ಮುಂಬೈ: ಟಿ20 ಮಾದರಿಯ ವಿಶ್ವಕಪ್ ಕೂಟ ಇದೀಗ ಯುನೈಟೆಟ್ ಅರಬ್ ಎಮಿರೇಟ್ಸ್ ಗೆ ಸ್ಥಳಾಂತರವಾಗಿದೆ. ಭಾರತದಲ್ಲಿ ನಡೆಯಬೇಕಿದ್ದ ಕೂಟ ಯುಎಇ ನಲ್ಲಿ ನಡೆದರೂ ಕೂಟದ ಎಲ್ಲಾ ಹಕ್ಕುಗಳು ಬಿಸಿಸಿಐ ಬಳಿಯೇ ಇರಲಿದೆ.
ಟಿ20 ವಿಶ್ವಕಪ್ ಕೂಟವು ಅಕ್ಟೋಬರ್ 17ರಂದು ಆರಂಭವಾಗಲಿದ್ದು, ನವೆಂಬರ್ 14ರಂದು ಫೈನಲ್ ಪಂದ್ಯ ನಡೆಯಲಿದೆ ಎಂದು ವರದಿಯಾಗಿದೆ.
ಭಾರತದಲ್ಲಿ ಕೋವಿಡ್ 19 ಸೋಂಕಿನ ಪ್ರಕರಣ ಕಡಿಮೆಯಾಗದ ಕಾರಣ ಬಿಸಿಸಿಐ ಹೊರಗಡೆ ಕೂಟವನ್ನು ನಡೆಸಲು ತೀರ್ಮಾನಿಸಿದೆ. ಈ ಬಗ್ಗೆ ಐಸಿಸಿ ಬಳಿ ಒಂದು ತಿಂಗಳ ಸಮಯಾವಕಾಶ ಪಡೆದಿದ್ದು, ಯುಎಇ ನಲ್ಲಿ ಕೂಟ ನಡೆಸಲು ತೀರ್ಮಾನಿಸಿದೆ.
ವಿಶ್ವಕಪ್ ಕೂಟ ಆಯೋಜನೆಯ ಹಕ್ಕು ಬಿಸಿಸಿಐ ಬಳಿ ಇರುವ ಕಾರಣ ಕೂಟ ಬಿಸಿಸಿಐ ಆಯೋಜನೆ ಯಲ್ಲಿಯೇ ನಡೆಯಲಿದೆ. ಪಂದ್ಯಾವಳಿ ಎಲ್ಲಿ ನಡೆದರೂ ಕೂಟದ ಆಯೋಜಕರೂ ಬಿಸಿಸಿಐ ಆಗಿರಲಿದೆ ಎಂದು ಐಸಿಸಿ ತನ್ನ ಪ್ರಕಟಣೆಯಲ್ಲಿ ತಿಳಿಸಿತ್ತು.
ಕೋವಿಡ್ ಕಾರಣದಿಂದ ಅರ್ಧದಲ್ಲಿ ಸ್ಥಗಿತವಾಗಿರುವ ಐಪಿಎಲ್ ಕೂಟ ಯುಎಇ ನಲ್ಲಿ ನಡೆಯಲಿದೆ. ಸಪ್ಟೆಂಬರ್ 19ರಿಂದ ಅಕ್ಟೋಬರ್ 15ರವರೆಗೆ ಐಪಿಎಲ್ ನಡೆಯಲಿದೆ.