ಜಿಲ್ಲಾ ಖನಿಜ ನಿಧಿಯಲ್ಲಿ ಬಹುಪಾಲು ಅನುದಾನ ಬಳ್ಳಾರಿ ಜಿಲ್ಲೆಗೆ
ವಿಜಯನಗರ ಜಿಲ್ಲೆ ಅಭಿವೃದ್ಧಿಗೆ ಕೆಇಎಂಆರ್‌ಸಿ ಅನುದಾನ ಬಳಕೆಗೆ ಚಿಂತನೆ
ವಿಶೇಷ ವರದಿ: ಅನಂತ ಪದ್ಮನಾಭ ರಾವ್ ಹೊಸಪೇಟೆ
ಬಳ್ಳಾರಿ ಜಿಲ್ಲೆಯ ಗಣಿಬಾಧಿತ ಪ್ರದೇಶಗಳಲ್ಲಿ ಪುನರುಜ್ಜೀವನ ಹಾಗೂ ಪುನರುತ್ಥಾನ (ಆರ್‌ಆಂಡ್‌ಆರ್) ಕಲ್ಪಿಸುವ ನಿಟ್ಟಿನಲ್ಲಿ ಸ್ಥಾಪಿತವಾದ ಜಿಲ್ಲಾ ಖನಿಜ ನಿಧಿಯಲ್ಲಿ ಬಳ್ಳಾರಿ ಜಿಲ್ಲೆಗೆ ಬಹುಪಾಲು ದೊರೆಯಲಿದ್ದು ನೂತನ ವಿಜಯನಗರ ಜಿಲ್ಲೆಗೆ ಕಡಿಮೆ ಅನುದಾನ ದೊರಕುವ ಸಾಧ್ಯತೆ ಇರುವುದು ಚರ್ಚೆಗೆ ಕಾರಣವಾಗಿದೆ.
ಏನಿದು ನಿಧಿ?: ಈ ಹಿಂದೆ ಗಣಿಗಾರಿಕೆ ಉತ್ತುಂಗದ ಸ್ಥಿತಿಯಲ್ಲಿದ್ದ ಸಂದರ್ಭದಲ್ಲಿ ಬಳ್ಳಾರಿ, ಹೊಸಪೇಟೆ, ಸಂಡೂರು ಭಾಗಗಳಲ್ಲಿ ಎಗ್ಗಿಲ್ಲದೆ ನಡೆದ ಅಕ್ರಮ ಗಣಿಗಾರಿಕೆ ಸೇರಿದಂತೆ ಸಾಗಾಟದಿಂದ ಈ ಭಾಗದ ಪರಿಸರ, ಮೂಲಸೌಲಭ್ಯ ಹಾಳಾಗಿ ಜನಜೀವನ
ದುಸ್ಥಿತಿಗೆ ತಲುಪಿತ್ತು. ಜನರ ಜೀವನ ಯಥಾಸ್ಥಿತಿಗೆ ತರುವ ಸಲುವಾಗಿ ಅಖಂಡ ಬಳ್ಳಾರಿ ಜಿಲ್ಲೆಯನ್ನು ಒಳಗೊಂಡಂತೆ ಬಳ್ಳಾರಿ, ಸಂಡೂರು ಹಾಗೂ ಹೊಸಪೇಟೆ ತಾಲೂಕಿನ ಗಣಿಬಾಧಿತ ಪ್ರದೇಶಗಳಲ್ಲಿ ಪುನರುಜ್ಜೀವನ ಮತ್ತು ಪುನರುತ್ಥಾನ(ಆರ್ ಆಂಡ್ ಆರ್)ಕಲ್ಪಿಸುವ ಸಲುವಾಗಿ ಜಿಲ್ಲಾ ಖನಿಜ ನಿಧಿಯನ್ನು ಪ್ರತಿಷ್ಠಾಪಿಸಲಾಗಿದೆ. ಗಣಿ ಮಾಲೀಕರಿಂದ ಸಂಗ್ರಹಿಸಲಾದ ಈ ಅನು ದಾನ ಸಾವಿರಾರು ಕೋಟಿ ರುಪಾಯಿ ದಾಟಿದೆ.
ಏನು, ಎತ್ತ?: ರಾಜ್ಯ ಸರಕಾರ ಅಖಂಡ ಬಳ್ಳಾರಿ ಜಿಲ್ಲೆಯನ್ನು ವಿಭಜಿಸಿ ವಿಜಯನಗರ ನೂತನ ಜಿಲ್ಲೆಯನ್ನಾಗಿ ಘೋಷಿಸಿದೆ.
ಬಳ್ಳಾರಿ ಜಿಲ್ಲೆಯ ವ್ಯಾಪ್ತಿಗೆ ಬಳ್ಳಾರಿ, ಸಂಡೂರು, ಸಿರುಗುಪ್ಪ, ಕಂಪ್ಲಿ ಕುರುಗೋಡು ಸೇರಿದಂತೆ ಒಟ್ಟು ಐದು ತಾಲೂಕು ಹಾಗೂ ವಿಜಯನಗರ ಜಿಲ್ಲೆ ವ್ಯಾಪ್ತಿಗೆ ಹೊಸಪೇಟೆ, ಹಗರಿಬೊಮ್ಮನಹಳ್ಳಿ, ಹೂವಿನಹಡಗಲಿ, ಕೊಟ್ಟೂರು, ಹರಪನಹಳ್ಳಿ, ಕೂಡ್ಲಿಗಿ ಒಳಗೊಂಡಂತೆ ಆರು ತಾಲೂಕುಗಳು ಬರಲಿವೆ.
ಮುಖ್ಯವಾಗಿ ಬಳ್ಳಾರಿ ಮತ್ತು ಸಂಡೂರು ತಾಲೂಕು ಬಳ್ಳಾರಿ ಜಿಲ್ಲೆ ವ್ಯಾಪ್ತಿಗೆ ಒಳಪಡಲಿವೆ. ಹೀಗಾಗಿ ಡಿಎಂಎಫ್ ಫಂಡ್ (ಜಿಲ್ಲಾ ಖನಿಜ ನಿಧಿ)ನ ಬಹುಪಾಲು ಬಳಕೆಗೆ ಬಳ್ಳಾರಿ ಜಿಲ್ಲೆಗೆ ಅವಕಾಶ ದೊರೆಯುವ ಸಾಧ್ಯತೆ ಹೆಚ್ಚಿದೆ. ನೂತನ ವಿಜಯನಗರ ಜಿಲ್ಲೆಯ ವ್ಯಾಪ್ತಿಗೆ ಕೇವಲ ಹೊಸಪೇಟೆ ಬರುವುದರಿಂದ ಕಡಿಮೆ ಪ್ರಮಾಣದ ಅನುದಾನ ಬಳಕೆಗೆ ಮಾತ್ರ ಅವಕಾಶ ದೊರೆಯಲಿದೆ ಎನ್ನುತ್ತಾರೆ ಹೆಸರು ಹೇಳಲು ಬಯಸದ ಜಿಲ್ಲಾಮಟ್ಟದ ಅಧಿಕಾರಿಗಳು.
ಹೆಚ್ಚು ನಿರೀಕ್ಷೆ
ಜಿಲ್ಲಾ ಖನಿಜ ನಿಧಿಯಿಂದ ಅಂದೊಕೊಂಡಂತೆ ಹೆಚ್ಚು ಅನುದಾನ ದೊರೆತಲ್ಲಿ ಬಳ್ಳಾರಿ ಜಿಲ್ಲೆ ವ್ಯಾಪ್ತಿಗೆ ಒಳಪಡುವ ಐದು ತಾಲೂಕುಗಳನ್ನು ಮಾದರಿ ತಾಲೂಕುಗಳನ್ನಾಗಿ ಮಾಡುವ ಅವಕಾಶ ಈ ತಾಲೂಕುಗಳ ಶಾಸಕರಿಗೆ ಒದಗಿ ಬರಲಿದೆ. ಬಳ್ಳಾರಿ ಜಿಲ್ಲೆಯ ಐದು ತಾಲೂಕುಗಳನ್ನು ಡಿಎಂಎಫ್ ಮತ್ತು ಕರ್ನಾಟಕ ಗಣಿ ಪರಿಸರ ಪುನಶ್ಚೇತನ ನಿಗಮದ (ಕೆಇಎಂಆರ್‌ಸಿ) ಅನು ದಾನವನ್ನು ಬಳಕೆ ಮಾಡಿಕೊಂಡು ಮಾದರಿ ತಾಲೂಕುಗಳನ್ನಾಗಿ ಅಭಿವೃದ್ಧಿಪಡಿಸುವ ಅವಕಾಶ ಒದಗಿ ಬಂದಿದ್ದು, ಶೇ. 80 ರಷ್ಟು ಅನುದಾನ ಬಳ್ಳಾರಿ ಜಿಲ್ಲೆಗೆ ಬರಲಿದೆ. ಶೇ. 20ರಷ್ಟು ಅನುದಾನ ಮಾತ್ರ ವಿಜಯನಗರ ಜಿಲ್ಲೆಗೆ ದೊರೆಯಲಿದೆ ಎಂಬುದು ಬಳ್ಳಾರಿ ಸ್ಥಳೀಯ ಜನಪ್ರತಿನಿಧಿಗಳ ಲೆಕ್ಕಾಚಾರ.
ಕೋಟ್
ವಿಜಯನಗರ ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಕರ್ನಾಟಕ ಗಣಿ ಪರಿಸರ ಪುನಶ್ಚೇತನ ನಿಗಮದ (ಕೆಇಎಂಆರ್‌ಸಿ) ಹಣ ವಿನಿಯೋಗಿ ಸುವ ಚಿಂತನೆ ಇದೆ. ವಿಜಯನಗರ ಸಂಸ್ಕೃತಿ, ಪರಂಪರೆ ಬಿಂಬಿಸುವ ರೀತಿಯಲ್ಲಿ ಜಿಲ್ಲಾಡಳಿತ ಭವನ ನಿರ್ಮಿಸ ಲಾಗುವುದು. ಅನುದಾನದ ಕೊರತೆ ಇಲ್ಲ. ಕೆಇಎಂಆರ್‌ಸಿ ಹಣ ಸಿಕ್ಕರೆ ಸಾಕು. ಒರಿಸ್ಸಾ ರಾಜ್ಯ ಸರಕಾರ ನ್ಯಾಯಲಯಕ್ಕೆ ವಿಶೇಷ ಕೋರಿಕೆ ಸಲ್ಲಿಸಿ, ಆ ಹಣ ಬಳಸಿಕೊಂಡಿದೆ. ರಾಜ್ಯ ಸರಕಾರವು ಈ ನಿಟ್ಟಿನಲ್ಲಿ ನ್ಯಾಯಲಯಕ್ಕೆ ಮನವಿ ಸಲ್ಲಿಸಿ, ಹಣ ಬಳಸಿಕೊಳ್ಳಲು ಮುಂದಾಗಿದೆ.
-ಆನಂದ್ ಸಿಂಗ್ ಸಚಿವ