Friday, 20th September 2024

Paris Paralympics: ಕ್ಲಬ್ ಥ್ರೋ F51 ಸ್ಪರ್ಧೆಯಲ್ಲಿ ಚಿನ್ನ ಗೆದ್ದ ಧರಂಬೀರ್, ಬೆಳ್ಳಿ ಗೆದ್ದ ಪ್ರಣವ್; 25 ಪದಕ ಸನಿಹದಲ್ಲಿ ಭಾರತ

Paris Paralympics

ಪ್ಯಾರಿಸ್‌: ಪ್ಯಾರಾಲಿಂಪಿಕ್ಸ್‌ನಲ್ಲಿ(Paris Paralympics) ಭಾರತದ ಕ್ರೀಡಾಪಟುಗಳ ಸರ್ವಶ್ರೇಷ್ಠ ನಿರ್ವಹಣೆಯ ಸಾಧನೆ ಮುಂದುವರಿದಿದೆ. ಸದ್ಯ ಭಾರತ 24 ಪದಕ ಗೆದ್ದು ಪದಕಪಟ್ಟಿಯಲ್ಲಿ 15ನೇ ಸ್ಥಾನಿಯಾಗಿದೆ. 5 ಚಿನ್ನ, 6 ಬೆಳ್ಳಿ, 10 ಕಂಚು ಒಳಗೊಂಡಿದೆ. ಬುಧವಾರ ತಡರಾತ್ರಿ ಭಾರತಕ್ಕೆ ಒಟ್ಟು 3 ಪದಕ ಒಲಿದಿತ್ತು. 2 ಚಿನ್ನ ಮತ್ತು 1 ಬೆಳ್ಳಿ.

ಪುರುಷರ ಕ್ಲಬ್ ಥ್ರೋ F51 ಸ್ಪರ್ಧೆಯಲ್ಲಿ ಭಾರತದ ಧರಂಬೀರ್(Dharambir ) ಚಿನ್ನದ ಪದಕವನ್ನು ಗೆದ್ದರೆ, ಮತೋರ್ವ ಭಾರತೀಯ ಪ್ರಣವ್ ಸೂರ್ಮಾ(Pranav Soorma ) ಬೆಳ್ಳಿ ಪದಕ ಗೆದ್ದರು. ಕ್ಲಬ್ ಥ್ರೋ ವಿಭಾಗದಲ್ಲಿ ಭಾರತಕ್ಕೆ ಒಲಿದ ಮೊದಲ ಪದಕ ಇದಾಗಿದೆ. ಇದಕ್ಕೂ ಮುನ್ನ ನಡೆದ ಪುರುಷರ ವೈಯಕ್ತಿಕ ರಿಕರ್ವ್ ಆರ್ಚರಿ ಫೈನಲ್‌ ಪಂದ್ಯದಲ್ಲಿ ಭಾರತದ ಹರ್ವಿಂದರ್ ಸಿಂಗ್(Harvinder Singh) ಭರ್ಜರಿ ಪ್ರದರ್ಶನದೊಂದಿಗೆ ಚಿನ್ನ ಗೆದ್ದರು.

ಪುರುಷರ ಕ್ಲಬ್ ಥ್ರೋ F51 ಸ್ಪರ್ಧೆಯಲ್ಲಿ ಧರಂಬೀರ್ 34.92 ಮೀಟರ್‌ಗಳ ಅತ್ಯುತ್ತಮ ಎಸೆತದೊಂದಿಗೆ ಏಷ್ಯನ್ ದಾಖಲೆಯನ್ನು ಮುರಿದು ಅಗ್ರಸ್ಥಾನದೊಂದಿಗೆ ಚಿನ್ನಕ್ಕೆ ಕೊರಳೊಡ್ಡಿದರು. ಧರ್ಮಬೀರ್ ಮೊದಲ 4 ಯತ್ನಗಳನ್ನು ಫೌಲ್ ಮಾಡಿದರೂ, 5ನೇ ಯತ್ನದಲ್ಲಿ 34.92 ಮೀ. ದೂರಕ್ಕೆ ಎಸೆದು ಮೊದಲ ಸ್ಥಾನ ಪಡೆದರು. ಪ್ರಣವ್ ಸೂರ್ಮಾ 34.59 ಮೀಟರ್‌ ದೂರ ಕ್ರಮಿಸಿ ಬೆಳ್ಳಿ ಪದಕ ಪಡೆದರು. ಇದೇ ಸ್ಪರ್ಧೆಯಲ್ಲಿ ಕಣಕ್ಕಿಳಿದಿದ್ದ ಭಾರತ ಅಮಿತ್‌ ಕುಮಾರ್‌ 10ನೇ ಸ್ಥಾನ ಪಡೆದರು. ಸೆರ್ಬಿಯಾದ ಜೆಲ್ಕೊ ಡಿಮಿಟ್ರಿಜೆವಿಕ್ ಅವರು 34.18 ಮೀಟರ್‌ಗಳ ಅತ್ಯುತ್ತಮ ಪ್ರಯತ್ನದೊಂದಿಗೆ ಕಂಚಿನ ಪದಕ ಪಡೆದರು.

