Monday, 25th November 2024

Rohit Sharma: ಡ್ರೆಸ್ಸಿಂಗ್ ರೂಮ್‌ನಲ್ಲಿ ಪಂತ್‌ ಜತೆ ರೋಹಿತ್‌ ಕಿತ್ತಾಟ; ಇಲ್ಲಿದೆ ವಿಡಿಯೊ

ಮುಂಬಯಿ: ಟೀಮ್​ ಇಂಡಿಯಾದ ನಾಯಕ ರೋಹಿತ್​ ಶರ್ಮ(Rohit Sharma) ತಂಡದ ಆಟಗಾರರು ಫಿಲ್ಡಿಂಗ್, ಬ್ಯಾಟಿಂಗ್‌​ ಅಥವಾ ಬೌಲಿಂಗ್​ನಲ್ಲಿ ಏನಾದರು ತಪ್ಪುಗಳನ್ನು ಮಾಡಿದ ತಕ್ಷಣ ಅವರ ವಿರುದ್ಧ ಮುನಿಸಿಕೊಳ್ಳುವುದು ಸರ್ವೆ ಸಾಮಾನ್ಯ. ಈಗಾಗಲೇ ಇಂತಹ ಹಲವು ನಿದರ್ಶನಗಳನ್ನು ನೋಡಿದ್ದೇವೆ. ಇಂತಹದ್ದೇ ಘಟನೆಯೊಂದು ನ್ಯೂಜಿಲ್ಯಾಂಡ್‌ ವಿರುದ್ಧದ ಅಂತಿಮ ಟೆಸ್ಟ್‌ ಪಂದ್ಯದಲ್ಲಿಯೂ ನಡೆದಿದೆ. ಡ್ರೆಸ್ಸಿಂಗ್‌ ರೂಮ್‌ನಲ್ಲಿ ರೋಹಿತ್‌ ತಾಳ್ಮೆ ಕಳೆದುಕೊಂಡು ರಿಷಭ್‌ ಪಂತ್‌(Rishabh Pant) ವಿರುದ್ಧ ಸಿಡಿಮಿಡಿಗೊಂಡ ಘಟನೆಯ ವಿಡಿಯೊವೊಂದು ವೈರಲ್‌(viral cricket video) ಆಗಿದೆ.

ರೋಹಿತ್‌ ಅವರು ಪಂತ್‌ಗೆ ಬೈಯುತ್ತಿರುವುದನ್ನು ಈ ವಿಡಿಯೊದಲ್ಲಿ ನೋಡಬಹುದಾಗಿದೆ. ರೋಹಿತ್‌ ಸಿಟ್ಟಿನಿಂದ ಏನೋ ಹೇಳುತ್ತಿರುವಾಗ ಪಂತ್‌ ಸಪ್ಪೆ ಮೋರೆಯಲ್ಲಿರುವುದನ್ನು ಇಲ್ಲಿ ಗಮನಿಸಬಹುದು. ಯಾವ ಕಾರಣಕ್ಕೆ ರೋಹಿತ್‌ ಪಂತ್‌ ವಿರುದ್ಧ ವಾಗ್ವಾದ ನಡೆಸಿದ್ದಾರೆ ಎನ್ನುವುದು ತಿಳಿದುಬಂದಿಲ್ಲ. ಆದರೆ, ರೋಹಿತ್‌ ಹಾವ– ಭಾವ ನೋಡುವಾಗ ಫೀಲ್ಡಿಂಗ್‌ನಲ್ಲಿ ಎಡವಟ್ಟು ಮಾಡಿದ್ದಕ್ಕೆ ಬೈದಿರುವಂತಿದೆ.

