್ , ಅರ್ಷದೀಪ್‌ ಸಿಂಗ್, ವಿಜಯ್ ಕುಮಾರ್ ವೈಶಾಕ್, ಅವೇಶ್ ಖಾನ್, ಯಶ್ ದಯಾಳ್.