Friday, 20th September 2024

ISL 2024: ಶುಭಾರಂಭದ ನಿರೀಕ್ಷೆಯಲ್ಲಿ ಬೆಂಗಳೂರು ಎಫ್‌ಸಿ; ಈಸ್ಟ್‌ ಬೆಂಗಾಲ್‌ ಎದುರಾಳಿ

ISL 2024

ಬೆಂಗಳೂರು: ಶುಕ್ರವಾರ ಆರಂಭಗೊಂಡ 11ನೇ ಆವೃತ್ತಿಯ ಇಂಡಿಯನ್‌ ಸೂಪರ್‌ ಲೀಗ್‌ ಫುಟ್ಬಾಲ್‌ ಟೂರ್ನಿಯ(ISL 2024) ಉದ್ಘಾಟನ ಪಂದ್ಯವಾದ ಮೋಹನ್‌ ಬಗಾನ್‌(Mohun Bagan) ಹಾಗೂ ಮುಂಬೈ ಎಫ್‌ಸಿ(Mumbai City FC) ನಡುವಣ ಪಂದ್ಯ 2-2 ಗೋಲುಗಳ ಅಂತರದಿಂದ ಡ್ರಾ ಗೊಂಡಿತ್ತು. ಇಂದು ನಡೆಯುವ ಪಂದ್ಯದಲ್ಲಿ ಕನ್ನಡಿಗರ ನೆಚ್ಚಿನ ತಂಡವಾದ, ಮಾಜಿ ಚಾಂಪಿಯನ್‌ ಬೆಂಗಳೂರು ಎಫ್‌ಸಿ(Bengaluru FC vs East Bengal) ಈಸ್ಟ್‌ ಬೆಂಗಾಲ್‌ ವಿರುದ್ಧ ಸೆಣಸಾಡಲಿದೆ. ಮೊದಲ ಪಂದ್ಯದಲ್ಲಿಯೇ ಗೆದ್ದು ಶೂಭಾರಂಭ ಮಾಡುವುದು ಸುನಿಲ್‌ ಚೆಟ್ರಿ ಪಡೆಯ ಯೋಜನೆಯಾಗಿದೆ. ಈ ಪಂದ್ಯ ನಗರದ ಕಂಠೀರವ ಕ್ರೀಡಾಂಗಣದಲ್ಲಿ ರಾತ್ರಿ 7.30ಕ್ಕೆ ಆರಂಭಗೊಳ್ಳಲಿದೆ.

ಅಂತಾರಾಷ್ಟ್ರೀಯ ಫುಟ್ಬಾಲ್‌ಗೆ ನಿವೃತ್ತಿ ಹೇಳಿ ಒತ್ತಡ ಕಡಿಮೆ ಮಾಡಿಕೊಂಡಿರುವ ಸುನಿಲ್‌ ಚೆಟ್ರಿ ಈ ಬಾರಿ ಇಂಡಿಯನ್‌ ಸೂಪರ್‌ ಲೀಗ್‌ನಲ್ಲಿ ಅಮೋಘ ಪ್ರದರ್ಶನ ತೋರುವ ವಿಶ್ವಾಸದಲ್ಲಿದ್ದಾರೆ. ಬೆಂಗಳೂರು ತಂಡದಲ್ಲಿ ಈ ಬಾರಿ ಕೆಲ ಬದಲಾವಣೆ ಕೂಡ ಸಂಭವಿಸಿದೆ. ಕಳೆದ ಬಾರಿ ಕಳಪೆ ಪ್ರದರ್ಶನ ತೋರಿತ್ತು. ಆಡಿದ 22 ಪಂದ್ಯಗಳಲ್ಲಿ ಕೇವಲ 5ರಲ್ಲಿ ಮಾತ್ರ ಗೆಲುವು ಸಾಧಿಸಿ ಕೊನೆಯ 10ನೇ ಸ್ಥಾನಿಯಾಗಿತ್ತು.

ಮುಖಾಮುಖಿ

ಬೆಂಗಳೂರು ಎಫ್‌ಸಿ ಮತ್ತು ಈಸ್ಟ್‌ ಬೆಂಗಾಲ್‌ ಇದುವರೆಗೆ ಇಂಡಿಯನ್‌ ಸೂಪರ್‌ ಲೀಗ್‌ ಫುಟ್ಬಾಲ್‌ ಟೂರ್ನಿಯಲ್ಲಿ ಒಟ್ಟು 16 ಪಂದ್ಯಗಳಲ್ಲಿ ಮುಖಾಮುಖಿಯಾಗಿವೆ. ಈ ಪೈಕಿ ಬೆಂಗಳೂರು ತಂಡ 6 ತಂಡ ಗೆದ್ದಿದ್ದರೆ, ಬೆಂಗಾಲ್‌ ತಂಡ 9 ಪಂದ್ಯ ಗೆದ್ದಿದೆ. 1 ಪಂದ್ಯ ಡ್ರಾ ಗೊಂಡಿದೆ. ಬಲಾಬಲದ ಲೆಕ್ಕಾಚಾರದಲ್ಲಿ ಬೆಂಗಾಲ್‌ ತಂಡ ಬಲಿಷ್ಠವಾಗಿದೆ.

ಇದನ್ನೂ ಓದಿ Vinesh Phogat: ಪಿ.ಟಿ. ಉಷಾ ವಿರುದ್ಧ ಗಂಭೀರ ಆರೋಪ ಮಾಡಿದ ವಿನೇಶ್‌

ಸಂಭಾವ್ಯ ತಂಡಗಳು

ಬೆಂಗಳೂರು ಎಫ್‌ಸಿ: ಗುರುಪ್ರೀತ್ ಸಿಂಗ್ ಸಂಧು (ಗೋಲ್‌ ಕೀಪರ್‌); ನಿಖಿಲ್ ಪೂಜಾರಿ, ರಾಹುಲ್ ಭೇಕೆ, ಅಲೆಕ್ಸಾಂಡರ್ ಜೊವಾನೋವಿಕ್, ನವೋರೆಮ್ ರೋಶನ್ ಸಿಂಗ್; ಸುರೇಶ್ ಸಿಂಗ್, ಪೆಡ್ರೊ ಕಾಪೊ, ಆಲ್ಬರ್ಟೊ ನೊಗುರಾ; ಶಿವಲ್ಡೊ ಸಿಂಗ್, ಶಿವಶಕ್ತಿ ನಾರಾಯಣನ್, ಜಾರ್ಜ್ ಪೆರೇರಾ ಡಯಾಜ್.

ಈಸ್ಟ್ ಬೆಂಗಾಲ್ ಎಫ್ ಸಿ: ಪ್ರಭುಸುಖಾನ್ ಗಿಲ್ (ಗೋಲ್‌ ಕೀಪರ್‌); ಪ್ರೊವತ್ ಲಾಕ್ರಾ, ಹಿಜಾಜಿ ಮಹೆರ್, ಲಾಲ್ಚುಂಗ್ನುಂಗಾ, ಮಾರ್ಕ್ ಝೋಥಾನ್ಪುಯಾ; ಜೆಕ್ಸನ್ ಸಿಂಗ್, ಸಾಲ್ ಕ್ರೆಸ್ಪೋ; ಮದಿಹ್ ತಲಾಲ್, ಪಿವಿ ವಿಷ್ಣು, ನಂದಕುಮಾರ್ ಸೇಕರ್; ಡಿಮಿಟ್ರಿಯೋಸ್ ಡೈಮಂಟಕೋಸ್.