Thursday, 28th November 2024

Bank Jobs alert: ಕರ್ಣಾಟಕ ಬ್ಯಾಂಕ್‌ ಕ್ಲರ್ಕ್‌ ಹುದ್ದೆಗಳಿಗೆ ಅರ್ಜಿ ಆಹ್ವಾನ, ನ.30 ಕೊನೆಯ ದಿನ

karnataka bank

ಬೆಂಗಳೂರು: ಕರ್ಣಾಟಕ ಬ್ಯಾಂಕ್‌ನಲ್ಲಿ ಗ್ರಾಹಕ ಸೇವಾ ಸಹಾಯಕ ಹುದ್ದೆ / ಕ್ಲರ್ಕ್ ಹುದ್ದೆಗಳ ನೇಮಕಾತಿ (Karnataka Bank jobs alert) ಪ್ರಕ್ರಿಯೆ ಆರಂಭವಾಗಿದೆ. ಕೆಲವು ದಿನಗಳ ಹಿಂದೆ ಅರ್ಜಿ (Applications) ಆಹ್ವಾನಿಸಲಾಗಿತ್ತು. ಅರ್ಜಿ ಸಲ್ಲಿಸಲು ಇದೇ ನವೆಂಬರ್‌ 30 ಕೊನೆಯ ದಿನವಾಗಿದೆ. ಅರ್ಜಿ ಸಲ್ಲಿಸುವವರು ಗಮನದಲ್ಲಿಟ್ಟುಕೊಳ್ಳಬೇಕಾದ ಮಾಹಿತಿ ಇಲ್ಲಿದೆ.

24,050 – 64,480 ರೂ ವೇತನ ಶ್ರೇಣಿಯ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಇನ್ನೂ ಕೆಲವೇ ಕೆಲವು ದಿನ ಬಾಕಿ ಇರುವುದರಿಂದ ಅರ್ಜಿ ಸಲ್ಲಿಸಲು ಬಯಸುವವರು ತಕ್ಷಣ ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸುವುದು ಹೇಗೆ? ಯಾವೆಲ್ಲ ಹುದ್ದೆಗಳಿವೆ, ವೇತನ ಎಷ್ಟು, ವಯೋಮಿತಿ ಏನು, ವಿದ್ಯಾರ್ಹತೆ ಏನಿರಬೇಕು? ಆಯ್ಕೆ ಪ್ರಕ್ರಿಯೆ ಹೇಗಿರುತ್ತದೆ ಸೇರಿದಂತೆ ಕರ್ನಾಟಕ ಬ್ಯಾಂಕ್‌ ನೇಮಕಾತಿಯ ಸಾಕಷ್ಟು ವಿವರವನ್ನು ಇಲ್ಲಿ ನೀಡಲಾಗಿದೆ.

ಯಾವ ಬ್ಯಾಂಕ್‌ನಲ್ಲಿ ಉದ್ಯೋಗ?: ಕರ್ಣಾಟಕ ಬ್ಯಾಂಕ್ ಲಿಮಿಟೆಡ್

ಹುದ್ದೆಯ ಹೆಸರು: ಗ್ರಾಹಕ ಸೇವಾ ಸಹಾಯಕ ಹುದ್ದೆ / ಕ್ಲರ್ಕ್

ಉದ್ಯೋಗ ಸ್ಥಳ: ಭಾರತದ ವಿವಿಧೆಡೆ ಇರುವ ಕರ್ನಾಟಕ ಬ್ಯಾಂಕ್‌ನ ಕಚೇರಿಗಳು ಮತ್ತು ಶಾಖೆಗಳು

ಎಷ್ಟು ವೇತನ ದೊರಕುತ್ತದೆ?: 24,050 – 64,480 ರೂಪಾಯ

ವಿದ್ಯಾರ್ಹತೆ ಏನಿರಬೇಕು?

ಯಾವುದೇ ವಿಷಯದಲ್ಲಿ ಪದವಿ ಶಿಕ್ಷಣವನ್ನು ಅಂಗೀಕೃತ ವಿಶ್ವವಿದ್ಯಾಲಯ / ಸಂಸ್ಥೆಗಳು / ಬೋರ್ಡ್‌ನಿಂದ ಪಡೆದವರು ಅರ್ಜಿ ಸಲ್ಲಿಸಬಹುದು. 01-11-2024 ದಿನಾಂಕದ ಮೊದಲು ಪದವಿ ಪಡೆದಿರಬೇಕು. ಪದವಿ ಓದುತ್ತ ಇರುವವರು, ಫಲಿತಾಂಶಕ್ಕೆ ಕಾಯುತ್ತಿರುವವರು ಅರ್ಜಿ ಸಲ್ಲಿಸುವಂತೆ ಇಲ್ಲ.

ವಯೋಮಿತಿ ಎಷ್ಟು?

ಅರ್ಜಿ ಸಲ್ಲಿಸುವ ಅಭ್ಯರ್ಥಿಗಳ ಗರಿಷ್ಠ ವಯೋಮಿತಿ 26 ವರ್ಷಗಳು. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಅಭ್ಯರ್ಥಿಗಳಿಗೆ 5 ವರ್ಷ ವಯೋಮಿತಿ ಸಡಿಲಿಕೆಯನ್ನು ನೀಡಲಾಗಿದೆ.

ಆಯ್ಕೆ ಪ್ರಕ್ರಿಯೆ

ಆನ್‌ಲೈನ್ ಪರೀಕ್ಷೆ ಮೂಲಕ ಆಯ್ಕೆ ಪ್ರಕ್ರಿಯೆ ನಡೆಸಲಾಗುತ್ತದೆ. ಇದಾದ ಬಳಿಕ ಸಂದರ್ಶನ ಇರುತ್ತದೆ.

ಆನ್‌ಲೈನ್‌ ಪರೀಕ್ಷೆಯಲ್ಲಿ ರೀಸನಿಂಗ್‌, ಇಂಗ್ಲಿಷ್‌ ಭಾಷೆ, ಕಂಪ್ಯೂಟರ್‌ ಜ್ಞಾನ, ಸಾಮಾನ್ಯ ಜ್ಞಾನ (ಬ್ಯಾಂಕಿಂಗ್‌ ಉದ್ಯಮ), ನ್ಯೂಮರಿಕಲ್‌ ಎಬಿಲಿಟಿ ವಿಷಯದ ಪ್ರಶ್ನೆಗಳು ಇರುತ್ತವೆ. ಈ ಎಲ್ಲಾ ವಿಷಯಗಳಿಗೆ ತಲಾ 40 ಅಂಕಗಳಂತೆ ಒಟ್ಟು 200 ಅಂಕಗಳಿಗೆ ಪರೀಕ್ಷೆ ನಡೆಸಲಾಗುತ್ತದೆ. ಪರೀಕ್ಷೆ ಬರೆಯಲು ಒಟ್ಟು 135 ನಿಮಿಷ ಅವಧಿ ಇರುತ್ತದೆ. ಪ್ರಶ್ನೆಪತ್ರಿಕೆಗಳು ಇಂಗ್ಲಿಷ್‌ ಬಾಷೆಯಲ್ಲಿ ಮಾತ್ರ ಇರುತ್ತವೆ. ಪ್ರತಿಯೊಂದು ಪ್ರಶ್ನೆಗಳಿಗೂ ಐದು ಪರ್ಯಾಯ ಆಯ್ಕೆಗಳು ಇರುತ್ತದೆ. ಪ್ರತಿ ತಪ್ಪು ಉತ್ತರಕ್ಕೆ 1/4 ಅಂಕ ಕಡಿತ ಮಾಡಲಾಗುತ್ತದೆ.

ಆನ್‌ಲೈನ್‌ ಪರೀಕ್ಷೆ ಎಲ್ಲಿ ನಡೆಯುತ್ತದೆ?

ಬೆಂಗಳೂರು, ಚೆನ್ನೈ, ಮುಂಬೈ, ನವದೆಹಲಿ, ಹೈದರಾಬಾದ್, ಕೋಲ್ಕತ್ತಾ, ಪುಣೆ, ಮಂಗಳೂರು, ಧಾರವಾಡ ಹುಬ್ಬಳ್ಳಿ, ಮೈಸೂರು, ಶಿವಮೊಗ್ಗ ಮತ್ತು ಕಲಬುರಗಿಯಲ್ಲಿ ಕರ್ಣಾಟಕ ಬ್ಯಾಂಕ್‌ ನೇಮಕಾತಿ ಪರೀಕ್ಷೆ ನಡೆಯುತ್ತದೆ.

ಅರ್ಜಿ ಶುಲ್ಕ ಎಷ್ಟು?

ಸಾಮಾನ್ಯ/ಒಬಿಸಿ ಅಭ್ಯರ್ಥಿಗಳಿಗೆ ರೂ 700 ಅರ್ಜಿ ಶುಲ್ಕ ಹಾಗೂ ಎಸ್ ಸಿ / ಎಸ್ ಟಿ ಅಭ್ಯರ್ಥಿಗಳಿಗೆ ರೂ 600 ಅರ್ಜಿ ಶುಲ್ಕವಿರುತ್ತದೆ. ಅರ್ಜಿ ಪ್ರಕ್ರಿಯೆಯಲ್ಲಿ ಶುಲ್ಕವನ್ನು ಆನ್‌ಲೈನ್‌ನಲ್ಲಿಯೇ ಪಾವತಿಸಬೇಕು.

ಅರ್ಜ ಸಲ್ಲಿಸಲು ಮತ್ತು ಶುಲ್ಕ ಪಾವತಿಗೆ ಕೊನೆಯ ದಿನ: ನವೆಂಬರ್‌ 30, 2024. ಪರೀಕ್ಷೆ ನಡೆಯುವ ಸಂಭಾವ್ಯ ದಿನಾಂಕ: ನವೆಂಬರ್ 30, 2024

ಅರ್ಜಿ ಸಲ್ಲಿಸಲು ಮತ್ತು ಹೆಚ್ಚಿನ ಮಾಹಿತಿ ಪಡೆಯಲು ಭೇಟಿ ನೀಡಬೇಕಾದ ವಿಳಾಸ: karnatakabank.com/careers