Thursday, 19th September 2024

IPL 2025: ಪಂಜಾಬ್‌ ಕಿಂಗ್ಸ್‌ಗೆ ರಿಕಿ ಪಾಂಟಿಂಗ್ ಮುಖ್ಯ ಕೋಚ್‌

IPL 2025

ಮುಂಬಯಿ: ಕಳೆದ ಕೆಲ ಆವೃತ್ತಿಗಳಲ್ಲಿ ಡೆಲ್ಲಿ ತಂಡದ ಮುಖ್ಯ ಕೋಚ್​ ಆಗಿ ಕಾರ್ಯ ನಿರ್ವಹಿಸಿದ್ದ ಆಸ್ಟ್ರೇಲಿಯಾದ ಮಾಜಿ ನಾಯಕ ರಿಕಿ ಪಾಂಟಿಂಗ್(Ricky Ponting)​ ಅವರನ್ನು ಮುಂದಿನ ಆವೃತ್ತಿಯ ಐಪಿಎಲ್‌(IPL 2025) ಆರಂಭಕ್ಕೂ ಮುನ್ನವೇ ಅವರನ್ನು ತಂಡದಿಂದ ಕೈಬಿಟ್ಟಿತ್ತು. ಇದೀಗ ಪಾಂಟಿಂಗ್ ಪಂಜಾಬ್‌ ಕಿಂಗ್ಸ್‌(Punjab Kings) ತಂಡದ ಮುಖ್ಯ ಕೋಚ್‌ ಆಗಿ ನೇಮಕಗೊಳ್ಳಲಿದ್ದಾರೆ ಎಂದು ತಿಳಿದುಬಂದಿದೆ.

ವರದಿಯಾದ ಪ್ರಕಾರ ಪಂಜಾಬ್‌ ಕಿಂಗ್ಸ್‌ ಪಾಂಟಿಂಗ್ ಜತೆ ಎಲ್ಲ ಮಾತುಕತೆ ನಡೆಸಿದ್ದು ಪಾಂಟಿಂಗ್ ಕೂಡ ಕೋಚ್‌ ಆಗಲು ಒಪ್ಪಿಗೆ ಸೂಚಿಸಿದ್ದಾರೆ ಎನ್ನಲಾಗಿದೆ. ಅಧಿಕೃತ ಪ್ರಕಟನೆ ಶೀಘ್ರದಲ್ಲೇ ಪ್ರಕಟಗೊಳ್ಳಬೇಕಿದೆ. ಪಾಂಟಿಂಗ್ ಅವರಿಂದ ತೆರವಾದ ಡೆಲ್ಲಿ ತಂಡದ ಕೋಚ್‌ ಹುದ್ದೆಗೆ ಭಾರತ ಹಾಗೂ ಡೆಲ್ಲಿ ತಂಡದ ಮಾಜಿ ಆಟಗಾರ ಯುವರಾಜ್‌ ಸಿಂಗ್‌ ಕೋಚ್‌ ಆಗುವ ಸಾಧ್ಯತೆ ಕಂಡುಬಂದಿದೆ. ಕಳೆದ ಬಾರಿ ಅತ್ಯಂತ ಕಳಪೆ ಪ್ರದರ್ಶನ ತೋರಿದ್ದ ಡೆಲ್ಲಿ, ಈ ಬಾರಿಯ ಆವೃತ್ತಿಯಲ್ಲಿ ಆಡಿದ 14 ಪಂದ್ಯಗಳಲ್ಲಿ 7 ಪಂದ್ಯ ಗೆದ್ದು ಅಂಕಪಟ್ಟಿಯಲ್ಲಿ 6 ನೇ ಸ್ಥಾನಿಯಾಗಿತ್ತು.

ಇದನ್ನೂ ಓದಿ IPL 2025: ಆರ್‌ಸಿಬಿ ಸೇರಲಿದ್ದಾರೆ ಸೂರ್ಯಕುಮಾರ್ ಯಾದವ್‌!

