Wednesday, 9th October 2024

ಈ ಶತಕಕ್ಕೆ ಕಾದು ಕೂದಲೇ ಬೆಳ್ಳಗಾದವು

ಶತಕಗಳ ಶತಕ ಸಿಡಿಸಿದ ಕ್ಷಣ ಸುರೇಶ್ ರೈನಾ ಅವರಿಗೆ ಸಚಿನ್ ತೆಂಡೂಲ್ಕರ್ ಹೇಳಿದ್ದ ಮಾತು

ಮುಂಬೈ: ಸಾಧಕರನ್ನು ಹತ್ತಿರದಿಂದ ನೋಡುವ ಅವಕಾಶ ಎಲ್ಲರಿಗೂ ಸಿಗುವುದಿಲ್ಲ. ಅವರ ಇಷ್ಟವೇನು, ಕಷ್ಟವೇನು, ಬೇಕು-ಬೇಡಗಳನ್ನು ಸುಲಭವಾಗಿ ತಿಳಿದುಕೊಳ್ಳಲು ಜನಸಾಮಾನ್ಯರಿಗೆ ಆಗದು. ಪತ್ರಿಕೆ, ಟಿವಿಗಳಲ್ಲಿ ಬಂದದ್ದಷ್ಟೆೆ ಸಾಧಕರ ಬಗ್ಗೆ ತಿಳಿಯುವ ಮಾಹಿತಿ.

ಆದರೆ, ಕೆಲವರಿಗೆ ಸಾಧಕರ ಜತೆ ಒಡನಾಟ ಸಾಧ್ಯವಾಗುತ್ತದೆ. ಸಾಧನೆಯ ಹಾದಿಯಲ್ಲಿನ ಹೂ-ಮುಳ್ಳುಗಳ ಬಗ್ಗೆೆ ತಿಳಿಯುವ ಅವಕಾಶ ಸಿಗುತ್ತದೆ. ಅಂತಹ ಒಡನಾಟ ಹೊಂದಿದ ಕತೆಯ ಬಗ್ಗೆ ಸುರೇಶ್ ರೈನಾ ಮಾತನಾಡಿದ್ದಾರೆ. ಏನದು ಎಂಬುದನ್ನು ಅವರ ಮಾತಿನಲ್ಲೇ ಕೇಳಿ.

‘ನನ್ನ ಕ್ರಿಕೆಟ್ ವೃತ್ತಿ ಜೀವನದಲ್ಲಿ ಹಲವಾರು ವಿಶೇಷಗಳಿಗೆ ಸಾಕ್ಷಿಯಾಗುವ ಸೌಭಾಗ್ಯ ನನಗೆ ದೊರೆತದ್ದು ನನ್ನ ಸುದೈವ. ಯಾವುದು ಹೆಚ್ಚು ಯಾವುದು ಕಡಿಮೆ ಎಂದು ಹೇಳುವುದು ತುಸು ಕಷ್ಟವೇ. ಆದರೂ ಕೆಲವು ಸಂದರ್ಭ ಗಳನ್ನು ನಿಮ್ಮೊಂದಿಗೆ ಹಂಚಿಕೊಳ್ಳುತ್ತೇನೆ.

1. 2011ರಲ್ಲಿ ವಿಶ್ವಕಪ್ ಗೆದ್ದಾಗ ಇಡೀ ದೇಶದ ಸಂಭ್ರಮಕ್ಕೆ ಕಾರಣವಾದ ಗೆಲುವಿನಲ್ಲಿ ನನ್ನದೂ ಚಿಕ್ಕ ಪಾತ್ರವಿದ್ದದ್ದು ಎಂದೂ ಮರೆಯಲಾಗದ ಕ್ಷಣ. ವಿಶ್ವಕಪ್ ಟ್ರೋಫಿಯನ್ನು ಎತ್ತಿ ಹಿಡಿದಾಗ ಎಲ್ಲರ ಕಣ್ಣಿನಲ್ಲೂ ಆನಂದ ಭಾಷ್ಪ ಬಂದಿತ್ತು. ಆ ಸಂತೋಷವನ್ನು ವರ್ಣಿಸಲು ಪದಗಳೇ ಇಲ್ಲ.

2. ಶ್ರೀಲಂಕಾ ವಿರುದ್ಧ ಸರಣಿಯನ್ನು 2-0 ಅಂತರದಲ್ಲಿ ಭಾರತ ತಂಡ ಗೆದ್ದಿತು. ಆಗ ಧೋನಿ ನಮ್ಮ ನಾಯಕರಾಗಿದ್ದರು. ಆ
ಸರಣಿ ಗೆಲುವಿನ ಫಲವಾಗಿ ಕ್ರಿಕೆಟ್ ಇತಿಹಾಸದಲ್ಲೇ ಮೊಟ್ಟಮೊದಲ ಬಾರಿಗೆ ಭಾರತ ತಂಡ ಟೆಸ್ಟ್‌ ರ‍್ಯಾಂ‌ಕಿಂಗ್‌ನಲ್ಲಿ ನಂಬರ್ 1 ಸ್ಥಾನಕ್ಕೆ ಏರಿತ್ತು. ಗೆಲುವಿನ ಗದೆ ಹಿಡಿದು ಅಂದು ಸಂಭ್ರಮಿಸದ ಖುಷಿಯೇ ವರ್ಣನಾತೀತ.

