RCB vs KKR: ಆರ್‌ಸಿಬಿ ಡ್ರೆಸ್ಸಿಂಗ್ ರೂಮ್‌ಗೆ ಕ್ರಿಸ್ ಗೇಲ್ ಅಚ್ಚರಿಯ ಭೇಟಿ
ಫಿಲ್ ಸಾಲ್ಟ್ ಸೇರಿದಂತೆ ಆರ್‌ಸಿಬಿ ತಾರೆಯರು ಗೇಲ್ ಅವರನ್ನು ಆತ್ಮೀಯವಾಗಿ ಸ್ವಾಗತಿಸಿದರು. ಅವರ ಉಪಸ್ಥಿತಿಯಿಂದ ಆಟಗಾರರು ಸಂತೋಷಪಟ್ಟರು. ಕೆಲ ಕಾಲ ವಿರಾಟ್ ಕೊಹ್ಲಿ ಜತೆ ಬಹಳ ಆತ್ಮೀಯವಾಗಿ ಮಾತನಾಡಿದ ಗೇಲ್ ಆ ಬಳಿಕ ನಾಯಕ ರಜತ್ ಪಾಟೀದಾರ್‌ಗೆ ಹಲವು ಸಲಹೆ ನೀಡಿದರು.


ಬೆಂಗಳೂರು: ಶನಿವಾರ ಇಲ್ಲಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಬೇಕಿದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು(RCB vs KKR) ಹಾಗೂ ಕೋಲ್ಕತಾ ನೈಟ್‌ರೈಡರ್ಸ್ ನಡುವಿನ ಪಂದ್ಯ ಟಾಸ್ ಕೂಡ ಕಾಣದೆ ರದ್ದಾಗಿತ್ತು. ಹೀಗಾಗಿ ಉಭಯ ತಂಡಗಳಿಗೆ ತಲಾ 1 ಅಂಕ ಹಂಚಲಾಯಿತು. ಭಾರೀ ಮಳೆ ಮುನ್ಸೂಚನೆ ಇದ್ದರೂ, ಕ್ರೀಡಾಂಗಣಕ್ಕೆ ದೊಡ್ಡ ಸಂಖ್ಯೆಯಲ್ಲಿ ಅಭಿಮಾನಿಗಳು ಆಗಮಿಸಿದ್ದರು. ಪಂದ್ಯ ರದ್ದಾದ ಕಾರಣ ಅಭಿಮಾನಿಗಳು ನಿರಾಸೆಗೊಂಡರು.
ಪಂದ್ಯ ರದ್ದಾದರೂ ಆರ್‌ಸಿಬಿ ಆಟಗಾರರಿಗೆ ಅಚ್ಚರಿಯೊಂದು ಕಾದಿತ್ತು. ತಂಡದ ಮಾಜಿ ಆಟಗಾರ, ವಿಂಡೀಸ್‌ನ ಕ್ರಿಸ್ ಗೇಲ್(Chris Gayle) ಅವರು ಅನಿರೀಕ್ಷಿತವಾಗಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಡ್ರೆಸ್ಸಿಂಗ್ ಕೋಣೆಗೆ ಭೇಟಿ ನೀಡಿ ಆಟಗಾರರಿಗೆ ಅಚ್ಚರಿ ಮೂಡಿಸಿದರು.
ಫಿಲ್ ಸಾಲ್ಟ್ ಸೇರಿದಂತೆ ಆರ್‌ಸಿಬಿ ತಾರೆಯರು ಗೇಲ್ ಅವರನ್ನು ಆತ್ಮೀಯವಾಗಿ ಸ್ವಾಗತಿಸಿದರು. ಅವರ ಉಪಸ್ಥಿತಿಯಿಂದ ಆಟಗಾರರು ಸಂತೋಷಪಟ್ಟರು. ಕೆಲ ಕಾಲ ವಿರಾಟ್ ಕೊಹ್ಲಿ ಜತೆ ಬಹಳ ಆತ್ಮೀಯವಾಗಿ ಮಾತನಾಡಿದ ಗೇಲ್ ಆ ಬಳಿಕ ನಾಯಕ ರಜತ್ ಪಾಟೀದಾರ್‌ಗೆ ಹಲವು ಸಲಹೆ ನೀಡಿದರು.
ಗೇಲ್ 2011 ರಲ್ಲಿ ಆರ್‌ಸಿಬಿ ಸೇರಿದ್ದರು. ಏಳು ಸೀಸನ್‌ಗಳ ಕಾಲ ಆರ್‌ಸಿಬಿ ಪರ ಆಡಿದ್ದ ಅವರು 2018 ರಲ್ಲಿ ಪಂಜಾಬ್ ಕಿಂಗ್ಸ್ (ಪಿಬಿಕೆಎಸ್) ಸೇರಿದ್ದರು. 2021 ರ ಆವೃತ್ತಿಯ ಐಪಿಎಲ್ ಬಳಿಕ ನಿವೃತ್ತಿಯಾಗಿದ್ದರು.
ಇದನ್ನೂ ಓದಿ IPL 2025: ವಿರಾಟ್ ಕೊಹ್ಲಿ ದಾಖಲೆ ಮುರಿಯಲು ಸಜ್ಜಾದ ಕೆ.ಎಲ್ ರಾಹುಲ್
142 ಐಪಿಎಲ್ ಪಂದ್ಯಗಳಲ್ಲಿ, ಗೇಲ್ 39.72 ಸರಾಸರಿಯಲ್ಲಿ 4965 ರನ್ ಗಳಿಸಿದ್ದಾರೆ. ಮತ್ತು 148.96 ಸ್ಟ್ರೈಕ್-ರೇಟ್ ಹೊಂದಿದ್ದು, ಆರು ಶತಕಗಳು ಮತ್ತು 31 ಅರ್ಧಶತಕಗಳನ್ನು ಹೊಂದಿದ್ದಾರೆ. 2022 ರಲ್ಲಿ, ಗೇಲ್ ಅವರನ್ನು ಎಬಿ ಡಿವಿಲಿಯರ್ಸ್ ಜತೆಗೆ ಆರ್‌ಸಿಬಿ ಹಾಲ್ ಆಫ್ ಫೇಮ್‌ಗೆ ಸೇರಿಸಲಾಗಿತ್ತು.