ಪಾಂಟಿಂಗ್‌ ಐಪಿಎಲ್‌ ಸಾಧನೆ

ಪಾಂಟಿಂಗ್‌ ಐಪಿಎಲ್‌ನಲ್ಲಿ 10 ಪಂದ್ಯಗಳನ್ನು ಆಡಿದ ಅನುಭವ ಹೊಂದಿದ್ದಾರೆ. 2008ರ ಚೊಚ್ಚಲ ಆವೃತ್ತಿಯ ಐಪಿಎಲ್‌ನಲ್ಲಿ ಕೆಕೆಆರ್‌ ಪರ ಆಡುವ ಮೂಲಕ ಐಪಿಎಲ್‌ ಪದಾರ್ಪಣೆ ಮಾಡಿದ್ದರು. 10 ಪಂದ್ಯಗಳಿಂದ 91 ರನ್‌ ಬಾರಿಸಿದ್ದಾರೆ. 2013ರಲ್ಲಿ ಐಪಿಎಲ್‌ನಿಂದ ನಿವೃತ್ತಿಯಾದರು. ಬಳಿಕ ಮೆಂಟರ್‌ ಮತ್ತು ಕೋಚ್‌ ಆಗಿ ಕಾರ್ಯನಿರ್ವಹಿಸಿದ್ದರು.

ತಿಂಗಳಾಂತ್ಯದಲ್ಲಿ ಐಪಿಎಲ್​ ರಿಟೇನ್​ ನಿಯಮಾವಳಿ ಪ್ರಕಟ

ಬಹುನಿರೀಕ್ಷಿತ ಐಪಿಎಲ್​ 18ನೇ(IPL 2025) ಆವೃತ್ತಿಯ ಮೆಗಾ ಹರಾಜು ಪ್ರಕ್ರಿಯೆಗೆ ಮುನ್ನ ಆಟಗಾರರ ರಿಟೇನ್​ ನಿಯಮಾವಳಿಯನ್ನು(IPL 2025 Retention Policy) ಬಿಸಿಸಿಐ(BCCI) ಮಾಸಾಂತ್ಯದಲ್ಲಿ ಪ್ರಕಟಿಸುವ ನಿರೀಕ್ಷೆ ಇದೆ ಎಂದು ಮೂಲಗಳು ತಿಳಿಸಿವೆ. ಎಲ್ಲ 10 ತಂಡಗಳು ಆಟಗಾರರ ರಿಟೇನ್​ ಪಟ್ಟಿ ಪ್ರಕಟಿಸಲು ನವೆಂಬರ್​ 15ರವರೆಗೆ ಸಮಯಾವಕಾಶ ಕಲ್ಪಿಸುವ ಸಾಧ್ಯತೆ ಕಂಡುಬಂದಿದೆ. ಆಟಗಾರರ ಮೆಗಾ ಹರಾಜು ಪ್ರಕ್ರಿಯೆ ಡಿಸೆಂಬರ್‌ನಲ್ಲಿ ನಡೆಯಲಿದೆ.

ಆಗಸ್ಟ್​ ಅಂತ್ಯದಲ್ಲೇ ಆಟಗಾರರ ರಿಟೇನ್​ ನಿಯಮಾವಳಿ ಪ್ರಕಟಗೊಳ್ಳಬೇಕಾಗಿತ್ತು. ಆದರೆ ಕೆಲ ಫ್ರಾಂಚೈಸಿಗಳ ಹಲವು ಬೇಡಿಕೆಯಿಂದಾಗಿ ಇದು ಸಾಧ್ಯವಾಗಲಿಲ್ಲ. ಹೀಗಾಗಿ ನಿಯಮಾವಳಿ ಅಂತಿಮಗೊಳಿಸುವ ಪ್ರಕ್ರಿಯೆ ವಿಳಂಬವಾಯಿತು. ಐಪಿಎಲ್‌ ಮೂಲಗಳ ಪ್ರಕಾರ ಸೆಪ್ಟೆಂಬರ್​ 29ರಂದು ಬೆಂಗಳೂರಿನಲ್ಲಿ ನಡೆಯಲಿರುವ ಬಿಸಿಸಿಐ ವಾರ್ಷಿಕ ಮಹಾಸಭೆಯ ಸಮಯದಲ್ಲೇ ರಿಟೇನ್​ ನಿಯಮಾವಳಿ ಪ್ರಕಟವಾಗುವ ಸಾಧ್ಯತೆ ಇದೆ ತಿಳಿಸಿದೆ.

Leave a Reply

Your email address will not be published. Required fields are marked *