Wednesday, 27th November 2024

IPL 2025: ಪಂಜಾಬ್‌ಗಿಂತ ಬೆಂಗಳೂರು ನನಗೆ ಉತ್ತಮ ಸ್ಥಳ ಎಂದ ಲಿಯಾಮ್‌ ಲಿವಿಂಗ್‌ಸ್ಟೋನ್‌!

IPL 2025: RCB new batter Liam Livingstone feels Bengaluru will be better for him than Punjab

ಬೆಂಗಳೂರು: ನನ್ನ ಬ್ಯಾಟಿಂಗ್‌ ಶೈಲಿಗೆ ಪಂಜಾಬ್‌ಗಿಂತ ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣ ಹೆಚ್ಚು ಸೂಕ್ತವಾಗುತ್ತದೆ ಎಂದು ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡಕ್ಕೆ( IPL 2025) ಹೊಸದಾಗಿ ಬಂದಿರುವ ಲಿಯಾಮ್‌ ಲಿವಿಂಗ್‌ಸ್ಟೋನ್‌ ತಿಳಿಸಿದ್ದಾರೆ. ಪಂಜಾಬ್‌ ಕಿಂಗ್ಸ್‌ ತಂಡದ ಪರ ಮೂರು ಆವೃತ್ತಿಗಳಲ್ಲಿ ಇಂಗ್ಲೆಂಡ್‌ ಆಟಗಾರ ಆಡಿದ್ದರು. ಆದರೆ, ಅಲ್ಲಿ ಸ್ಥಿರ ಪ್ರದರ್ಶನ ತೋರದ ಕಾರಣ ಅವರನ್ನು ಪಂಜಾಬ್‌ ಫ್ರಾಂಚೈಸಿ ಬಿಡುಗಡೆ ಮಾಡಿತ್ತು.

ನವೆಂಬರ್‌ 24 ರಂದು ಸೌದಿ ಅರೇಬಿಯಾದ ಜೆಡ್ಡಾದಲ್ಲಿ ನಡೆದಿದ್ದ 2025ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಮೆಗಾ ಹರಾಜಿನಲ್ಲಿ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡ ಲಿಯಾಮ್‌ ಲಿವಿಂಗ್‌ಸ್ಟೋನ್‌ ಅವರನ್ನು 8.75 ಕೋಟಿ ರೂ ಗಳಿಗೆ ಖರೀದಿಸಿತ್ತು. ಈ ಬಗ್ಗೆ ರಾಯಿಟರ್ಸ್‌ ಜೊತೆ ಮಾತನಾಡಿದ ಲಿಯಾಮ್‌ ಲಿವಿಂಗ್‌ಸ್ಟೋನ್‌, ಆರ್‌ಸಿಬಿ ತಂಡದ ಜೊತೆ ಐಪಿಎಲ್‌ ಟೂರ್ನಿಯ ಪಯಣವನ್ನು ಫ್ರೆಶ್‌ ಆಗಿ ಆರಂಭಿಸುತ್ತೇನೆ ಹಾಗೂ ಬೆಂಗಳೂರು ಮೈದಾನ ನನ್ನ ಬ್ಯಾಟಿಂಗ್‌ ಶೈಲಿಗೆ ಸೂಕ್ತವಾಗುತ್ತದೆ ಎಂದು ಹೇಳಿದ್ದಾರೆ.

“ಅಭಿಮಾನಿ ಬಳಗವು ತುಂಬಾ ಉತ್ಸಾಹದಿಂದ ಕೂಡಿದೆ. ಐಪಿಎಲ್‌ ಟೂರ್ನಿಯಲ್ಲಿ ಆರ್‌ಸಿಬಿ ಅತ್ಯಂತ ದೊಡ್ಡ ಫ್ರಾಂಚೈಸಿ. ಹಾಗಾಗಿ ಈ ತಂಡದ ಪರ ನಾನು ಐಪಿಎಲ್‌ ಅನ್ನು ಫ್ರೆಶ್‌ ಆಗಿ ಆರಂಭಿಸುತ್ತೇನೆ,” ಎಂದು ರಾಯಿಟರ್ಸ್‌ಗೆ ಲಿಯಾಮ್‌ ಲಿವಿಂಗ್‌ಸ್ಟೋನ್‌ ತಿಳಿಸಿದ್ದಾರೆ.