ಹರಿಯಾಣದ ಸೋನೆಪತ್‌ನವರಾದ ಧರಂಬೀರ್, 2014 ರಲ್ಲಿ ಪ್ಯಾರಾ ಅಥ್ಲೆಟಿಕ್ಸ್‌ನಲ್ಲಿ ತಮ್ಮ ಜರ್ನಿ ಆರಂಭಿಸಿದರು.ನೀರಿನ ಆಳವನ್ನು ಸರಿಯಾಗಿ ತಿಳಿಯದೆ ಕಾಲುವೆಯೊಂದಕ್ಕೆ ಧುಮುಕಿದ ಧರಂಬೀರ್ ಕೆಳಗಿರುವ ಬಂಡೆಗಳಿಗೆ ಅಪ್ಪಳಿಸಿ ಸೊಂಟದ ಪಾರ್ಶ್ವವಾಯುವಿಗೆ ತುತ್ತಾದರು.

16 ನೇ ವಯಸ್ಸಿನಲ್ಲಿ, ಪ್ರಣವ್ ಸೂರ್ಮಾ ಅವರ ತಲೆಯ ಮೇಲೆ ಸಿಮೆಂಟ್ ಶೀಟ್ ಬಿದ್ದು ಅವರ ಜೀವನವು ನಾಟಕೀಯ ತಿರುವು ಪಡೆದುಕೊಂಡಿತು. ಇದರ ಪರಿಣಾಮವಾಗಿ ಬೆನ್ನುಹುರಿಗೆ ತೀವ್ರವಾದ ಗಾಯವು ಪಾರ್ಶ್ವವಾಯುವಿಗೆ ಒಳಗಾಯಿತು. ಸುಮಾರು ಆರು ತಿಂಗಳು ಕಾಲ ಪ್ರಣವ್‌ ಆಸ್ಪತ್ರೆಯಲ್ಲಿದ್ದಋು. ವ್ಹೀಲ್ ಚೇರ್‌ ತನ್ನ ಜೀವಮಾನದ ಒಡನಾಡಿ ಎಂದು ಹಿಂದೊಮ್ಮೆ ಪ್ರಣವ್‌ ಸಂದರ್ಶನದಲ್ಲಿ ಹೇಳಿದ್ದರು.

ಇದನ್ನೂ ಓದಿ Paris Paralympics: ಪ್ಯಾರಾಲಿಂಪಿಕ್ಸ್‌ನಲ್ಲಿ ಇತಿಹಾಸ ಸೃಷ್ಟಿಸಿದ ಹರ್ವಿಂದರ್‌ ಸಿಂಗ್‌, ಆರ್ಚರಿಯಲ್ಲಿ ಭಾರತಕ್ಕೆ ಮೊದಲ ಚಿನ್ನ

ಚಿನ್ನ ಗೆದ್ದ ಹರ್ವಿಂದರ್ ಸಿಂಗ್

ಹರ್ವಿಂದರ್ ಸಿಂಗ್ ಭರ್ಜರಿ ಪ್ರದರ್ಶನ ನೀಡಿ ಚಿನ್ನದ ಪದಕವನ್ನು ತಮ್ಮದಾಗಿಸಿಕೊಂದರು. ಟೋಕಿಯೊ ಪ್ಯಾರಾಲಿಂಪಿಕ್ಸ್‌ನಲ್ಲಿ ಕಂಚಿನ ಪದಕ ಪಡೆದು ಭರವಸೆ ಮೂಡಿಸಿದ್ದ ಆರ್ಚರಿ ಅಥ್ಲೀಟ್‌ ಹರ್ವಿಂದರ್‌ ಸಿಂಗ್‌ ಪ್ಯಾರಿಸ್‌ನಲ್ಲಿ ಸ್ಥಿರ ಪ್ರದರ್ಶನ ನೀಡಿದ್ದಾರೆ. ಈ ಮೂಲಕ ಭಾರತ ಪ್ಯಾರಿಸ್ ಒಲಿಂಪಿಕ್ಸ್ ಮತ್ತು ಪ್ಯಾರಾಲಿಂಪಿಕ್ಸ್‌ನಲ್ಲಿ ಆರ್ಚರಿಯಲ್ಲಿ ಮೊದಲ ಬಂಗಾರದ ಸಾಧನೆಯನ್ನು ಮಾಡಿದೆ. ಫೈನಲ್‌ನಲ್ಲಿ ಅಮೋಘ ಪ್ರದರ್ಶನ ನೀಡಿದ ಹರ್ವಿಂದರ್ ಸಿಂಗ್‌, ಪೋಲೆಂಡ್‌ನ ಲುಕಾಸ್ ಸಿಸ್ಜೆಕ್ ಆಟಗಾರನನ್ನು ಸೋಲಿಸಿದರು. ಪದಕದ ಸುತ್ತಿನ ಪಂದ್ಯದಲ್ಲಿ ಹರ್ವಿಂದರ್ 28-24, 28-27, 29-25 ರಿಂದ ಪೋಲೆಂಡ್‌ ಆಟಗಾರನನ್ನು ಮಣಿಸಿ, 6-0ಯಿಂದ ಚಿನ್ನದ ಪದಕವನ್ನು ತಮ್ಮದಾಗಿಸಿಕೊಂಡರು.