3. 2008ರಲ್ಲಿ ಆಸ್ಟ್ರೇಲಿಯಾ ಪ್ರವಾಸದಲ್ಲಿ ಸಿಬಿ ಸರಣಿ ಗೆಲುವೂ ಕೂಡ ದೊಡ್ಡದೊಂದು ಖುಷಿ ನೀಡಿತ್ತು. ಆಸೀಸ್ ತಂಡವನ್ನು
ಆಸೀಸ್ ನೆಲದಲ್ಲೇ ಗೆಲ್ಲಬೇಕು ಎಂಬುದು ಸುಲಭದ ಮಾತಲ್ಲ. ಆದರೆ, ನಮ್ಮ ಸಾಂಘಿಕ ಹೋರಾಟದ ಫಲವಾಗಿ ಐತಿಹಾಸಿಕ ಗೆಲುವು ನಮ್ಮದಾಗಿತ್ತು. ಆ ಖುಷಿಯೂ ಕೂಡ ಅವರ್ಣನೀಯ.

4. 2008-09ರಲ್ಲಿ ನ್ಯೂಜಿಲೆಂಡ್ ಪ್ರವಾಸವೂ ಕೂಡ ಅಷ್ಟೇ ಮಹತ್ವದ್ದು. ಏಕೆಂದರೆ, ಅಲ್ಲಿನ ವಾತಾವರಣಕ್ಕೆ ಹೊಂದಿಕೊಂಡು ಆಡುವುದೇ ದೊಡ್ಡ ಸವಾಲು. ಜತೆಗೆ ನಮ್ಮದು ಯುವ ತಂಡವಾಗಿತ್ತು. 2007ರ ವಿಶ್ವಕಪ್ ಸೋಲಿನ ಕಹಿ ಇನ್ನೂ ಮರೆತಿರಲಿಲ್ಲ. ಆಗ ನಾವು ನ್ಯೂಜಿಲೆಂಡ್ ವಿರುದ್ಧ ಸರಣಿ ಗೆದ್ದದ್ದು ನಮ್ಮ ಪಾಲಿಗೆ ಎಂದೂ ಮರೆಯದ ಖುಷಿ.

ಇದಕ್ಕಿಂತ ಅದೃಷ್ಟವುಂಟೇ
ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ ಅವರ ಜತೆ ಕ್ರಿಕೆಟ್ ಆಡಿದ್ದು, ಡ್ರೆಸ್ಸಿಂಗ್ ರೂಂ ಹಂಚಿಕೊಂಡಿದ್ದು ನನ್ನ ಪಾಲಿನ ಸುದೈವ. ಅವರ ಜತೆಗಿನ ಪ್ರತಿ ಕ್ಷಣವೂ ಅದ್ಭುತವೇ. ಆದರೆ, ಒಂದು ಘಟನೆ ನನಗೆ ಎಂದೂ ಹಚ್ಚಹಸಿರು ಮತ್ತು ವಿಶೇಷ. ಅದು ಸಚಿನ್
ಅವರ ಶತಕಗಳ ಶತಕ ಗಳಿಸಿದ ಕ್ಷಣ. ಏಕೆಂದರೆ, 100ನೇ ಶತಕ ದಾಖಲಾದ ಕ್ಷಣ, ನಾನ್ ಸ್ಟ್ರೈಕರ್ ಎಂಡ್‌ನಲ್ಲಿ ಇದ್ದದ್ದು ನಾನು. ಒಂಟಿ ರನ್‌ಗಾಗಿ ಸಚಿನ್ ಓಡಿದಾಗ, ಇಡೀ ದೇಶವೇ ಹುಚ್ಚೆೆದ್ದು ಕುಣಿದಿತ್ತು. ಸಚಿನ್ ಅವರು ಹೆಲ್ಮೆಟ್ ಬಿಚ್ಚಿ ಆಕಾಶ ನೋಡಿ ನಮಿಸಿದ ನಂತರ ಅವರನ್ನು ತಬ್ಬಿ ಕಂಗ್ರ್ಯಾಟ್ಸ್ ಹೇಳುವ ಜೀವಮಾನದ ಏಕೈಕ ಅವಕಾಶ ನನಗೊಬ್ಬನಿಗೇ ಸಿಕ್ಕಿದೆ.
ಇದಕ್ಕಿಂಥ ಅದೃಷ್ಟ ಇನ್ನೊಂದಿದೆಯೇ?

ನನಗಷ್ಟೇ ಕೇಳಿದ ಸಚಿನ್ನ ಮಾತು
ಸಚಿನ್ ಶತಕ ಸಿಡಿಸಿದ ಕ್ಷಣ ಅವರ ಬಳಿ ಹೋಗಿ, ‘ಈ ಕ್ಷಣಕ್ಕಾಗಿ ಹಲವು ತಿಂಗಳುಗಳೇ ಕಾಯಬೇಕಾಯಿತು. ವೆಲ್ ಡನ್ ಪಾಜಿ’ ಎಂದೆ. ಅದಕ್ಕವರು, ‘ಹೌದು, ಈ ಕ್ಷಣಕ್ಕಾಗಿ ಕಾಯುತ್ತ ನನ್ನ ತಲೆಗೂದಲೇ ಬೆಳ್ಳಗಾದವು’ ಎಂದು ನಸುನಕ್ಕಿದ್ದರು. ಕೋಟ್ಯಂತರ ಅಭಿಮಾನಿಗಳ ನಿರೀಕ್ಷೆಗಳ ಭಾರವನ್ನು ಹೊರುವುದು ಎಷ್ಟು ಕಷ್ಟ ಎಂಬುದು ನನಗೆ ಆ ಕ್ಷಣ ಅರಿವಾಗಿತ್ತು.