Tuesday, 5th November 2024

BESCOM: ಬೆಸ್ಕಾಂಗೆ ‘ಚಾರ್ಜ್ ಇಂಡಿಯಾ 2024 ಎಕ್ಸಲೆನ್ಸ್’ ಪ್ರಶಸ್ತಿ; ಚಾರ್ಜಿಂಗ್‌ ಸ್ಟೇಷನ್‌ನಲ್ಲಿ ರಾಜ್ಯ ನಂ.1

BESCOM

ಬೆಂಗಳೂರು: ಇಲೆಕ್ಟ್ರಿಕ್‌ ವಾಹನಗಳ ಬಳಕೆಯನ್ನು ಉತ್ತೇಜಿಸುವ ನಿಟ್ಟಿನಲ್ಲಿ ಉತ್ತಮ ಚಾರ್ಜಿಂಗ್‌ ಮೂಲಸೌಕರ್ಯ ಕಲ್ಪಿಸಿರುವ ಬೆಸ್ಕಾಂಗೆ (BESCOM) ‘ಚಾರ್ಜ್ ಇಂಡಿಯಾ 2024 ಎಕ್ಸಲೆನ್ಸ್’ ಪ್ರಶಸ್ತಿ (Charge India 2024 Excellence Award) ಸಂದಿದೆ. ಇ-ಮೊಬಿಲಿಟಿ ಸಂಸ್ಥೆ ಇತ್ತೀಚೆಗೆ ಆಯೋಜಿಸಿದ್ದ ಸಮಾರಂಭದಲ್ಲಿ ಬೆಸ್ಕಾಂಗೆ ‘ಚಾರ್ಜ್ ಇಂಡಿಯಾ 2024 ಎಕ್ಸಲೆನ್ಸ್’ ಪ್ರಶಸ್ತಿ ಪ್ರದಾನ ಮಾಡಲಾಗಿದೆ. ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ, ಇವಿ ಚಾರ್ಜಿಂಗ್‌ ಸೇವೆ ಒದಗಿಸುವ ಖಾಸಗಿ ಸಂಸ್ಥೆಗಳ ಪ್ರತಿನಿಧಿಗಳು ಸೇರಿದಂತೆ ಇವಿ ಉದ್ಯಮದ ಪ್ರಮುಖರು ಸಮಾರಂಭದಲ್ಲಿ ಭಾಗಿಯಾಗಿದ್ದರು.

ದೇಶದಲ್ಲೇ ಅತಿ ಹೆಚ್ಚು ಸಾರ್ವಜನಿಕ ಎಲೆಕ್ಟ್ರಿಕ್ ವೆಹಿಕಲ್ ಚಾರ್ಜಿಂಗ್ ಸ್ಟೇಷನ್‌ಗಳನ್ನು ಹೊಂದಿರುವ ರಾಜ್ಯ ಎಂಬ ಹೆಗ್ಗಳಿಕೆಗೆ ನಮ್ಮದಾಗಿದ್ದು, ಒಟ್ಟು 5,765 ಇವಿ ಚಾರ್ಜಿಂಗ್‌ ಸ್ಟೇಷನ್‌ಗಳಿವೆ. 5,765 ಇವಿ ಚಾರ್ಜಿಂಗ್ ಸ್ಟೇಷನ್‌ಗಳಿರುವ ಕರ್ನಾಟಕ ಮೊದಲ ಸ್ಥಾನದಲ್ಲಿದ್ದರೆ, 3,728 ಚಾರ್ಜಿಂಗ್ ಸ್ಟೇಷನ್ ಹೊಂದಿರುವ ಮಹಾರಾಷ್ಟ್ರ 2ನೇ ಸ್ಥಾನದಲ್ಲಿದೆ. ಉತ್ತರ ಪ್ರದೇಶ- 1,989 ಮತ್ತು ದಿಲ್ಲಿ- 1,941 ಚಾರ್ಜಿಂಗ್ ಸ್ಟೇಷನ್‌ಗಳೊಂದಿಗೆ ನಂತರದ ಸ್ಥಾನದಲ್ಲಿವೆ.

