Friday, 22nd November 2024

ಜೋ ರೂಟ್ 150+, ಬೃಹತ್ ಮೊತ್ತದತ್ತ ಇಂಗ್ಲೆಂಡ್‌

ಚೆನ್ನೈ: ಚೆಪಾಕ್ ಮೈದಾನದಲ್ಲಿ ಭಾರತ ವಿರುದ್ಧ ನಡೆಯುತ್ತಿರುವ ಪ್ರಥಮ ಟೆಸ್ಟ್ ಪಂದ್ಯದಲ್ಲಿ ನಾಯಕ ಜೋ ರೂಟ್ (156*) ಅಮೋಘ ಬ್ಯಾಟಿಂಗ್ ನೆರವಿನಿಂದ ಇಂಗ್ಲೆಂಡ್ ಎರಡನೇ ದಿನದಾಟದ ಊಟದ ವಿರಾಮದ ಹೊತ್ತಿಗೆ ಮೂರು ವಿಕೆಟ್ ನಷ್ಟಕ್ಕೆ 355 ರನ್ ಪೇರಿಸಿದ್ದು, ಬೃಹತ್ ಮೊತ್ತದತ್ತ ಮುನ್ನಡೆದಿದೆ.

ರೂಟ್‌ಗೆ ಉತ್ತಮ ಬೆಂಬಲ ನೀಡುತ್ತಿರುವ ಬೆನ್ ಸ್ಟೋಕ್ಸ್ (63*) ಆಕರ್ಷಕ ಅರ್ಧಶತಕ ಬಾರಿಸಿದ್ದಾರೆ. ಮೂರು ವಿಕೆಟ್ ನಷ್ಟಕ್ಕೆ 263 ರನ್‌ಗಳಿಂದ ಬ್ಯಾಟಿಂಗ್ ಮುಂದುವರಿಸಿದ ಇಂಗ್ಲೆಂಡ್ ಬ್ಯಾಟ್ಸ್‌ಮನ್‌ಗಳು ಎರಡನೇ ದಿನದಾಟದ ಮೊದಲ ಅವಧಿಯಲ್ಲೂ ಭಾರತೀಯ ಬೌಲರ್‌ಗಳನ್ನು ಕಾಡಿದರು.

100ನೇ ಟೆಸ್ಟ್ ಪಂದ್ಯದಲ್ಲೂ ಸ್ಮರಣೀಯ ಶತಕ ಬಾರಿಸಿರುವ ಜೋ ರೂಟ್ ಕ್ರೀಸಿನಲ್ಲಿ ನೆಲೆಯೂರುವ ಮೂಲಕ ಇಂಗ್ಲೆಂಡ್ ತಂಡವನ್ನು ಬೃಹತ್ ಮೊತ್ತದತ್ತ ಮುನ್ನಡೆಸಿದರು. ಇವರಿಗೆ ಆಲ್‌ರೌಂಡರ್ ಬೆನ್ ಸ್ಟೋಕ್ಸ್ ಅವರಿಂದ ಉತ್ತಮ ಬೆಂಬಲ ದೊರಕಿತು.

ರೂಟ್, 100ನೇ ಪಂದ್ಯದಲ್ಲಿ 150 ರನ್‌ಗಳ ಗಡಿ ದಾಟಿದರು. ಈ ಮೂಲಕ ಸತತ ಮೂರನೇ ಪಂದ್ಯದಲ್ಲೂ 150ಕ್ಕೂ ಹೆಚ್ಚು ರನ್‌ಗಳ ಸಾಧನೆ ಮಾಡಿದರು. 98 ಹಾಗೂ 99ನೇ ಟೆಸ್ಟ್ ಪಂದ್ಯಗಳಲ್ಲೂ ಜೋ ರೂಟ್ ಶತಕೋತ್ತರ ಶತಕಾರ್ಧದ ಸಾಧನೆ ಮಾಡಿದ್ದರು.

ಪ್ರಸ್ತುತ ಪಂದ್ಯದಲ್ಲಿ ಅಧಿಪತ್ಯ ಸ್ಥಾಪಿಸುವತ್ತ ಮುನ್ನಡೆದಿರುವ ಇಂಗ್ಲೆಂಡ್ ಬೃಹತ್ ಮೊತ್ತ ಪೇರಿಸಿ ಡಿಕ್ಲೇರ್ ಘೋಷಿಸುವ ಇರಾದೆಯಲ್ಲಿದೆ. ಮೊದಲ ದಿನದಾಟದಲ್ಲಿ ನಾಯಕ ರೂಟ್‌ಗೆ ಉತ್ತಮ ಬೆಂಬಲ ನೀಡಿರುವ ಆರಂಭಿಕ ಡಾಮಿನಿಕ್ ಸಿಬ್ಲಿ 87 ರನ್‌ಗಳ ಅಮೂಲ್ಯ ಕೊಡುಗೆ ನೀಡಿದ್ದರು.