Thursday, 19th September 2024

SCO vs AUS: ಹೆಡ್‌ ಬ್ಯಾಟಿಂಗ್‌ ಆರ್ಭಟ; ಟಿ20ಯಲ್ಲಿ ವಿಶ್ವ ದಾಖಲೆ ಬರೆದ ಆಸ್ಟ್ರೇಲಿಯಾ

SCO vs AUS

ಎಡಿನ್‌ಬರ್ಗ್: ಸ್ಕಾಟ್ಲೆಂಡ್‌ ವಿರುದ್ಧ ನಡೆದ ಮೊದಲ ಟಿ20 ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡ ವಿಶ್ವ ದಾಖಲೆಯೊಂದನ್ನು ನಿರ್ಮಿಸಿದೆ. ಚೇಸಿಂಗ್‌ ವೇಳೆ ವಿಸ್ಫೋಟಕ ಬ್ಯಾಟಿಂಗ್‌ ನಡೆಸಿದ ಆಸೀಸ್‌ ತಂಡ ಪವರ್‌ ಪ್ಲೇಯಲ್ಲಿ ಬರೋಬ್ಬರಿ 113 ರನ್‌ ಬಾರಿಸಿ ಈ ದಾಖಲೆ ಬರೆಯಿತು. ಇದಕ್ಕೂ ಮುನ್ನ ಈ ದಾಖಲೆ ದಕ್ಷಿಣ ಆಫ್ರಿಕಾ ತಂಡದ ಹೆಸರಿನಲ್ಲಿತ್ತು. 2023ರಲ್ಲಿ ಹರಿಣ ಪಡೆ ವೆಸ್ಟ್‌ ಇಂಡೀಸ್‌ ವಿರುದ್ಧ 102 ರನ್‌ ಬಾರಿಸಿತ್ತು. ಇದೀಗ ಈ ದಾಖಲೆ ಪತನಗೊಂಡಿದೆ.

ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ನಡೆಸಿದ ಸ್ಕಾಟ್ಲೆಂಡ್‌ ನಿಗದಿತ 20 ಓವರ್‌ಗಳಲ್ಲಿ 9 ವಿಕೆಟ್‌ಗೆ 154 ರನ್‌ ಬಾರಿಸಿತು. ಗುರಿ ಬೆನ್ನಟ್ಟಿದ ಆಸೀಸ್‌, ಎಡಗೈ ಬ್ಯಾಟರ್‌ ಟ್ರಾವಿಸ್‌ ಹೆಡ್‌ ಅವರ ಸ್ಫೋಟಕ ಅರ್ಧಶತಕದ ನೆರವಿನಿಂದ 9.3 ಓವರ್‌ಗಳಲ್ಲಿ 3 ವಿಕೆಟ್‌ಗೆ 156 ರನ್‌ ಬಾರಿಸಿ ಗೆಲುವು ದಾಖಲಿಸಿತು.

ವೇಗದ ಅರ್ಧಶತಕ ಬಾರಿಸಿದ ಹೆಡ್‌

ಇನಿಂಗ್ಸ್‌ ಆರಂಭಿಸಿದ ಆಸ್ಟ್ರೇಲಿಯಾ ತಂಡ ಖಾತೆ ತೆರೆಯುವ ಮುನ್ನವೇ ಜೇಕ್ ಫ್ರೇಸರ್-ಮ್ಯಾಕ್‌ಗುರ್ಕ್(0) ವಿಕೆಟ್‌ ಕಳೆದುಕೊಂಡಿತು. ಆದರೆ ಟ್ರಾವಿಸ್‌ ಹೆಡ್‌ ವಿಚಲಿತರಾಗದೆ ಆಕ್ರಮಣಕಾರಿ ಬ್ಯಾಟಿಂಗ್‌ ಮೂಲಕ ಸ್ಕಾಟ್ಲೆಂಡ್‌ ಬೌಲರ್‌ಳನ್ನು ದಂಡಿಸಿದರು. ಆರಂಭದಿಂದಲೇ ಬಿರುಸಿನ ಬ್ಯಾಟಿಂಗ್‌ ನಡೆಸಿದ ಅವರು ಕೇವಲ 17 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು. ಇದೇ ವೇಳೆ ಟಿ20 ಕ್ರಿಕೆಟ್‌ನಲ್ಲಿಆಸ್ಟ್ರೇಲಿಯಾ ಪರ ಅತಿ ಕಡಿಮೆ ಎಸೆತಗಳಿಂದ ಅರ್ಧಶತಕ ಬಾರಿಸಿದ ಸ್ಟೋಯಿನಿಸ್‌ ದಾಖಲೆಯನ್ನು ಸರಿಗಟ್ಟಿದರು. ಸ್ಟೋಯಿನಿಸ್‌ 2022ರಲ್ಲಿ ಶ್ರೀಲಂಕಾ ವಿರುದ್ಧ 17 ಎಸೆತದಲ್ಲಿ ಅರ್ಧಶತಕ ಬಾರಿಸಿದ್ದರು.

ಇದನ್ನೂ ಓದಿ US Open: ಸೆಮಿಫೈನಲ್‌ಗೆ ಸಿನ್ನರ್‌; ಸ್ವಿಯಾಟೆಕ್‌ಗೆ ಸೋಲಿನ ಆಘಾತ

ಪಂದ್ಯದಲ್ಲಿ ಸಿಕ್ಸರ್‌ ಮತ್ತು ಬೌಂಡರಿಗಳ ಸುರಿಮಳೆಯನ್ನೇ ಸುರಿಸಿದ ಹೆಡ್‌ ಕೇವಲ 25 ಎಸೆತಗಳಲ್ಲಿ 80 ರನ್ ಗಳಿಸಿದರು. ಅವರ ಈ ಅಬ್ಬರದ ಬ್ಯಾಟಿಂಗ್‌ ಇನಿಂಗ್ಸ್‌ ವೇಳೆ 5 ಮನಮೋಹಕ ಸಿಕ್ಸರ್‌ ಮತ್ತು 12 ಬೌಂಡರಿ ಸಿಡಿಯಿತು. ಪವರ್‌ ಪ್ಲೇನಲ್ಲಿಯೇ ಹೆಡ್‌ 22 ಎಸೆತಗಳಿಂದ 73 ರನ್ ಕಲೆ ಹಾಕುವ ಮೂಲಕ ಪವರ್‌ಪ್ಲೇಯಲ್ಲಿ ಅತಿ ಹೆಚ್ಚು ರನ್ ಗಳಿಸಿದ ವಿಶ್ವದ ಮೊದಲ ಬ್ಯಾಟ್ಸ್‌ಮನ್ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಇದಕ್ಕೂ ಮುನ್ನ ಈ ದಾಖಲೆ ಪಾಲ್ ಸ್ಟಿರ್ಲಿಂಗ್ ಹೆಸರಿನಲ್ಲಿತ್ತು. ಪಾಲ್ ಸ್ಟಿರ್ಲಿಂಗ್ 2020 ರಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಪವರ್‌ಪ್ಲೇಯಲ್ಲಿ 63 ರನ್ ಬಾರಿಸಿದ್ದರು.

Leave a Reply

Your email address will not be published. Required fields are marked *