ಬೆಂಗಳೂರು: ಆಸ್ಟ್ರೇಲಿಯಾ ವಿರುದ್ಧದ 19 ವರ್ಷದೊಳಗಿನವರ ‘ಅನಧಿಕೃತ’ ಟೆಸ್ಟ್ ಕ್ರಿಕೆಟ್ ಪಂದ್ಯವನ್ನಾಡುವ ನಿರೀಕ್ಷೆಯಲ್ಲಿದ್ದ ಕರ್ನಾಟಕದ ಸಮಿತ್ ದ್ರಾವಿಡ್‌ಗೆ(Samit Dravid) ಗಾಯ ಹಿನ್ನಡೆ ಉಂಟು ಮಾಡಿದೆ. ಮೊಣಕಾಲಿನ ನೋವಿನಿಂದಾಗಿ ಸಮಿತ್ ಮೊದಲ ಟೆಸ್ಟ್‌ನಿಂದ ಹೊರಗುಳಿದಿದ್ದಾರೆ. ಜತೆಗೆ ಸರಣಿಯ ಎರಡನೇ ಪಂದ್ಯದಲ್ಲಿ ಆಡುವ ಸಾಧ್ಯತೆಯೂ ಕ್ಷೀಣವಾಗಿದೆ. ಮೊಣಕಾಲು ನೋವಿಗೆ ಚಿಕಿತ್ಸೆ(Injured Samit Dravid) ಪಡೆಯುತ್ತಿರುವ ಅವರು ಸದ್ಯ ಅವರು ಎನ್‌ಸಿಎನಲ್ಲಿದ್ದಾರೆ.
ಸಮಿತ್ ಗಾಯದ ಬಗ್ಗೆ ಮಾಹಿತಿ ನೀಡಿರುವ ಮುಖ್ಯ ಕೋಚ್ ಹೃಷಿಕೇಶ್ ಕಾನಿಟ್ಕರ್, ಮೊಣಕಾಲಿನ ಗಾಯದಿಂದ ಬಳಲುತ್ತಿರುವ ಸಮಿತ್ ಸದ್ಯಕ್ಕೆ ಆಡುವುದು ಕಷ್ಟ ಎಂದರು. ಸಮಿತ್‌ಗೆ 19 ವರ್ಷದೊಳಗಿನವರ ವಿಭಾಗದಲ್ಲಿ ಭಾರತವನ್ನು ಪ್ರತಿನಿಧಿಸಲು ಇದು ಕೊನೆಯ ಅವಕಾಶವಾಗಿತ್ತು. ಅಕ್ಟೋಬರ್ 11ರಂದು ಅವರು 19 ವರ್ಷಕ್ಕೆ ಕಾಲಿಡಲಿದ್ದಾರೆ. ಆಸೀಸ್ ವಿರುದ್ಧದ 3 ಪಂದ್ಯಗಳ ಏಕದಿನ ಸರಣಿಯಲ್ಲಿಯೂ ಸಮಿತ್‌ಗೆ ಗಾಯದಿಂದ ಆಡುವ ಅವಕಾಶ ಸಿಕ್ಕಿರಲಿಲ್ಲ.
2024-25ರ ರಣಜಿ ಟ್ರೋಫಿಗೆ(Ranji Trophy) ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ ಪ್ರಕಟಿಸಿದ ಸಂಭವನೀಯ ಆಟಗಾರರ ಪಟ್ಟಿಯಲ್ಲಿಯೂ ಸಮಿತ್ ಸ್ಥಾನ ಪಡೆದಿದ್ದಾರೆ. ಭಾರತ ತಂಡದ ಮಾಜಿ ಕೋಚ್ ರಾಹುಲ್ ದ್ರಾವಿಡ್‌ರ ಪುತ್ರನಾಗಿರುವ ಸಮಿತ್ ದ್ರಾವಿಡ್ ಕಿರಿಯರ ಕ್ರಿಕೆಟ್‌ನಲ್ಲಿ ಉತ್ತಮ ಪ್ರದರ್ಶನ ತೋರಿದ್ದರು. ಈ ವರ್ಷದ ಆರಂಭದಲ್ಲಿ ನಡೆದಿದ್ದ 19 ವರ್ಷದ ಕೂಚ್ ಬೆಹಾರ್ ಟ್ರೋಫಿಯಲ್ಲಿ ಕರ್ನಾಟಕ ತಂಡ ಗೆಲ್ಲುವಲ್ಲಿ ಸಮಿತ್ ಪ್ರಮುಖ ಪಾತ್ರ ವಹಿಸಿದ್ದರು. ಆಡಿದ ಎಂಟು ಪಂದ್ಯಗಳಲ್ಲಿ 362 ರನ್ ಗಳಿಸಿದ್ದರು.