IPL 2025 Auction: ಆರ್‌ಸಿಬಿ ಸೇರಿದ ಟಿಮ್‌ ಡೇವಿಡ್‌, ರೊಮಾರಿಯೊ ಶೆಫರ್ಡ್‌!

“ನನ್ನ ಬ್ಯಾಟಿಂಗ್‌ ಶೈಲಿಗೆ ಬೆಂಗಳೂರು ಸೂಕ್ತವಾಗಲಿದೆ ಎಂಬುದು ನನ್ನ ಭಾವನೆ. ಭಾರತದ ಇತರೆ ಕ್ರೀಡಾಂಗಣಗಳಿಗಿಂತ ಬೆಂಗಳೂರು ಕ್ರೀಡಾಂಗಣ ಸ್ವಲ್ಪ ಕಿರಿದಾಗಿದೆ. ಅದರಲ್ಲಿಯೂ ಪಂಜಾಬ್‌ಗಿಂತ ಇಲ್ಲಿನ ಕ್ರೀಡಾಂಗಣ ತುಂಬಾ ಚೆನ್ನಾಗಿದೆ. ಇಲ್ಲಿನ ಕ್ರೀಡಾಂಗಣಕ್ಕೆ ನನ್ನ ಬ್ಯಾಟಿಂಗ್‌ ಶೈಲಿ ಸೂಕ್ತವಾಗಲಿದೆ ಎಂದು ಭಾವಿಸುತ್ತೇನೆ,” ಎಂದು ಇಂಗ್ಲೆಂಡ್‌ ಸ್ಪೋಟಕ ಬ್ಯಾಟ್ಸ್‌ಮನ್‌ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ವಿರಾಟ್‌ ಕೊಹ್ಲಿ ಜೊತೆ ಆಡಲು ಎದುರು ನೋಡುತ್ತಿದ್ದೇನೆ

ಆರ್‌ಸಿಬಿ ತಂಡಕ್ಕೆ ಬರುವುದಕ್ಕೂ ಮುನ್ನ ನಾನು ಸಾಕಷ್ಟು ಕಠಿಣ ಪರಿಶ್ರಮ ಪಡಬೇಕಾಗಿದೆ. ಆರ್‌ಸಿಬಿ ತಂಡದಲ್ಲಿ ವಿರಾಟ್‌ ಕೊಹ್ಲಿ ಹಾಗೂ ಫಿಲ್‌ ಸಾಲ್ಟ್‌ ಮ್ಯಾಜಿಕ್‌ ಮಾಡಲಿದ್ದಾರೆ. ಬೆಂಗಳೂರು ತಂಡಕ್ಕೆ ಸೇರ್ಪಡೆಯಾಗಲು ಅಪಾರ ಉತ್ಸಾಹವನ್ನು ಹೊಂದಿರುವ ಲಿಯಾಮ್‌ ಲಿವಿಂಗ್‌ಸ್ಟೋನ್‌, ವಿರಾಟ್‌ ಕೊಹ್ಲಿ ಜೊತೆ ಆಡಲು ಎದುರು ನೋಡುತ್ತಿರುವುದಾಗಿ ಹೇಳಿಕೊಂಡಿದ್ದಾರೆ.