ಈ ಸುದ್ದಿಯನ್ನೂ ಓದಿ | Shiggaon By Election: ಸೂರ್ಯ ಚಂದ್ರ ಇರುವುದು ಎಷ್ಟು ಸತ್ಯವೋ ಶಿಗ್ಗಾಂವಿಯಲ್ಲಿ ಕಾಂಗ್ರೆಸ್ ಗೆಲುವು ಅಷ್ಟೇ ಸತ್ಯ ಎಂದ ಸಿದ್ದರಾಮಯ್ಯ

ದೇಶದ ಪ್ರಮುಖ ನಗರಗಳಲ್ಲಿ ಇವಿ ಬಳಕೆದಾರರ ಸಂಖ್ಯೆ ಹೆಚ್ಚಿದ್ದರೂ, ರಾಜ್ಯ ಅದರಲ್ಲೂ ವಿಶೇಷವಾಗಿ ಬೆಂಗಳೂರಿನಲ್ಲಿ ಅತಿ ಹೆಚ್ಚು ಇವಿ ಬಳಕೆದಾರರಿದ್ದಾರೆ. ಅದಕ್ಕೆ ಪೂರಕವಾಗಿ ಸರ್ಕಾರ ಅಗತ್ಯ ಮೂಲ ಸೌಕರ್ಯ ಒದಗಿಸಿದೆ. ಇವಿ ಚಾರ್ಜಿಂಗ್ ಸ್ಟೇಷನ್ ವಿಚಾರದಲ್ಲಿ ಬೆಂಗಳೂರು ನಗರವು ಮುಂಚೂಣಿಯಲ್ಲಿದ್ದು, ನಗರ ಜಿಲ್ಲೆಯಲ್ಲಿ 4,462 ಇವಿ ಚಾರ್ಜಿಂಗ್ ಸ್ಟೇಷನ್‌ಗಳಿವೆ. ಇದು ರಾಜ್ಯದ ಒಟ್ಟಾರೆ ಇವಿ ಚಾರ್ಜಿಂಗ್‌ ಸ್ಟೇಷನ್‌ಗಳ ಪೈಕಿ ಶೇ. 85ರಷ್ಟು.

ಇವಿ ಚಾರ್ಜಿಂಗ್‌ ಸ್ಟೇಷನ್‌ಗಳ ಜತೆಗೆ ಇವಿ ಬಳಕೆದಾರರಿಗೆ ಸುಗಮ ಚಾರ್ಜಿಂಗ್‌ ಸೌಲಭ್ಯ ಒದಗಿಸುವಲ್ಲಿ ‘ಇವಿ ಮಿತ್ರ’ ಆ್ಯಪ್‌ ಪಾತ್ರವೂ ದೊಡ್ಡದು. ಆ್ಯಂಡ್ರಾಯ್ಡ್ ಮತ್ತು ಐಓಎಸ್‌ ಎರಡು ಮೊಬೈಲ್‌ ಅಪ್ಲಿಕೇಶನ್‌ಗಳಲ್ಲಿ ಲಭ್ಯವಿರುವ ಹೊಸ ‘ಇವಿ ಮಿತ್ರ’ ಆ್ಯಪ್‌- ಬಳಕೆದಾರರ ಪ್ರೊಫೈಲ್‌ ನಿರ್ವಹಣೆ, ಚಾರ್ಜಿಂಗ್‌ ಸ್ಟೇಷನ್‌ಗಳ ವೀಕ್ಷಣೆಯೊಂದಿಗೆ ಮಾಹಿತಿ, ಚಾರ್ಜಿಂಗ್‌ ಪ್ರಕ್ರಿಯೆ, ಬುಕ್ಕಿಂಗ್‌ ವಿವರ, ಚಾರ್ಜಿಂಗ್ ಸ್ಟೇಷನ್‌ಗಳಲ್ಲಿರುವ ಸೌಕರ್ಯಗಳು ಮತ್ತು ಚಾರ್ಜಿಂಗ್‌ ಕಾಯ್ದಿರಿಸುವ ಸೌಲಭ್ಯ ಹೊಂದಿದೆ. ಹಣ ಪಾವತಿಗೆ ಹಲವು ಆಯ್ಕೆಗಳನ್ನು ಒಳಗೊಂಡಿದೆ. ರಿಟೇಲ್‌ ಬಳಕೆದಾರರ ಶುಲ್ಕದ ವಿವರ, ಬಿಲ್ಲಿಂಗ್, ಪ್ರೊಫೈಲ್ ಲಭ್ಯವಿದೆ.

ಇವಿ ಸ್ಟೇಷನ್‌ಗಳ ವಿವರ

ರಾಜ್ಯದಲ್ಲಿರುವ ಒಟ್ಟು ಇವಿ ಚಾರ್ಜಿಂಗ್ ಸ್ಟೇಷನ್‌ಗಳು: 5765
ಬೆಸ್ಕಾಂ ಸ್ಥಾಪಿಸಿರುವ ಇವಿ ಚಾರ್ಜಿಂಗ್ ಸ್ಟೇಷನ್‌ಗಳು: 195
ಇತರ ಎಸ್ಕಾಂಗಳು ಸ್ಥಾಪಿಸಿರುವ ಇವಿ ಚಾರ್ಜಿಂಗ್ ಸ್ಟೇಷನ್‌ಗಳು: 70
ಸರ್ಕಾರದ ಇತರ ಇಲಾಖೆಗಳು ಸ್ಥಾಪಿಸಿರುವ ಚಾರ್ಜಿಂಗ್ ಸ್ಟೇಷನ್‌ಗಳು: 21
ಖಾಸಗಿ ಚಾರ್ಜಿಂಗ್ ಸ್ಟೇಷನ್‌ಗಳು: 5479

