Thursday, 12th December 2024

ಟೀಂ ಇಂಡಿಯಾ ಸಾಧಾರಣ ಮೊತ್ತ

ಅಡಿಲೇಡ್: ನಾಯಕ ವಿರಾಟ್ ಕೊಹ್ಲಿ (74) ಜವಾಬ್ದಾರಿಯುತ ಇನಿಂಗ್ಸ್ ನಡುವೆಯೂ ಭಾರತ ತಂಡ ಅಹರ್ನಿಶಿ ಟೆಸ್ಟ್ ಪಂದ್ಯ ದಲ್ಲಿ ಆಸ್ಟ್ರೇಲಿಯಾ ವಿರುದ್ಧ ಸಾಧಾರಣ ಮೊತ್ತದತ್ತ ಮುಖ ಮಾಡಿದೆ.

ಅಡಿಲೇಡ್ ಓವೆಲ್ ಮೈದಾನದಲ್ಲಿ ಗುರುವಾರ ಆರಂಭಗೊಂಡ ಪಂದ್ಯದಲ್ಲಿ ಟಾಸ್ ಜಯಿಸಿ ಬ್ಯಾಟಿಂಗ್ ಆರಂಭಿಸಿದ ಭಾರತ ತಂಡ ಮೊದಲ ದಿನದಾಟ ಅಂತ್ಯಕ್ಕೆ 6 ವಿಕೆಟ್‌ಗೆ 233 ರನ್ ಪೇರಿಸಿತು. ಆರಂಭಿಕ ವೈಫಲ್ಯದ ನಡುವೆಯೂ ಕೊಹ್ಲಿ ಹಾಗೂ ಅನುಭವಿ ಚೇತೇಶ್ವರ್ ಪೂಜಾರ (43ರನ್) 3ನೇ ವಿಕೆಟ್‌ಗೆ 68 ರನ್ ಜತೆಯಾಟವಾಡಿ ತಂಡದ ಸುಸ್ಥಿತಿಗೆ ಯತ್ನಿಸಿತು. ಚಹಾ ವಿರಾಮದ ಬಳಿಕ ಮಧ್ಯಮ ಕ್ರಮಾಂಕದಲ್ಲಿ ದಿಢೀರ್ ಕುಸಿದ ಅನುಭವಿಸಿತು.

ಪೃಥ್ವಿ ಷಾ (0) ಇನಿಂಗ್ಸ್‌ನ 2ನೇ ಎಸೆತದಲ್ಲಿಯೇ ಬೌಲ್ಡ್ ಆದರು. ಕರ್ನಾಟಕದ ಮಯಾಂಕ್ ಅಗರ್ವಾಲ್ (17ರನ್)ದೊಡ್ಡ ಮೊತ್ತ ಪೇರಿಸಲು ವಿಫಲರಾದರು. ಬಳಿಕ ನಾಯಕ ವಿರಾಟ್ ಕೊಹ್ಲಿ ಹಾಗೂ ಪೂಜಾರ ಜೋಡಿ ಭೋಜನ ವಿರಾಮದವರೆಗೂ ವಿಕೆಟ್ ಕಾಯ್ದುಕೊಂಡಿತು.

ನಾಥನ್ ಲ್ಯಾನ್ ಎಸೆತವನ್ನು ರಕ್ಷಣಾತ್ಮಕವಾಗಿ ಆಡಲು ಯತ್ನಿಸಿ ಪೂಜಾರ, ಲಬುಶೇನ್ ಹಿಡಿದ ಅದ್ಭುತ ಕ್ಯಾಚ್‌ಗೆ ಬಲಿ ಯಾದರು. ಕೊಹ್ಲಿ-ಅಜಿಂಕ್ಯ ರಹಾನೆ (42ರನ್, 92 ಎಸೆತ)ಜೋಡಿ 4ನೇ ವಿಕೆಟ್‌ಗೆ 88 ರನ್ ಕಲೆಹಾಕಿತು. ರಹಾನೆ ಇಲ್ಲದ ರನ್‌ಗೆ ಆಹ್ವಾನ ನೀಡಿದರಿಂದ ಕೊಹ್ಲಿ ರನೌಟ್ ಬಲೆಗೆ ಬಿದ್ದರು.

ಕೆಲಹೊತ್ತಿನಲ್ಲೇ ಅಜಿಂಕ್ಯ ರಹಾನೆ ನಿರ್ಗಮಿಸಿದರೆ, ಹನುಮ ವಿಹಾರಿ (16) ಹೆಚ್ಚು ಹೊತ್ತು ನಿಲ್ಲಲು ವಿಫಲರಾದರು. ವೃದ್ಧಿಮಾನ್ ಸಾಹ (9*) ಹಾಗೂ ಆರ್.ಅಶ್ವಿನ್ (15*) ಎರಡನೇ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ.