Saturday, 23rd November 2024

ಮಣಿದ ಆರ್‌.ಆರ್‌: ಕೋಲ್ಕತ್ತಾಗೆ ಪ್ಲೇಆಫ್ ಸ್ಥಾನ ಖಚಿತ

ಶಾರ್ಜಾ: ಬ್ಯಾಟಿಂಗ್ ಹಾಗೂ ಬೌಲಿಂಗ್ ವಿಭಾಗಗಳಲ್ಲಿ ಪ್ರಭುತ್ವ ಸಾಧಿಸಿದ ಕೋಲ್ಕತ ನೈಟ್‌ರೈಡರ್ಸ್‌ ತಂಡ ಐಪಿಎಲ್-14ರ ತನ್ನ ನಿರ್ಣಾಯಕ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್ ತಂಡವನ್ನು 86 ರನ್‌ಗಳಿಂದ ಮಣಿಸಿ ಪ್ಲೇಆಫ್ ಸ್ಥಾನವನ್ನು ಬಹುತೇಕ ಖಚಿತಪಡಿಸಿಕೊಂಡಿತು.

7ನೇ ಗೆಲುವು ದಾಖಲಿಸಿದ ಇವೊಯಿನ್ ಮಾರ್ಗನ್ ಪಡೆ ಉತ್ತಮ ರನ್‌ರೇಟ್‌ನೊಂದಿಗೆ 4ನೇ ಸ್ಥಾನ ಭದ್ರ ಪಡಿಸಿಕೊಂಡಿತು. ಗುರುವಾರ ನಡೆದ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಕೆಕೆಆರ್ ತಂಡ, ಆರಂಭಿಕ ಬ್ಯಾಟರ್‌ಗಳಾದ ಶುಭಮಾನ್ ಗಿಲ್ (56ರನ್) ಹಾಗೂ ವೆಂಕಟೇಶ್ ಅಯ್ಯರ್ (38 ರನ್) ಹಾಕಿಕೊಟ್ಟ ಭದ್ರ ಬುನಾದಿಯ ಲವಾಗಿ 4 ವಿಕೆಟ್‌ಗೆ 171 ರನ್ ಪೇರಿಸಿತು. ಪ್ರತಿಯಾಗಿ ರಾಯಲ್ಸ್ ತಂಡ, ಯುವ ವೇಗಿ ಶಿವಂ ಮಾವಿ (21ಕ್ಕೆ 4) ಹಾಗೂ ಲಾಕಿ ಫರ್ಗ್ಯುಸನ್ (18ಕ್ಕೆ 3) ಮಾರಕ ದಾಳಿಗೆ ನಲುಗಿ 16.1 ಓವರ್‌ಗಳಲ್ಲಿ 85 ರನ್‌ಗಳಿಗೆ ಸರ್ವಪತನ ಕಂಡಿತು.

ಈ ಫಲಿತಾಂಶದೊಂದಿಗೆ ರಾಜಸ್ಥಾನ್‌ ಮತ್ತು ದಿನದ ಮೊದಲ ಪಂದ್ಯವನ್ನು ಜಯಿಸಿದ್ದ ಪಂಜಾಬ್‌ ತಂಡಗಳೆ ರಡೂ ಕೂಟದಿಂದ ಹೊರಬಿದ್ದವು. ಇನ್ನೊಂದು ತಂಡವಾದ ಮುಂಬೈ ಹಾದಿ ಇನ್ನಷ್ಟು ದುರ್ಗಮ ಗೊಂಡಿದೆ. ಆರಂಭಕಾರ ಶುಭಮನ್‌ ಗಿಲ್‌ ಅವರ ಅರ್ಧ ಶತಕ ಕೆಕೆಆರ್‌ ಸರದಿಯ ಆಕರ್ಷಣೆ ಎನಿಸಿತು. ಬೌಲಿಂಗ್‌ನಲ್ಲಿ ಶಿವಂ ಮಾವಿ 21ಕ್ಕೆ 4, ಲಾಕಿ ಫರ್ಗ್ಯುಸನ್‌ 18ಕ್ಕೆ 3 ವಿಕೆಟ್‌ ಕಿತ್ತು ಸ್ಯಾಮ್ಸನ್‌ ಬಳಗಕ್ಕೆ ಬಲವಾದ ಪ್ರಹಾರ ವಿಕ್ಕಿದರು.

ಬಿಗ್‌ ಹಿಟ್ಟರ್‌ಗಳಾದ ಅಯ್ಯರ್‌-ಗಿಲ್‌ ಕ್ರೀಸಿನಲ್ಲಿದ್ದರೂ ಪವರ್‌ ಪ್ಲೇಯಲ್ಲಿ ಕೆಕೆಆರ್‌ಗೆ ಗಳಿಸಲು ಸಾಧ್ಯವಾದದ್ದು 34 ರನ್‌ ಮಾತ್ರ. 10 ಓವರ್‌ ತನಕವೂ ಇವರಿಬ್ಬರೇ ಜತೆಗೂಡಿ ಸಾಗಿದರು. 11ನೇ ಓವರ್‌ನಲ್ಲಿ ದಾಳಿಗಿಳಿದ ತೇವಟಿಯಾ 5ನೇ ಎಸೆತದಲ್ಲೇ ಅಯ್ಯರ್‌ ಅವರನ್ನು ಬೌಲ್ಡ್‌ ಮಾಡಿ ರಾಜಸ್ಥಾನಕ್ಕೆ ಮೊದಲ ಯಶಸ್ಸು ತಂದಿತ್ತರು. ಅಯ್ಯರ್‌ ಗಳಿಕೆ 35 ಎಸೆತಗಳಿಂದ 38 ರನ್‌. ಇದರಲ್ಲಿ 3 ಫೋರ್‌, 2 ಸಿಕ್ಸರ್‌ ಒಳಗೊಂಡಿತ್ತು.

ಗಿಲ್‌ ನಿಧಾನವಾಗಿ ಬ್ಯಾಟಿಂಗಿಗೆ ಕುದುರಿಕೊಳ್ಳುತ್ತ ಹೋದರು. 40 ಎಸೆತಗಳಲ್ಲಿ ಫಿಫ್ಟಿ ಪೂರ್ತಿಗೊಂಡಿತು. ಡೆತ್‌ ಓವರ್‌ ಆರಂಭದಲ್ಲೇ ಮಾರಿಸ್‌ ದೊಡ್ಡ ಬೇಟೆಯಾಡಿದರು. ಗಿಲ್‌ ಆಟ 56ಕ್ಕೆ ಕೊನೆಗೊಂಡಿತು (44 ಎಸೆತ, 4 ಫೋರ್‌, 2 ಸಿಕ್ಸರ್‌). ತ್ರಿಪಾಠಿ 21 ರನ್‌ ಮಾಡಿದರು. ಮಾರ್ಗನ್‌ ಕೊನೆಯ 3 ಎಸೆತಗಳಲ್ಲಿ 11 ರನ್‌ ಬಾರಿಸಿ ತಂಡದ ಮೊತ್ತವನ್ನು 170ರ ಗಡಿ ದಾಟಿಸಿದರು.