Thursday, 19th September 2024

ಕಿಂಗ್ಸ್ ಪಂಜಾಬ್ ತಂಡಕ್ಕೆ ಇಂದು ಡೆಲ್ಲಿ ಕ್ಯಾಪಿಟಲ್ಸ್ ಸವಾಲು

ದುಬೈ: ಐಪಿಎಲ್ 13ನೇ ಅವತರಣಿಕೆಯ ಎರಡನೇ ಪಂದ್ಯ ಡೆಲ್ಲಿ ಕ್ಯಾಪಿಟಲ್ಸ್ ಹಾಗೂ ಕಿಂಗ್ಸ್ ಎಲೆವೆನ್ ಪಂಜಾಬ್ ನಡುವೆ ಇಂದು ನಡೆಯಲಿದೆ.

ದುಬೈ ಇಂಟರ್‌ ನ್ಯಾಷನಲ್‌ ಕ್ರಿಕೆಟ್‌ ಕ್ರೀಡಾಂಗಣದಲ್ಲಿ ಈ ಪಂದ್ಯ ನಡೆಯಲಿದ್ದು, ಕನ್ನಡಿಗ ಲೋಕೇಶ್ ರಾಹುಲ್ ನಾಯಕತ್ವದ ಕಿಂಗ್ಸ್ ಎಲೆವೆನ್ ಪಂಜಾಬ್ ತಂಡ ಗೆಲುವಿನ ಫೇವರೇಟ್ ಎನಿಸಿಕೊಂಡಿದೆ. ವಿಂಡೀಸ್ ದೈತ್ಯ ಕ್ರಿಸ್ ಗೇಲ್ ತಂಡಕ್ಕೆ ಬಲ ನೀಡಿ ದ್ದಾರೆ. ಹೊಡೆಬಡಿಯ ಆಟಕ್ಕಾಗಿ ಗ್ಲೆನ್ ಮ್ಯಾಕ್ಸ್‌’ವೆಲ್‌ ಸಮರ್ಥರು. ಬೌಲಿಂಗ್ ವಿಭಾಗದಲ್ಲಿ ವೇಗದ ಸಾರಥ್ಯವನ್ನು ಭಾರತೀಯ ಮೊಹಮ್ಮದ್ ಶಮಿ ವಹಿಸಬಹುದು.

ಪಂಜಾಬ್ ತಂಡಕ್ಕೆ ಹೋಲಿಸಿದರೆ, ಡೆಲ್ಲಿ ತಂಡದಲ್ಲಿ ಶಿಖರ್‌ ಧವನ್‌ ಆರಂಭಿಕ ಸ್ಥಾನಕ್ಕೆ ಗಟ್ಟಿಗ. ಈ ಬಾರಿ ಅಜಿಂಕ್ಯ ರಹಾನೆ ಆಟಗಾರನಾಗಿ ತಂಡದಲ್ಲಿದ್ದಾರೆ. ಕಳೆದ ಬಾರಿ ರಾಜಸ್ತಾನ ತಂಡದ ನಾಯಕತ್ವ ವಹಿಸಿದ್ದರು. ಹೀಗಾಗಿ, ನಾಯಕತ್ವ ಭಾರ ಇಲ್ಲದೆ, ಸಲೀಸಾಗಿ ರನ್‌ ಹರಿಸಬಲ್ಲರೇ ಎಂಬುದನ್ನು ಕಾದು ನೋಡಬೇಕಿದೆ. ಟೀಂ ಇಂಡಿಯಾದ ಅನುಭವಿ ಸ್ಪಿನ್ನರ್‌ ರವಿಚಂದ್ರನ್‌ ಅಶ್ವಿನ್‌ ತಂಡದ ಪಾಲಿಗೆ ಮ್ಯಾಚ್ ವಿನ್ನರ್‌ ಆಗಬಲ್ಲರು.

ಡೆಲ್ಲಿ ತಂಡ ಯುವ ಹಾಗೂ ಅನುಭವಿ ಆಟಗಾರರನ್ನು ಒಳಗೊಂಡ ಉತ್ತಮ ತಂಡವಾಗಿದೆ. ಇಂದಿನ ಪಂದ್ಯದಲ್ಲಿ ನಾಯಕ ಶ್ರೇಯಸ್ ಅಯ್ಯರ್, ಪೃಥ್ವಿ ಶಾ, ಶಿಖರ್ ಧವನ್, ಅಜಿಂಕ್ಯಾ ರಹಾನೆ, ವಿಕೆಟ್ ಕೀಪರ್ ಬ್ಯಾಟ್ಸ್‌ಮನ್‌ಗಳಾದ ರಿಷಭ್ ಪಂತ್ ಹಾಗೂ ಅಲೆಕ್ಸ್ ಕ್ಯಾರಿ ಪ್ರದರ್ಶನ ಪ್ರಮುಖವಾಗಿರಲಿದೆ.

 

Leave a Reply

Your email address will not be published. Required fields are marked *