Tuesday, 3rd December 2024

Channapatna By Election: 16 ತಿಂಗಳಲ್ಲಿ ಚನ್ನಪಟ್ಟಣ ಅಭಿವೃದ್ಧಿಗೆ ಹಿಡಿಮಣ್ಣೂ ನೀಡದ ಕಾಂಗ್ರೆಸ್‌ ಸರ್ಕಾರ; ಆರ್‌. ಅಶೋಕ್‌ ಟೀಕೆ

Channapatna By Election

ಚನ್ನಪಟ್ಟಣ: ಹದಿನಾರು ತಿಂಗಳಲ್ಲಿ ಚನ್ನಪಟ್ಟಣದ ಅಭಿವೃದ್ಧಿಗೆ ಒಂದು ಹಿಡಿ ಮಣ್ಣು ನೀಡಲು ಕೂಡ ಕಾಂಗ್ರೆಸ್‌ ಸರ್ಕಾರಕ್ಕೆ (Congress Government) ಸಾಧ್ಯವಾಗಿಲ್ಲ. ಈ ಸರ್ಕಾರದಲ್ಲಿ ಲೂಟಿ ಬಿಟ್ಟರೆ ಬೇರೆ ಏನೂ ಇಲ್ಲ ಎಂದು ಪ್ರತಿಪಕ್ಷ ನಾಯಕ ಆರ್‌. ಅಶೋಕ್‌ (R Ashok) ಆರೋಪಿಸಿದರು. ಚನ್ನಪಟ್ಟಣದಲ್ಲಿ (Channapatna By Election) ಬಿಜೆಪಿ (BJP) ಚುನಾವಣಾ ಪ್ರಚಾರದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಸಿ.ಪಿ. ಯೋಗೇಶ್ವರ್‌ ಅವರಿಗೆ ಟಿಕೆಟ್‌ ನೀಡಲು ಕೇಂದ್ರ ಸಚಿವ ಎಚ್‌.ಡಿ. ಕುಮಾರಸ್ವಾಮಿ ಅವರೊಂದಿಗೆ ಚರ್ಚಿಸಲಾಗಿತ್ತು. ನಾನು ಯಾವುದೇ ಪಕ್ಷದಿಂದಲೂ ಸ್ಪರ್ಧಿಸುತ್ತೇನೆಂದು ಯೋಗೇಶ್ವರ್‌ ಹೇಳಿದ್ದರು. ಜೆಡಿಎಸ್‌ನಿಂದ ಸ್ಪರ್ಧಿಸಿ ಎಂದು ಹೇಳಿದಾಗ, ದಿಢೀರನೆ ಮನಸ್ಸು ಬದಲಿಸಿ ಬಿಜೆಪಿಯಿಂದಲೇ ಟಿಕೆಟ್‌ ಬೇಕು ಎಂದು ಪಟ್ಟು ಹಿಡಿದಿದ್ದರು. ಬಿಜೆಪಿಯಿಂದಲೇ ಸ್ಪರ್ಧಿಸುವ ಬಗ್ಗೆ ಚರ್ಚಿಸುವ ಮುನ್ನವೇ ಮ್ಯಾಚ್‌ ಫಿಕ್ಸಿಂಗ್‌ ಆಗಿತ್ತು. ಬಿಜೆಪಿಯಿಂದ ಸ್ಪರ್ಧಿಸಲು ತೀರ್ಮಾನಿಸಿದ್ದರೆ ವಿಧಾನಪರಿಷತ್‌ ಸ್ಥಾನಕ್ಕೆ ರಾಜೀನಾಮೆ ಯಾಕೆ ನೀಡಬೇಕಿತ್ತು? ಇವೆಲ್ಲ ಪೂರ್ವ ನಿಯೋಜಿತ. ಕುಮಾರಸ್ವಾಮಿ ಮೋಸ ಮಾಡಿದ್ದಾರೆಂದು ಯೋಗೇಶ್ವರ್‌ ಆಪಾದನೆ ಮಾಡುತ್ತಿದ್ದಾರೆ. ಇವರೆಲ್ಲರೂ ಮೊದಲೇ ಮಾತಾಡಿಕೊಂಡು ಈಗ ಆರೋಪ ಮಾಡುತ್ತಿದ್ದಾರೆ ಎಂದು ದೂರಿದರು.

