Sunday, 15th December 2024

ಗೇಲ್, ರಾಹುಲ್, ಮಯಾಂಕ್ ಸ್ಪೋಟಕ ಬ್ಯಾಟಿಂಗ್: ಗೆದ್ದ ಪಂಜಾಬ್

ಶಾರ್ಜಾ: ಕನ್ನಡಿಗರಾದ ಕೆಎಲ್ ರಾಹುಲ್ (61*), ಮಯಾಂಕ್ ಅಗರ್ವಾಲ್ (45ರನ್) ಹಾಗೂ ಟೂರ್ನಿಯಲ್ಲಿ ಮೊದಲ ಪಂದ್ಯವಾಡಿದ ವಿಂಡೀಸ್ ಸ್ಫೋಟಕ ಬ್ಯಾಟ್ಸ್‌ಮನ್ ಕ್ರಿಸ್ ಗೇಲ್ (53*) ಅಬ್ಬರದ ಬ್ಯಾಟಿಂಗ್‌ಗೆ ನಲುಗಿದ ರಾಯಲ್ ಚಾಲೆಂಜರ್ಸ್‌ ಬೆಂಗಳೂರು ತಂಡ ಐಪಿಎಲ್-13ರ ತನ್ನ 8ನೇ ಪಂದ್ಯದಲ್ಲಿ ಕಿಂಗ್ಸ್ ಪಂಜಾಬ್ ತಂಡದ ಎದುರು 8 ವಿಕೆಟ್‌ಗಳಿಂದ ಶರಣಾಯಿತು.

ಇದರೊಂದಿಗೆ ಸತತ 5 ಸೋಲುಗಳಿಂದ ಕಂಗೆಟ್ಟಿದ್ದ ರಾಹುಲ್ ಪಡೆ ಕೊನೆಗೂ ಗೆಲುವಿನ ನಗೆ ಬೀರಿದರೆ, ಆರ್‌ಸಿಬಿ ಹ್ಯಾಟ್ರಿಕ್ ಗೆಲುವಿನ ಅವಕಾಶ ತಪ್ಪಿಸಿಕೊಂಡಿತು. ಆರ್‌ಸಿಬಿ ಪ್ರಸಕ್ತ ಆವೃತ್ತಿಯಲ್ಲಿ ಪಂಜಾಬ್ ಎದುರಿನ 2 ಮುಖಾಮುಖಿಯಲ್ಲೂ ಸೋಲು ಕಂಡಿತು.

ಶಾರ್ಜಾ ಕ್ರಿಕೆಟ್ ಸ್ಟೇಡಿಯಂನಲ್ಲಿ ಗುರುವಾರ ನಡೆದ ಪಂದ್ಯದಲ್ಲಿ ಟಾಸ್ ಜಯಿಸಿ ಬ್ಯಾಟಿಂಗ್ ಮಾಡಿದ ಆರ್‌ಸಿಬಿ, ಬೌಲರ್‌ಗಳ ಸಂಘಟಿತ ಹೋರಾಟದ ನಡುವೆಯೂ ನಾಯಕ ವಿರಾಟ್ ಕೊಹ್ಲಿ (48 ರನ್, 39 ಎಸೆತ, 3 ಬೌಂಡರಿ) ಸಮಯೋಚಿತ ಬ್ಯಾಟಿಂಗ್ ಹಾಗೂ ಸ್ಲಾಗ್ ಓವರ್‌ ಗಳಲ್ಲಿ ಕ್ರಿಸ್ ಮಾರಿಸ್ (25*ರನ್, 8 ಎಸೆತ, 1 ಬೌಂಡರಿ, 3 ಸಿಕ್ಸರ್) ಸ್ಫೋಟಕ ಬ್ಯಾಟಿಂಗ್ ಫಲವಾಗಿ 6 ವಿಕೆಟ್‌ಗೆ 171 ರನ್ ಕಲೆಹಾಕಿತು.

ಪ್ರತಿಯಾಗಿ ತ್ರಿಮೂರ್ತಿಗಳ ಅಬ್ಬರದ ಬ್ಯಾಟಿಂಗ್ ನೆರವಿನಿಂದ ಪಂಜಾಬ್ ತಂಡ 2 ವಿಕೆಟ್‌ಗೆ 177 ರನ್ ಗಳಿಸಿ ಗೆಲುವಿನ ನಗೆ ಬೀರಿತು. ಕಿಂಗ್ಸ್ ಇಲೆವೆನ್ ಪಂಜಾಬ್ ತಂಡ ಟೂರ್ನಿಯಲ್ಲಿ 21 ದಿನಗಳ ಬಳಿಕ ಗೆಲುವಿನ ನಗೆ ಬೀರಿತು. ದುಬೈನಲ್ಲಿ ಆರ್‌ಸಿಬಿ ವಿರುದ್ಧವೇ ಕಡೇ ಬಾರಿಗೆ ಜಯ ದಾಖಲಿಸಿತ್ತು. ಕೆ.ಎಲ್‌.ರಾಹುಲ್ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.