ಮುಂಬಯಿ: ಕಳೆದ ವಾರ ರಸ್ತೆ ಅಪಘಾತದಲ್ಲಿ ಗಾಯಗೊಂಡಿದ್ದ ಮುಂಬೈನ ಯುವ ಪ್ರತಿಭಾನ್ವಿತ ಆಟಗಾರ ಮುಶೀರ್ ಖಾನ್ (Musheer Khan) ತಮ್ಮ ಆರೋಗ್ಯ ಸ್ಥಿತಿಯ ಬಗ್ಗೆ ಸ್ವತಃ ಅವರೇ ಮಾಹಿತಿ ನೀಡಿದ್ದಾರೆ. ಸದ್ಯಕ್ಕೆ ನಾನು ಆರೋಗ್ಯವಾಗಿದ್ದೇನೆ. ನನ್ನ ಜತೆಗಿದ್ದ ತಂದೆಯೂ ಆರೋಗ್ಯವಾಗಿದ್ದಾರೆ. ನಿಮ್ಮ ಶುಭ ಹಾರೈಕೆಗಳಿಗೆ ಎಲ್ಲರಿಗೂ ಧನ್ಯವಾದಗಳು ಎಂದು ವಿಡಿಯೊ ಮೂಲಕ ತಿಳಿಸಿದ್ದಾರೆ.
ಮುಶೀರ್ ಖಾನ್ ಅವರು ತಂದೆ ನೌಶಾದ್ ಖಾನ್ ಅವರೊಂದಿಗೆ ಅಜಂಗಢದಿಂದ ಲಕ್ನೋಗೆ ಪ್ರಯಾಣಿಸುತ್ತಿದ್ದಾಗ ಕಾರು ದುರಂತ ನಡೆದಿತ್ತು. ಅಪಘಾತದ ಪರಿಣಾಮ ಕಾರು ರಸ್ತೆಯಲ್ಲಿ ನಾಲ್ಕೈದು ಬಾರಿ ಪಲ್ಟಿಯಾಗಿತ್ತು. ಮುಶೀರ್ ಅವರ ಕುತ್ತಿಗೆಗೆ ಗಾಯಗಳಾಗಿತ್ತು. ಗಾಯಗೊಂಡ ಅವರನ್ನು ಲಖನೌದ ಮೇದಾಂತ ಆಸ್ಪತ್ರೆ ದಾಖಲಿಸಲಾಗಿತ್ತು. ಇದೀಗ ಅವರು ಆಸ್ಪತ್ರೆಯಿಂದ ಡಿಸ್ಜಾರ್ಜ್‌ಗೊಂಡಿದ್ದು ಮನೆಗೆ ಮರಳಿದ್ದಾರೆ.
ಮನೆಗೆ ಮರಳಿರುವ ಮುಶೀರ್ ಖಾನ್ ತನ್ನ ತಂದೆಯ ಜತೆ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ವಿಡಿಯೊ ಹಂಚಿಕೊಂಡು ತಮ್ಮ ಆರೋಗ್ಯದ ಸ್ಥಿತಿಯನ್ನು ವಿವರಿಸಿದ್ದಾರೆ. ವಿಡಿಯೊದಲ್ಲಿ ಮೊದಲು ಮಾತನಾಡಿದ ನೌಶಾದ್ ಖಾನ್ ‘ಸದ್ಯಕ್ಕೆ ನಾನು ನನ್ನ ಮಗ ಆರೋಗ್ಯವಾಗಿದ್ದೇನೆ. ಮಗನಿಗೆ ಹೊಸ ಜೀವನವೊಂದು ಸಿಕ್ಕಿದೆ. ಇದಕ್ಕಾಗಿ ನಾನು ಮೊದಲು ದೇವರಿಗೆ ಧನ್ಯವಾದ ಹೇಳುತ್ತೇನೆ. ನನ್ನ ಆರೋಗ್ಯ ಚೇತರಿಕೆಗಾಗಿ ಪ್ರಾರ್ಥಿಸಿದ ಹಿತೈಷಿಗಳು, ಸ್ನೇಹಿತರು, ಆತ್ಮೀಯರಿಗೂ ಧನ್ಯವಾದಗಳು. ಇದಲ್ಲದೆ, ಎಂಸಿಎ ಮತ್ತು ಬಿಸಿಸಿಐಗೆ ವಿಶೇಷ ಧನ್ಯವಾದ ತಿಳಿಸುತ್ತೇನೆʼ ಎಂದು ಹೇಳಿದ್ದಾರೆ.