ಈ ಸುದ್ದಿಯನ್ನೂ ಓದಿ | Ayodhya Ram Mandir: ಅಯೋಧ್ಯೆಯಲ್ಲಿ ದೀಪೋತ್ಸವ ಸಂಭ್ರಮ; ಡ್ರೋನ್‍ನಲ್ಲಿ ಸೆರೆಯಾಯ್ತು ಈ ಅದ್ಭುತ ದೃಶ್ಯ!

ಅಭಿವೃದ್ಧಿ ಕಾಮಗಾರಿಗೆ ಹಿಡಿ ಮಣ್ಣೂ ಹಾಕಿಲ್ಲ

16 ತಿಂಗಳಲ್ಲಿ ಕಾಂಗ್ರೆಸ್‌ ಸರ್ಕಾರ ಹಾಗೂ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಚನ್ನಪಟ್ಟಣದ ಒಂದೇ ಒಂದು ಅಭಿವೃದ್ಧಿ ಕಾಮಗಾರಿಗೆ ಹಿಡಿ ಮಣ್ಣು ಹಾಕಿಲ್ಲ. ಗ್ಯಾರಂಟಿಗಳಿಂದಾಗಿ ಮಣ್ಣು ಹಾಕಲು ಕೂಡ ಹಣವಿಲ್ಲ ಎಂದು ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ. ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡರು ಇಲ್ಲಿಗೆ ಮೊದಲು ನೀರಾವರಿ ಯೋಜನೆ ತಂದರು. ಬಳಿಕ ಮಾಜಿ ಮುಖ್ಯಮಂತ್ರಿಗಳಾದ ಡಿ.ವಿ. ಸದಾನಂದಗೌಡ ಹಾಗೂ ಬಸವರಾಜ ಬೊಮ್ಮಾಯಿ ಅನುದಾನ ನೀಡಿದರು. ಚನ್ನಪಟ್ಟಣಕ್ಕೆ ಯೋಗೇಶ್ವರ್‌ ಅವರ ಕೊಡುಗೆ ಏನೂ ಇಲ್ಲ ಎಂದು ತಿಳಿಸಿದರು.

ಮೊದಲಿಗೆ ನಾನೇ ಅಭ್ಯರ್ಥಿ ಎಂದು ಡಿ.ಕೆ. ಶಿವಕುಮಾರ್‌ ಹೇಳಿಕೊಂಡರು. ಆದರೆ ಅವರು ಅಭ್ಯರ್ಥಿಯಾಗಲಿಲ್ಲ. ಜಿಲ್ಲಾ ಉಸ್ತುವಾರಿಯ ಹೊಣೆಯನ್ನೂ ವಹಿಸಿಕೊಳ್ಳಲಿಲ್ಲ. ಡಿ.ಕೆ. ಶಿವಕುಮಾರ್‌ ರೈತರ ಬಗ್ಗೆ ಮಾತನಾಡುವುದಾದರೆ ಮೊದಲು ಸಾಲ ಮನ್ನಾ ಮಾಡಲಿ. ರೈತರ ವಿದ್ಯಾಭ್ಯಾಸಕ್ಕೆಂದು ನೀಡಿದ ವಿದ್ಯಾನಿಧಿ ಯೋಜನೆಯನ್ನು ನೀಡಲಿ. ಅದನ್ನು ಬಿಟ್ಟು ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ಕೋಟ್ಯಂತರ ರೂಪಾಯಿ ಹಣ ಲೂಟಿ ಮಾಡಿದ್ದಾರೆ ಎಂದು ದೂರಿದರು.

ಈ ಸುದ್ದಿಯನ್ನೂ ಓದಿ | Muda Case: ಮುಡಾ ಹಗರಣದ ಸಿಬಿಐ ತನಿಖೆ ಕೋರಿ ಅರ್ಜಿ; ಸಿಎಂಗೆ ಹೈಕೋರ್ಟ್ ನೋಟಿಸ್‌, ವಿಚಾರಣೆ ನ.26ಕ್ಕೆ ಮುಂದೂಡಿಕೆ

ಕಾಂಗ್ರೆಸ್‌ ಸರ್ಕಾರ 10 ಕೆಜಿ ಅಕ್ಕಿ ಎಂದು ಘೋಷಿಸಿ ಅದನ್ನು ನೀಡಿಲ್ಲ. 5 ಕೆಜಿ ಅಕ್ಕಿಯನ್ನು ಪ್ರಧಾನಿ ನರೇಂದ್ರ ಮೋದಿ ನೀಡುತ್ತಿದ್ದಾರೆ. ರಾಜ್ಯದ ಎಲ್ಲ ಜಮೀನುಗಳನ್ನು ವಕ್ಫ್‌ ಮಂಡಳಿ ಕಬಳಿಸುತ್ತಿದೆ. ಶಾಲೆ, ದೇವಸ್ಥಾನ ಸೇರಿದಂತೆ ಎಲ್ಲ ಜಾಗಗಳನ್ನು ನೋಂದಣಿ ಮಾಡಿಕೊಳ್ಳಲಾಗುತ್ತಿದೆ. ಹಿಂದೂಗಳು ಮಾತ್ರವಲ್ಲದೆ, ಮುಸ್ಲಿಮರು ಕೂಡ ಇದರ ವಿರುದ್ಧ ಪ್ರತಿಭಟನೆ ಮಾಡಿದ್ದಾರೆ. ಈ ಕುರಿತು ವಕ್ಫ್‌ ತಿದ್ದುಪಡಿ ಮಸೂದೆಯ ಜಂಟಿ ಸಂಸದೀಯ ಸಮಿತಿಗೆ ತಿಳಿಸಿದ್ದು, ಇದೇ ತಿಂಗಳ 7 ರಂದು ಸಮಿತಿ ಭೇಟಿ ನೀಡಲಿದೆ ಎಂದರು.

ಸರ್ಕಾರದ ಬಂಡವಾಳ ಬಯಲಾಗಲು ಎಸ್‌ಐಟಿ ಬೇಕಿದೆ

ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ಕಿರುಕುಳ ತಾಳಲಾರದೆ ಅಧಿಕಾರಿ ಚಂದ್ರಶೇಖರನ್‌ ಆತ್ಮಹತ್ಯೆ ಮಾಡಿಕೊಂಡರು. ಇದೇ ರೀತಿ ಬೆಳಗಾವಿಯ ಸರ್ಕಾರಿ ಕಚೇರಿಯಲ್ಲಿ ಎಸ್‌ಡಿಎ ರುದ್ರಣ್ಣ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅಧಿಕಾರಿಗಳು ನೆಮ್ಮದಿಯಿಂದ ಕೆಲಸ ಮಾಡುವ ವಾತಾವರಣ ಸರ್ಕಾರಿ ಕಚೇರಿಗಳಲ್ಲಿ ಇಲ್ಲ. ಹಣ ನೀಡಿದರೆ ಮಾತ್ರ ಇಲ್ಲಿ ಬದುಕಲು ಸಾಧ್ಯ. ಏನೇ ಕೇಳಿದರೂ ಎಸ್‌ಐಟಿ ರಚನೆ ಎಂದು ಹೇಳುತ್ತಾರೆ. ಯಾರು ಸತ್ತರೂ ಎಸ್‌ಐಟಿ ರಚನೆ ಮಾಡುತ್ತಾರೆ. ಸಚಿವೆ ಲಕ್ಷ್ಮಿ ಹೆಬ್ಬಾಳಕರ್‌ ಅವರ ಪಿಎ ಸೋಮು ಅವರಿಂದಾಗಿ ಅಧಿಕಾರಿ ಸತ್ತಿದ್ದಾರೆ ಎಂದು ಆರೋಪಿಸಿದ ಅವರು, ಸಿಎಂ ಸಿದ್ದರಾಮಯ್ಯ ಅವರು ಇದಕ್ಕಾಗಿ ಎಸ್‌ಐಟಿ ರಚನೆ ಮಾಡಲಿ. ಅಧಿಕಾರಿಗಳು ಯಾಕೆ ಸಾಯುತ್ತಿದ್ದಾರೆ, ಯಾರು ಎಷ್ಟು ಲಂಚ ಕೇಳುತ್ತಿದ್ದಾರೆ ಎಂದು ಜನರಿಗೆ ತಿಳಿಯಲಿ. ಸರ್ಕಾರದ ಬಂಡವಾಳ ಬಯಲಾಗಲು ಎಸ್‌ಐಟಿ ಬೇಕಿದೆ ಎಂದು ಆಗ್ರಹಿಸಿದರು.