“ಮೆಗಾ ಹರಾಜಿನಲ್ಲಿ ನಮ್ಮ ಪಾಲಿನ ಸಂಗತಿಗಳು ಚೆನ್ನಾಗಿದ್ದವು. ನಾವು ಒಳ್ಳೆಯ ಆಟಗಾರರನ್ನು ಖರೀದಿಸಿದ್ದೇವೆ ಹಾಗೂ ಬುದ್ದಿವಂತಿಕೆಯಿಂದ ಖರೀದಿ ಮಾಡಿದ್ದೇವೆ. ಆರ್‌ಸಿಬಿಯ ಕೆಲ ಆಟಗಾರರು ನನಗೆ ಚೆನ್ನಾಗಿ ಗೊತ್ತಿದೆ ಹಾಗೂ ಬೆಂಗಳೂರು ತಂಡದ ಗುಂಪು ಸೇರಲು ಎದುರು ನೋಡುತ್ತಿದ್ದೇನೆ. ವಿರಾಟ್‌ ಕೊಹ್ಲಿ ಅವರಂಥ ಆಟಗಾರನ ಜೊತೆ ಆಡಲು ತುಂಬಾ ಚೆನ್ನಾಗಿರುತ್ತದೆ,” ಎಂದು ಇಂಗ್ಲೆಂಡ್‌ ಆಟಗಾರ ತಿಳಿಸಿದ್ದಾರೆ.

IPL 2025: ಆರ್‌ಸಿಬಿಗೆ ಸೇರಿದ ಬೆನ್ನಲ್ಲೆ 15 ಎಸೆತಗಳಲ್ಲಿ ಫಿಫ್ಟಿ ಬಾರಿಸಿದ ಲಿಯಾಮ್ ಲಿವಿಂಗ್‌ಸ್ಟೋನ್‌!

15 ಎಸೆತಗಳಲ್ಲಿ ಅರ್ಧಶತಕ ಸಿಡಿಸಿದ್ದ ಲಿಯಾಮ್‌

ಆರ್‌ಸಿಬಿಗೆ ಸೇರಿದ ಸೇರಿದ ಬೆನ್ನಲ್ಲೆ ಇಂಗ್ಲೆಂಡ್‌ ಬ್ಯಾಟ್ಸ್‌ಮನ್‌ ಲಿಯಾಮ್‌ ಲಿವಿಂಗ್‌ಸ್ಟೋನ್‌ ಅಬುದಾಬಿ ಟಿ-10 ಲೀಗ್‌ ಪಂದ್ಯವೊಂದರಲ್ಲಿ ಕೇವಲ 15 ಎಸೆತಗಳಲ್ಲಿಯೇ ಅರ್ಧಶತಕವನ್ನು ಸಿಡಿಸಿದ್ದರು. ಇವರ ಸ್ಪೋಟಕ ಅರ್ಧಶತಕದ ಮೂಲಕ ಬಾಂಗ್ಲಾ ಟೈಗರ್ಸ್‌ ತಂಡ ಏಳು ವಿಕೆಟ್‌ಗಳಿಂದ ಡೆಲ್ಲಿ ಬುಲ್ಸ್‌ ತಂಡವನ್ನು ಸೋಲಿಸಿತ್ತು. ಇವರ ಇನಿಂಗ್ಸ್‌ನಲ್ಲಿ ಮೂರು ಬೌಂಡರಿಗಳು ಹಾಗೂ 5 ಸಿಕ್ಸರ್‌ಗಳು ಒಳಗೊಂಡಿದ್ದವು. ಇಂಗ್ಲೆಂಡ್‌ ಆಟಗಾರನ ಬ್ಯಾಟಿಂಗ್‌ ಸಹಾಯದಿಂದ ಡೆಲ್ಲಿ ಬುಲ್ಸ್‌ ನೀಡಿದ್ದ 123 ರನ್‌ಗಳನ್ನು ಬಾಂಗ್ಲಾ ಟೈಗರ್ಸ್‌ ಕೇವಲ ಮೂರು ವಿಕೆಟ್‌ಗಳನ್ನು ಕಳೆದುಕೊಂಡು ಚೇಸ್‌ ಮಾಡಿತ್ತು.