ಇದನ್ನೂ ಓದಿ IND vs BAN: ಕೊಹ್ಲಿ ಬ್ಯಾಟ್‌ನಲ್ಲಿ ಸತತ ಸಿಕ್ಸರ್ ಬಾರಿಸಿದ ವೇಗಿ ಆಕಾಶ್ ದೀಪ್; ವಿಡಿಯೊ ವೈರಲ್
ಸದ್ಯದಲ್ಲೇ ಕೆಎಸ್‌ಸಿಎ ಅಂತಿಮ 15 ಆಟಗಾರರ ಪಟ್ಟಿ ಪ್ರಕಟ ಮಾಡಲಿದೆ. ಅಂತಿಮ ಪಟ್ಟಿಯಲ್ಲಿ ಅವರು ಸ್ಥಾನ ಪಡೆಯಲಿದ್ದಾರಾ ಎಂದು ಕಾದು ನೋಡಬೇಕಿದೆ. ‘ಸಿ’ ಗುಂಪಿನಲ್ಲಿರುವ ಕರ್ನಾಟಕ, ಮೊದಲ ಪಂದ್ಯದಲ್ಲಿ ಮಧ್ಯಪ್ರದೇಶ ವಿರುದ್ಧ ಸೆಣಸಲಿದೆ.
ರಣಜಿ ಸಂಭವನೀಯ ಆಟಗಾರರ ಪಟ್ಟಿ
ಕೆ.ಎಲ್.ರಾಹುಲ್, ಮಾಯಾಂಕ್ ಅಗರ್ವಾಲ್, ಮನೀಶ್ ಪಾಂಡೆ, ದೇವದತ್ ಪಡಿಕ್ಕಲ್, ಪ್ರಸಿದ್ಧ್ ಕೃಷ್ಣ, ವಿದ್ವತ್ ಕಾವೇರಪ್ಪ, ವೈಶಾಖ್ ವಿಜಯ್‌ಕುಮಾರ್, ನಿಕಿನ್ ಜೋಸ್, ಸ್ಮರಣ್ ಆರ್, ಕಿಶನ್ ಬೆಡಾರೆ, ಅನೀಶ್ ಕೆ.ವಿ., ಶರತ್ ಶ್ರೀನಿವಾಸ್, ಸುಜಯ್ ಸತೇರಿ, ಕೃತಿಕ್ ಕೃಷ್ಣ, ವಾಸುಕಿ ಕೌಶಿಕ್, ಅಭಿಲಾಷ್ ಶೆಟ್ಟಿ, ವೆಂಕಟೇಶ್ ಎಂ., ಶ್ರೇಯಸ್ ಗೋಪಾಲ್, ಹಾರ್ದಿಕ್ ರಾಜ್, ಶುಭಾಂಗ್ ಹೆಗಡೆ, ರೋಹಿತ್ ಕುಮಾರ್, ಧೀರಜ್ ಗೌಡ, ಮೊಹ್ಸಿನ್ ಖಾನ್, ಶಶಿಕುಮಾರ್ ಕೆ., ಅಧೋಕ್ಷ್, ಶಿಖರ್ ಶೆಟ್ಟಿ, ಯಶೋವರ್ಧನ್, ವಿಶಾಲ್ ಓನತ್, ಜ್ಯಾಸ್ಪರ್ ಇ.ಜೆ., ಸಮಿತ್ ದ್ರಾವಿಡ್, ಕಾರ್ತಿಕೇಯ ಕೆ.ಪಿ., ಸಮರ್ಥ್ ನಾಗರಾಜ್, ಲುವ್ನಿತ್ ಸಿಸೋಡಿಯಾ, ಚೇತನ್ ಎಲ್.ಆರ್., ಅಭಿನವ್ ಮನೋಹರ್.