ಲಂಡನ್: ವಿಸ್ಡನ್ ಅಲ್‌ಮನ್ಯಾಕ್ ದಶಕದ ಏಕದಿನ ಮಾದರಿಯ ಕ್ರಿಕೆಟಿಗ ಗೌರವಕ್ಕೆ ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಪಾತ್ರರಾಗಿದ್ದಾರೆ.
2008ರಲ್ಲಿ ಕೊಹ್ಲಿ ಅಂತರರಾಷ್ಟ್ರೀಯ ಏಕದಿನ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದರು. 32 ವರ್ಷದ ಕೊಹ್ಲಿ ಅವರು 254 ಏಕದಿನ ಪಂದ್ಯಗಳನ್ನು ಆಡಿದ್ದಾರೆ. ಅದರಲ್ಲಿ 12,169 ರನ್‌ಗಳನ್ನು ಗಳಿಸಿದ್ದಾರೆ.
ಮೊಟ್ಟಮೊದಲ ಅಂತರರಾಷ್ಟ್ರೀಯ ಏಕದಿನ ಕ್ರಿಕೆಟ್ ಪಂದ್ಯದ ಸುವರ್ಣಮಹೋತ್ಸವದ ಅಂಗವಾಗಿ ಐವರು ಶ್ರೇಷ್ಠ ಕ್ರಿಕೆಟಿಗರ ಕುರಿತು 2021ರ ಕೃತಿಯಲ್ಲಿ ಪ್ರಕಟಿಸಲಾಗಿದೆ. 1971 ರಿಂದ 2021ರವರೆಗೆ ಪ್ರತಿಯೊಂದು ದಶಕದಲ್ಲಿ ಒಬ್ಬ ಕ್ರಿಕೆಟಿಗನನ್ನು ಆಯ್ಕೆ ಮಾಡಲಾಗಿದೆ. 2010ರಿಂದೀಚೆಗೆ ವಿರಾಟ್ ಕೊಹ್ಲಿ ಸನ್ಮಾನಿತರಾಗಿದ್ದಾರೆ’ ಎಂದು ವಿಸ್ಡನ್ ಹೇಳಿದೆ.
2011ರ ಏಕದಿನ ವಿಶ್ವಕಪ್ ವಿಜೇತ ಭಾರತ ತಂಡವನ್ನು ಕೊಹ್ಲಿ ಪ್ರತಿನಿಧಿಸಿದ್ದರು. ಅವರ ಖಾತೆಯಲ್ಲಿ 42 ಶತಕಗಳು ಇವೆ. 60 ಸರಾಸರಿಯಲ್ಲಿ ರನ್‌ಗಳನ್ನು ಕಲೆಹಾಕಿದ್ದಾರೆ.
1980ರಿಂದ ದಶಕದ ಕ್ರಿಕೆಟಿಗ ಗೌರವಕ್ಕೆ ಭಾರತ ತಂಡದ ಮಾಜಿ ನಾಯಕ ಕಪಿಲ್ ದೇವ್ ಅವರನ್ನು ಆಯ್ಕೆ ಮಾಡಲಾಗಿದೆ. 1983ರಲ್ಲಿ ವಿಶ್ವಕಪ್ ಗೆದ್ದ ಭಾರತ ತಂಡವನ್ನು ಕಪಿಲ್ ಮುನ್ನಡೆಸಿದ್ದರು. 1990ರ ದಶಕದ ಗೌರವವನ್ನು ದಿಗ್ಗಜ ಬ್ಯಾಟ್ಸ್‌ಮನ್ ಸಚಿನ್ ತೆಂಡೂಲ್ಕರ್ ಗಳಿಸಿದ್ದಾರೆ. ಇಂಗ್ಲೆಂಡ್ ತಂಡದ ಬೆನ್ ಸ್ಟೋಕ್ಸ್ ಅವರು ಸತತ ಎರಡನೇ ವರ್ಷವೂ ಶ್ರೇಷ್ಠ ಕ್ರಿಕೆಟಿಗ ಪ್ರಶಸ್ತಿ ಪಡೆದಿದ್ದಾರೆ.
ಆಸ್ಟ್ರೇಲಿಯಾ ಮಹಿಳಾ ತಂಡದ ಬೆತ್ ಮೂನಿ, ವಿಶ್ವದ ಶ್ರೇಷ್ಠ ಕ್ರಿಕೆಟ್ ಆಟಗಾರ್ತಿಯಾಗಿದ್ದಾರೆ. ವಿಂಡೀಸ್ ಆಲ್‌ರೌಂಡರ್ ಕೀರನ್ ಪೊಲಾರ್ಡ್ ವರ್ಷದ ಟಿ20 ಮಾದರಿ ಕ್ರಿಕೆಟಿಗ ಪುರಸ್ಕಾರಕ್ಕೆ ಪಾತ್ರರಾಗಿದ್ದಾರೆ.