ಮೊದಲ ಇನಿಂಗ್ಸ್‌ನಲ್ಲಿ ಬಿರುಸಿನ ಬ್ಯಾಟಿಂಗ್‌ ಮೂಲಕ ಅರ್ಧಶತಕ ಬಾರಿಸಿದ ಟೀಮ್‌ ಇಂಡಿಯಾದ ಎಡಗೈ ಬ್ಯಾಟರ್‌& ಕೀಪರ್‌ ರಿಷಭ್‌ ಪಂತ್‌(Rishabh Pant) ದಾಖಲೆಯೊಂದನ್ನು ಬರೆದರು. ಒಂದು ರನ್‌ ಗಳಿಸಿದ್ದಲ್ಲಿಂದ ಶನಿವಾರ ಬ್ಯಾಟಿಂಗ್‌ ಆರಂಭಿಸಿದ ರಿಷಭ್‌ ಪಂತ್‌ ಆಕ್ರಮಣಕಾರಿ ಬ್ಯಾಟಿಂಗ್‌ಗೆ ಒತ್ತು ನೀಡಿದರು. ಮುನ್ನುಗ್ಗಿ ಬ್ಯಾಟ್‌ ಬೀಸಿದ ಪಂತ್‌ ಕೇವಲ 36 ಎಸೆತಗಳಲ್ಲಿ ಅರ್ಧಶತಕ ಪೂರೈಸುವ ಮೂಲಕ ಟೆಸ್ಟ್‌ನಲ್ಲಿ ನ್ಯೂಜಿಲ್ಯಾಂಡ್‌ ಪರ ಅತಿ ಕಡಿಮೆ ಎಸೆತಗಳಿಂದ ಅರ್ಧಶತ ಬಾರಿಸಿದ ಮೊದಲ ಭಾರತೀಯ ಬ್ಯಾಟರ್‌ ಎನಿಸಿಕೊಂಡರು. ಇದಕ್ಕೂ ಮುನ್ನ ಈ ದಾಖಲೆ ಯುವ ಬ್ಯಾಟರ್‌ ಯಶಸ್ವಿ ಜೈಸ್ವಾಲ್‌(41 ಎಸೆತ) ಹೆಸರಿನಲ್ಲಿತ್ತು.

ಇದನ್ನೂ ಓದಿ IND vs NZ: ವಿಕೆಟ್‌ ಪತನದಲ್ಲೂ ದಾಖಲೆ ಬರೆದ ವಾಂಖೆಡೆ

ಅತಿ ವೇಗವಾಗಿ ಟೆಸ್ಟ್‌ನಲ್ಲಿ ಅರ್ಧಶತಕ ಬಾರಿಸಿದ ಭಾರತೀಯ ದಾಖಲೆ ಕೂಡ ಪಂತ್‌ ಹೆಸರಿನಲ್ಲಿದೆ. 2022 ರಲ್ಲಿ ಬೆಂಗಳೂರಿನಲ್ಲಿ ನಡೆದಿದ್ದ ಬಾಂಗ್ಲಾದೇಶ ವಿರುದ್ಧದ ಟೆಸ್ಟ್‌ನಲ್ಲಿ ಪಂತ್‌ ಕೇವಲ 28 ಎಸೆತಗಳಲ್ಲಿ ಅರ್ಧಶತಕ ಬಾರಿಸಿದ್ದರು.

ನ್ಯೂಜಿಲ್ಯಾಂಡ್‌ ದ್ವಿತೀಯ ಇನಿಂಗ್ಸ್‌ನಲ್ಲಿ 174 ರನ್‌ಗೆ ಆಲೌಟ್‌ ಆಗಿ ಭಾರತ ಗೆಲುವಿಗೆ 147 ರನ್‌ಗಳ ಗುರಿ ನೀಡಿದೆ. ರವೀಂದ್ರ ಜಡೇಜಾ ಮೊದಲ ಇನಿಂಗ್ಸ್‌ನಂತೆ ದ್ವಿತೀಯ ಇನಿಂಗ್ಸ್‌ನಲ್ಲಿಯೂ 5 ವಿಕೆಟ್‌ ಗೊಂಚಲು ಪಡೆದರು. ಒಟ್ಟಾರೆ ಜಡ್ಡು ಈ ಪಂದ್ಯದಲ್ಲಿ 10 ವಿಕೆಟ್‌ ಕಿತ್ತರು. ಆಸ್ಟ್ರೇಲಿಯಾ ಪ್ರವಾಸಕ್ಕೂ ಮುನ್ನ ಅವರ ಈ ಪ್ರದರ್ಶನ ತಂಡಕ್ಕೆ ಹೆಚ್ಚಿನ ವಿಶ್ವಾಸ ಮೂಡಿಸುವಂತೆ ಮಾಡಿದೆ. ಅನುಭವಿ ಹಾಗೂ ಹಿರಿಯ ಆಲ್‌ರೌಂಡರ್‌ ಅಶ್ವಿನ್‌ ದ್ವಿತೀಯ ಇನಿಂಗ್ಸ್‌ನಲ್ಲಿ 3 ವಿಕೆಟ್‌ ಕಿತ್ತರು.