ಎಲ್ಲ ಇಲಾಖೆಯಲ್ಲೂ ಭ್ರಷ್ಟಾಚಾರ

ಅಧಿಕಾರಿಗಳು ಭಯಕ್ಕೊಳಗಾದರೆ ವಸೂಲಿ ಇನ್ನಷ್ಟು ಹೆಚ್ಚಾಗುತ್ತದೆ. ಯಾರೂ ಧೈರ್ಯ ಕಳೆದುಕೊಳ್ಳಬಾರದು ಎಂದು ಆರ್‌.ಅಶೋಕ್‌ ಹೇಳಿದರು. ಅಬಕಾರಿ ಇಲಾಖೆಯಲ್ಲಿ ಹಗರಣ ನಡೆದಿದೆ ಎಂಬ ಪತ್ರ ರಾಜ್ಯಪಾಲರಿಗೆ ಬಂದಿದೆ. ಎಲ್ಲ ಇಲಾಖೆಯಲ್ಲೂ ಭ್ರಷ್ಟಾಚಾರ ಮಿತಿ ಮೀರಿದೆ. ಈ ಉಪಚುನಾವಣೆಯಲ್ಲಿ ಜನರು ಈ ಸರ್ಕಾರಕ್ಕೆ ಬುದ್ಧಿ ಕಲಿಸಬೇಕು ಎಂದು ತಿಳಿಸಿದರು.

ಈ ಸುದ್ದಿಯನ್ನೂ ಓದಿ | Job Guide: 10, 12ನೇ ತರಗತಿ ವಿದ್ಯಾರ್ಹತೆ ಹೊಂದಿದವರಿಗೆ ಗುಡ್‌ನ್ಯೂಸ್; ಯುರೇನಿಯಂ ಕಾರ್ಪೋರೇಷನ್‌ನಲ್ಲಿದೆ 115 ಹುದ್ದೆ

ಲೋಕಾಯುಕ್ತದಿಂದ ಸಿದ್ದರಾಮಯ್ಯ ಅವರ ಪತ್ನಿಗೆ ನೋಟಿಸ್‌ ನೀಡಲಾಗಿದೆ. ಮೊದಲಿಗೆ ಆರೋಪಿ 1 ಗೆ ನೋಟಿಸ್‌ ನೀಡಬೇಕಿತ್ತು. ಇವೆಲ್ಲವೂ ಒಂದು ನಾಟಕ. ಇದನ್ನು ಸಿಬಿಐ ತನಿಖೆಗೆ ವಹಿಸಬೇಕೆಂದು ದೂರುದಾರರು ಅಪೀಲು ಮಾಡಿದ್ದಾರೆ. ಆರೋಪಿ 2 ಗೆ ಮೊದಲಿಗೆ ನೋಟಿಸ್‌ ನೀಡಿದ್ದು ಏಕೆಂದು ನಮಗೂ ಅರ್ಥವಾಗುತ್ತಿಲ್ಲ ಎಂದು ಪ್ರತಿಪಕ್ಷ ನಾಯಕ ಆರ್‌. ಅಶೋಕ್‌ ತಿಳಿಸಿದರು.