ಇದನ್ನೂ ಓದಿ Rohit Sharma: ಮುಂಬೈ ತೊರೆದು ಲಕ್ನೋ ತಂಡ ಸೇರಲಿದ್ದಾರೆ ರೋಹಿತ್?
ತಂದೆ ಬಳಿಕ ಮಾತನಾಡಿರುವ ಮುಶೀರ್, ‘ನನಗೆ ಹೊಸ ಬದುಕು ಸಿಕ್ಕಿದೆ. ಶೀಘ್ರದಲ್ಲೇ ನಾನು ಮತ್ತೆ ಕ್ರಿಕೆಟ್‌ಗೆ ಮರಳುವೆ. ಇರಾನಿ ಕಪ್ ಪಂದ್ಯವನ್ನು ಆಡಲು ಸಾಧ್ಯವಾಗದೇ ಇರುವುದಕ್ಕೆ ಬೇಸರವಿದೆ. ನಮ್ಮ ತಂಡ ಈ ಟೂರ್ನಿಯಲ್ಲಿ ಉತ್ತಮವಾಗಿ ಆಡಲಿ ಎಂದು ಹಾರೈಸುವೆʼ ಎಂದು ಮುಶೀರ್ ಖಾನ್ ವಿಡಿಯೊದಲ್ಲಿ ಹೇಳಿದ್ದಾರೆ. ಮೂಲಗಳ ಪ್ರಕಾರ ಮುಶೀರ್ ಚೇತರಿಕೆಗೆ ಕನಿಷ್ಠ ಮೂರು ತಿಂಗಳು ಬೇಕಾದೀತು ಎಂದು ಹೇಳಲಾಗಿದೆ.
19 ವರ್ಷದ ಬ್ಯಾಟರ್, ಮುಶೀರ್ ಖಾನ್ ಅ.1ರಿಂದ 5ರವರೆಗೆ ಲಖನೌದಲ್ಲಿ ನಿಗದಿಯಾಗಿದ್ದ ಇರಾನಿ ಕಪ್ ಟೂರ್ನಿಯನ್ನಾಡಲು ಅಜಂಗಢ್‌ನಲ್ಲಿರುವ ತಮ್ಮ ಮನೆಗೆ ಬಂದಿದ್ದರು. ಅಭ್ಯಾಸ ನಡೆಸಿ ಪೂರ್ವಾಂಚಲ ಎಕ್ಸ್‌ಪ್ರೆಸ್ ಮೂಲಕ ಅವರು ಲಖನೌದಿಂದ ಅಜಂಗಢಕ್ಕೆ ಕಾರಿನಲ್ಲಿ ತಂದೆ ಜತೆ ಹೋಗುತ್ತಿದ್ದರು. ಈ ವೇಳೆ ಕಾರು ರಸ್ತೆ ವಿಭಜಕಕ್ಕೆ ಡಿಕ್ಕಿಯಾಗಿತ್ತು.
ಮುಶೀರ್ ಖಾನ್ ಮುಂಬೈ ತಂಡದ ಪರ 9 ಪ್ರಥಮ ದರ್ಜೆ ಪಂದ್ಯವನ್ನಾಡಿ 716 ರನ್ ಗಳಿಸಿದ್ದಾರೆ. ಈ ವೇಳೆ 3 ಶತಕ ಮತ್ತು ಒಂದು ಅರ್ಧಶತಕ ಬಾರಿಸಿದ್ದಾರೆ. ಬೌಲಿಂಗ್‌ನಲ್ಲಿ 8 ವಿಕೆಟ್ ಕಿತ್ತಿದ್ದಾರೆ. ಕಳೆದ ಅಂಡರ್-19 ವಿಶ್ವಕಪ್ ಟೂರ್ನಿಯಲ್ಲಿ ಮುಶೀರ್ ಖಾನ್ ಒಟ್ಟು 360 ರನ್ ಬಾರಿಸಿ ಮಿಂಚಿದ್ದರು. ಕಳೆದ ಬಾರಿ ರಣಜಿ ಟ್ರೋಫಿಯಲ್ಲಿ ಮುಂಬೈ ತಂಡ ಚಾಂಪಿಯನ್ ಪಟ್ಟ ಅಲಂಕರಿಸುವಲ್ಲಿ ಮುಶೀರ್ ಪ್ರಮುಖ ಪಾತ್ರವಹಿಸಿದ್ದರು.