ರಾಜ್ಯದಲ್ಲಿ ಇವಿ ಚಾರ್ಜಿಂಗ್ ಮೂಲಸೌಕರ್ಯವನ್ನು ಕಲ್ಪಿಸುವ ನೋಡೆಲ್‌ ಏಜೆನ್ಸಿಯಾಗಿರುವ ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ ನಿಯಮಿತಕ್ಕೆ ಪ್ರಶಸ್ತಿ ಸಂದಿರುವುದು ಅತ್ಯಂತ ಹೆಮ್ಮೆ ಸಂಗತಿ. ಇದು ನಮ್ಮ ಜವಾಬ್ದಾರಿಯನ್ನು ಮತ್ತಷ್ಟು ಹೆಚ್ಚಿಸಿದೆ. ವಿದ್ಯುತ್ ಚಾಲಿತ ವಾಹನಗಳ ಬಳಕೆಗೆ ಕರ್ನಾಟಕ ದಿಕ್ಸೂಚಿಯಾಗಿದ್ದು, ಇಂಧನ ಸಚಿವ ಕೆ.ಜೆ. ಜಾರ್ಜ್ ಅವರ ಮಾರ್ಗದರ್ಶನದಲ್ಲಿ ಪರಿಸರ ಸ್ನೇಹಿ ಎಲೆಕ್ಟ್ರಿಕಲ್‌ ವಾಹನಗಳಿಗೆ ಚಾರ್ಜಿಂಗ್‌ ಸೌಲಭ್ಯ ಕಲ್ಪಿಸುವಲ್ಲಿ ಕರ್ನಾಟಕ ದೇಶದಲ್ಲೇ ಅಗ್ರ ಸ್ಥಾನದಲ್ಲಿದೆ ಎಂದು ಬೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ ಮಹಾಂತೇಶ ಬಿಳಗಿ ತಿಳಿಸಿದ್ದಾರೆ.

ಈ ಸುದ್ದಿಯನ್ನೂ ಓದಿ | Winter Fashion 2024: ಚಳಿಗಾಲದ ಫ್ಯಾಷನ್; ಏನಿದೆ ಹೊಸ ಟ್ರೆಂಡ್?

“ಸುಸ್ಥಿರ ಮತ್ತು ಶುದ್ಧ ಇಂಧನ ಬಳಕೆ ವಿಚಾರದಲ್ಲಿ ರಾಜ್ಯ ಸರ್ಕಾರದ ಬದ್ಧತೆಗೆ ಸಂದ ಪ್ರಶಸ್ತಿ ಇದು. ಖಾಸಗಿ ಪ್ರಾಬಲ್ಯಕ್ಕೆ ಅವಕಾಶ ಕೊಡದೇ, ಇವಿ ಬಳಕೆದಾರರಿಗೆ ಕಡಿಮೆ ವೆಚ್ಚದಲ್ಲಿ ಚಾರ್ಜಿಂಗ್‌ ಮೂಲ ಸೌಕರ್ಯ ಒದಗಿಸುವಲ್ಲಿ ನಮ್ಮ ರಾಜ್ಯ ಮೊದಲ ಸ್ಥಾನದಲ್ಲಿದೆ. ಇದು ನಿಜಕ್ಕೂ ಹೆಮ್ಮೆಯ ಸಂಗತಿ. ಎಲೆಕ್ಟ್ರಿಕ್ ವಾಹನ ಪರಿಸರ ವ್ಯವಸ್ಥೆಗೆ ಒತ್ತು ನೀಡುವ ನಿಟ್ಟಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರದ 2024 ರ ರಾಜ್ಯ ಬಜೆಟ್‌ನಲ್ಲಿ ಸಾರ್ವಜನಿಕ-ಖಾಸಗಿ ಸಹಭಾಗಿತ್ವದ ಮಾದರಿಯಲ್ಲಿ ರಾಜ್ಯಾದ್ಯಂತ ಸುಮಾರು 2,500 ಹೊಸ ಇವಿ ಚಾರ್ಜಿಂಗ್ ಕೇಂದ್ರಗಳನ್ನು ಸ್ಥಾಪಿಸುವ ಪ್ರಸ್ತಾವನೆ ಇದೆ.

-ಕೆ.ಜೆ. ಜಾರ್ಜ್‌, ಇಂಧನ ಸಚಿವರು